Darshan: ಮಂಡ್ಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಕಾಂಗ್ರೆಸ್‌ಗೆ ಗೆಲುವಿಗೆ ಸಹಕಾರಿಯಾಗುತ್ತಾ?
ಮಂಡ್ಯ : ರಾಷ್ಟ್ರದ ಗಮನಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರ ದಿನಕ್ಕೊಂದು ರೀತಿಯ ರಂಗನ್ನು ಪಡೆದುಕೊಳ್ಳುತ್ತಿದೆ. ಅಖಾಡದಲ್ಲಿ ಅಭ್ಯರ್ಥಿಗಳ ಪ್ರಚಾರ ಭರಾಟೆ ಜೋರಾಗಿದೆ. ಇದೀಗ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಬೆಂಬಲಕ್ಕೆ ನಟ ದರ್ಶನ್ ನಿಂತಿದ್ದಾರೆ.
ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಬಳಿಕವೂ ನಟ ದರ್ಶನ್ ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ನಡೆಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ, ನಟ ದರ್ಶನ್ ಒಬ್ಬ ಸ್ಟಾರ್ ಪ್ರಚಾರಕರಾಗಿದ್ದು, ಅವರ ಪ್ರಚಾರ ಪಕ್ಷಾತೀತವಾಗಿದೆ. ಅವರೊಂದಿಗೆ ಸ್ನೇಹ, ವಿಶ್ವಾಸದಿಂದ ಇರುವವರ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತಲೇ ಬಂದಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಮದ್ದೂರಿನಿಂದ ಸ್ಪರ್ಧಿಸಿದ್ದ ಕೆ.ಎಂ.ಉದಯ್, ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ದರ್ಶನ್ ಪುಟ್ಟಣ್ಣಯ್ಯ ಪರ ದರ್ಶನ್ ಹಾಗೂ ಚುನಾವಣಾ ಪ್ರಚಾರ ನಡೆಸಿದ್ದರು. ಇಬ್ಬರೂ ಗೆಲುವು ಸಾಧಿಸಿದ್ದು ವಿಶೇಷವಾಗಿತ್ತು.
ಅಪಾರ ಅಭಿಮಾನಿ ಬಳಗ
ಮಂಡ್ಯ ಜಿಲ್ಲೆಯಲ್ಲಿ ದರ್ಶನ್ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅದನ್ನು ಕಾಂಗ್ರೆಸ್‌ನತ್ತ ಸೆಳೆಯುವ ಸಲುವಾಗಿ ದರ್ಶನ್ ಅವರನ್ನು ಕೈಪಡೆಯ ನಾಯಕರು ಚುನಾವಣಾ ಪ್ರಚಾರಕ್ಕೆ ಕರೆತಂದಿದ್ದಾರೆ.
ಮಳವಳ್ಳಿ ತಾಲೂಕಿನಲ್ಲಿ ನಟ ದರ್ಶನ್ ಗುರುವಾರ ಇಡೀ ದಿನ ಪ್ರಚಾರ ನಡೆಸಿದರು. ಪ್ರಚಾರದ ವೇಳೆ ಮಳೆ ಬಂದರೂ ದರ್ಶನ್ ಪ್ರಚಾರ ಮುಂದುವರೆಸಿದರು. ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮದ್ದೂರು ಶಾಸಕ ಕೆ.ಎಂ.ಉದಯ್ ಪ್ರಚಾರದಲ್ಲಿ ದರ್ಶನ್ ಜೊತೆ ಭಾಗವಹಿಸಿದ್ದರು.
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್ ಪರ ಚುನಾವಣಾ ಪ್ರಚಾರ ನಡೆಸಿ ಅವರ ಗೆಲುವಿಗೆ ಕಾರಣರಾದ ಪ್ರಮುಖರಲ್ಲಿ ದರ್ಶನ್ ಕೂಡ ಒಬ್ಬರಾಗಿದ್ದರು.
ಪ್ರಸ್ತುತ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಚುನಾವಣೆಯಲ್ಲಿ ಸೋಲಿಸಲೇಬೇಕೆಂಬ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್ ಕಲಿಗಳು ಯಾವ ಯಾವ ಮೂಲದಿಂದ ಮತಗಳು ಹರಿದುಬರುತ್ತವೋ ಅವೆಲ್ಲವನ್ನೂ ಕಾಂಗ್ರೆಸ್ ಬುಟ್ಟಿಗೆ ಸೇರಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ನಟ ದರ್ಶನ್ ಬಳಿಕ ಮಾಜಿ ಸಂಸದೆ ರಮ್ಯಾ ಅವರೂ ಪ್ರಚಾರಕ್ಕೆ ಬರುತ್ತಿದ್ದಾರೆ. ಅವರಿಂದಲೂ ಒಂದಷ್ಟು ಮತಗಳು ಕಾಂಗ್ರೆಸ್‌ಗೆ ಬಂದು ಸೇರಲಿವೆ ಎಂಬ ನಂಬಿಕೆ ಕಾಂಗ್ರೆಸ್ಸಿಗರಲ್ಲಿದೆ.
ಜೋಡೆತ್ತು ಬೆಂಬಲದಿಂದ ಗೆದ್ದಿದ್ದ ಸುಮಲತಾ
ಕಳೆದ ಲೋಕಸಭಾ ಚುನಾವಣೆಯಲ್ಲಿ ನಟರಾದ ದರ್ಶನ್ ಮತ್ತು ಯಶ್ ಇಬ್ಬರೂ ಜೋಡೆತ್ತುಗಳಂತೆ ಸುಮಲತಾ ಬೆಂಬಲಕ್ಕೆ ನಿಂತು ಅಂದು ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ಕುಮಾರಸ್ವಾಮಿ ವಿರುದ್ಧ ಪ್ರಚಾರ ನಡೆಸಿದ್ದರು. ಯುವ ಸಮೂಹದ ಮತಗಳನ್ನು ಸೆಳೆಯುವಲ್ಲಿ ಇಬ್ಬರೂ ಯಶಸ್ವಿಯಾಗಿದ್ದರು.
ಈಗ ಸುಮಲತಾ ಅಂಬರೀಶ್ ಚುನಾವಣಾ ಕಣದಲ್ಲಿ ಇಲ್ಲದಿದ್ದರೂ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಪ್ರಚಾರ ನಡೆಸುವ ಮೂಲಕ ಪರೋಕ್ಷವಾಗಿ ಎಚ್.ಡಿ.ಕುಮಾರಸ್ವಾಮಿ ವಿರೋಧಿ ಧೋರಣೆಯನ್ನು ಪ್ರದರ್ಶಿಸುತ್ತಿದ್ದಾರೆಯೇ ಅಥವಾ ತಮ್ಮ ವಿರುದ್ಧ ಸುಮಲತಾ ಅಂಬರೀಶ್ ನಟ ದರ್ಶನ್ ಅವರನ್ನು ಪ್ರಚಾರಕ್ಕೆ ಕಳುಹಿಸಿದ್ದಾರೆಯೇ ಎಂಬ ಅನುಮಾನಗಳು ಜೆಡಿಎಸ್‌ನವರಲ್ಲಿ ಮೂಡುವಂತೆ ಮಾಡಿದೆ.
ನಟ ದರ್ಶನ್ ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಒಂದೇ ಪಕ್ಷದ ಪರವಾಗಿ ಅವರು ಚುನಾವಣಾ ಪ್ರಚಾರವನ್ನೂ ನಡೆಸಿಲ್ಲ. ಅವರ ಬಳಿ ಯಾರು ಹೋಗಿ ಪ್ರಚಾರಕ್ಕೆ ಕರೆಯುವರೋ ಅವರ ಪರ ಪ್ರಚಾರಕ್ಕೆ ಬರುತ್ತಾರೆ. ನಾವು ಅವರ ಬಳಿ ಹೋಗಿ ಪ್ರಚಾರಕ್ಕೆ ಬರುವಂತೆ ಮನವಿ ಮಾಡಿದೆವು. ಅದನ್ನು ಒಪ್ಪಿ ಅವರು ಬಂದಿದ್ದಾರೆ. ತಮ್ಮ ಪರವಾಗಿ ಪ್ರಚಾರಕ್ಕೆ ಬರುವಂತೆ ಕುಮಾರಸ್ವಾಮಿಯಾಗಲೀ ಅಥವಾ ಜೆಡಿಎಸ್ ಸ್ಥಳೀಯ ನಾಯಕರಾಗಲೀ ದರ್ಶನ್ ಬಳಿಗೆ ಹೋಗಿಲ್ಲ. ದರ್ಶನ್ ಪ್ರಚಾರವನ್ನು ರಾಜಕೀಯಕ್ಕೆ ತಾಳೆ ಹಾಕಿ ನೋಡುವುದು ಸರಿಯಲ್ಲ ಎನ್ನುವುದು ಕಾಂಗ್ರೆಸ್ಸಿಗರು ಹಾಗೂ ಸುಮಲತಾ ಬೆಂಬಲಿಗರ ಅಭಿಪ್ರಾಯವಾಗಿದೆ.












Click it and Unblock the Notifications