ಮುನಿಸು ಮರೆತು ಕುಮಾರಸ್ವಾಮಿ ಪರ ಪ್ರಚಾರ ಮಾಡ್ತಾರಾ ರೆಬಲ್ ಲೇಡಿ? ಸುಮಲತಾ ಹೇಳಿದ್ದೇನು?
ಮಂಡ್ಯ, ಏಪ್ರಿಲ್ 21: ಲೋಕಸಭಾ ಚುನಾವಣೆ ಹಿನ್ನಲೆ ಆಡಳಿತರೂಢ ಕಾಂಗ್ರೆಸ್ ಠಕ್ಕರ್ ಕೊಡಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾದ ಹಿನ್ನೆಲೆ ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರ ದಳಪತಿಗಳ ಕೈ ಸೇರಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ಆದರೆ, ಕ್ಷೇತ್ರ ಬಿಟ್ಟು ಕೊಟ್ಟ ರೆಬಲ್ ಲೇಡಿ ಸುಮಲತಾ ಅಂಬರೀಶ್ ಅವರಿಗೆ ಮುನಿಸು ಕಡಿಮೆಯಾಗದಂತೆ ಕಾಣುತ್ತಿದ್ದು, ಪ್ರಚಾರ ಕಾರ್ಯದಿಂದ ದೂರ ಉಳಿದಿದ್ದಾರೆ.
ಹೌದು, ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಕುಮಾರಸ್ವಾಮಿ ಪರ ಪ್ರಚಾರ ಮಾಡದೇ ದೂರ ಉಳಿದಿದ್ದು, ಸುಮಲತಾ ಅಂಬರೀಶ್ ಅವರು ಮೈಸೂರು-ಕೊಡುಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್ ಒಡೆಯರ್ ಪರ ಪ್ರಚಾರ ನಡೆಸಿದ್ದಾರೆ.ಇತ್ತ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿರುವ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಸಂಸದೆ ಸುಮಲತಾ ಅಂಬರೀಶ್ ಅವರು ಶನಿವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇನ್ನು, ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಅವರ ಪರ ಪ್ರಚಾರ ಯಾವಾಗ ನಡೆಸುತ್ತಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಸುಮಲತಾ ಅಂಬರೀಶ್ ಅವರು ಮಾತನಾಡಿ, ಪಕ್ಷಕ್ಕಾಗಿ ತ್ಯಾಗ ಮಾಡಿದ್ದೇನೆ. ವಾರದ ಹಿಂದೆಯಷ್ಟೇ ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ. ಪಕ್ಷ ಸೂಚಿದರೆ, ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ. ಕುಮಾರಸ್ವಾಮಿಯವರಿಗೆ ಸಂಪೂರ್ಣ ಸಹಕಾರವಿದೆ ಎಂದು ಸುಮಲತಾ ಹೇಳಿದರು.
ನಾನು ಗೆದ್ದ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೇನೆ. ಗೆದ್ದ ಸ್ಥಾನವನ್ನು ಯಾರೂ ಬಿಟ್ಟುಕೊಡುವುದಿಲ್ಲ. ಸ್ಥಾನ ಬಿಟ್ಟುಕೊಟ್ಟು ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದರೇ ನಾನು ಎನ್ ಡಿ ಎ ಅಭ್ಯರ್ಥಿ ಪರವಾಗಿದ್ದೇನೆ ಎಂದೇ ಅರ್ಥ ಎಂದು ಸುಮಲತಾ ತಿಳಿಸಿದರು.
ಇನ್ನೂ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ನಟ ದರ್ಶನ್ ಪ್ರಚಾರ ಮಾಡುತ್ತಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರನ್ನು ಬೆಂಬಲಿಸಬೇಕು ಎಂಬುದು ಅವರಿಗೆ ಬಿಟ್ಟ ವಿಚಾರ ಎಂದ ಅವರು, ಅವರಿಗೆ ಬೆಂಬಲಿಸಿದವರ ಪರವಾಗಿ ದರ್ಶನ್ ನಿಂತಿದ್ದಾರೆ. ನನ್ನೊಂದಿಗೆ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ನಾನು ಅವರಿಗ ಹೇಳುವುದಿಲ್ಲ. ನಾನು ಅಭ್ಯರ್ಥಿಯಾಗಿದ್ದಾಗಲೂ ಅವರನ್ನು ಪ್ರಚಾರಕ್ಕೆ ಕರೆದಿರಲಿಲ್ಲ. ಅವರೇ ಬಂದು ನನ್ನ ಪರವಾಗಿ ಪ್ರಚಾರ ಮಾಡಿದ್ದರು. ಸುಮಮ್ಮ ಏನು ಕೆಲಸ ಹೇಳುತ್ತಾರೋ ಅದನ್ನೇ ಮಾಡುತ್ತೇನೆ ಎಂದು ದರ್ಶನ್ ಹೇಳಿದ್ದರು.
ಇದು ನನ್ನ ವಿಷಯದಲ್ಲಿ ಮಾತ್ರವೇ ಹೊರತು ಬೇರೆಯವರ ವಿಷಯದಲ್ಲಿ ಅಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ಅವರು ಯಾವ ಅಭ್ಯರ್ಥಿಯ ಪರ ಪ್ರಚಾರ ಮಾಡುತ್ತಾರೆ ಎಂಬುದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದರು.












Click it and Unblock the Notifications