ಕರ್ನಾಟದಲ್ಲಿ ಪ್ರಚಾರ ಮಾಡಲಿದ್ದಾರೆ ಜಿಗ್ನೇಶ್ ಮೆವಾನಿ
ಚಿಕ್ಕಮಗಳೂರು, ಡಿಸೆಂಬರ್ 30: ಊನಾ ಚಳುವಳಿಯಿಂದ ಗುಜರಾತ್ ಬಿಜೆಪಿಯಲ್ಲಿ ನಡುಕ ಹುಟ್ಟಿಸಿದ್ದ ದಲಿತ ಹೋರಾಟಗಾರ ಮುಖಂಡ ಜಿಗ್ನೇಶ್ ಮೆವಾನಿ ಕರ್ನಾಟಕ ಚುನಾವಣೆಯಲ್ಲಿಯೂ ಬಿಜೆಪಿ ವಿರುದ್ಧ ಪ್ರಚಾರ ಮಾಡಲಿದ್ದಾರೆ.
ತಮ್ಮ ಪ್ರಖರ ಮಾತು, ವಾಕ್ಚಾತುರ್ಯದಿಂದ ದಲಿತರ ಸಂಘಟನೆ ಮಾಡಿ, ಬಿಜೆಪಿ ವಿರುದ್ಧ ತಿರುಗಿ ಬೀಳುವಂತೆ ಮಾಡಿದ್ದ ಜಿಗ್ನೇಶ್ ಮೆವಾನಿ ರಾಜ್ಯದಲ್ಲಿಯೂ ಇದನ್ನೇ ಮುಂದುವರೆಸುವುದಾಗಿ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಕರ್ನಾಟಕ ಕೋಮು ಸೌಹಾರ್ಧ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ ಪ್ರಚಾರದಿಂದ ಯಾವ ಪಕ್ಷಕ್ಕೆ ಲಾಭವಾಗುತ್ತದೆಯೊ ಗೊತ್ತಿಲ್ಲ ಆದರೆ ನನ್ನ ಗುರಿ ಬಿಜೆಪಿಯನ್ನು ಸೋಲಿಸುವುದಷ್ಟೆ' ಎಂದಿದ್ದಾರೆ.
ದಲಿತ ಪರ ಹೋರಾಟಗಾರರು ಎಲ್ಲೆಲ್ಲಿ ಚುನಾವಣೆಗೆ ನಿಲ್ಲುತ್ತಾರೊ ಅವರಿಗೆ ಹೋರಾಟಗಾರರು ಬೆಂಬಲ ಕೊಡಬೇಕು ಎಂದ ಅವರು, ಹೋರಾಟಗಾರರು ಚುನಾವಣೆಗೆ ನಿಂತ ಸ್ಥಾನಕ್ಕೆ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ಕಾಂಗ್ರೆಸ್ ಪಕ್ಷವನ್ನು ಮನವಿ ಮಾಡಿಕೊಳ್ಳಬೇಕು, ನಮ್ಮ ಗುರಿ ಬಿಜೆಪಿ ಯನ್ನು ಆ ಮೂಲಕ ಸಂಘ ಪರಿವಾರವನ್ನು ಸೋಲಿಸುವುದೇ ಆಗಿರಬೇಕು ಎಂದು ಅವರು ಹೇಳಿದರು.
ಕೋಮುವಾದ ಈ ದೇಶದ ದೊಡ್ಡ ಪಿಡುಗು ಎಂದ ಅವರು ಬಿಜೆಪಿ ಅದಕ್ಕಿಂತಲೂ ದೊಡ್ಡ ಪಿಡುಗು ಆದಷ್ಟು ಬೇಗ ಇವೆರಡನ್ನು ದೇಶದಿಂದ ತೊಲಗಿಸಬೇಕು ಎಂದರು.
ದಲಿತರು ಮತ್ತು ಮುಸ್ಲೀಮರು ಒಗ್ಗೂಡಬೇಕು ಎಂದು ಕರೆ ನೀಡಿದ ಜಿಗ್ನೇಶ್ ಮೆವಾನಿ 'ಗುಜರಾತ್ ಚುನಾವಣೆಯಲ್ಲಿ ವದಗಾಂ ಕ್ಷೇತ್ರದಲ್ಲಿ ಶೇ 85 ಮುಸ್ಲಿಮರು ಮತ್ತು ದಲಿತರು ಬಿಜೆಪಿಗೆ ವಿರುದ್ಧವಾಗಿ ಮತ ಚಲಾಯಿಸಿದರು, ಕರ್ನಾಟಕದಲ್ಲಿ ಶೇ 95 ದಲಿತರು ಮುಸ್ಲಿಮರು ಬಿಜೆಪಿ ವಿರುದ್ಧ ಮತ ಚಲಾಯಿಸಲಿ' ಎಂದು ಅವರು ಹೇಳಿದರು.












Click it and Unblock the Notifications