ನಮ್ಮನ್ನು ಎಲ್ಲರೂ ದರೋಡೆ ಮಾಡ್ತಿದ್ದಾರೆ: ಭಾರತದ ವಿರುದ್ಧ ಟ್ರಂಪ್ ಮತ್ತೆ ಕಿಡಿ
ವಾಷಿಂಗ್ಟನ್, ಜೂನ್ 11: ಭಾರತಕ್ಕೆ ನೀಡಿದ್ದ ಸುಂಕರಹಿತ ರಫ್ತು ಸೌಲಭ್ಯವನ್ನು ವಾಪಸ್ ಪಡೆದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಲಿನ್ಯ ನಿಯಂತ್ರಣಕ್ಕೆ ಭಾರತ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ಕಿಡಿಕಾರಿದ್ದರು. ಈಗ ಅವರು ಮತ್ತೆ ಭಾರತದ ವಿರುದ್ಧ ಹರಿಹಾಯ್ದಿದ್ದಾರೆ.
ಅಮೆರಿಕದ ಮೋಟಾರ್ ಸೈಕಲ್‌ಗಳ ಮೇಲೆ ಭಾರತ ವಿಧಿಸುತ್ತಿರುವ ಸುಂಕದ ಪ್ರಮಾಣ ಅತಿಯಾಗಿದೆ. ಇದನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಟ್ರಂಪ್ ಅಸಮಾಧಾನ ಹೊರಹಾಕಿದ್ದಾರೆ.
ಮೋಟಾರ್‌ಸೈಕಲ್‌ಗಳ ಮೇಲಿನ ಆಮದು ಸುಂಕವನ್ನು ಭಾರತ ಶೇ 100ರಿಂದ ಶೇ 50ಕ್ಕೆ ಇಳಿಸಿದ್ದರೂ ಅದು ತೀರಾ ಅತಿಯಾಗಿದೆ ಎಂದು ಹೇಳಿದ್ದಾರೆ.
ಭಾರತದ ಕೆಲ ನಗರಗಳಲ್ಲಿ ಉಸಿರಾಡಿಸಲೂ ಸಾಧ್ಯವಿಲ್ಲ : ಡೊನಾಲ್ಡ್ ಟ್ರಂಪ್ ವ್ಯಂಗ್ಯ
ತಮ್ಮ ನಾಯಕತ್ವದಲ್ಲಿರುವ ಅಮೆರಿಕವನ್ನು ಇನ್ನು ಮೂರ್ಖನನ್ನಾಗಿಸಲು ಸಾಧ್ಯವಿಲ್ಲ ಎಂದು ಅವರು ಸಿಬಿಎಸ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪರಿಸರ ಮಾಲಿನ್ಯದ ಬಗ್ಗೆ ಭಾರತ, ಚೀನಾ, ರಷ್ಯಾ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ. ಉತ್ತಮ ಗಾಳಿ, ಶುದ್ಧ ನೀರಿನ ಬಗ್ಗೆ ಕಾಳಜಿ ಇಲ್ಲ. ಕೆಲವು ನಗರಗಳಿಗೆ ತೆರಳಿದರೆ ಸರಿಯಾಗಿ ಉಸಿರಾಡಲೂ ಸಾಧ್ಯವಿಲ್ಲ. ಅಷ್ಟು ಕೊಳಕಾಗಿರುತ್ತದೆ ಎಂದು ಟ್ರಂಪ್ ಇತ್ತೀಚೆಗೆ ಕಿಡಿಕಾರಿದ್ದರು.

ನಾವು ಮೂರ್ಖ ದೇಶವಲ್ಲ
'ನಾವೇನೂ ಮೂರ್ಖ ದೇಶವಲ್ಲ. ಭಾರತದ ಕಡೆ ನೋಡಿ, ಪ್ರಧಾನಿ ನರೇಂದ್ರ ಮೋದಿ ನನ್ನ ಉತ್ತಮ ಸ್ನೇಹಿತ. ಆದರೆ, ಅವರು ಏನು ಮಾಡಿದ್ದಾರೆ ನೋಡಿ, ಮೋಟಾರ್ ಸೈಕಲ್ ಮೇಲೆ ಶೇ 100ರಷ್ಟು ತೆರಿಗೆ ಹಾಕಿದ್ದಾರೆ. ನಾವು ಅವರಿಗೆ ಸ್ವಲ್ಪವೂ ಸುಂಕ ಹಾಕುವುದಿಲ್ಲ' ಎಂದು ಹೇಳಿಕೊಂಡಿದ್ದಾರೆ.
ಹಾರ್ಲೆ ಡೇವಿಸನ್ ಮೋಟಾರ್‌ಸೈಕಲ್ ಮೇಲಿನ ಆಮದು ಸುಂಕವನ್ನು ಭಾರತ ಶೇ 50ಕ್ಕೆ ಇಳಿಸಿದೆ. ಆದರೆ, ಈ ವಿಚಾರ ತಮ್ಮ ಹೃದಯಕ್ಕೆ ಹತ್ತಿರವಾಗಿದ್ದು, ಭಾರತ ಅದನ್ನು ಶೂನ್ಯಕ್ಕೆ ಇಳಿಸಬೇಕು ಎಂದು ಆಗ್ರಹಿಸಿದ್ದಾರೆ.
'ಅದು ಮುಗಿದ ಕತೆ!' ಮೋದಿ ಹೊಸ ಸರ್ಕಾರಕ್ಕೆ ಅಮೆರಿಕದಿಂದ ಮೊದಲ ಆಘಾತ

ಹಾರ್ಲೆಗೆ ಶೇ 100ರಷ್ಟು ತೆರಿಗೆ
'ನಾವು ಹಾರ್ಲೆಯನ್ನು ಅಲ್ಲಿಗೆ ಕಳುಹಿಸಿದಾಗ ಅವರು ಶೇ 100ರಷ್ಟು ತೆರಿಗೆ ವಿಧಿಸುತ್ತಾರೆ. ಭಾರತದವರು ಸಾಕಷ್ಟು ಸಂಖ್ಯೆಯ ಮೋಟಾರ್ ಸೈಕಲ್ ತಯಾರಿಸಿ ನಮಗೆ ಕಳುಹಿಸಿದಾಗ ಯಾವುದೇ ತೆರಿಗೆ ಇಲ್ಲ. ನಾನು ಅವರಿಗೆ ಕರೆ ಮಾಡಿದ್ದೆ. ಇದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ ಎಂದಿದ್ದೇನೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಂಭಾಷಣೆಯ ಕುರಿತು ತಿಳಿಸಿದ್ದಾರೆ.

ಒಂದು ಕರೆಯಿಂದ ಶೇ 50ರಷ್ಟು ಇಳಿಕೆ
ಒಂದು ಫೋನ್ ಕರೆಯೊಂದಿಗೆ ಅವರು ತೆರಿಗೆ ಪ್ರಮಾಣವನ್ನು ಶೇ 50ಕ್ಕೆ ಇಳಿಸಿದ್ದಾರೆ. ಆದರೆ, ಈಗಲೂ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಇದು ಶೇ 50 ವರ್ಸಸ್ ಶೂನ್ಯವಾಗುತ್ತದೆ. ಅವರು ಈ ವಿಚಾರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ. ಅಮೆರಿಕದ ಮೋಟಾರ್‌ಸೈಕಲ್‌ಗಳ ಮೇಲಿನ ಆಮದು ಸುಂಕದ ಗೊಂದಲವನ್ನು ಬಗೆಹರಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ಇನ್ನೂ ಮಾತುಕತೆ ಮುಂದುವರಿಸಿವೆ ಎಂಬ ಸೂಚನೆ ನೀಡಿದ್ದಾರೆ.
ಆಘಾತ ನೀಡಿದ ಅಮೆರಿಕದ ನಡೆಯನ್ನು 'ದುರದೃಷ್ಟಕರ' ಎಂದ ಭಾರತ

ದರೋಡೆಗೊಳಗಾಗುವ ಬ್ಯಾಂಕ್ ಆಗಿದ್ದೇವೆ
'ನಾನು ಇದನ್ನು ಮಾಡದೆ ಇದ್ದರೆ, ನಾವು ಈಗ ಹೊಂದಿರುವ ಶಕ್ತಿ ಹೊಂದಿರದೆ ಇದ್ದಿದ್ದರೆ ಮತ್ತು ನಾವು ಬ್ಯಾಂಕ್ ಆಗಿರದೆ ಇದ್ದಿದ್ದರೆ... ನಾವು ಬ್ಯಾಂಕ್ ಆಗಿರದೆ ಇದ್ದಿದ್ದರೆ ಇದರ ಬಗ್ಗೆ ಯಾರೂ ಮಾತನಾಡುತ್ತಿರಲಿಲ್ಲ. ಏಕೆಂದರೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಎಲ್ಲರೂ ದರೋಡೆ ಮಾಡಲು ಬಯಸುವ ಬ್ಯಾಂಕ್ ನಾವಾಗಿದ್ದೇವೆ. ಸುದೀರ್ಘ ಕಾಲದಿಂದ ಅವರು ಅದನ್ನೇ ಮಾಡಿಕೊಂಡು ಬಂದಿದ್ದಾರೆ. ಇತರೆ ದೇಶಗಳೊಂದಿಗೆ ನಾವು 800 ಬಿಲಿಯನ್ ಡಾಲರ್ ವ್ಯಾಪಾರ ಕೊರತೆ ಎದುರಿಸುತ್ತಿದ್ದೇವೆ. ಈಗ ಹೇಳಿ ಈ ಡೀಲ್‌ಗಳನ್ನೆಲ್ಲ ಯಾರು ಮಾಡಿದ್ದರೆಂದು' ಎಂದು ಹಿಂದಿನ ಒಬಾಮಾ ಆಡಳಿತದ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.