ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕನ ಅಣ್ಣ ಅಮರನಾಥ್ ಗೌಡರ ಸಂದರ್ಶನ

By * ಎಸ್ಕೆ. ಶಾಮಸುಂದರ
|
Google Oneindia Kannada News

Amarnath Gowda
ಅಕ್ಕ ಸಂಸ್ಥೆ ಜನಿಸಿದಾಗಿನಿಂದ ಅದರೊಂದಿಗೆ ನಿಕಟ ಬಾಂಧವ್ಯ ಇಟ್ಟುಕೊಂಡು ಬಂದಿರುವವರು ಅಮರನಾಥ್ ಗೌಡ. ಡೆಟ್ರಾಯಿಟ್ ನಿವಾಸಿಯಾಗಿ ವೃತ್ತಿಯಿಂದ ಮಿಶಿಗನ್ ರಾಜ್ಯದಲ್ಲಿ ಅಟಾರ್ನಿಯಾಗಿದ್ದರೂ ಪ್ರವೃತ್ತಿಯಿಂದ ಅವರು ಕನ್ನಡಿಗರ ಸಂಘಟಕ. ಅಮೆರಿಕದಲ್ಲಿ ಕನ್ನಡಿಗರ ಸಂಘಟನೆ ಮಾಡುವುದು ಅವರಿಗೆ ಬಿಡಲಾರದ ಒಂದು ಮೋಹ. ಅಕ್ಕದ ನಾನಾ ಹುದ್ದೆಗಳಲ್ಲಿ ಕೆಲಸಮಾಡಿ ಸದ್ಯ ಅಕ್ಕ ಬೋರ್ಡ್ ಆಫ್ ಟ್ರಸ್ಟೀಸ್ ನ ಅಧ್ಯಕ್ಷರಾಗಿರುವ ಅವರು ದಟ್ಸ್ ಕನ್ನಡಕ್ಕೆ ನೀಡಿರುವ ವಿಶೇಷ ಸಂದರ್ಶನ ಇಲ್ಲಿದೆ. 6ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಇನ್ನು ಕೆಲವೇ ದಿನಗಳಿರುವಾಗ ಸಮ್ಮೇಳನದ ಲಗುಬಗೆಗಳ ಬಗ್ಗೆ ಗೌಡರು ಏನು ಹೇಳುತ್ತಾರೆ? ಓದಿ.

ಶಾಮ್ : ಆರನೇ ಅಕ್ಕ ಸಮ್ಮೇಳನದ ಗಮನಾರ್ಹ ಹೊಸ ಸಂಗತಿ ಯಾವುದು?

ಅಮರನಾಥ ಗೌಡ : ಇದು ಬಲು ಕಷ್ಟಕರ ಪ್ರಶ್ನೆ. ಯಾಕೆಂದರೆ ನ್ಯೂ ಜೆರ್ಸಿ ಸಮ್ಮೇಳನದಲ್ಲಿ ಅನೇಕ ಸಂಗತಿಗಳನ್ನು ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ. ಉದಾಹರಣೆಗೆ, 1. ಅಮೆರಿಕ-ಭಾರತದ ಸಾಹಿತಿಗಳ ಸಾಹಿತ್ಯ ಸಂವಾದ ; 2. ಯುವ ಲೇಖಕರಿಗಾಗಿ ಏರ್ಪಡಿಸಲಾಗಿದ್ದ ಸಣ್ಣಕಥಾ ಸ್ಪರ್ಧೆ ; 3. ಮೆರವಣಿಗೆಯಲ್ಲಿ ಆನೆ ಅಂಬಾರಿ ; 4. ಅಕ್ಕ ಕ್ರಿಕೆಟ್ ಲೀಗ್ ; 5. ಅಮೆರಿಕದ ಕಲಾವಿದರ ವಿಶಿಷ್ಟ ನೃತ್ಯ ನಾಟಕ 'ಕರುನಾಡ ಕೊಡುಗೆ' ; 6. ಕನ್ನಡ ಚಿತ್ರ ಕಲಾವಿದರಿಗಾಗಿ ನೀಡಲಾಗುತ್ತಿರುವ ಅಕ್ಕ ಚಲನಚಿತ್ರ ಪ್ರಶಸ್ತಿ...

ಇವುಗಳಲ್ಲಿ ಇಂಥದ್ದೇ ಮಹತ್ವದ್ದು ಎಂದು ಹೇಳುವುದು ಕಷ್ಟವೆ. ವಿಡಿಯೋ ಕಾನ್ಫರೆನ್ಸ್ ಮುಖಾಂತರ ನಡೆಸಲಾಗುತ್ತಿರುವ ಸಾಹಿತ್ಯ ಸಂವಾದದ ಪರಿಕಲ್ಪನೆ ಹೊಸತನದ್ದು (ಹಿಂದೆ ಎಸ್ಎಂ ಕೃಷ್ಣ ಅವರ ಸಂದೇಶವನ್ನು ವಿಡಿಯೋ ಕಾನ್ಫರೆನ್ಸ್ ಮುಖಾಂತರ ಬಿತ್ತರಿಸಲಾಗಿತ್ತು.) ನನ್ನನಿಸಿಕೆಯ ಪ್ರಕಾರ, ಚಲನಚಿತ್ರ ತಾರೆಯರ ರಸಮಂಜರಿ ಮತ್ತು ಅಕ್ಕ ಚಲನಚಿತ್ರ ಪ್ರಶಸ್ತಿ ಸಮಾರಂಭ ಭಾರೀ ಯಶಸ್ಸು ಕಾಣುವುದರಲ್ಲಿ ಸಂದೇಹವಿಲ್ಲ.

ಶಾಮ್ : ನೊಂದಾವಣಿಯ ಅಂಕಿ ಸಂಖ್ಯೆಗಳು ತೃಪ್ತಿ ತಂದಿವೆಯೆ?

ಅಮರನಾಥ್ : ಇಲ್ಲಿಯವರೆಗೆ ತೃಪ್ತಿದಾಯಕವಾಗಿದೆ. ಒಂದು ತಿಂಗಳ ಹಿಂದೆಯೇ 3 ಸಾವಿರಕ್ಕೂ ಹೆಚ್ಚು ಜನ ನೊಂದಾಯಿಸಿಕೊಂಡಿದ್ದರು. ಹಿಂದಿನ ಸಮ್ಮೇಳನಗಳಲ್ಲಿ ಒಂದು ವಾರ ಇರುವಂತೆ ಮತ್ತು ಸ್ಥಳದಲ್ಲಿಯೇ ನೊಂದಾವಣೆ ಹೆಚ್ಚಿರುತ್ತಿತ್ತು. ಈ ಸಮ್ಮೇಳನದಲ್ಲಿ ಥಿಯೇಟರುಗಳಲ್ಲಿ ಗರಿಷ್ಠ 4200 ಜನರನ್ನು ಮಾತ್ರ ಕುಳ್ಳಿರಿಸಬಹುದು. ಈ ಸಂಖ್ಯೆ ದಾಟುವ ಸಂಪೂರ್ಣ ವಿಶ್ವಾಸ ನಾವು ಹೊಂದಿದ್ದೇವೆ. ಇದಕ್ಕಾಗಿ, ನಮ್ಮ ಕಳೆದ ಸಭೆಯಲ್ಲಿ ಇನ್ನೂ ಹೆಚ್ಚಿನ ನೊಂದಾವಣೆಯನ್ನು ನಿಲ್ಲಿಸಬೇಕೆಂದು ತೀರ್ಮಾನಿಸಿದ್ದೇವೆ.

ಕನಿಷ್ಠ 6 ಸಾವಿರ ನೊಂದಾವಣೆ ಆಗಬಹುದೆಂದು ನಿರೀಕ್ಷಿಸಿದ್ದೆ. ಆದರೆ, ಸಭಾಂಗಣದ ಗರಿಷ್ಠ ಮಿತಿಯನ್ನು ನಮ್ಮ ಗಮನಕ್ಕೆ ತರಲಾಗಿದೆ. ಆದರೂ, ಕುಳಿತುಕೊಳ್ಳುವ ಅವಶ್ಯಕತೆ ಇಲ್ಲದಿದ್ದರೆ 8 ಸಾವಿರ ಜನರನ್ನು ಸಭಾಂಗಣದಲ್ಲಿ ಸೇರಿಸಬಹುದಾಗಿದೆ.

ಶಾಮ್ : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ನ್ಯೂ ಜೆರ್ಸಿಗೆ ಯಾವತ್ತು ಬರುತ್ತಾರೆ?

ಅಮರನಾಥ್ : ನಾವು ಮುಖ್ಯಮಂತ್ರಿಗಳ ಬರುವನ್ನು ನಿರೀಕ್ಷಿಸುತ್ತಿದ್ದೆವು. ಅಮೆರಿಕ ಪ್ರವಾಸವನ್ನು ಸಿಎಂ ಕಚೇರಿ ಕೂಡ ಮುಕ್ತವಾಗಿಸಿತ್ತು. ಆದರೆ, ಅವರು ಬರುವ ಸಾಧ್ಯತೆ ಕಡಿಮೆ. ಉತ್ತರ ಕರ್ನಾಟಕದ ನೆರೆ, ಬೆಂಗಳೂರಿನಲ್ಲಿ ಭಿಕ್ಷುಕರ ನಿಧನ, ಕಡೂರು ಮತ್ತು ಗುಲಬರ್ಗಾ ಉಪ ಚುನಾವಣೆಗಳು ಅವರನ್ನು ಅಮೆರಿಕ ಪ್ರವಾಸ ಕೈಗೊಳ್ಳದಂತೆ ತಡೆದಿವೆ ಎಂದು ತಿಳಿದುಬಂದಿದೆ.

ಶಾಮ್ : ಅಮೆರಿಕ ಸಮ್ಮೇಳನದಲ್ಲಿ ಭಾಗವಹಿಸಲು ಕರ್ನಾಟಕದಿಂದ ಭಾರೀ ಉತ್ಸಾಹ ವ್ಯಕ್ತವಾಗಿದೆ. ಯಾಕೆ ಹೀಗೆ?

ಅಮರನಾಥ್ : ಅತ್ಯುತ್ತಮ ಪ್ರಶ್ನೆ. ಇದಕ್ಕೆ ಅನೇಕ ಕಾರಣಗಳನ್ನು ನೀಡಬಲ್ಲೆ. ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುವುದು ಪ್ರತಿಷ್ಠೆಯ ವಿಷಯವಾಗಿದೆ. ಕಲಾವಿದರಿಗೆ ಪ್ರತಿಭಾ ಪ್ರದರ್ಶನ ಮಾಡಲು ಅವಕಾಶ ಸಿಕ್ಕರೆ ಅದೇ ಭಾಗ್ಯ. ಅಕ್ಕಕ್ಕೆ ಆಹ್ವಾನಿಸಲಾಗಿದೆ ಎಂದು ಹೇಳಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಯಾರೋ ಒಬ್ಬರು ತಮ್ಮ ಬಿಸಿನೆಸ್ ಕಾರ್ಡಿನಲ್ಲಿ ತಾವು ಅಕ್ಕ ಸಮ್ಮೇಳನದಲ್ಲಿ ಕಲಾ ಪ್ರದರ್ಶನ ನೀಡಿದ್ದುದನ್ನೂ ನಮೂದಿಸಿಕೊಂಡಿದ್ದು ನೋಡಿದೆ!

ಅಕ್ಕ ಉತ್ತರ ಅಮೆರಿಕಾದ ಪ್ರಮುಖ ಸಂಘಟನೆ ಮಾತ್ರವಲ್ಲ, ಎಲ್ಲ ಅನಿವಾಸಿ ಕನ್ನಡಿಗರ ಸಂಘಟನೆಯಾಗಿದೆ. ಅಕ್ಕ ಹೊಸ ಟ್ರೆಂಡ್ ಹುಟ್ಟುಹಾಕಿದೆ. ಅಕ್ಕದ ವ್ಯಾಖ್ಯಾನ ಕೂಡ ಬದಲಾಗಿದೆ. ನಾವು ಏನೇ ಮಾಡಿದರೂ ಅದು ಅಮೆರಿಕನ್ನಡಿಗರಿಗಾಗಿ ಮಾತ್ರವಲ್ಲ ಅದು ಸಮಗ್ರ ಕನ್ನಡ ಮತ್ತು ಜಾಗತಿಕ ಕನ್ನಡಿಗರಿಗಾಗಿ. ಅಮೆರಿಕನ್ನಡಿಗರಿಗೆ ಹೆಚ್ಚಿನ ಸೇವೆ ಲಭ್ಯವಾದರೂ ಭಾರತ ಮತ್ತು ಜಗತ್ತಿನಾದ್ಯಂತ ಎಲ್ಲ ಕನ್ನಡಿಗರ ಸೇವೆಗೆ ಅಕ್ಕ ಟೊಂಕ ಕಟ್ಟಿ ನಿಂತಿದೆ. ಎರಡು ವರ್ಷಗಳಿಗೊಮ್ಮೆ ನಡೆಸುವ ಸಮ್ಮೇಳನದ ಹೊರತಾಗಿ ಅನೇಕ ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ.

ಅಮೆರಿಕವನ್ನು ಸಂದರ್ಶಿಸುವುದು ಈ ಮೊದಲು ಅನೇಕ ಭಾರತೀಯರ ಕನಸಾಗಿತ್ತು. ಅಕ್ಕ ಸಮ್ಮೇಳನದಿಂದಾಗಿ ಇದು ಕನಸಾಗಿ ಉಳಿದಿಲ್ಲ. ಸಾಹಿತಿಗಳು, ರಾಜಕಾರಣಿಗಳು, ಅಧಿಕಾರಿಗಳು, ಕಲಾವಿದರು, ಬರಹಗಾರರು, ಸಿನೆಮಾ ತಾರೆಯರು ಇಂದು ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುವುದು ಮಾತ್ರವಲ್ಲ ಕಲಾಪ್ರದರ್ಶನ ನೀಡುವಂತಾಗಿದೆ.

ಶಾಮ್ : ಸೆಪ್ಟೆಂಬರ್ 3-4-5ರಂದು ನ್ಯೂ ಜೆರ್ಸಿ ಹವಾಮಾನ ಹೇಗಿರುತ್ತದೆ?

ಅಮರನಾಥ್ : ಈ ಮೂರು ದಿನಗಳಲ್ಲಿ ಹವಾಮಾನ ಅತ್ಯಂತ ಸುಂದರವಾಗಿರುತ್ತದೆ (80F). ಆದರೆ, ಬಿರುಗಾಳಿಯೊಂದು ಅಟ್ಲಾಂಟಿಕ್ ನ ವಾಯವ್ಯ ಭಾಗಕ್ಕೆ ಸರಿಯುತ್ತಿದೆ ಎಂದು ಹವಾಮಾನ ಮುನ್ಸೂಚನೆಗಳು ಹೇಳಿವೆ. ಆದರೆ, ಇದು ನ್ಯೂ ಜೆರ್ಸಿ ತನಕ ಬರುವುದಿಲ್ಲ, ಯಾವುದೇ ತೊಂದರೆ ಮಾಡಲಿಕ್ಕಿಲ್ಲ ಎಂದು ಆಶಿಸುತ್ತೇವೆ.

ಶಾಮ್ : ಈ ಬಾರಿ ಭಾರತದಿಂದ ಆಗಮಿಸುವ ಮತ್ತು ಅಮೆರಿಕಾದ ಕನ್ನಡ ಸಂಘಗಳ ಕಲಾವಿದರ ಒಟ್ಟು ಸಂಖ್ಯೆ ದೊಡ್ಡದಿದೆ. ಇಷ್ಟೊಂದು ಜನಕ್ಕೆ ಹೇಗೆ ಅವಕಾಶ ಕಲ್ಪಿಸುತ್ತೀರಿ?

ಅಮರನಾಥ್ : ಅದು ನಿಜಕ್ಕೂ ಬೃಹತ್ ಕೆಲಸವೇ ಸರಿ. ಕಾರ್ಯಕ್ರಮಗಳ ಸಮಿತಿ ಈಗಾಗಲೆ ತಾತ್ಕಾಲಿಕ ಪಟ್ಟಿನ್ನು ತಯಾರಿಸಿದೆ. ಆದರೆ, ಸರಕಾರಿ ಪ್ರಾಯೋಜಿತ ಕಲಾವಿದರ ಪಟ್ಟಿಗಳು ಒಂದಾದ ಮೇಲೊಂದರಂತೆ ಬರುತ್ತಲೇ ಇವೆ. ಒಂದು ದೊಡ್ಡ ಮತ್ತು ಎರಡು ಸಣ್ಣ ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ. ಕಾಲಾವಕಾಶ, ಕಲಾವಿದರ ಸಂಖ್ಯೆಯನ್ನು ಪರಿಗಣಿಸಿ ಎಲ್ಲರಿಗೂ ಅವಕಾಶ ನೀಡುವ ಪ್ರಯತ್ನ ಮಾಡುತ್ತೇವೆ.

ಶಾಮ್ : ಮತ್ತೇನಾದರೂ ಹೇಳುವುದಿದೆಯೆ? ಅಮರನಾಥ್.

ಅಮರನಾಥ್ : 400ಕ್ಕೂ ಹೆಚ್ಚಿನ ಅಕ್ಕ, ಬೃಂದಾವನ ಮತ್ತು ನ್ಯೂಜೆರ್ಸಿ ಸುತ್ತಮುತ್ತಲಿನ ಕನ್ನಡ ಸಂಘದ ಸ್ವಯಂಸೇವಕರು ಹೆಗಲಿಗೆ ಹೆಗಲಾಗಿ ದುಡಿಯುತ್ತಿದ್ದಾರೆ. ಪ್ರತಿಯೊಬ್ಬರೂ ವೃತ್ತಿ, ಮನೆಗೆಲಸ, ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು ಅಕ್ಕ ಸಮ್ಮೇಳನದ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ. ಹೆಚ್ಚಿನ ಸಮಯ ಉಳಿದೇ ಇಲ್ಲ. ಈ ಸಮ್ಮೇಳನದಲ್ಲಿ ಕನ್ನಡ ಮತ್ತು ಕನ್ನಡಿಗರಿಗಾಗಿ ತಮ್ಮೆಲ್ಲ ಶ್ರಮ, ಸಮಯವನ್ನು ಅವರು ಮುಡಿಪಾಗಿಟ್ಟಿದ್ದಾರೆ. ಪ್ರತಿಯೊಬ್ಬರೂ ಸಮ್ಮೇಳನಕ್ಕೆ ನೊಂದಾಯಿಸಿಕೊಂಡಿರುವುದು ಮಾತ್ರವಲ್ಲ, ಮುಕ್ತಹಸ್ತದಿಂದ ದಾನ ಕೂಡ ಮಾಡಿದ್ದಾರೆ. ಇಳಿದುಕೊಳ್ಳುವ ವ್ಯವಸ್ಥೆಗಳನ್ನು ಕೂಡ ಅವರವರೇ ಮಾಡಿಕೊಳ್ಳಲಿದ್ದಾರೆ. ಅವರ ನಿಸ್ವಾರ್ಥ ಸೇವೆ, ಕೊಡುಗೆ, ಸಮರ್ಪಣಾ ಭಾವ, ದಣಿವಿಲ್ಲದ ದುಡಿಮೆಗೆ ಅಕ್ಕ ಸಂಸ್ಥೆಯ ಪರವಾಗಿ ಮತ್ತು ವೈಯಕ್ತಿಕವಾಗಿ ನನ್ನದೊಂದು ಥ್ಯಾಂಕ್ಸ್.

ಇದೆಲ್ಲ ಕನ್ನಡದ ಬಗೆಗಿನ ಪ್ರೀತಿ ಮತ್ತು ಕರ್ತವ್ಯ ಪ್ರಜ್ಞೆಯ ಬಳುವಳಿ ಎಂದೇ ನನ್ನ ಭಾವನೆ. ಅನೇಕ ತೊಂದರೆಗಳನ್ನು ನಿವಾರಿಸುವುದರಲ್ಲೇ ಎಲ್ಲ ಸ್ವಯಂಸೇವಕರ, ಅಕ್ಕ ಮತ್ತು ಕಾರ್ಯಕ್ರಮ ಸಮಿತಿ ಸದಸ್ಯರ ಸಮಯವೆಲ್ಲ ವ್ಯಯವಾಗುತ್ತದೆ. ಯಾರಿಗೂ ಕಾರ್ಯಕ್ರಮಗಳನ್ನು ನೋಡಲೂ ಆಗುವುದಿಲ್ಲ. ಇದನ್ನು ಎಲ್ಲ ಅತಿಥಿಗಳು ಅರಿತು, ತಾವೂ ಗೆಸ್ಟ್ ಆಗಿರದೆ ಹೋಸ್ಟ್ ಆಗಿರುವೆಂದು ಭಾವಿಸಿ ಸಹಕರಿಸಬೇಕು. ಯಾವುದೇ ಕಾರ್ಯಕ್ರಮವಾದರೂ ಸರಿ, ಚಿಕ್ಕಪುಟ್ಟ ಎಡರುತೊಡರುಗಳಿದ್ದೇ ಇರುತ್ತವೆ. ಅವನ್ನು ಬಂದಹಾಗೆ ಸ್ವೀಕರಿಸಿ ಮುಂದೆ ನಡೆಯಬೇಕು. ಜೈ ಕರ್ನಾಟಕ ಮಾತೆ.

ರಿಯಾಯಿತಿ ದರದಲ್ಲಿ ನೊಂದಾವಣೆ : ಆ.29 ಕೊನೆ ದಿನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X