LPG: ಮನೆಯಲ್ಲೇ ಕುಳಿತು ಎಲ್‌ಪಿಜಿ ಇ-ಕೆವೈಸಿ ಮಾಡುವುದು ಹೇಗೆ? ಇಲ್ಲಿವೆ ಸರಳ ವಿಧಾನಗಳು
LPG Gas: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆ ಈಗಾಗಲೇ ದೇಶದ ಬಹುತೇಕ ಪ್ರಮುಖ ನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಉಂಟಾಗಿದೆ. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರವು ಎಲ್‌ಪಿಜಿ ವಿತರಣೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಎಲ್ಲಾ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಗ್ರಾಹಕರು ಇ-ಕೆವೈಸಿ ಮಾಡಿಸುವುದು ಈಗ ಕಡ್ಡಾಯವಾಗಿದೆ. ಇದು ಗ್ರಾಹಕರನ್ನು ಗುರುತಿಸಲು ಮತ್ತು ದುರುಪಯೋಗ ಆಗುವುದನ್ನು ತಡೆಯಲು ಸಹಕಾರಿ ಆಗಲಿದೆ. ಹಾಗಾದ್ರೆ, ಮನೆಯಲ್ಲೇ ಕುಳಿತು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಹೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹೊಸ ಮಾರ್ಗಸೂಚಿಯ ಪ್ರಕಾರ, ಒಂದು ಸಿಲಿಂಡರ್ ಬುಕ್ ಮಾಡಿದ ನಂತರ ಮುಂದಿನ ಬುಕಿಂಗ್‌ಗೆ ಕನಿಷ್ಠ 25 ದಿನಗಳ ಅಂತರ ಇರಬೇಕಾಗುತ್ತದೆ. ಅಡುಗೆ ಅನಿಲದ ಕೊರತೆ ಆಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರವು 'ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ'ಯನ್ನು (ESMA) ಜಾರಿಗೊಳಿಸಿದೆ. ಇದರಿಂದಾಗಿ ದೇಶೀಯ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆದ್ದರಿಂದ ಇದೀಗ ಗ್ರಾಹಕರಿಗೆ ಇ-ಕೆವೈಸಿ ಕಡ್ಡಾಯಗೊಳಿಸಿದೆ.

ಇ-ಕೆವೈಸಿ ಮಾಡಿಸುವ ವಿಧಾನಗಳು
ಇಂಧನ ಏಜೆನ್ಸಿಯ ಮೂಲಕ ಇ-ಕೆವೈಸಿ: ನಿಮ್ಮ ಆಧಾರ್ ಕಾರ್ಡ್ ಮತ್ತು ಗ್ಯಾಸ್ ಪಾಸ್‌ಬುಕ್ ಅನ್ನು ತೆಗೆದುಕೊಂಡು ಹತ್ತಿರದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ. ಅಲ್ಲಿ ಬಯೋಮೆಟ್ರಿಕ್ ಯಂತ್ರದ ಮೂಲಕ ದೃಢೀಕರಣ ಪೂರ್ಣಗೊಳಿಸಿ.
ಮೊಬೈಲ್ ಆ್ಯಪ್ ಮೂಲಕ ಇ-ಕೆವೈಸಿ
ನಿಮ್ಮ ಗ್ಯಾಸ್ ಕಂಪನಿಯ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ (ಉದಾಹರಣೆಗೆ: IndianOil One, BharatGas ಅಥವಾ HP Pay). ಜೊತೆಗೆ ಪ್ಲೇಸ್ಟೋರ್‌ನಿಂದ 'Aadhaar Face RD' ಆ್ಯಪ್ ಅನ್ನು ಕೂಡ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಬಳಿಕ ಗ್ಯಾಸ್ ಆ್ಯಪ್‌ನಲ್ಲಿ ಲಾಗಿನ್ ಆಗಿ 'e-KYC' ಆಯ್ಕೆ ಮಾಡಿ Facial recognition ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಸಬ್ಸಿಡಿ ಪಡೆಯಲು ಅಥವಾ ಸಿಲಿಂಡರ್ ಬುಕಿಂಗ್ ಮಾಡಲು ತೊಂದರೆ ಆಗಬಹುದು. ಈ ನಿಯಮವು ಪ್ರಸ್ತುತ ಕೇರಳ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಬರುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನೀವು ಅಧಿಕೃತ ವೆಬ್‌ಸೈಟ್ www.pmuy.gov.in/e-kyc.htmlಗೆ ಭೇಟಿ ನೀಡಬಹುದು.
ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್-ಅಮೆರಿಕ ನಡುವೆ ಉಂಟಾಗಿರುವ ಭೌಗೋಳಿಕ-ರಾಜಕೀಯ ಸಂಘರ್ಷವು ಭಾರತದ ಅಡುಗೆ ಅನಿಲ (LPG) ಪೂರೈಕೆ ಸರಪಳಿಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಕೆಂಪು ಸಮುದ್ರ ಮತ್ತು ಹೋರ್ಮುಜ್ ಜಲಸಂಧಿಯಂತಹ ಪ್ರಮುಖ ಇಂಧನ ಮಾರ್ಗಗಳಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿ ಉಂಟಾಗಿರುವುದರಿಂದ, ಎಲ್‌ಪಿಜಿ ಆಮದು ವಿಳಂಬವಾಗುತ್ತಿದೆ. ಇದು ದೇಶದಲ್ಲಿ ಕೃತಕ ಅಭಾವದ ಸೃಷ್ಟಿಗೆ ಕಾರಣವಾಗಿದ್ದು, ಈ ಆತಂಕದ ಲಾಭ ಪಡೆಯಲು ಪ್ರಯತ್ನಿಸುತ್ತಿರುವ ಕೆಲವು ಸ್ಥಳೀಯ ವಿತರಕರು ಹೆಚ್ಚಿನ ದರ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿಬರುತ್ತಿವೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಹಲವಾರು ತುರ್ತು ಕ್ರಮಗಳನ್ನು ಕೈಗೊಂಡಿದೆ. ಮೊದಲನೆಯದಾಗಿ, ಅನಿಲ ದಾಸ್ತಾನು ಮತ್ತು ಅಕ್ರಮ ಕಪ್ಪು ಮಾರುಕಟ್ಟೆಯನ್ನು ತಡೆಯಲು ಸಿಲಿಂಡರ್ ಬುಕಿಂಗ್ ನಡುವಿನ ಕಡ್ಡಾಯ ಕಾಯುವ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ. ಗೃಹಬಳಕೆಯ ಎಲ್‌ಪಿಜಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ವಾಣಿಜ್ಯ ಬಳಕೆಯ ಎಲ್‌ಪಿಜಿಯನ್ನು ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಂತಹ ಅಗತ್ಯ ಸೇವೆಗಳಿಗೆ ಮಾತ್ರ ತಿರುಗಿಸಲಾಗುತ್ತಿದೆ. ರೆಸ್ಟೋರೆಂಟ್‌ಗಳ ಬೇಡಿಕೆಯನ್ನು ಪರಿಶೀಲಿಸಲು ತೈಲ ಮಾರುಕಟ್ಟೆ ಕಂಪನಿಗಳ ವಿಶೇಷ ಸಮಿತಿಯನ್ನು ರಚಿಸಲಾಗಿದೆ.
ಗ್ರಾಹಕರಿಗೆ ಅಧಿಕೃತ ಇನ್‌ವಾಯ್ಸ್‌ನಲ್ಲಿ ನಮೂದಿಸದ ಯಾವುದೇ ಹೆಚ್ಚುವರಿ "ಡೆಲಿವರಿ ಶುಲ್ಕ" ಪಾವತಿಸದಂತೆ ಸರ್ಕಾರ ಕಟ್ಟುನಿಟ್ಟಾಗಿ ಸೂಚಿಸಿದೆ. ಇಂತಹ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ, ಗ್ರಾಹಕರು ಇಂಡಿಯನ್ ಆಯಿಲ್, ಭಾರತ್ ಗ್ಯಾಸ್ ಮತ್ತು ಹೆಚ್.ಪಿ. ಗ್ಯಾಸ್ ಕಂಪನಿಗಳ ಅಧಿಕೃತ ಸಹಾಯವಾಣಿಗಳಿಗೆ ಕರೆ ಮಾಡಿ ಅಥವಾ ಆನ್‌ಲೈನ್ ಕುಂದುಕೊರತೆ ಪೋರ್ಟಲ್ ಮೂಲಕ ದೂರು ನೀಡಬಹುದು ಎಂದು ತಿಳಿಸಿದೆ.












Click it and Unblock the Notifications