ಜನ ಸೇವಕನಾಗಿ ದುಡಿಯಲು ನನಗೊಂದು ಅವಕಾಶ ಕೊಡಿ: ವಿನೋದ್ ಅಸೂಟಿ
ಧಾರವಾಡ, ಏಪ್ರಿಲ್ 24: ಲೋಕಸಭಾ ಚುನಾವಣೆ ಹಿನ್ನೆಲೆ ಅಬ್ಬರ ಪ್ರಚಾರ ರಾಜ್ಯದಲ್ಲಿ ಜೋರಾಗಿದೆ. ಧಾರವಾಡ ಲೋಕಸಭಾ ವ್ಯಾಪ್ತಿಯ ಕುರುಬಗಟ್ಟಿ, ಮಂಗಳಗಟ್ಟಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರು ಇಂದು ( ಬುಧವಾರ) ಭರ್ಜರಿ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಆರೋಗ್ಯ ಭಾಗ್ಯ ಘೋಷಿಸಿದೆ. ಸುಮಾರು 25 ಲಕ್ಷದವರೆಗೆ ಒಬ್ಬ ವ್ಯಕ್ತಿಗೆ ಚಿಕಿತ್ಸಾ ವೆಚ್ಚ ಭರಿಸಲಾಗುವುದು. ಇಂತಹ ಹಲವಾರು ಯೋಜನೆಗಳನ್ನು ಕಾಂಗ್ರೆಸ್ ಜಾರಿಗೆ ತರಲಿದೆ. ಬಡವರ ಬಗ್ಗೆ ಕಾಳಜಿಯಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.

ರಾಜಕೀಯ ತುಂಬಾ ಕಲುಷಿತಗೊಂಡಿದೆ. ಕೀಳುಮಟ್ಟಕ್ಕೆ ಇಳಿದು ರಾಜಕೀಯ ಮಾಡಲಾಗುತ್ತಿದೆ. ರಾಜಕೀಯವೆಂದರೆ ಸೇವಕನಾಗಿ ಜನರ ಸೇವೆ ಮಾಡುವುದು. ಜನ ಸೇವಕನಾಗಿ ದುಡಿಯಲು ನನಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು. ಮಂಗಳಗಟ್ಟಿ ಗ್ರಾಮದ ಜಗದ್ಗುರು ರೇಣುಕಾಚಾರ್ಯ ಮಂಗಲ ಭವನ, ಶ್ರೀ ಬೀರಲಿಂಗೇಶ್ವರ ಮತ್ತು ಮರೆಮ್ಮದೇವಿ ದೇವಸ್ಥಾನಕ್ಕೆ" ಭೇಟಿ ನೀಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಮತಿ ಶಿವಲೀಲಾ ಕುಲಕರ್ಣಿ, ಈಶ್ವರ ಶಿವಳ್ಳಿ ಮತ್ತು ಪಕ್ಷದ ಹಿರಿಯರು, ಮಂಗಳಗಟ್ಟಿ ಗ್ರಾಮದ ಸಮಸ್ತ ಕಾರ್ಯಕರ್ತರು ಮತ್ತು ಯುವಕರು ಉಪಸ್ಥಿತರಿದ್ದರು.
"ಹಾರೊಬೆಳವಡಿ" ಗ್ರಾಮವನ್ನು ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಆಯ್ಕೆಮಾಡಿ ಸುಂದರ ಹಾಗೂ ಸ್ವಚ್ಛವಾದ ಗ್ರಾಮ ಮಾಡಬೇಕಿತ್ತು. ಆದರೆ ಪ್ರಹ್ಲಾದ ಜೋಶಿ ಸಾಹೇಬರು ಆ ಹಳ್ಳಿಗೆ ಎಷ್ಟು ಸಲ ಭೇಟಿ ನೀಡಿ, ಎಷ್ಟು ಅನುದಾನ ತಂದು ಕೆಲಸ ಮಾಡಿದರೊ ಅವರೇ ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ವ್ಯಂಗ್ಯವಾಡಿದರು.
ತಿಮ್ಮಾಪೂರ ಹಾಗೂ ಮರೇವಾಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಧಾರವಾಡ ಲೋಕಸಭಾ ವ್ಯಾಪ್ತಿಯ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. "ಸಂಸದರ ಆದರ್ಶ ಗ್ರಾಮ" ಈ ಶಬ್ದಗಳು ನಿಮಗೆ ನೆನಪಿರಬೇಕು ಅಲ್ವಾ?? ಇದು ಬಿಜೆಪಿಯ ಬಣ್ಣಬಣ್ಣದ ಯೋಜನೆಯ ಒಂದು ಹೆಸರಷ್ಟೇ. ಆದ್ದರಿಂದ ನುಡಿದಂತೆ ನಡೆದ ಕಾಂಗ್ರೆಸ್ ಪಕ್ಷ ಬೆಂಬಲಿಸಿ ಎಂದು ಮನವಿ ಮಾಡಿದರು.
ಸದವಕಾಶಗಳು ಯಾವಾಗಲೂ ಬರುವುದಿಲ್ಲ. ಗ್ರಾಮದ ಎಲ್ಲಾ ಸಮುದಾಯದ ನಾಯಕರು, ಯುವಕರು ಒಗ್ಗಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡೋಣ. ಕಾಂಗ್ರೆಸ್ ಗೆಲ್ಲಿಸಿ ಸಂವಿಧಾನ ಉಳಿಸಿ ಎಂದರು. ಗೃಹಲಕ್ಷ್ಮಿ, ಗೃಹಜ್ಯೋತಿ ಮುಂತಾದ ಗ್ಯಾರಂಟಿಗಳನ್ನು ರಾಜ್ಯ ಸರ್ಕಾರ ಭರವಸೆ ಕೊಟ್ಟಂತೆ ಹತ್ತು ತಿಂಗಳೊಳಗೆ ಎಲ್ಲಾ ಈಡೇರಿಸಿದೆ. ಕೇಂದ್ರದ ಕಾಂಗ್ರೆಸ್ ನಾಯಕರು ಸುಮಾರು 25 ಗ್ಯಾರಂಟಿಗಳನ್ನು ತನ್ನ ಪ್ರಣಾಳಿಕೆಯಲ್ಲಿ ನೀಡಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೀವು ಅಧಿಕಾರ ನೀಡಿದರೆ ಖಂಡಿತವಾಗಿಯೂ ಎಲ್ಲಾ ಭರವಸೆಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಮತಿ ಶಿವಲೀಲಾ ಕುಲಕರ್ಣಿ, ಅರವಿಂದ ಏಗನಗೌಡ್ರ, ಈಶ್ವರ ಶಿವಳ್ಳಿ, ಗಿರಿಮಲ್ಲಯ್ಯ ನಂದಿಕೋಲಮಠ, ಸಿದ್ದಪ್ಪ ಪ್ಯಾಟಿ ಮತ್ತು ಪಕ್ಷದ ಹಿರಿಯರು, ಮರೇವಾಡ ಗ್ರಾಮದ ಸಮಸ್ತ ಕಾರ್ಯಕರ್ತರು ಮತ್ತು ಯುವಕರು ಉಪಸ್ಥಿತರಿದ್ದರು.












Click it and Unblock the Notifications