ಅಕ್ರಮ ಸಂಬಂಧ, ಬೆಟ್ಟಿಂಗ್ ಚಟದಿಂದ ಸಾಲ: ಹೆಂಡತಿ-ಮಕ್ಕಳಿಗೆ ವಿಷಕೊಟ್ಟು ತಾನು ವಿಷ ಕುಡಿದ ವ್ಯಕ್ತಿ
ಕ್ರಿಕೆಟ್ ಬೆಟ್ಟಿಂಗ್, ಪರಸ್ತ್ರೀ ಜೊತೆ ಮೋಜಿನಿಂದ ಸಾಲದ ಸುಳಿಗೆ ಸಿಲುಕಿದ್ದ ಪತಿಯೊಬ್ಬ ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ ವಿಷ ವುಣಿಸಿ ಕೊಲೆಗೈದು ತಾನು ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಎಂಟನೇ ವಾರ್ಡ್‌ನ ಪೇಟೆ ಹೊಲ ರಸ್ತೆಯ ನಿವಾಸಿ ನರಸಿಂಹ ಅವರ ಪತ್ನಿ ಕೀರ್ತನ (23) ಮಕ್ಕಳಾದ ಜಯಸಿಂಹ (4) ಮತ್ತು ಒಂದೂವರೆ ವರ್ಷದ ರಿಷಿಕಾ ಸಾವನ್ನಪ್ಪಿದ್ದು, ನರಸಿಂಹನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತಾಲೂಕಿನ ತೆಂಗಿನಭಾಗ ಗ್ರಾಮದ ಸ್ವಾಮಿ ಅವರ ಪುತ್ರ ನರಸಿಂಹ ಕಟಿಂಗ್ ಶಾಪ್ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದನು. ಮಂಡ್ಯ ತಾಲೂಕಿನ ಬಸರಾಳು ಸಮೀಪದ ಕಂಬದಹಳ್ಳಿ ಗ್ರಾಮದ ಕೀರ್ತನಳನ್ನು ಮದುವೆಯಾಗಿದ್ದು, ದಂಪತಿಗೆ ಮುದ್ದಾದ ಎರಡು ಮಕ್ಕಳು ಇದ್ದವು.
ಪರಸ್ತ್ರೀ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಈತ ಕ್ರಿಕೆಟ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದನು, ಈ ಹಿನ್ನೆಲೆಯಲ್ಲಿ ಪತ್ನಿಗೆ ಹಣ ತರುವಂತೆ ಪೀಡಿಸುತ್ತಿದ್ದು ನ್ಯಾಯ ಪಂಚಾಯಿತಿ ನಡೆಸಿ ಹಣವನ್ನು ನೀಡಲಾಗಿತ್ತು, ಆದರೂ ಸಹ ಈತ ಬದಲಾಗಿರಲಿಲ್ಲ, ಐಪಿಎಲ್ ಪಂದ್ಯಾವಳಿ ಆರಂಭಗೊಂಡ ನಂತರ ಬೆಟ್ಟಿಂಗ್‌ನಲ್ಲಿ ಹೆಚ್ಚು ಹಣ ಕಳೆದುಕೊಂಡಿದ್ದ.
ಸುಮಾರು ಎಂಟು ಲಕ್ಷ ಸಾಲದ ಹೊರೆ ಈತನ ಮೇಲಿತ್ತು, ಸಾಲಗಾರರ ಕಿರುಕುಳಕ್ಕೆ ಒಳಗಾಗಿದ್ದ ಈತ ಸಾಲ ತೀರಿಸುವ ಮಾರ್ಗ ಇಲ್ಲದೆ ಪತ್ನಿ ಜೊತೆ ಆಗಾಗ್ಗೆ ಜಗಳ ಮಾಡಿಕೊಳ್ಳುತ್ತಿದ್ದನು, ಗುರುವಾರ 11 ರ ವೇಳೆಗೆ ಮನೆಗೆ ಬಂದ ಈತ ಪತ್ನಿ ಕೀರ್ತನ ಮತ್ತು ಇಬ್ಬರು ಮಕ್ಕಳಿಗೆ ವಿಷ ವುಣಿಸಿದ ನಂತರ ಅವರು ಸಾವನ್ನಪ್ಪಿರುವುದನ್ನು ಖಚಿತ ಮಾಡಿಕೊಂಡು ತಾನು ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಧ್ಯಾಹ್ನದ ವೇಳೆ ಮನೆಯವರು ಹೋಗಿ ನೋಡಿದಾಗ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ, ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ತವರು ಮನೆಯಿಂದ ಹಣ ತರುವಂತೆ ಒತ್ತಡ ಹಾಕುತ್ತಿದ್ದ ನರಸಿಂಹ ಬಲವಂತವಾಗಿ ಹೆಂಡತಿ ಮಕ್ಕಳಿಗೆ ವಿಷ ವುಣಿಸಿದ್ದಾನೆ, ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಕುಟುಂಬವನ್ನು ಕೊಲೆಗೈದಿದ್ದಾನೆ ಎಂದು ಹೇಳಲಾಗುತ್ತಿದ್ದು ಪ್ರಕರಣದ ಸುತ್ತ ಹಲವು ಅನುಮಾನ ಸೃಷ್ಟಿಯಾಗಿದೆ.
ಕೀರ್ತನ ತಂದೆ ಶಿವನಂಜು ಮಾತನಾಡಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ, 8 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡು ನ್ಯಾಯ ಪಂಚಾಯತಿ ಎಲ್ಲ ನಡೆದಿದ್ದವು. ಆದರೂ ಕೂಡ ನಾನು ಅವರಿಗೆ ಹಣವನ್ನು ನೀಡಿದ್ದೆ. ಅಳಿಯ ನರಸಿಂಹನ ಆಕ್ರಮ ಸಂಬಂಧದ ಹಿನ್ನೆಲೆಯಲ್ಲಿ ನನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದರು.
ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications