ಮಂಡ್ಯದಲ್ಲಿ ಮುದ್ದೆ ಉಣ್ಣೊ ಸ್ಪರ್ಧೆ, ಮುದ್ದೆ ತಿನ್ನಿ ಸಿನಿಮಾ ಸ್ಟಾರ್ ಆಗಿ!
ಮಂಡ್ಯ, ಜೂನ್ 28: ಹೊಟ್ಟೆ ತುಂಬಾ ರಾಗಿ ಮುದ್ದೆ ತಿಂದು ಸಿನಿಮಾ ಸ್ಟಾರ್ ಆಗುವ ಅವಕಾಶವೊಂದನ್ನು ಆಸಕ್ತ ಹೊಟ್ಟೆಬಾಕರಿಗಾಗಿ ಮಂಡ್ಯ ಜಿಲ್ಲೆಯ 'ನಮ್‌ಹೈಕ್ಳು' ಕಲ್ಪಿಸಿದ್ದಾರೆ.
ಮಂಡ್ಯ ಜಿಲ್ಲೆ ಕಸಬಾ ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಜನತಾ ಟಾಕೀಸ್ ಮತ್ತು ನಮ್‌ಹೈಕ್ಳು ತಂಡ ಜಿಲ್ಲಾಮಟ್ಟದ ರಾಗಿ ಮುದ್ದೆ ಉಣ್ಣುವ ಸ್ಪರ್ಧೆ ಆಯೋಜಿಸಿದ್ದಾರೆ. ಅದೂ ನಾಟಿ ಕೋಳಿ ಸಾರಿನೊಂದಿಗೆ.
ಜುಲೈ 01ನೇ ತಾರೀಖಿನಂದು ಮಧ್ಯಾಹ್ನ 1 ಗಂಟೆಗೆ ಮಂಗಲ ಗ್ರಾಮದ ಮಾರಮ್ಮನ ದೇವಾಲಯದ ಆವರಣದಲ್ಲಿ ಈ ಸ್ಪರ್ಧೆ ಆಯೋಜಿತವಾಗಿದ್ದು ಆಸಕ್ತರು 100 ರೂಪಾಯಿ ನೊಂದಣಿ ಶುಲ್ಕ ನೀಡಿ ಬಿಸಿ-ಬಿಸಿ ನಾಟಿ ಕೋಳಿ ಸಾರಿನ ಜೊತೆ ಹೊಟ್ಟೆ ಬಿರಿಯುವಷ್ಟು ರಾಗಿ ಮುದ್ದೆ ಉಣ್ಣಬಹುದು.

15 ನಿಮಿಷದಲ್ಲಿ ಯಾರು ಅತಿ ಹೆಚ್ಚು ರಾಗಿಮುದ್ದೆ ತಿನ್ನುತ್ತಾರೊ ಅವರಿಗೆ 5000 ರೂಪಾಯಿ ಬಹುಮಾನ, ಪಾರಿತೋಶಕದ ಜೊತೆಗೆ 'ಜನತಾ ಟಾಕೀಸ್' ನಿರ್ಮಿಸುತ್ತಿರುವ 'ಆನೆಬಲ' ಚಲನಚಿತ್ರದಲ್ಲಿ ನಟಿಸುವ ಅವಕಾಶವೂ ದೊರೆಯುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಕೆಲವು ನಿಬಂಧನೆಗಳನ್ನೂ ಇಡಲಾಗಿದೆ. ಎಣ್ಣೆ ಹೊಡೆದು (ಮದ್ಯಪಾನ) ಆಟಕ್ಕೆ (ಊಟಕ್ಕೆ) ಕೂರುವಂತಿಲ್ಲ. ಮುದ್ದೆ ತಿನ್ನಲು 15 ನಿಮಿಷ ಮಾತ್ರ ಕಾಲಾವಕಾಶ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು 1 ಗಂಟೆ ಮುಂಚೆ ನೂರು ರೂಪಾಯಿ ಹಣ ನೀಡಿ ನೊಂದಾವಣಿ ಮಾಡಿಕೊಳ್ಳಬೇಕು. ವ್ಯವಸ್ಥಾಪಕರ ನಿರ್ಣಯವೇ ಅಂತಿಮ.

ಸ್ಪರ್ಧೆಯಲ್ಲಿ ಗೆದ್ದ ಮೊದಲ ಸ್ಪರ್ಧಿಗೆ 5000 ನಗದು ಮತ್ತು ಸಿನಿಮಾದಲ್ಲಿ ನಟಿಸುವ ಅವಕಾಶ, ಎರಡನೇ ಸ್ಥಾನ ಪಡೆದವರಿಗೆ 3000, ಮೂರನೇ ಸ್ಥಾನ ಪಡೆದವರಿಗೆ 2000, ನಾಲ್ಕು ಮತ್ತು ಐದನೇ ಸ್ಥಾನ ಪಡೆದವರಿಗೆ ತಲಾ 1000 ಸಾವಿರ ಬಹುಮಾನ ನೀಡಲಾಗಿದೆ.












Click it and Unblock the Notifications