ರಾಮನಗರ, ಜಮಖಂಡಿ ಉಪ ಚುನಾವಣೆ ಸಿದ್ಧತೆಗೆ ಸಿಇಸಿ ಸೂಚನೆ
ಬೆಂಗಳೂರು, ಸೆ.29: ಬಾಗಲಕೋಟೆಯ ಜಮಖಂಡಿ ವಿಧಾನಸಭಾ ಕ್ಷೇತ್ರ ಹಾಗೂ ರಾಮನಗರಕ್ಕೆ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಸಲು ಸಿದ್ಧತೆ ನಡೆದಿದೆ.
ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ನಡೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ಚನ್ನಪಟ್ಟಣ ಮತ್ತು ರಾಮನಗರ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದರು, ಬಳಿಕ ರಾಮನಗರ ಕ್ಷೇತ್ರಕ್ಕೆ ಕುಮಾರಸ್ವಾಮಿ ರಾಜಿನಾಮೆ ನೀಡಿದ್ದರು.
ಇನ್ನು ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಸಿದ್ದು ನ್ಯಾಮಗೌಡ ಅವರು, ಮೇ 28ರಂದು ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಜಮಖಂಡಿ ಕ್ಷೇತ್ರ ತೆರವಾಗಿತ್ತು. ಇದೀಗ ಈ ಎರಡೂ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಚುನಾವಣೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಶೀಘ್ರದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಲಿದೆ. ಒಂದು ಕ್ಷೇತ್ರ ತೆರವಾದರೆ ಆರು ತಿಂಗಳ ಒಳಗಾಗಿ ಚುನಾವಣೆಯನ್ನು ನಡೆಸಬೇಕು, ಹೀಗಾಗಿ ಉಪ ಚುನಾವಣೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತಾವು ತೆರವುಗೊಳಿಸಿರುವ ರಾಮನಗರ ಕ್ಷೇತ್ರದಿಂದ ತಮ್ಮ ಪತ್ನಿ, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಇನ್ನು ಜಮಖಂಡಿ ಕ್ಷೇತ್ರದಲ್ಲಿ ಮಾಜಿ ಶಾಸಕ ದಿ. ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ್ ನ್ಯಾಮಗೌಡ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡುವ ಸಾಧ್ಯತೆಗಳಿವೆ. ಕೆಲ ದಿನಗಳ ಹಿಂದೆ ಬಾಗಲಕೋಟೆಗೆ ಪ್ರವಾಸ ಕೈಗೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂಬರುವ ಉಪ ಚುನಾವಣೆಯಲ್ಲಿ ದಿ. ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ ನ್ಯಾಮಗೌಡ ಅವರನ್ನು 30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿದ್ದರು.
ಇದೆಲ್ಲಾ ಬೆಳವಣಿಗೆಗಳನ್ನು ನೋಡಿದರೆ ಆನಂದ್ ನ್ಯಾಮಗೌಡ ಅವರು ಸ್ಫರ್ಧಿಸುವುದು ಬಹುತೇಕ ಖಚಿತ ಎನ್ನಬಹುದು. ಕೇಂದ್ರ ಚುನಾವಣಾ ಆತಯೋಗವು ಈ ಎರಡು ಕ್ಷೇತ್ರಗಳಿಗೆ ಶೀಘ್ರವೇ ಚುನಾವಣಾ ದಿನಾಂಕ ಘೋಷಿಸಲಿದೆ.












Click it and Unblock the Notifications