ಟೀಮ್ ಇಂಡಿಯಾ ಹೀನಾಯ ಸೋಲಿಗೆ ಗೌತಮ್ ಗಂಭೀರ್ ಕಾರಣರಲ್ಲ: ಎಬಿ ಡಿವಿಲಿಯರ್ಸ್ ಹೇಳಿಕೆ ಹಿಂದಿದೆ ಮಹತ್ವದ ಸಂದೇಶ
AB de Villiers: ಇತ್ತೀಚೆಗಷ್ಟೇ ಟೀಮ್ ಇಂಡಿಯಾವು ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಹೀನಾಯ ಸೋಲು ಕಂಡು ಭಾರಿ ಮುಖಭಂಗ ಅನುಭವಿಸಿತು. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿದ ದಕ್ಷಿಣ ಆಫ್ರಿಕಾದ ಹಾಗೂ ಆರ್‌ಸಿಬಿ ಮಾಜಿ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಮಹತ್ವದ ಸಲಹೆ ನೀಡಿ ಗಮನ ಸೆಳೆದಿದ್ದಾರೆ. ಇದು ಇದೀಗ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.
ಸತತ ಟಿ20 ವಿಶ್ವಕಪ್‌ಗಳನ್ನು ಗೆದ್ದು ಬೀಗಿದ್ದ ಭಾರತ ಟಿ20 ತಂಡಕ್ಕೆ ಇತ್ತೀಚೆಗೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ಭಾರಿ ಮುಖಭಂಗವಾಗಿದೆ. ಐರ್ಲೆಂಡ್ ವಿರುದ್ಧ 0-2 ಮತ್ತು ಇಂಗ್ಲೆಂಡ್ ವಿರುದ್ಧ 0-4 ಅಂತರದಿಂದ ಕ್ಲೀನ್ ಸ್ವೀಪ್ ಆಗಿದೆ. ಈ ಬಗ್ಗೆ ಮಾತನಾಡಿದ ಮಿಸ್ಟರ್ 360 ಎಬಿ ಡಿ ವಿಲಿಯರ್ಸ್ ಮಹತ್ವದ ಹೇಳಿಕೆ ನೀಡಿದ್ದಾರೆ.

ಈ ಸೋಲು ಒಂದು ಪಾಠ ಎಂದ ಎಬಿಡಿ
ದಕ್ಷಿಣ ಆಫ್ರಿಕಾದ ದಂತಕಥೆ ಎಬಿ ಡಿವಿಲಿಯರ್ಸ್ ಅವರು ಭಾರತ ಟಿ20 ತಂಡದ ಪ್ರಸ್ತುತ ಸ್ಥಿತಿಯ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಭಾರತ ತಂಡಕ್ಕೆ ಎದುರಾಗಿರುವ ಈ ಹಿನ್ನಡೆಯು ಭವಿಷ್ಯದ ದೃಷ್ಟಿಯಿಂದ ಕೆಟ್ಟದ್ದೇನಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗಂಭೀರ್ ಬೆಂಬಲಕ್ಕೆ ನಿಂತ ಮಿಸ್ಟರ್ 360
'ಈ ಸೋಲಿನ ನಂತರ ಚಿಂತಿಸಬೇಕಾದ ವಿಷಯಗಳು ಸಾಕಷ್ಟು ಇವೆ. ಸಹಜವಾಗಿಯೇ ಈಗ ಎಲ್ಲರ ಕಣ್ಣುಗಳು ಮತ್ತು ಬೆರಳುಗಳು ಗೌತಮ್ ಗಂಭೀರ್ ಕಡೆಗೆ ಇವೆ. ಆದರೆ ಈ ತಂಡವು ಮುಂದೆ ಹೇಗೆ ಸಾಗಬೇಕು ಎಂಬ ಸಂಪೂರ್ಣ ಜವಾಬ್ದಾರಿಯನ್ನು ಗಂಭೀರ್ ವಹಿಸಿಕೊಳ್ಳಬೇಕಾಗಿದೆ. ಅದನ್ನು ನಿಭಾಯಿಸಲು ಬೇಕಾದ ಎಲ್ಲಾ ಅರ್ಹತೆಗಳು ಮತ್ತು ಸಾಮರ್ಥ್ಯ ಅವರಲ್ಲಿದೆ,' ಎಂದು ಬೆಂಬಲ ವ್ಯಕ್ತಪಡಿಸಿದರು.
ಟೀಮ್ ಇಂಡಿಯಾ ಆಟಗಾರರಿಗೆ ಮಹತ್ವದ ಸಲಹೆ
'ಐಪಿಎಲ್‌ನಲ್ಲಿ ರನ್‌ಗಳ ಹೊಳೆಯನ್ನೇ ಹರಿಸಿ ಅತಿಯಾದ ಆತ್ಮವಿಶ್ವಾಸದಲ್ಲಿರುವ ಯುವ ಆಟಗಾರರನ್ನು ಗಂಭೀರ್ ಅವರು ಮತ್ತೆ ಕಣಕ್ಕಿಳಿಸಬೇಕು. ಈ ಸೋಲು ಭಾರತ ತಂಡಕ್ಕೆ ಎಚ್ಚರಿಕೆಯ ಗಂಟೆಯೇ ಹೊರತು ಅವಮಾನವೇನಲ್ಲ. ಇದು ಅಂತಾರಾಷ್ಟ್ರೀಯ ಕ್ರಿಕೆಟ್ ಎಂಬುದನ್ನು ಆಟಗಾರರು ಅರ್ಥಮಾಡಿಕೊಳ್ಳಬೇಕು. ಇಲ್ಲಿ ಎದುರಾಳಿಗಳ ಯಾವುದೇ ದೌರ್ಬಲ್ಯಗಳು ಸುಲಭವಾಗಿ ಅರ್ಥವಾಗುವುದಿಲ್ಲ,' ಎಂದು ಹೇಳಿದರು.
ಆಟದ ಶೈಲಿ ಬದಲಾಯಿಸಿಕೊಳ್ಳುವಂತೆ ಸಲಹೆ
'ಐಪಿಎಲ್‌ನಲ್ಲಿ ನೀವು ಸುಲಭವಾಗಿ ರನ್ ಗಳಿಸಬಹುದು ಎಂದುಕೊಳ್ಳುವ ಕೆಲವು ಆಟಗಾರರಿರುತ್ತಾರೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ನಡೆಯುವುದಿಲ್ಲ. ಆದ್ದರಿಂದ ಆಟಗಾರರು ಕೇವಲ ಒಂದೆರಡು ಗೇರ್‌ಗಳ ಆಟಕ್ಕೆ ಸೀಮಿತವಾಗಬಾರದು. ತುಸು ಹೆಚ್ಚಿಬೇಕು. ಹಾಗಂತ ಯಾವಾಗಲೂ 5ನೇ ಗೇರ್‌ನಲ್ಲೇ ಬ್ಯಾಟಿಂಗ್ ಮಾಡಲು ಇಲ್ಲಿ ಸಾಧ್ಯವಿಲ್ಲ,' ಎಂದು ಡಿವಿಲಿಯರ್ಸ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯ ಆಗಿದ್ದ ಐಪಿಎಲ್ 2026ರಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅವರಂತಹ ಆಟಗಾರರು ತಮ್ಮ ತಮ್ಮ ಫ್ರಾಂಚೈಸಿಗಳ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಯಶಸ್ವಿಯಾಗಿದ್ದರು. ಆದರೆ ಅವರ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಲ್ಲಿ ಪ್ರವಾಸಲ್ಲಿ ಬೃಹತ್ ಮೊತ್ತ ಕಲೆಹಾಕಲು ಪರದಾಡಿದರು
ಸಂಜು ಸ್ಯಾಮ್ಸನ್ ಆಡಿದ ನಾಲ್ಕು ಇನಿಂಗ್ಸ್‌ಗಳಲ್ಲಿ ಮೂರಲ್ಲಿ ಸಿಂಗಲ್ ಡಿಜಿಟ್ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಮತ್ತೊಂದೆಡೆ ಐಪಿಎಲ್‌ನಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಬರೋಬ್ಬರಿ 776 ರನ್‌ಗಳನ್ನು ಸಿಡಿಸಿ ಮಿಂಚಿದ್ದ ವೈಭವ್ ಸೂರ್ಯವಂಶಿ ಈ ಪ್ರವಾಸದಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಕನಿಷ್ಠ 15 ರನ್‌ಗಳ ಗಡಿ ದಾಟಲು ಸಹ ಸಾಧ್ಯವಾಗಲಿಲ್ಲ. ಅವರು 14, 13, 15 ರನ್ ಗಳಿಸಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ನಡೆದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
'ಗಂಭೀರ್ ಒಬ್ಬರೇ ಈ ಸೋಲಿಗೆ ಕಾರಣರಲ್ಲ'
'ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ 4-0 ಅಂತರದಿಂದ ಸೋಲು ಕಂಡಿದ್ದನ್ನು ನೋಡುವುದು ಕಷ್ಟವಾಗಿತ್ತು, ಇದನ್ನು ನಿರೀಕ್ಷಿಸಿರಲಿಲ್ಲ. ತಂಡದಲ್ಲಿದ್ದ ಅನುಭವದ ಕೊರತೆಯೇ ಈ ಸೋಲಿಗೆ ಪ್ರಮುಖ ಕಾರಣವಾಗಿದೆ. ಇಂತಹ ಕಠಿಣ ಸಮಯದಲ್ಲಿ ನಾಯಕತ್ವದ ಪಾತ್ರ ಅತ್ಯಂತ ಮುಖ್ಯವಾಗುತ್ತದೆ. ಗಂಭೀರ್ ಒಬ್ಬರೇ ಈ ಸೋಲಿಗೆ ಕಾರಣರಲ್ಲ, ಆದರೆ ಅವರ ಪಾತ್ರ ದೊಡ್ಡದಿದೆ. ಸದ್ಯಕ್ಕೆ ಈ ಯುವ ತಂಡದ ರಚನೆಯ ವಿಷಯದಲ್ಲಿ ಅಭಿಮಾನಿಗಳು ಮತ್ತು ಬಿಸಿಸಿಐ ಸ್ವಲ್ಪ ತಾಳ್ಮೆಯಿಂದ ಇರಬೇಕಾಗುತ್ತದೆ,' ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಭಾರತವು ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಸೋತ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್, ನಾಯಕ ಶ್ರೇಯಸ್ ಅಯ್ಯರ್ ಹಾಗೂ ಆಯ್ಕೆ ಸಮಿತಿ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಅದರಲ್ಲೂ ಹೆಚ್ಚಿನ ಜನರು ಈ ಸೋಲಿಗೆ ಪ್ರಮುಖ ಕಾರಣವೇ ಗಂಭೀರ್ ಅವರು ಆಟಗಾರರ ಮೇಲೆ ಒತ್ತಡ ಹೇರಿದ್ದು ಎನ್ನುವ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈಗಲೂ ಕೂಡ ಅವರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಲಿವೆ. ಇದನ್ನ ಗಮನಿಸಿದ ಎಬಿಡಿ ಗಂಭೀರ್ ಪರ ಬ್ಯಾಟ್ ಬೀಸಿ ಗಮನ ಸೆಳೆದಿದ್ದಾರೆ.


Click it and Unblock the Notifications
