ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಸಮ್ಮೇಳನದಲ್ಲಿ ಮೈಸೂರು ದಸರಾ!

By * ಪುಷ್ಪಪಾದ
|
Google Oneindia Kannada News

AKKA conference to have elephant ride
ನ್ಯೂಜೆರ್ಸಿಯ ಬೃಂದಾವನದ ಆಶ್ರಯದಲ್ಲಿ ನಡೆಸಲಾಗುತ್ತಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಶುಕ್ರವಾರ ಸೆಪ್ಟೆಂಬರ್ 3ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಪ್ರಪ್ರಥಮ ಬಾರಿಗೆ "ಆನೆಯ ಮೇಲೆ ಅಂಬಾರಿ" ಮಾಡುವ ಅವಕಾಶ ಲಭ್ಯವಾಗಲಿದೆ. "ಆನೆ ಬಂತೊಂದ್ ಆನೆ...ಯಾವೂರ್ ಆನೆ" ಅನ್ನೋ ಪುಟ್ಟ ಪುಟ್ಟ ಮಕ್ಕಳಿಗೆ ಕಣ್ಣಿಗೆ ಹಬ್ಬ.. ದೊಡ್ಡವರಿಗೆ ಸಂಭ್ರಮ. "ಲೇಸರ್ ಶೋ" ಹಾಗು "ಒಲಂಪಿಕ್ ಓಪನಿಂಗ್ ಸೆರಮೊನಿ" ಶೈಲಿಯ ಅದ್ಧೂರಿ ಉದ್ಘಾಟನಾ ಸಮಾರಂಭ ಈ ಬಾರಿಯ ಸಮ್ಮೇಳನದ ವೈಶಿಷ್ಟ್ಯ.

ಸಮ್ಮೇಳನದಲ್ಲಿ ಇದೇ ಪ್ರಥಮ ಬಾರಿಗೆ "ದಸರಾ ಬೊಂಬೆ ಹಬ್ಬ"ದ ವಾತಾವರಣವನ್ನು ಸೃಷ್ಟಿಸಿ "ಭಕ್ತಿ ರಸ"ವನ್ನು ಬೊಂಬೆಗಳ ಮೂಲಕ ಸವಿಯುವ ಅಪರೂಪ ಅವಕಾಶ ಒದಗಿಸಲಾಗುತ್ತದೆ. ಸತ್ಯಸಂಧತೆ, ಕ್ಷಮಾಗುಣ, ಮರುಕ, ದೈವಭಕ್ತಿ ಮುಂತಾದ ನಿರಾಕಾರ ಭಾವಗಳನ್ನು ನೇರವಾಗಿ ತಿಳಿಸಹೋದರೆ ಅವು ಮಕ್ಕಳ ಮನಸ್ಸಿನ ಮೇಲೆ ಹೆಚ್ಚು ಪರಿಣಾಮವನ್ನು ಬೀರಲಾರವು. ಆ ಭಾವಗಳನ್ನು ಕತೆಗಳು, ನಾಟಕಗಳು, ಚಿತ್ರಗಳು, ಗೊಂಬೆಗಳು ಮುಂತಾದ ಸಾಧನಗಳು ಮನಮುಟ್ಟುವಂತೆ ಬೋಧಿಸುವವು.

"ಭಕ್ತಿ" ಎಂಬ ಪರಿಕಲ್ಪನೆಯಲ್ಲಿ ಭಾರತೀಯ ಕಥಾ ದೃಶ್ಯಗಳ ಪ್ರದರ್ಶನ ಗೊಂಬೆಗಳ ಮಾಧ್ಯಮದಲ್ಲಿ ಅಕ್ಕ ಸಮ್ಮೇಳನದಲ್ಲಿ ಪ್ರದರ್ಶಿಸಲಾಗುವುದು. ಏಕಲವ್ಯ ದ್ರೋಣರ ಗುರುಭಕ್ತಿ, ಮದರ್ ಥೆರೆಸಾಳ ಸೇವಾ ಭಕ್ತಿ, ಕಲೋಪಾಸಕರ ಕಲಾಭಕ್ತಿ, ಭರತನ ಭ್ರಾತೃಭಕ್ತಿ, ಶ್ರವಣನ ಮಾತಾಪಿತೃ ಭಕ್ತಿ, ಕೃಷ್ಣಸುಧಾಮರ ಮಿತ್ರಭಕ್ತಿ, ಗಾಂಧೀಜಿ ಮತ್ತಿತರರ ದೇಶಭಕ್ತಿ, ಶಬರಿ ಹನುಮಂತರ ರಾಮಭಕ್ತಿ, ಮೀರ ಕನಕ ಪುರಂದರರ ಕೃಷ್ಣಭಕ್ತಿ ಹಾಗೂ ಶ್ರೀರಾಮನ ಧರ್ಮಭಕ್ತಿ ಮುಂತಾದ ವಿವಿಧ ರೀತಿಯ ಭಕ್ತಿಯ ಪರಿಕಲ್ಪನೆಯನ್ನು ಬಿಂಬಿಸುವ ದೃಶ್ಯಗಳ ನಿರೂಪಣೆಯನ್ನು ಕೇರಿ, ನಾರ್ತ್ ಕೆರೊಲಿನ ನಿವಾಸಿ ಶ್ರೀಮತಿ ಸವಿತಾ ರವಿಶಂಕರ್ ಮಾಡುವರು.

ಬನ್ನಿ ಪಾಲ್ಗೊಂಡು, ಮಕ್ಕಳು ಗೊಂಬೆ ಪ್ರದರ್ಶನವನ್ನು ವೀಕ್ಷಿಸುವಂತೆ ಉತ್ತೇಜಿಸಿ, ಭಕ್ತಿಯ ವಿವಿಧ ರೂಪಗಳನ್ನು ಮಕ್ಕಳಿಗೆ ಪರಿಚಯಿಸಿ. ದಸರಾ ಹೊತ್ತಿಗೆ ಮೈಸೂರಿಗೆ ಹೋಗಲು ಇಲ್ಲಿನ ಮಕ್ಕಳಿಗೆ ಶಾಲೆಗಳು ಇರುವುದರಿಂದ ಕಷ್ಟವಾಗುತ್ತದೆ ಎಂದು ದಸರ ಹಬ್ಬ, ಆನೆ ಅಂಬಾರಿ ಹಾಗು ದಸರಾ ಮೆರವಣಿಗೆಯನ್ನು ಅಮೇರಿಕದಲ್ಲೇ ಸೃಷ್ಟಿಸಲು ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ.

ನೀವು ಬರಲೇ ಬೇಕು : ಸಮ್ಮೇಳನಕ್ಕೆ ಆಗಮಿಸುವ ಎಲ್ಲಾ ಅತಿಥಿಗಳಿಗೂ ಬೆಳಗಿನ ಉಪಹಾರ ಹಾಗು ಎರಡು ಹೊತ್ತು ಶುಚಿ ರುಚಿಯಾದ ಮೃಷ್ಟಾನ್ನ ಭೋಜನ, ವಸತಿ ಇತ್ಯಾದಿ ಎಲ್ಲಾ ಸೌಲಭ್ಯಗಳು ದೊರಕಲು ಅನುವಾಗಲೆಂದು ಈ ಬಾರಿ ಸಮ್ಮೇಳನದ ನೋಂದಾವಣೆಯನ್ನು ಭಾನುವಾರ ಆಗಸ್ಟ್ 29 ಮಧ್ಯರಾತ್ರಿಗೆ ಕೊನೆಗೊಳಿಸುವ ಎಲ್ಲ ಸಾಧ್ಯತೆಗಳು ಇವೆ ಎಂದು ಸಮ್ಮೇಳನ ಕಾರ್ಯಕಾರಿ ಸಮಿತಿ ತಿಳಿಸಿದೆ.

ಭಾನುವಾರ ಆಗಸ್ಟ್ 29ರ ಮಧ್ಯರಾತ್ರಿವರೆಗೂ ನೋಂದಾವಣೆ ಶುಲ್ಕವನ್ನು ದೊಡ್ಡವರಿಗೆ 175 ಡಾಲರ್ ಹಾಗು 7ರಿಂದ 18ರವರೆಗಿನ ಮಕ್ಕಳಿಗೆ 125 ಡಾಲರ್, ಆಗಸ್ಟ್ 29ರ ನಂತರ ನೋಂದಾವಣೆ ಶುಲ್ಕ ದೊಡ್ಡವರಿಗೆ 225 ಡಾಲರ್ ಹಾಗು ಮಕ್ಕಳಿಗೆ 175 ಡಾಲರ್ ಆಗಲಿದೆ. ಆಗಸ್ಟ್ 29ರ ನಂತರ ನೋಂದಾಯಿಸಿದವರಿಗೆ, ಸಮ್ಮೇಳನದ ಮುಖ್ಯ ಕಾರ್ಯಕ್ರಮಗಳಲ್ಲಿ ಕೂರಲು ಜಾಗ, ಊಟ, ವಸತಿ ಸಿಗುವ ಗ್ಯಾರಂಟಿ ಇರುವುದಿಲ್ಲ ಎಂದು ನೊಂದಾವಣೆ ಮತ್ತು ಅತಿಥಿ ಸತ್ಕಾರ ಕಾರ್ಯಕಾರಿ ಸಮಿತಿ ತಿಳಿಸಿದೆ.

ಆದಕಾರಣ ಸಮ್ಮೇಳನಕ್ಕೆ ಇನ್ನೂ ನೋಂದಾಯಿಸದೆ ಇದ್ದ ಪಕ್ಷದಲ್ಲಿ, ಈ ಕೂಡಲೇ ನೋಂದಾಯಿಸಲು ಇಲ್ಲಿ ಕ್ಲಿಕ್ಕಿಸಿ... ತಮ್ಮ ಉಪಸ್ಥಿತಿ ಮತ್ತು ಭಾಗವಹಿಸುವಿಕೆಯನ್ನು ಮುನ್ನಾ ನಿಗದಿ ಮಾಡಿಕೊಳ್ಳಬೇಕೆಂದು ಸಮ್ಮೇಳನ ಕಾರ್ಯಕಾರಿ ಸಮಿತಿ ಕೋರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X