DC Vs GT: ಪಂದ್ಯದ ಫಲಿತಾಂಶವನ್ನೇ ಬದಲಾಯಿಸಿದ ಟ್ರಿಸ್ಟನ್ ಸ್ಟಬ್ಸ್!
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗುಜರಾತ್ ಟೈಟಾನ್ಸ್ ವಿರುದ್ಧ 4 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಕೊನೆಯ ಎಸೆತದವರೆಗೂ ಅತ್ತಿತ್ತ ತೂಗುಯ್ಯಾಲೆ ಆಡುತ್ತಿದ್ದ ವಿಜಯಮಾಲೆ ಕೊನೆಗೂ ಡೆಲ್ಲಿ ಕ್ಯಾಪಿಟಲ್ಸ್ ಕೊರಳಿಗೆ ಬಿದ್ದಿತು.
ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 224 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.

5.4 ಓವರ್ ಗಳಲ್ಲಿ 44 ರನ್ ಗಳಿಸುವ ವೇಳೆಗೆ 3 ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ರಿಷಭ್ ಪಂತ್ ಮತ್ತು ಅಕ್ಷರ್ ಪಟೇಲ್ 113 ರನ್‌ಗಳ ಭರ್ಜರಿ ಜೊತೆಯಾಟ್ ಮೂಲಕ ಆಸರೆಯಾದರು. ಅಕ್ಷರ್ ಪಟೇಲ್ 43 ಎಸೆತಗಳಲ್ಲಿ 66 ರನ್ ಗಳಿಸಿದರೆ, ರಿಷಬ್ ಪಂತ್ 43 ಎಸೆತಗಳಲ್ಲಿ ಅಜೇಯ 88 ರನ್ ಬಾರಿಸಿದರು. ಟ್ರಿಸ್ಟನ್ ಸ್ಟಬ್ಸ್ ಕೂಡ ಕೇವಲ 7 ಎಸೆತಗಳಲ್ಲಿ ಅಜೇಯ 26 ರನ್ ಗಳಿಸಿದರು.
ಹೋರಾಡಿ ಸೋತ ಗಿಲ್ ಪಡೆ
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಆರಂಭದಲ್ಲೇ ನಾಯಕ ಶುಭಮನ್ ಗಿಲ್ ಅವರ ವಿಕೆಟ್ ಕಳೆದುಕೊಂಡಿತು. ಗಿಲ್ ಕೇವಲ 6 ರನ್ ಗಳಿಸಿ ಔಟಾದರು. ಸಾಯಿ ಸುದರ್ಶನ್ 65 ಮತ್ತು ವೃದ್ಧಿಮಾನ್ ಸಾಹ 39 ರನ್ ಗಳಿಸುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು.
ಒಮರ್ಝಾಯ್ ಕೇವಲ ಒಂದು ರನ್ ಗಳಿಸಿ ಔಟಾದರೆ, ಡೇವಿಡ್ ಮಿಲ್ಲರ್ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೇವಲ 23 ಎಸೆತಗಳಲ್ಲಿ 55 ರನ್ ಗಳಿಸಿದರು. ರಶೀದ್ ಖಾನ್ 11 ಎಸೆತಗಳಲ್ಲಿ ಅಜೇಯ 21 ರನ್ ಗಳಿಸಿದರೂ ತಂಡಕ್ಕೆ ಗೆಲುವು ತಂದುಕೊಡಲು ಆಗಲಿಲ್ಲ. ಕೊನೆಯ ಎಸೆತದಲ್ಲಿ ಗುಜರಾತ್ ಗೆಲುವಿಗೆ ಐದು ರನ್ ಬೇಕಿತ್ತು ಬೌಂಡರಿ ಬಂದಿದ್ದರೆ ಪಂದ್ಯ ಟೈ ಆಗುತ್ತಿತ್ತು, ಆದರೆ ರಶೀದ್ ಖಾನ್ ರನ್ ಗಳಿಸುವಲ್ಲಿ ವಿಫಲವಾದರು.
ಫಲಿತಾಂಶ ಬದಲಿಸಿದ ಫೀಲ್ಡಿಂಗ್
19ನೇ ಓವರ್ ನಲ್ಲಿ ರಶೀದ್ ಖಾನ್ ಲಾಂಗ್ ಆನ್ ನಲ್ಲಿ ಬಾರಿಸಿದ ಚೆಂಡು ಸಿಕ್ಸರ್ ಹೋಗಬೇಕು ಎನ್ನುವಷ್ಟರಲ್ಲಿ ಟ್ರಿಸ್ಟಾನ್ ಸ್ಟಬ್ಸ್ ಅದ್ಭುತ ಫೀಲ್ಡಿಂಗ್ ಮೂಲಕ ಅದನ್ನು ತಡೆದರು. ಗಾಳಿಯಲ್ಲಿ ಹಾರಿ ಚೆಂಡನ್ನು ಹಿಡಿದು ಬೌಂಡರಿ ಗೆರೆಯೊಳಗೆ ಎಸೆದರು. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ 5 ರನ್ ಉಳಿಸಿದರು, ಕೊನೆಗೆ ಡೆಲ್ಲಿ ನಾಲ್ಕು ರನ್‌ಗಳ ಅಂತರದಲ್ಲಿ ಗೆಲುವು ಕಂಡಿತು. ಸ್ಟಬ್ಸ್ ಅದನ್ನು ತಡೆಯಲು ವಿಫಲವಾಗಿದ್ದರೇ ಬಹುಶಃ ಪಂದ್ಯದ ಫಲಿತಾಂಶವೇ ಬದಲಾಗುತ್ತಿತ್ತು.












Click it and Unblock the Notifications