ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ 04: ಕರ್ನಾಟಕದ ಜಿಲ್ಲೆಗಳ ಇಂದಿನ ಪ್ರಮುಖ ಸುದ್ದಿ

|
Google Oneindia Kannada News

Karnataka District News Roundup (4th August 2021): Todays District News on politics, climate, infrastructure

ಕಾಡಾನೆ ದಾಳಿಗೆ ರೈತ ಬಲಿ

ರಾಮನಗರ ಜಿಲ್ಲೆ ಕನಕಪುರ ತಾಲೂಕಿನಲ್ಲಿ ಕಾಡಾನೆ ದಾಳಿಗೆ ರೈತ ಬಲಿಯಾಗಿದ್ದು, ಚಿಕ್ಕಬೆಟ್ಟಹಳ್ಳಿ ಗ್ರಾಮದ ರುದ್ರೇಗೌಡ (65) ಮೃತ ರೈತನಾಗಿದ್ದಾನೆ.

ಬೆಳಗ್ಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಳ್ಳನಿಗೆ ಗ್ರಾಮಸ್ಥರಿಂದ ಧರ್ಮದೇಟು

ದೇವಾಲಯ ಕಳ್ಳತನ ಮಾಡಲು ಬಂದಿದ್ದ ಕಳ್ಳನಿಗೆ ಗ್ರಾಮಸ್ಥರಿಂದ ಧರ್ಮದೇಟು ನೀಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕಳ್ಳ ಸಾವನ್ನಪ್ಪಿದ್ದಾನೆ.

ಬೆಂಗಳೂರು ದಕ್ಷಿಣ ತಾಲೂಕಿನ ಸುಬ್ಬರಾಯಪ್ಪನ ಪಾಳ್ಯ ಗ್ರಾಮದಲ್ಲಿ ಘಟನೆ ನಡೆದಿದ್ದು, ಬೆಳಗಿನ ಜಾವ ಇಬ್ಬರು ಕಳ್ಳರು ಗ್ರಾಮದ ರಾಮನ ದೇವಸ್ಥಾನಕ್ಕೆ ಕಳ್ಳತನ ಮಾಡಲು ಯತ್ನಿಸಿದ್ದರು. ಗ್ರಾಮಸ್ಥರು ನೋಡಿದಾಗ ಓರ್ವ ಕಳ್ಳ ಪರಾರಿಯಾಗಿ, ಮತ್ತೊಬ್ಬ ಕಳ್ಳನನ್ನು ಗ್ರಾಮಸ್ಥರು ಹಿಡಿದರು.

ವಿಷಯ ತಿಳಿದ ತಾವರೆಕೆರೆ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿದ್ದು, ಥಳಿಸಿದ್ದ ಕಳ್ಳನನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕಳ್ಳ ಸಾವನ್ನಪ್ಪಿದ್ದು, ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಅರಬ್ಬಿ ಸಮುದ್ರದಲ್ಲಿ ದೋಣಿ ಪಲ್ಟಿ

ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಪಲ್ಟಿಯಾಗಿದ್ದು, ಏಳು ಜನರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಮುರಡೇಶ್ವರ ಭಾಗದಲ್ಲಿ ಘಟನೆ ನಡೆದಿದ್ದು, ಜನಾರ್ಧನ್ ಪುರ್ಸು ಹರಿಕಾಂತ ಗದ್ದೆಮನೆ ಎಂಬುವವರಿಗೆ ಸೇರಿದ ಜಲಗಂಗಾ ಎಂಬ ಹೆಸರಿನ ದೋಣಿ ಪಲ್ಟಿಯಾಗಿದೆ.

ಕಾರ್ಣಿಕ ನುಡಿಗೆ ಅಪಮಾನ

ಐತಿಹಾಸಿಕ ಸುಕ್ಷೇತ್ರವಾದ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದ ಮೈಲಾರಲಿಂಗೇಶ್ವರ ದೇವರ ಕಾರ್ಣಿಕದ ವಾಣಿಯನ್ನು ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಮರು ವಿಶ್ಲೇಷಣೆ ಮಾಡಿ, ದೇವರ ಕಾರ್ಣಿಕ ನುಡಿಗೆ ಅಪಮಾನ ಮಾಡಿದ್ದಾರೆ ಎಂದು ಕಾರ್ಣಿಕ ನುಡಿಯುವ ಗೊರವಯ್ಯ ರಾಮಪ್ಪ ಹಾಗೂ ದೇವಸ್ಥಾನದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿವರ್ಷ ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ಭರತ ಹುಣ್ಣುಮೆ ಆಗಿ ಮೂರು ದಿನಕ್ಕೆ ಗೊರವಯ್ಯ ಸ್ವಾಮಿ ಜಪತಪ ಮಾಡಿ 11 ದಿವಸ ಉಪವಾಸವಿದ್ದು, ದೇವರ ವಾಣಿಯನ್ನು ನುಡಿಯುತ್ತಾರೆ. ಈ ವರ್ಷ "ಮುತ್ತಿನ ರಾಶಿ ಮೂರು ಭಾಗವಾಗಿತಲೇ ಪರಾಕ್' ಎಂದು ವಾಣಿಯನ್ನು ಹೇಳಿದ್ದಾರೆ. ಇದನ್ನು ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಆ ದಿನ ಮಾತ್ರ ವಿಶ್ಲೇಷಣೆ ಮಾಡಬೇಕು. ಅದರೆ ತಮ್ಮ ಲಾಭಕ್ಕಾಗಿ, ರಾಜಕೀಯ ವ್ಯಕ್ತಿಗಳು ಬಂದಾಗ ಕಾರ್ಣಿಕವನ್ನು ಹೇಳಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ಭಕ್ತರು ಕಿಡಿಕಾರಿದ್ದಾರೆ.

ಮಂಡ್ಯದಲ್ಲಿ ಸಂಭ್ರಮಾಚರಣೆ

ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಕ್ಷೇತ್ರದ ಶಾಸಕ ಕೆ.ಸಿ. ನಾರಾಯಣಗೌಡರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮಂಡ್ಯ ನಗರದ ಮಹಾವೀರ ವೃತ್ತದಲ್ಲಿ ಸಂಭ್ರಮಾಚರಣೆ ನಡೆಸಿದರು. ಬಿಜೆಪಿ ಮುಖಂಡ ಡಿ.ನಾಗೇಶ್ ನೇತೃತ್ವದಲ್ಲಿ ಮಹಾವೀರ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಹಾಗೂ ಕೆಸಿಎನ್ ಅಭಿಮಾನಿಗಳು ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಮೌನವ್ರತಕ್ಕೆ ಜಾರಿದ್ದೇನೆ ಎಂದ ಕುಂದಾಪುರ ವಾಜಪೇಯಿ

ಮಂತ್ರಿ ಮಂಡಲ ವಿಸ್ತರಣೆ ಕುರಿತಾಗಿ ನಾನೇನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಮೌನವ್ರತಕ್ಕೆ ಜಾರಿದ್ದೇನೆ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ತಿಳಿಸಿದ್ದಾರೆ.

ಕುಂದಾಪುರದ ವಾಜಪೇಯಿ ಎಂದೇ ಖ್ಯಾತಿ ಹೊಂದಿದ್ದು, ಐದು ಬಾರಿ ನಿರಂತರವಾಗಿ ಗೆದ್ದಿರುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಈ ಬಾರಿ ಸಚಿವ ಸ್ಥಾನ ಕೊಡುತ್ತಾರೆ ಎಂಬ ಕೂಗು ಜೋರಾಗಿತ್ತು. ಹಾಲಾಡಿ ಬೆಂಬಲಿಗರು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಮಾಡಿದ್ದರು. ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮನೆಯ ಮುಂದೆ ಜನಾಗ್ರಹ ಆಂದೋಲನ ನಡೆಸಿದರು.

ಮಾವೋವಾದಿ ನಕ್ಸಲರು ಪ್ರತ್ಯಕ್ಷ

ಕೇರಳದ ವಯನಾಡಿನ ಗಿರಿಜನ ಹಾಡಿಯಲ್ಲಿ ಮಾವೋವಾದಿ ನಕ್ಸಲರು ಪ್ರತ್ಯಕ್ಷರಾಗಿ ನಕ್ಸಲ್ ಪರ ಘೋಷಣೆ ಮತ್ತು ಕೇರಳ ಸರ್ಕಾರಕ್ಕೆ ಕರ ಪತ್ರದ ಮೂಲಕ ಕಠಿಣ ಸಂದೇಶ ರವಾನಿಸಿ, ಕಾಡಿನಲ್ಲಿ ಮರೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಮಳೆಯ ನಡುವೆಯೇ ನಕ್ಸಲ್ ನಿಗ್ರಹ ದಳ ಗಡಿ ಭಾಗಗಳಲ್ಲಿ ನಿರಂತರ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ. ಕುಟ್ಟ ಮತ್ತು ವಿರಾಜಪೇಟೆ ಆರ್ಜಿಯಲ್ಲಿರುವ ಎಎನ್‍ಎಫ್ ಕ್ಯಾಂಪ್‌ಗಳ ಕಮಾಂಡೋಗಳು ಕುಟ್ಟ, ತೋಲ್ಪಟ್ಟಿ ಮತ್ತು ಕೇರಳದೊಂದಿಗೆ ಅರಣ್ಯ ಗಡಿ ಹಂಚಿಕೊಂಡಿರುವ ಪ್ರದೇಶಗಳಲ್ಲಿ ನಿರಂತರ ಕೂಂಬಿಂಗ್ ಕಾರ್ಯಾಚರಣೆ ಕೈಗೊಂಡಿದ್ದಾರೆ.

ತುಂಬಿದ ಅಯ್ಯನಕೆರೆ, ರೈತರ ಮೊಗದಲ್ಲಿ ಹರ್ಷ

ಚಿಕ್ಕಮಗಳೂರು ಜಿಲ್ಲೆಯ ಗಿರಿಭಾಗದಲ್ಲಿಂದ ಹರಿದು ಬಂದು ಶಕುನಗಿರಿ ತಟದಲ್ಲಿ ಸಂಗ್ರಹವಾಗುವ ಐತಿಹಾಸಿಕ ಅಯ್ಯನಕೆರೆ ತುಂಬಿ ಕೋಡಿ ಬಿದ್ದಿದ್ದು, ಅಚ್ಚುಕಟ್ಟುದಾರರು ಹಾಗೂ ಈ ಭಾಗದ ರೈತರಲ್ಲಿ ಸಂತಸ ಮನೆಮಾಡಿದೆ.

Recommended Video

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮತ್ತು ಕಚೇರಿ ಮೇಲೆ ಐಟಿ ದಾಳಿ | Oneindia Kannada

ಕಳೆದ ಎರಡು ವಾರದಗಳಿಂದ ಗಿರಿಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಕೆರೆ ತುಂಬಿದ್ದು, ಈ ಭಾಗದ ಜನರು ಕೆರೆ ಕೋಡಿ ಬೀಳುತ್ತಿದ್ದಂತೆ ಪೂಜೆ, ಪುನಸ್ಕಾರ ಮಾಡಿ ಸಂಭ್ರಮಿಸಿದ್ದಾರೆ. ಕೆರೆ ತುಂಬಿ ಕೋಡಿ ಬಿದ್ದರೆ ಸಖರಾಯಪಟ್ಟಣ ಹಾಗೂ ಕಡೂರು ತಾಲೂಕಿನ ಹಲವು ಹಳ್ಳಿಗಳಿಗೆ ನೀರಾವರಿ ಸೌಲಭ್ಯವನ್ನು ಈ ಕೆರೆ ಒದಗಿಸುತ್ತದೆ. ಈ ಬೃಹತ್ ಕೆರೆಯ ಸುತ್ತಲಿನ ಪ್ರದೇಶ ಸೇರಿದಂತೆ 1543 ಹೆಕ್ಟೇರ್ ಪ್ರದೇಶಕ್ಕೆ ನೀರಿಣಿಸುತ್ತಿದ್ದು, ಕೆರೆಯ ಅಚ್ಚುಕಟ್ಟು ಪ್ರದೇಶದ ಜನರ ಖುಷಿಗೆ ಕಾರಣವಾಗಿದೆ.

English summary
Karnataka district news Roundup (4th August 2021) - Stay up-to-date with politics, climate, infrastructure, & education in Bangalore, Mysore, Shivamogga and other Karnataka districts. Capture every aspect of Karnataka district news only on Kannada Oneindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X