Lok Sabha Election: ಪ್ರಜಾಪ್ರಭುತ್ವದ ಮಹಾ ಹಬ್ಬದಲ್ಲಿ ಮತಚಲಾಯಿಸಿ ಸಂಭ್ರಮಿಸೋಣ
ಬೆಂಗಳೂರು, ಏಪ್ರಿಲ್ 25: ಮೊದಲಿಗೆ ಹೋಲಿಸಿದರೆ ಇತ್ತೀಚೆಗಿನ ಚುನಾವಣೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾರರು ಮತದಾನ ಮಾಡಲು ಪ್ರೇರೇಪಿಸುವ ಕೆಲಸವನ್ನು ಚುನಾವಣಾ ಆಯೋಗ ಮಾಡುತ್ತಾ ಬಂದಿದೆ. ಅದರಲ್ಲೂ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವೆಂದೇ ಕರೆಯಲ್ಪಡುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರನು ಭಾಗಿಯಾಗಿ ತಮ್ಮ ಹಕ್ಕನ್ನು ಚಲಾಯಿಸಯುವಂತೆ ಸ್ವೀಪ್ ಸಮಿತಿ ಹಲವು ಕಾರ್ಯಕ್ರಮಗಳ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುತ್ತಾ ಬಂದಿದ್ದು, ನಾವೀಗ ಅದನ್ನು ಪಾಲಿಸುವ ಸಮಯ ಬಂದಿದೆ.
ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ (ದೇಶದಲ್ಲಿ ಎರಡನೇ) ಹಂತದ ಮತದಾನ ನಡೆಯುತ್ತಿದ್ದು, ರಾಜ್ಯದಲ್ಲಿ ಮತದಾನಕ್ಕಾಗಿ ಸರ್ವ ರೀತಿಯ ಸಿದ್ಧತೆಗಳನ್ನು ಚುನಾವಣಾ ಆಯೋಗ ಮಾಡಿದೆ. ಇದರ ಜತೆಯಲ್ಲಿಯೇ ಮತದಾರರನ್ನು ಮತಕೇಂದ್ರದತ್ತ ಸೆಳೆಯಲು ಹಲವು ಬಗೆಯ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಅವುಗಳೆಲ್ಲವೂ ಬರೀ ಮತಕೇಂದ್ರವಾಗಿ ಉಳಿಯದೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತೆ ಮಾಡಲಾಗುತ್ತಿದೆ.

ದೇಶದಲ್ಲಿ ಐದು ವರ್ಷಗಳ ಬಳಿಕ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಅಧಿಕಾರ ಉಳಿಸಿಕೊಳ್ಳಲು ಮತ್ತು ಅಧಿಕಾರ ಪಡೆಯಲು ಎನ್ ಡಿಎ ಮತ್ತು ಐಎನ್ ಡಿಐಎ ಒಕ್ಕೂಟಗಳು ಹೋರಾಟ ನಡೆಸುತ್ತಿದ್ದರೆ, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಗೆಲುವಿಗಾಗಿ ಮತದಾರರ ಮನೆಬಾಗಿಲು ತಟ್ಟುತ್ತಾ ಅಂತಿಮ ಹಂತದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಪ್ರತಿ ಚುನಾವಣೆ ಬಂದಾಗಲೂ ಹೊಸ ಮತದಾರರು ಸೇರ್ಪಡೆಯಾಗುತ್ತಾರೆ. ಹೊಸ ಮತದಾರರಿಗೆ ಮತಚಲಾಯಿಸುವುದು ಹೊಸ ಅನುಭವವಾಗಿದೆ.
ಮತದಾರರು ಮತದಾನ ಏಕೆ ಮಾಡಬೇಕು?
ಇನ್ನು ಮತದಾರರು ಮತದಾನ ಏಕೆ ಮಾಡಬೇಕು? ಪ್ರಜಾಪ್ರಭುತ್ವದಲ್ಲಿ ಮತಕ್ಕೆ ಎಷ್ಟು ಪ್ರಾಮುಖ್ಯತೆಯಿದೆ? ಎಂಬುದರ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಈಗಾಗಲೇ ಚುನಾವಣಾ ಆಯೋಗ ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ಮಾಡುತ್ತಲೇ ಇದೆ. ದೇಶದಲ್ಲಿ ಪ್ರತಿಯೊಬ್ಬರೂ ಚುನಾವಣೆಯನ್ನು ಹಬ್ಬದಂತೆ ಸಂಭ್ರಮಿಸುವುದರೊಂದಿಗೆ ಹಕ್ಕನ್ನು ಚಲಾಯಿಸಬೇಕು ಎನ್ನುವುದು ಚುನಾವಣಾ ಆಯೋಗದ ಪ್ರಮುಖ ಆಶಯವಾಗಿದೆ. ಇದಕ್ಕಾಗಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ.
ಹಾಗೆನೋಡಿದರೆ ಪ್ರಜಾಪ್ರಭುತ್ವದಲ್ಲಿ ಐದು ವರ್ಷಕ್ಕೊಮ್ಮೆ ಬದಲಾವಣೆಯನ್ನು ತರುವ ಶಕ್ತಿ ಮತದಾರರಿಗಿದೆ. ಹೀಗಾಗಿಯೇ ಮತದಾರರನ್ನು ಪ್ರಭುಗಳು ಎಂದು ಕರೆಯಲಾಗುತ್ತದೆ. ಇದನ್ನು ಅರಿತು ಪ್ರತಿಯೊಬ್ಬ ಮತದಾರರು ತಮ್ಮ ಮತಕ್ಕೆಷ್ಟು ಮೌಲ್ಯವಿದೆ ಎಂಬುದನ್ನು ಅರಿತು ಅದನ್ನು ಚಲಾಯಿಸಬೇಕಾಗಿದೆ. ಇವತ್ತಿಗೂ ಶೇ.100ರಷ್ಟು ಮತದಾನಗಳಾಗುತ್ತಿಲ್ಲ. ವಿದ್ಯಾವಂತ ಮತದಾರರೇ ಮತಕೇಂದ್ರದತ್ತ ಸುಳಿಯುತ್ತಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ.

ಮತಚಲಾಯಿಸಿ ದೇಶದ ಹೆಮ್ಮೆಯ ಪ್ರಜೆಯಾಗಿ
ಅಯ್ಯೋ ನಮ್ಮ ಒಂದು ಮತದಿಂದ ಏನಾಗುತ್ತದೆ ಎಂಬ ಉಡಾಫೆಯ ಮಾತನಾಡುತ್ತಾರೆ. ಇಂತಹವರು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಂಡು ಈ ದೇಶದ ಪ್ರಜೆಯಾಗಿ ನಮ್ಮನ್ನು ಆಳುವ ನಾಯಕರನ್ನು ಆಯ್ಕೆ ಮಾಡುವ ಕಾರ್ಯದಲ್ಲಿ ನನ್ನ ಪಾತ್ರ ಎಷ್ಟಿದೆ ಎಂಬುದರ ಬಗ್ಗೆ ಮಂಥನ ಮಾಡಬೇಕಿದೆ. ರಜೆ ಸಿಕ್ಕಿದೆ ಎಲ್ಲಿಯಾದರೂ ಜಾಲಿ ಟ್ರಿಪ್ ಹೋಗಿ ಬರೋಣ ಎಂದು ಭಾವಿಸದೆ ಮತವನ್ನು ಹಾಕುವ ಮೂಲಕ ಈ ದೇಶದ ಪ್ರಜೆ ಎನ್ನುವುದನ್ನು ಹೆಮ್ಮೆಯಿಂದ ಹೇಳಬೇಕಾಗಿದೆ.
ಯುವ ಮತದಾರರು ದೇಶದ ಭವಿಷ್ಯ ಸೃಷ್ಟಿಸುವ ನೇತಾರರಾಗಿದ್ದಾರೆ. ಅವರು ವಿದ್ಯಾವಂತರಾಗಿದ್ದಾರೆ. ಅವರಿಗೆ ರಾಜಕೀಯದ ವಿದ್ಯಮಾನಗಳು ಗೊತ್ತಿವೆ. ಒಳಿತು ಕೆಡಕುಗಳ ಅರಿವಿದೆ. ಹೀಗಾಗಿ ಭವ್ಯ ಭಾರತ ಸೃಷ್ಟಿಯಾಗಬೇಕಾದರೆ ನಾವು ಎಂತಹ ನಾಯಕರನ್ನು ಆಯ್ಕೆ ಮಾಡಬೇಕು ಎಂಬುದು ಗೊತ್ತಿದೆ. ಹೀಗಿರುವಾಗ ಅದನ್ನು ತಮ್ಮ ಮತದ ಮೂಲಕ ಚಲಾಯಿಸಿ ಕರ್ತವ್ಯ ಮೆರೆಯ ಬೇಕಾಗಿದೆ. ಮತದಾರರು ಹಣ, ಆಮಿಷಗಳಿಗೆ ಒಳಗಾಗಿ ತಮ್ಮ ಮತವನ್ನು ಮಾರಿಕೊಳ್ಳದೆ ತಮ್ಮ ಸ್ವಂತ ನಿರ್ಧಾರದಿಂದ ಮತವನ್ನು ಚಲಾಯಿಸಬೇಕಾಗಿದೆ. ಹೀಗಾದರೆ ಒಂದೊಳ್ಳೆಯ ರಾಜಕೀಯ ವ್ಯವಸ್ಥೆಯನ್ನು ಸೃಷ್ಟಿ ಮಾಡಲು ಸಾಧ್ಯವಾಗುತ್ತದೆ.
ರಾಜ್ಯದಲ್ಲಿ 5.47 ಕೋಟಿ ಮತದಾರರು
ಕಳೆದ ಕೆಲವು ವರ್ಷಗಳಿಂದ ಚುನಾವಣಾ ಆಯೋಗ ಕೂಡ ಮತದಾರರನ್ನು ಸೆಳೆಯುವ ಸಲುವಾಗಿ ಅದರಲ್ಲೂ ಗ್ರಾಮೀಣ ಪ್ರದೇಶದ ಹಿಂದುಳಿದ ಪ್ರದೇಶದಲ್ಲಿರುವ ಹಾಡಿಗಳಲ್ಲಿ ವಾಸಿಸುವ ಮತದಾರರನ್ನು ಮತಕೇಂದ್ರಕ್ಕೆ ಬರುವಂತೆ ಮಾಡಲು ಮತಗಟ್ಟೆಗಳನ್ನು ವಿಭಿನ್ನವಾಗಿ ನಿರ್ಮಿಸುವ ಕಾರ್ಯವನ್ನು ಮಾಡಲಾಗುತ್ತಿದೆ.

ಇನ್ನು ಲೋಕಸಭಾ ಚುನಾವಣೆ ರಾಜ್ಯದಲ್ಲಿ ಏಪ್ರಿಲ್ 26 ರಂದು ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳು ಹಾಗೂ ಮೇ 7 ರಂದು ಎರಡನೇ ಹಂತದಲ್ಲಿ 14 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ನಡೆಯಲಿದ್ದು, ಒಟ್ಟು 5.47 ಕೋಟಿ ಮತದಾರರು ಹಾಗೂ ಅವರಿಗಾಗಿ ಒಟ್ಟು 58,834 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 1832 ವಿವಿಧ ವಿಷಯವಾರು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿರುವುದು ವಿಶೇಷವಾಗಿದೆ.
ರಾಜ್ಯದಾದ್ಯಂತ ವಿಶೇಷ ಮತಗಟ್ಟೆ ಸ್ಥಾಪನೆ
ಮಹಿಳಾ ಮತದಾರರನ್ನು ಸೆಳೆಯುವ ಸಲುವಾಗಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಟ 05 ಸಖಿ ಮತಗಟ್ಟೆಗಳಂತೆ ರಾಜ್ಯಾದ್ಯಂತ ಒಟ್ಟು 1120 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಇದನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ. ಈ ಮತಗಟ್ಟೆಗಳಲ್ಲಿ ಆರಕ್ಷಕ ಸಿಬ್ಬಂದಿ, ಗ್ರೂಪ್ ಡಿ ನೌಕರರು ಹಾಗೂ ಎಲ್ಲಾ ಮತಗಟ್ಟೆಯ ಅಧಿಕಾರಿಗಳು ಮಹಿಳೆಯರೇ ಇರುವುದು ವಿಶೇಷವಾಗಿದೆ.
ಇಷ್ಟೇ ಅಲ್ಲದೆ, ವಿಶೇಷ ಚೇತನ ಮತದಾರರಲ್ಲಿ ಚುನಾವಣೆ ಮತ್ತು ಮತದಾನದ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ಭಾಗವಹಿಸುವಂತೆ ಪ್ರೇರೇಪಿಸಲು ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಟ 01 ವಿಶೇಷ ಚೇತನ ಮತಗಟ್ಟೆಯಂತೆ ರಾಜ್ಯದಲ್ಲಿ ಒಟ್ಟು 224 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಇಲ್ಲಿ ವಿಶೇಷ ಚೇತನ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.
ಇದೆಲ್ಲದರ ನಡುವೆ ಯುವ ಮತದಾರರಲ್ಲಿ ಚುನಾವಣೆ ಮತ್ತು ಮತದಾನದ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ಭಾಗವಹಿಸುವಂತೆ ಪ್ರೇರೇಪಿಸಲು ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಟ 01 ಯುವ ಮತಗಟ್ಟೆಯಂತೆ ರಾಜ್ಯಾದ್ಯಂತ ಒಟ್ಟು 224 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಇಲ್ಲಿ ಯುವ ಅಧಿಕಾರಿ ಮತ್ತು ಸಿಬ್ಬಂದಿಗಳು ಇರಲಿದ್ದಾರೆ.
ಪ್ರಜಾಪ್ರಭುತ್ವಕ್ಕೆ ಗೌರವ ಸಲ್ಲಿಸುವ ಸಮಯ
ರಾಜ್ಯದ ಎಲ್ಲ ಮತದಾರರಲ್ಲಿ ಚುನಾವಣೆ ಮತ್ತು ಮತದಾನದ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ಭಾಗವಹಿಸುವಂತೆ ಪ್ರೇರೇಪಿಸಲು ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ 01 ಧ್ಯೇಯ ಆಧಾರಿತ ಮತಗಟ್ಟೆಯಂತೆ ರಾಜ್ಯಾದ್ಯಂತ ಒಟ್ಟು 224 ಮತಗಟ್ಟೆಗಳನ್ನು ಸ್ಥಾಪಿಸಿಲಾಗಿದ್ದು, ಈ ಮತಗಟ್ಟೆಗಳು ಆಯಾ ಜಿಲ್ಲೆಗಳ ವಿಶೇಷತೆ, ಪ್ರಾದೇಶಿಕ ಸಾಂಸ್ಕೃತಿಕ ಸೊಗಡು, ಪಾರಂಪರಿಕ ಕುಶಲ ಕಲೆಗಳನ್ನು ಬಿಂಬಿಸಲಿವೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಚುನಾವಣಾ ಆಯೋಗ ಶಾಂತಿಯುವ, ನಿರ್ಭೀತ ಮತದಾನಕ್ಕೆ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವುದರ ಜತೆಗೆ ಸಾಮಾನ್ಯ ಮತದಾರರಲ್ಲದೆ, ಮಹಿಳೆಯರು, ವಿಕಲಚೇತನರು, ಯುವ ಮತದಾರರು, ಆದಿವಾಸಿಗಳು ಹೀಗೆ ಎಲ್ಲ ರೀತಿಯ ಮತದಾರರನ್ನು ಮತಗಟ್ಟೆಯತ್ತ ಸೆಳೆದು ಮತಚಲಾಯಿಸುವಂತೆ ಮಾಡುತ್ತಿದೆ. ಮತದಾನ ನಮ್ಮ ಕರ್ತವ್ಯವಾಗಿರುವುದರಿಂದ ಮತದಾರರಾದ ನಾವು ತಪ್ಪದೆ ಮತಗಟ್ಟೆಗೆ ತೆರಳಿ ಮತ ಚಲಾಯಿಸುವುದರೊಂದಿಗೆ ಪ್ರಜಾಪ್ರಭುತ್ವಕ್ಕೆ ಗೌರವ ಸಲ್ಲಿಸಬೇಕಾಗಿದೆ.












Click it and Unblock the Notifications