ಶಿರಡಿ ಸಾಯಿಬಾಬಾ ಮಂದಿರದಲ್ಲಿ ದಾಸೋಹಕ್ಕೆ ದಿನಕ್ಕೆ 500 ಕೆಜಿ ಎಲ್‌ಪಿಜಿ ಬೇಕು
ಶಿರಡಿ: ಮಹಾರಾಷ್ಟ್ರ ರಾಜ್ಯದ ಅಹಮದ್‌ನಗರ ಜಿಲ್ಲೆಯ ಶಿರಡಿಯಲ್ಲಿರುವ ಶ್ರೀ ಸಾಯಿಬಾಬಾ ಸಮಾಧಿ ಮಂದಿರವು ಪ್ರಮುಖ ಯಾತ್ರಾ ಸ್ಥಳವಾಗಿದೆ. ನಿತ್ಯ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಸಾಯಿಬಾಬಾರ ದರ್ಶನ ಪಡೆಯುತ್ತಾರೆ. ಅವರಿಗೆಲ್ಲ ಪ್ರಸಾದ ಸೇವೆ ಇರುತ್ತದೆ. ಲಾಡು ಪ್ಯಾಕೆಟ್ ಸಹ ನೀಡಲಾಗುತ್ತದೆ. ಇಷ್ಟು ಬೃಹತ್ ಮಟ್ಟದಲ್ಲಿ ಆಹಾರ ತಯಾರಿಸಲು ಬೇಕಾದ ಅಡುಗೆಗೆ ಅನಿಲ ಕೊರತೆ ಮುಂದಿನ ದಿನಗಳಲ್ಲಿ ಎದುರಾಗುವ ಸಾಧ್ಯತೆ ಇದೆ. ಇದು ಶಿರಡಿ ಮಂದಿರ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.
ಮಧ್ಯಪ್ರಾಚ್ಯದಲ್ಲಿ ಏರ್ಪಟ್ಟ ಸಂಘರ್ಷ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದರ ಪ್ರಭಾವವು ಕೊಲ್ಲಿ ರಾಷ್ಟ್ರಗಳಿಂದ ಭಾರತಕ್ಕೆ ಪೂರೈಕೆ ಆಗುತ್ತಿದ್ದ ತೈಲ ಪೂರೈಕೆ ಮೇಲೆ ಉಂಟಾಗಿದೆ. ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸ್ಥಿತಿ ಭಾರತದಲ್ಲಿ ನಿರ್ಮಾಣವಾಗಿದೆ. ಈ ಸಮಸ್ಯೆಯ ಬಿಸಿ ಅನೇಕ ದೇವಾಲಯಗಳ ಜೊತೆಗೆ ನಿತ್ಯ ಅಡುಗೆಗಾಗಿ 500 ಕೆಜಿ ಅಡುಗೆ ಅನಿಲ ಬಳಸುವ ಶಿರಡಿ ಸಾಯಿಬಾಬಾ ದೇವಾಲಯಕ್ಕೂ ತಟ್ಟಿದೆ.

40,000 ಕ್ಕೂ ಅಧಿಕ ಭಕ್ತರ ಭೇಟಿ
ಶಿರಡಿ ದೇವಾಲಯ ಪ್ರಸಾದಕ್ಕೆ ವಿದೇಶಗಳಿಂದಲೂ ಬೇಡಿಕೆ ಇದೆ. ನಿತ್ಯ ಇಲ್ಲಿ ಸಾವಿರಾರು ಭಕ್ತರಿಗೆ ದೊಡ್ಡ ಪ್ರಮಾಣದಲ್ಲಿ ಪ್ರಸಾದವನ್ನು ವಿತರಿಸಲಾಗುತ್ತೆ. 40,000 ಕ್ಕೂ ಹೆಚ್ಚು ಭಕ್ತರು ಭೇಟಿ ವೇಳೆ 'ಪ್ರಸಾದಾಲಯ'ದಲ್ಲಿ ಪ್ರಸಾದವನ್ನು ಸ್ವೀಕರಿಸುತ್ತಾರೆ. ದೇವಸ್ಥಾನವು ಅಡುಗೆ ಮಾಡಲು ನಿತ್ಯ 500 ಕೆಜಿ ಅನಿಲ ಬಳಸುತ್ತದೆ. ಹೀಗಾಗಿ ಈ ದೇವಾಲಯವ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯ ಸಮಸ್ಯೆ ಎದುರಿಸುವ ಸಂಭವವಿದೆ.
ಎರಡು ವಾರ ಚಿಂತೆ ಇಲ್ಲ, ನಂತರ ಉತ್ಪಾದನೆ ಸ್ಥಗಿತ?
ಶಿರಡಿ ಸಾಯಿಬಾಬಾ ಸಂಸ್ಥಾನವು ಮುಂದಿನ ಸುಮಾರು ಎರಡು ವಾರದಗಳ (15 ದಿನ) ಸಿಲಿಂಡರ್ ದಾಸ್ತಾನು ಹೊಂದಿದೆ. ಅಷ್ಟರಲ್ಲಿ ಯುದ್ಧ ತಣ್ಣಗಾಗಿ ಕಚ್ಚಾ ತೈಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದೇ ಮೊದಲಿನಂತೆ ಸರಬರಾಜು ಆದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಒಂದು ವೇಳೆ ಮಧ್ಯಪ್ರಾಚ್ಯ ಯುದ್ಧ ಮುಂದುವರಿದರೆ ಶಿರಡಿ ದೇವಾಲಯ ಸಾಕಷ್ಟು ಸಮಸ್ಯೆ ಎದುರಿಸಬಹುದು. ದೇವಾಲಯದ ಅಧಿಕಾರಿಗಳು ದೈನಂದಿನ ವ್ಯವಹಾರ ನಡೆಸಲು ಕಷ್ಟಪಡಬೇಕಾಗುತ್ತದೆ. ಇದೇ ತಿಂಗಳ ಕೊನೆಯಲ್ಲಿ ರಾಮನವಮಿ ಎದುರಾಗಲಿದ್ದು, ಆಗ ಪ್ರಸಾದಕ್ಕಾಗಿ ತಯಾರಿಸಲಾದ ಲಡ್ಡು ಮತ್ತು ಬೂಂದಿ ಉತ್ಪಾದನೆ ನಿಲ್ಲಿಸಬೇಕಾಗಬಹುದು ಎಂಬ ಆತಂಕ ಅವರಲ್ಲಿದೆ.
7000 ತಿಂಡಿ ಪ್ಯಾಕೆಟ್
ಶಿರಡಿ ದೇವಸ್ಥಾನದಲ್ಲಿ ನಿತ್ಯ ಅಂದಾಜು 40,000 ಭಕ್ತರಿಗೆ ಪ್ರಸಾದ ಮತ್ತು ಆಹಾರ ತಯಾರಿಸಲಾಗುತ್ತದೆ. ಭಕ್ತರಿಗಾಗಿ 7000 ತಿಂಡಿ (ಲಾಡು, ಬೂಂದಿ) ಪ್ಯಾಕೆಟ್‌ಗಳನ್ನು ಸಿದ್ಧಪಡಿಸಲಾಗಿದೆ. ದೇವಾಲಯದ ಅಧಿಕಾರಿಗಳು ಬೂಂದಿ ಪ್ಯಾಕೆಟ್‌ಗಳನ್ನು ಭಕ್ತರಿಗೆ ವಿತರಿಸುತ್ತಾರೆ. ಆದರೆ ಲಡ್ಡುಗಳನ್ನು ಪ್ರಸಾದವಾಗಿ ಮಾರಾಟ ಮಾಡಲಾಗುತ್ತದೆ. ದೇವಾಲಯವು ಲಡ್ಡು ಮತ್ತು ಬೂಂದಿ ತಯಾರಿಸಲು ಮಾತ್ರ ಸುಮಾರು ಅರ್ಧದಷ್ಟು (250 ಕೆಜಿ) ಎಲ್‌ಪಿಜಿ ಬಳಸುತ್ತದೆ. ಆದ್ದರಿಂದ, ಅನಿಲ ಪೂರೈಕೆಯಲ್ಲಿ ಯಾವುದೇ ಅಡಚಣೆ ಉಂಟಾದರೆ, ಪ್ರಸಾದ ಉತ್ಪಾದನೆ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂಬುದು ಅಧಿಕಾರಿಗಳ ಅಳಲು.
ಶಿರಡಿ ದೇವಸ್ಥಾನದ ಪ್ರಸಾದಾಲಯದಲ್ಲಿ ಸೌರ ವ್ಯವಸ್ಥೆಯು ಇದೆ. ಇದರಿಂದ ದಿನಕ್ಕೆ ಸುಮಾರು 200 ಕೆಜಿ ಎಲ್‌ಪಿಜಿ ಉಳಿಸಬಹುದು. ಸುಮಾರು ಐದು ಟನ್ ಅಕ್ಕಿ ಮತ್ತು ಬೇಳೆಯನ್ನು ಸೌರಶಕ್ತಿ ಚಾಲಿತ ವ್ಯವಸ್ಥೆಯಲ್ಲಿ ಬೇಯಿಸಲಾಗುತ್ತದೆ. ಇಂಧನ ಕೊರತೆಯ ಸಾಧ್ಯತೆಯನ್ನು ಪರಿಗಣಿಸಿ, ಅಧಿಕಾರಿಗಳು ಈ ಸೌರಶಕ್ತಿ ವ್ಯವಸ್ಥೆ ಒತ್ತು ನೀಡುವ ಸಾಧ್ಯತೆ ಇದೆ.
ಅನಿಲ ಸಂಗ್ರಹಣಾ ಟ್ಯಾಂಕ್
ಎಲ್‌ಪಿಜಿ ಸಂಗ್ರಹಿಸಲು ಇಲ್ಲಿ ತಲಾ 10 ಟನ್ ಸಾಮರ್ಥ್ಯದ ಎರಡು ಸಂಗ್ರಹಣಾ ಟ್ಯಾಂಕ್‌ಗಳನ್ನು ಸ್ಥಾಪಿಸಿದ್ದೇವೆ. ಈ ಟ್ಯಾಂಕ್‌ಗಳಲ್ಲಿ ಗರಿಷ್ಠ 20,000 ಕೆಜಿ ಸಂಗ್ರಹಿಸಬಹುದು, ಇದು ಹದಿನೈದು ದಿನಗಳವರೆಗೆ ಇರುತ್ತದೆ" ಎಂದು ದೇವಸ್ಥಾನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications