ಕೆ.ಆರ್.ಪೇಟೆಗೆ ಬರಲು ಸಿದ್ಧವಾದ ವಲಸಿಗರ ಸಂಖ್ಯೆ ಕಂಡು ಜಿಲ್ಲಾಡಳಿತ ಶಾಕ್
ಮಂಡ್ಯ, ಮೇ 16: ಲಾಕ್ ಡೌನ್ ಸಡಿಲವಾಗುತ್ತಲೇ, ತಮ್ಮ ತಮ್ಮ ತವರಿಗೆ ವಾಪಸ್ಸಾಗಲು ವಲಸಿಗರು ಅಣಿಯಾಗಿದ್ದಾರೆ. ತಮ್ಮ ಊರು ಸೇರಿಕೊಂಡರೆ ಸಾಕು ಎಂದು ಊರುಗಳಿಗೆ ತೆರಳಲು ದುಂಬಾಲು ಬೀಳುತ್ತಿದ್ದಾರೆ. ಆದರೆ ಇದೇ ಕಂಟಕವಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಇದೀಗ ಕೆ.ಆರ್.ಪೇಟೆ ತಾಲೂಕಿಗೆ ಬರುವ ವಲಸಿಗರ ಸಂಖ್ಯೆ ಕಂಡು ಜಿಲ್ಲಾಡಳಿತ ತಲೆಕೆಡಿಸಿಕೊಂಡಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಕೆ.ಆರ್.ಪೇಟೆ ತಾಲೂಕಿಗೆ ಬರಲು ಐದು ಸಾವಿರ ಜನರು ನೋಂದಣಿ ಮಾಡಿಸಿಕೊಂಡಿರುವುದನ್ನು ಕಂಡು ಜಿಲ್ಲಾಡಳಿತ ಶಾಕ್ ಆಗಿದೆ. ಅಂತರ ದೇಶ, ಅಂತರ ರಾಜ್ಯ ಹಾಗೂ ಅಂತರ ಜಿಲ್ಲೆಗಳಿಂದ ತಾಲೂಕಿಗೆ ಬರಲು ಸಾವಿರಾರು ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ಕೊರೊನಾದಿಂದ ಸ್ವಲ್ಪವೇ ಚೇತರಿಕೆ ಕಂಡಿರುವ ಮಂಡ್ಯಕ್ಕೆ ಇದೇ ಮುಳುವಾಗುವ ಆತಂಕವೂ ಎದುರಾಗಿದೆ.
ಮುಂಬೈ ಟು ಮಂಡ್ಯ; ಸದ್ದಿಲ್ಲದೇ ಬಂದು ಸೇರಿದ ಕೊರೊನಾ
ಈಗಾಗಲೇ ಅರ್ಜಿ ಸಲ್ಲಿಸಿದ 3200 ಜನರಿಗೆ ತಾಲೂಕಿಗೆ ಬರಲು ಜಿಲ್ಲಾಡಳಿತ ಅನುಮತಿ ನೀಡಿದೆ. ಜೊತೆಗೆ ವಲಸೆ ಬಂದವರನ್ನು ಕಡ್ಡಾಯವಾಗಿ ಕ್ವಾರೆಂಟೈನ್ ಮಾಡಲಾಗುತ್ತಿದೆ. ತಾಲೂಕಿನ ಹಲವು ಕಡೆ ವಸತಿ ಶಾಲೆಗಳಲ್ಲಿ ವಲಸಿಗರ ಕ್ವಾರೆಂಟೈನ್ ಗೆ ಸಿದ್ಧತೆ ನಡೆಸಲಾಗಿದೆ.
ಆದರೆ ಮುಂಬೈನಿಂದ ತಾಲೂಕಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರು ಬರುತ್ತಿರುವ ಸಂಗತಿ ಜಿಲ್ಲಾಡಳಿತವನ್ನು ಕಂಗಾಲು ಮಾಡಿದೆ. ಮಂಡ್ಯದಲ್ಲಿ ಈಗಾಗಲೇ ಮುಂಬೈನಿಂದ ಬಂದವರಿಂದ ಸೋಂಕು ಹರಡಿದ್ದು, ಇನ್ನಷ್ಟು ಮಂದಿ ಬರುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಪ್ರತಿದಿನ ನೂರಾರು ವಲಸಿಗರಿಗೆ ಕೊವಿಡ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ.