20 ಸೆಕೆಂಡ್ ತಡವಾಗಿದ್ದರೆ ರಾಹುಲ್ ಇದ್ದ ವಿಮಾನ ಪತನವಾಗುತ್ತಿತ್ತು!
Recommended Video

ನವದೆಹಲಿ, ಆಗಸ್ಟ್ 31: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ ವಿಮಾನವೊಂದು 20 ಸೆಕೆಂಡ್ ತಡವಾಗಿದ್ದರೆ ಪತನವಾಗಿ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ(DGCA) ಬಯಲಿಗೆಳೆದಿದೆ.
ಈ ಘಟನೆ ನಡೆದಿದ್ದು ಏಪ್ರಿಲ್ 26 ರಂದು, ಹುಬ್ಬಳ್ಳಿಯಲ್ಲಿ. ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಅವರಿದ್ದ ವಿಮಾನ ತಾಂತ್ರಿಕ ತೊಂದರೆಯಿಂದ ತುರ್ತು ಭೂಸ್ಪರ್ಶ ಮಾಡಿದ ಸುದ್ದಿ ಆಗಲೇ ವರದಿಯಾಗಿತ್ತು.
ಆದರೆ ಅದು ಅಂಥ ಗಂಭೀರ ಸಮಸ್ಯೆಯಾಗಿತ್ತು ಎಂಬುದು ತಿಳಿದುಬಂದಿದ್ದು ಈಗಲೇ! ಕೇವಲ 20 ಸೆಕೆಂಡ್ ತಡವಾಗಿದ್ದರೆ ಈ ವಿಮಾನ ಪತನವಾಗಿ ಭಾರೀ ದುರಂತವೊಂದು ಸಂಭವಿಸುತ್ತಿತ್ತು!

ಪತನದ ಸುದ್ದಿ ಖಚಿತಪಡಿಸಿದ DGCA
ಏಪ್ರಿಲ್ 26 ರಂದು ದೆಹಲಿಯಿಂದ ಪ್ರಚಾರಕ್ಕಾಗಿ ಹುಬ್ಬಳ್ಳಿಗೆ ಬಂದಿದ್ದ ರಾಹುಲ್ ಗಾಂಧಿ ಅವರಿದ್ದ ವಿಮಾನ ತುರ್ತು ಭೂಸ್ಪರ್ಶ ಮಾಡಿತ್ತು. ಈ ಕುರಿತು ಟೈಮ್ಸ್ ನೌ ಸಲ್ಲಿಸಿದ್ದ ಮಾಹಿತಿ ಹಕ್ಕು (ಆರ್ ಟಿಐ) ಅರ್ಜಿಗೆ ಉತ್ತರಿಸಿದ DGCA ಈ ಸುದ್ದಿಯನ್ನು ಖಚಿತಪಡಿಸಿದೆ. ಆ ಸಮಯದಲ್ಲಿ ಇದು ಒಂದು ಸಣ್ಣ ತಾಂತ್ರಿಕ ಸಮಸ್ಯೆ ಎನ್ನಲಾಗಿತ್ತು. ಆದರೆ ಇದೊಂದು ಗಂಭೀರ ಸಮಸ್ಯೆಯಾಗಿತ್ತು ಮತ್ತು ಇದರಿಂದಾಗಿ ವಿಮಾನವೇ ಪತವಾಗಿ ಭಾರೀ ದುರಂತ ಸಂಭವಿಸುವ ಸಾಧ್ಯತೆ ಇತ್ತು ಎಂದು ಅದು ಹೇಳಿದೆ.

ನೀಲಮಣಿ ರಾಜುಗೆ ದೂರು
ವಿಮಾನದಲ್ಲಿ ಈ ರೀತಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರ ಕುರಿತು ಅನುಮಾನ ವ್ಯಕ್ತಪಡಿಸಿ, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರಿಗೆ ದೂರು ನೀಡಲಾಗಿತ್ತು. ಈ ಸಂಬಂಧ ಖಾಸಗಿ ವಿಮಾನದ ಪೈಲಟ್ ಮತ್ತು ವಿಮಾನ ಸಿಬ್ಬಂದಿಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದರು.

ಅನುಮಾನ ವ್ಯಕ್ತವಾಗಿತ್ತು!
ಪ್ರಚಾರದ ವೇಳೆಯಲ್ಲಿ ರಾಹುಲ್ ಗಾಂಧಿ ಅವರಿದ್ದ ವಿಮಾನದಲ್ಲಿ ಹೀಗೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು ಆ ಸಂದರ್ಭದಲ್ಲಿ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ದೇಶದ ಪ್ರಭಾವೀ ನಾಯಕರೊಬ್ಬರು ಸಂಚರಿಸುವ ವಿಮಾನವನ್ನು ಹೀಗೆ ಪೂರ್ವ ತಯಾರಿಯಿಲ್ಲದೆ, ಬೇಜವಾಬ್ದಾರಿಯಾಗಿ ವ್ಯವಸ್ಥೆ ಮಾಡುವುದು ಸರಿಯೇ ಎಂಬ ಪ್ರಶ್ನೆ ಎದ್ದಿತ್ತು.

ರಾಹುಲ್ ಕುಶಲ ವಿಚಾರಿಸಿದ್ದ ಮೋದಿ
ಏಪ್ರಿಲ್ 26 ರ ಈ ಘಟನೆಯ ನಂತರ ವಿಷಯ ತಿಳಿಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ರಾಹುಲ್ ಗಾಂಧಿ ಅವರ ಕ್ಷೇಮ ವಿಚಾರಿಸಿದ್ದರು. ರಾಹುಲ್ ಗಾಂಧಿ ಅವರೊಂದಿಗೆ ಅಂದು ವಿಮಾನದಲ್ಲಿ ಮೂವರು ಪ್ರಯಾಣಿಕರಿದ್ದರು. ಎರಡೂವರೆ ಗಂಟೆಗಳ ವಿಮಾನ ಪ್ರಯಾಣದ ನಂತರ ಈ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಆಟೋ ಪೈಲೆಟ್ ಸಿಸ್ಟಂ ವಿಮಾನದಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ.












Click it and Unblock the Notifications