Mandya: ಏಪ್ರಿಲ್ 24 ರಿಂದ 26ರ ವರೆಗೆ ಮಂಡ್ಯದಲ್ಲಿ ಪ್ರತಿಬಂಧಕಾಜ್ಞೆ ಜಾರಿ
ಮಂಡ್ಯ, ಏಪ್ರಿಲ್. 19: ಲೋಕಸಭಾ ಚುನಾವಣೆ ಸಂಬಂಧ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡುವ, ಮುಕ್ತ ಮತ್ತು ನ್ಯಾಯೋಚಿತ ಮತದಾನಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ ಏಪ್ರಿಲ್ 24 ರ ಸಂಜೆ 6 ಗಂಟೆಯಿಂದ ಏಪ್ರಿಲ್ 26 ರ ರಾತ್ರಿ 10 ಗಂಟೆಯವರೆಗೆ ಮಂಡ್ಯ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ ಹೊರಡಿಸಲಾಗಿದೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮತದಾನವು ಏಪ್ರಿಲ್ 26 ರಂದು ಬೆಳಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ನಡೆಯಲಿದೆ. ಈ ವೇಳೆ ವಿವಿಧ ಪಕ್ಷಗಳ ಅಭ್ಯರ್ಥಿಗಳು/ಬೆಂಬಲಿಗರು ಮತದಾನದ ದಿನದಂದು ಮತದಾರರಿಗೆ ವಿವಿಧ ಆಸೆ-ಆಮಿಷಗಳಿಗೆ ಒಳಪಡಿಸುವುದು, ಬೆದರಿಸಲು ಯತ್ನಿಸುವುದು, ಮತಗಟ್ಟೆಗಳ ಸುತ್ತಮುತ್ತ ಪ್ರಚಾರ ಮಾಡುವುದು, ಸಾರ್ವಜನಿಕ ಸಭೆ ನಡೆಸುವುದು, ಮತದಾರರನ್ನು ವಿವಿಧ ಸಾರಿಗೆ ವ್ಯವಸ್ಥೆಗಳ ಮೂಲಕ ಮತಗಟ್ಟೆಗಳಿಗೆ ಕರೆ ತರುವುದನ್ನು ತಡೆಗಟ್ಟುವ ಸಲುವಾಗಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವುದು ಮತ್ತು ಈ ಅವಧಿಯಲ್ಲಿ ಅಹಿತಕರ ಕೃತ್ಯಗಳನ್ನು ಕೈಗೊಳ್ಳಬಹುದಾದ ಸಾಧ್ಯತೆಗಳಿವೆ.

ಇಂತಹ ಕೃತ್ಯಗಳನ್ನು ನಿಯಂತ್ರಿಸಲು ಮತ್ತು ಮತದಾನದ ಪಾವಿತ್ರ್ಯತೆ ಕಾಪಾಡುವ ಹಿತದೃಷ್ಟಿಯಿಂದ ಮಂಡ್ಯ ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ 1973ರ ಕಲಂ 144 ಅಡಿಯಲ್ಲಿ ಮಂಡ್ಯ ಜಿಲ್ಲಾ ವ್ಯಾಪ್ತಿಯ ಎಲ್ಲಾ ಮತಗಟ್ಟೆಗಳ ವ್ಯಾಪ್ತಿಯಲ್ಲಿ ದಿನಾಂಕ 26.04.2024 ರಂದು ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಆದೇಶಿಸಿದ್ದಾರೆ.
* ಮತಗಟ್ಟೆಗಳ ಬಳಿ ಮೇಲ್ಕಂಡ ಅವಧಿಯಲ್ಲಿ ಚುನಾವಣಾ ಕರ್ತವ್ಯ ನಿರತ ಅಧಿಕಾರಿ/ಸಿಬ್ಬಂದಿ ವಾಹನಗಳನ್ನು
ಹೊರತುಪಡಿಸಿ ಇತರೇ ಯಾವುದೇ ವಾಹನಗಳು ನಿಷೇಧಿತ ಪ್ರದೇಶದೊಳಗಿನ 200 ಮೀಟರ್ ಮಂಡ್ಯವ್ಯಾಪ್ತಿಯಲ್ಲಿ ಪ್ರವೇಶಿಸುವಂತಿಲ್ಲ. ಆದರೆ, ಈ ಆದೇಶವು ತುರ್ತು ಸೇವೆಗಳನ್ನು ಒದಗಿಸುವ ವಾಹನಗಳಿಗೆ (ಆಸ್ಪತ್ರೆ ವಾಹನಗಳು, ಆಂಬುಲೆನ್ಸ್, ಹಾಲಿನ ವಾಹನ, ನೀರಿನ ಟ್ಯಾಂಕರ್ಸ್, ವಿದ್ಯುತ್ ತುರ್ತು ವಾಹನಗಳು) ಅನ್ವಯಿಸುವುದಿಲ್ಲ.

* ಮತಗಟ್ಟೆಗಳ ವ್ಯಾಪ್ತಿಯ 100 ಮೀಟರ್ ಪ್ರದೇಶದೊಳಗೆ ಯಾವುದೇ ಚುನಾವಣಾ ಪ್ರಚಾರವನ್ನು ಮಾಡುವಂತಿಲ್ಲ.
* ಚುನಾವಣಾ ಕರ್ತವ್ಯ ನಿರತ ಅಧಿಕಾರಿ/ಸಿಬ್ಬಂದಿ ಹೊರತುಪಡಿಸಿ ಇತರೇ ಯಾವುದೇ ವ್ಯಕ್ತಿಗಳು ಮೊಬೈಲ್ ಹಾಗೂ ಇತರೆ ದೂರವಾಣಿ ಸಾಧನಗಳನ್ನು ಮತಗಟ್ಟೆಗಳ ವ್ಯಾಪ್ತಿಯ 100 ಮೀಟರ್ ಪ್ರದೇಶದೊಳಗೆ ತರುವಂತಿಲ್ಲ.
* ಮತಗಟ್ಟೆಗಳ ವ್ಯಾಪ್ತಿಯ 100 ಮೀಟರ್ ಪ್ರದೇಶದೊಳಗೆ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಯಾವುದೇ ಪೋಸ್ಟರ್ ಹಾಗೂ ಬ್ಯಾನರ್ ಗಳನ್ನು ಹಾಕುವಂತಿಲ್ಲ. 6. ಮತದಾನ ದಿನದಂದು ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಧ್ವನಿವರ್ಧಕ, ಮೆಗಾಫೋನ್ ಇತ್ಯಾದಿ ಹಾಗೂ ಅನುಚಿತವಾಗಿ ವರ್ತಿಸುವುದನ್ನು ನಿರ್ಬಂಧಿಸಲಾಗಿದೆ.
* ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188 ರ ಪಕಾರ ಕ್ರಮ ಜರುಗಿಸಲಾಗುವುದು. ಈ ಆದೇಶವನ್ನು ಪೊಲೀಸ್ ಅಧೀಕ್ಷಕರು, ಮಂಡ್ಯ ಜಿಲ್ಲೆ, ಮಂಡ್ಯ ಮತ್ತು ತಾಲ್ಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಮತ್ತು ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನಿನ್ವಯ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಲಾಗಿದೆ.
ಮಂಡ್ಯದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಕಣಕ್ಕಿಳಿದಿದ್ದಾರೆ. ಒಕ್ಕಲಿಗರ ಮತ ಕ್ಷೇತ್ರದಲ್ಲಿ ತಾನೇ ಗೆಲ್ಲುವುದು ಎಂಬ ವಿಶ್ವಾಸದಲ್ಲಿ ಎಚ್‌ಡಿಕೆ ಇದ್ದಾರೆ. ಆದರೆ, ಸ್ಟಾರ್ ಚಂದ್ರು ಪರ ಚಿತ್ರರಂಗದ ಸ್ಟಾರ್‌ಗಳು ಪ್ರಚಾರಕ್ಕೆ ಇಳಿದಿದ್ದಾರೆ.












Click it and Unblock the Notifications