ದೇಶದ ಆದ್ಯತೆ ವಲಯಗಳಿಗೆ ಅನಿಲ ಪೂರೈಕೆಗೆ ರಿಲಯನ್ಸ್ ನಿಂದ ಗರಿಷ್ಠ ಉತ್ಪಾದನೆ
ಮುಂಬೈ: ಜಾಗತಿಕ ಮಟ್ಟದಲ್ಲಿ ತೈಲ ಮತ್ತು ಅನಿಲ ಮಾರುಕಟ್ಟೆಯಲ್ಲಿ ತೀವ್ರ ಏರಿಳಿತಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ, ಭಾರತೀಯರಿಗೆ ಅಡುಗೆ ಅನಿಲ (LPG) ಮತ್ತು ಅಗತ್ಯ ಇಂಧನಗಳ ಕೊರತೆಯಾಗದಂತೆ ನೋಡಿಕೊಳ್ಳಲು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಮಹತ್ವದ ಹೆಜ್ಜೆಯಿಟ್ಟಿದೆ. ಗುಜರಾತ್‌ನ ಜಾಮ್‌ನಗರದಲ್ಲಿರುವ ವಿಶ್ವದ ಅತಿದೊಡ್ಡ ಸಂಸ್ಕರಣಾಗಾರದಲ್ಲಿ (Refinery) ಎಲ್‌ಪಿಜಿ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲು ಕಂಪನಿ ನಿರ್ಧರಿಸಿದೆ. ಜೊತೆಗೆ, ಕೃಷ್ಣ-ಗೋದಾವರಿ (KG-D6) ಜಲಾನಯನ ಪ್ರದೇಶದಲ್ಲಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲವನ್ನು ದೇಶದ ಪ್ರಮುಖ ಆದ್ಯತಾ ವಲಯಗಳಿಗೆ ತಿರುಗಿಸಲು ತೀರ್ಮಾನಿಸಿದೆ.
ಇರಾನ್, ಇಸ್ರೇಲ್‌ನಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ ಜಾಗತಿಕ ಇಂಧನ ಪೂರೈಕೆ ಸರಪಳಿಯಲ್ಲಿ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗಿದೆ. ಭಾರತವು ತನ್ನ ಎಲ್‌ಪಿಜಿ ಅಗತ್ಯದ ಶೇ. 60ಕ್ಕೂ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಈ ಬಿಕ್ಕಟ್ಟಿನಿಂದಾಗಿ ಆಮದು ಪ್ರಮಾಣದಲ್ಲಿ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿತ್ತು.

ಹೋಟೆಲ್, ರೆಸ್ಟೋರೆಂಟ್ ಮತ್ತು ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆಯಲ್ಲಿ ಈಗಾಗಲೇ ಬೆಂಗಳೂರು, ಮುಂಬೈ, ಚೆನ್ನೈ ಮುಂತಾದ ಮಹಾನಗರಗಳಲ್ಲಿ ಕೊರತೆಯ ಬಿಸಿ ತಟ್ಟಲಾರಂಭಿಸಿದೆ. ಇದನ್ನು ಮನಗಂಡ ಕೇಂದ್ರ ಸರ್ಕಾರವು 'ಅಗತ್ಯ ವಸ್ತುಗಳ ಕಾಯ್ದೆ'ಯಡಿ ತುರ್ತು ಕ್ರಮಗಳನ್ನು ಕೈಗೊಂಡಿದ್ದು, ದೇಶೀಯ ರಿಫೈನರಿಗಳಿಗೆ ಎಲ್‌ಪಿಜಿ ಉತ್ಪಾದನೆ ಹೆಚ್ಚಿಸುವಂತೆ ಸೂಚನೆ ನೀಡಿತ್ತು. ಇಂತಹ ಸಂದರ್ಭದಲ್ಲಿ ಸಾಮಾನ್ಯ ಜನರ ಮನೆಗಳ ಅಡುಗೆ ಮನೆಗಳಿಗೆ ಸಮಸ್ಯೆಯಾಗದಂತೆ ತಡೆಯುವುದು ಸರ್ಕಾರದ ಹಾಗೂ ರಿಲಯನ್ಸ್‌ನ ಮುಖ್ಯ ಗುರಿಯಾಗಿದೆ.
"ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ವಿಪರೀತ ಏರಿಳಿತಗಳಿರುವ ಈ ಹೊತ್ತಿನಲ್ಲಿ, ಭಾರತೀಯ ಕುಟುಂಬಗಳಿಗೆ ಅಗತ್ಯವಿರುವ ಇಂಧನವನ್ನು ಅಡೆತಡೆಯಿಲ್ಲದೆ ಪೂರೈಸುವುದು ನಮ್ಮ ಆದ್ಯತೆಯಾಗಿದೆ" ಎಂದು ರಿಲಯನ್ಸ್ ತನ್ನ ಅಧಿಕೃತ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಎಲ್‌ಪಿಜಿ ಉತ್ಪಾದನೆಯನ್ನು ಗರಿಷ್ಠಗೊಳಿಸಲು ಜಾಮ್‌ನಗರದ ಸಂಸ್ಕರಣಾ ಘಟಕದ ತಂಡಗಳು ಹಗಲು-ರಾತ್ರಿ ಶ್ರಮಿಸುತ್ತಿವೆ. ಇದರ ಜೊತೆಗೆ, ಕೃಷ್ಣ-ಗೋದಾವರಿ (KG-D6) ಜಲಾನಯನ ಪ್ರದೇಶವು ಭಾರತದ ಅತಿದೊಡ್ಡ ಅನಿಲ ಉತ್ಪಾದನಾ ಕ್ಷೇತ್ರಗಳಲ್ಲಿ ಒಂದಾಗಿದ್ದು, ಇಲ್ಲಿಂದ ಉತ್ಪಾದನೆಯಾಗುವ ನೈಸರ್ಗಿಕ ಅನಿಲವನ್ನು ಕೈಗಾರಿಕೆಗಳು ಮತ್ತು ವಾಣಿಜ್ಯ ಬಳಕೆಗೆ ನೀಡುವ ಬದಲು, ಗೃಹಬಳಕೆಯ ಪಿಎನ್‌ಜಿ (PNG), ವಾಹನಗಳ ಸಿಎನ್‌ಜಿ (CNG), ರಸಗೊಬ್ಬರ ಉತ್ಪಾದನಾ ಘಟಕಗಳು ಮತ್ತು ವಿದ್ಯುತ್ ಉತ್ಪಾದನೆಯಂತಹ ತುರ್ತು ಆದ್ಯತಾ ವಲಯಗಳಿಗೆ ವಿತರಿಸಲಾಗುತ್ತಿದೆ.
"ರಿಲಯನ್ಸ್‌ಗೆ ಕೋಟ್ಯಂತರ ಭಾರತೀಯ ಕುಟುಂಬಗಳ ಯೋಗಕ್ಷೇಮ ಹಾಗೂ ದೇಶದ ಇಂಧನ ಭದ್ರತೆಯೇ ಯಾವಾಗಲೂ ಮೊದಲ ಆದ್ಯತೆ. ನಾವು ಭಾರತ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ರಾಷ್ಟ್ರೀಯ ಮಾರ್ಗಸೂಚಿಗಳು ಹಾಗೂ ವಿತರಣಾ ಆದ್ಯತೆಗಳಿಗೆ ಸಂಪೂರ್ಣವಾಗಿ ಬದ್ಧರಾಗಿದ್ದೇವೆ. ಯಾವ ವಲಯಕ್ಕೆ ಮತ್ತು ಸಮುದಾಯಕ್ಕೆ ಇಂಧನ ಪೂರೈಕೆ ಅತ್ಯಂತ ಅಗತ್ಯವಿದೆಯೋ, ಅವರಿಗೆ ಅದು ತಲುಪುವಂತೆ ನಾವು ಖಾತ್ರಿಪಡಿಸುತ್ತೇವೆ" ಎಂದು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಂಸ್ಥೆ ಭರವಸೆ ನೀಡಿದೆ.












Click it and Unblock the Notifications