ಎಸ್‌ಸಿ, ಎಸ್‌ಟಿ ಮೀಸಲಾತಿ ಮುಸ್ಲಿಮರಿಗೆ ಹಂಚಿಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
ಕರ್ನಾಟಕದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಮೀಸಲಾತಿಯನ್ನು ಕಡಿಮೆ ಮಾಡಿ ಮುಸ್ಲಿಮರಿಗೆ ಮೀಸಲಾತಿ ಹೆಚ್ಚಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದರು. ಮೋದಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದ್ದು, ಇದು ಶುದ್ಧ ಸುಳ್ಳು ಎಂದು ಹೇಳಿದ್ದಾರೆ.
ಎಕ್ಸ್‌ನಲ್ಲಿ ಸರಣಿ ಪೋಸ್ಟ್ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಛೀಮಾರಿ ಹಾಕಿದ್ದಾರೆ. ಟ್ವೀಟ್‌ನಲ್ಲಿ "ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿರುವ ಹಸಿ ಸುಳ್ಳು ಅವರ ಅಜ್ಞಾನವನ್ನಷ್ಟೇ ಅಲ್ಲ ಸೋಲಿನ ಭೀತಿಯಲ್ಲಿರುವ ಅವರ ಹತಾಶೆಯನ್ನೂ ಸೂಚಿಸುತ್ತದೆ. ದೇಶದಲ್ಲಿ ಇಲ್ಲಿಯ ವರೆಗಿನ ಯಾರೂ ಕೂಡಾ ಪ್ರಧಾನಿ ಪಟ್ಟವನ್ನು ಇಂತಹ ಕೀಳು ಮಟ್ಟಕ್ಕೆ ಇಳಿಸಿಲ್ಲ." ಎಂದು ಹೇಳಿದ್ದಾರೆ.

ಪ್ರಧಾನಿಯಂತಹ ಜವಾಬ್ದಾರಿಯುತ ಹುದ್ದೆಯಲ್ಲಿದ್ದು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿರುವ ಅವರು ಮಾಡಿರುವ ಆರೋಪಗಳನ್ನು ಆಧಾರ ಸಮೇತ ಸಾಬೀತು ಮಾಡಲಿ, ಇಲ್ಲವಾದರೆ ದೇಶದ ಜನತೆ ಕ್ಷಮೆ ಕೇಳಲಿ ಎಂದು ಒತ್ತಾಯಿಸಿದ್ದಾರೆ.
ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ @narendramodi ಅವರು ಹೇಳುತ್ತಿರುವ ಹಸಿ ಸುಳ್ಳು ಅವರ ಅಜ್ಞಾನವನ್ನಷ್ಟೇ ಅಲ್ಲ ಸೋಲಿನ ಭೀತಿಯಲ್ಲಿರುವ ಅವರ ಹತಾಶೆಯನ್ನೂ ಸೂಚಿಸುತ್ತದೆ. ದೇಶದಲ್ಲಿ ಇಲ್ಲಿಯ ವರೆಗಿನ ಯಾರೂ ಕೂಡಾ ಪ್ರಧಾನಿ ಪಟ್ಟವನ್ನು ಇಂತಹ ಕೀಳು ಮಟ್ಟಕ್ಕೆ… pic.twitter.com/6rpjvAt1jJ
— Siddaramaiah (@siddaramaiah) April 24, 2024
ಆದೇಶ ಪತ್ರ ತೋರಿಸಲು ಸವಾಲು
ಹಿಂದುಳಿದ ಜಾತಿ ಮತ್ತು ಎಸ್‌ಸಿ/ ಎಸ್‌ಟಿ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡುವುದಾಗಿ ಕಾಂಗ್ರೆಸ್ ಎಲ್ಲಿ ಹೇಳಿದೆ? ಯಾವ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡಿದೆ? ಅದಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶದ ಪತ್ರ ಇದೆಯೇ? ಈ ಎಲ್ಲ ವಿವರವನ್ನು ಪ್ರಧಾನಿಯವರು ದೇಶದ ಮುಂದೆ ಇಡಲಿ ಎಂದು ಸವಾಲು ಹಾಕಿದರು.
ಸಂವಿಧಾನದತ್ತವಾದ ಮೀಸಲಾತಿಯನ್ನು ಮನಬಂದಂತೆ ಬದಲಾವಣೆ ಮಾಡಲು ಸಾಧ್ಯ ಇಲ್ಲ. ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿ ಆಧಾರದಲ್ಲಿ ಮಾತ್ರ ಮೀಸಲಾತಿಯ ಪರಿಷ್ಕರಣೆ ಸಾಧ್ಯ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಯನ್ನು ಪರಿಷ್ಕರಿಸುವ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿಯೂ ಇಲ್ಲ. ಇದಕ್ಕಾಗಿ ಸಂಸತ್‌ನ ಉಭಯ ಸದನಗಳ ಒಪ್ಪಿಗೆಯೊಂದಿಗೆ ಸಂವಿಧಾನ ತಿದ್ದುಪಡಿ ಮಾಡಬೇಕಾಗುತ್ತದೆ. ಇಂತಹದ್ದೊಂದು ಕನಿಷ್ಠ ಜ್ಞಾನ ಒಬ್ಬ ಪ್ರಧಾನಮಂತ್ರಿಗೆ ಇಲ್ಲ ಎಂದಿದ್ದಾರೆ.
ಮೂರು ದಶಕಗಳಿಂದ ಜಾರಿಯಲ್ಲಿದೆ
ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಸ್ಥಾಪಿಸಿದ ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಆಧಾರದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಗಮನಕ್ಕೆ ತೆಗೆದುಕೊಂಡು ಮುಸ್ಲಿಮರನ್ನು ಹಿಂದುಳಿದ ಜಾತಿಗಳ 2ಬಿ ವರ್ಗಕ್ಕೆ ಸೇರಿಸಲಾಗಿದೆ. ಕಳೆದ ಮೂರು ದಶಕಗಳಿಂದ ರಾಜ್ಯದಲ್ಲಿ ಈ ಮೀಸಲಾತಿ ಜಾರಿಯಲ್ಲಿದೆ.
ಕೇಂದ್ರದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವಾಗಲಿ, ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವಾಗಲಿ ಇಲ್ಲಿಯ ವರೆಗೆ ಈ ಮೀಸಲಾತಿಯನ್ನು ಪ್ರಶ್ನಿಸಿಲ್ಲ. ಬಿಜೆಪಿಯೂ ಸೇರಿದಂತೆ ಯಾರೂ ಕೂಡಾ ಇದನ್ನು ನ್ಯಾಯಾಲಯದಲ್ಲೂ ಪ್ರಶ್ನಿಸಿಲ್ಲ. ಈಗ ಚುನಾವಣೆ ಇರುವುದಕ್ಕೆ ಧರ್ಮದ ವಿಚಾರ ಮುಂದಿಟ್ಟುಯಕೊಂಡು ಮತ ಕೇಳುತ್ತಿದ್ದಾರೆ ಎಂದರು.
ಮಾಜಿ ಸಿಎಂ ಬೊಮ್ಮಾಯಿ ಅವರ ಸರ್ಕಾರ ಮೀಸಲಾತಿಯನ್ನು ಅಡ್ಡಾದಿಡ್ಡಿಯಾಗಿ ಪರಿಷ್ಕರಿಸಲು ಹೊರಟು ಸುಪ್ರೀಂ ಕೋರ್ಟಿನಿಂದ ಛೀಮಾರಿಗೆ ಗುರಿಯಾಗಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಮರೆತಂತೆ ಕಾಣುತ್ತಿದೆ. ಮುಸ್ಲಿಮರಿಗೆ ಇದ್ದ ಶೇಕಡಾ ನಾಲ್ಕರ ಮೀಸಲಾತಿಯನ್ನು ರದ್ದು ಮಾಡಿ ಅದನ್ನು ಒಕ್ಕಲಿಗ ಮತ್ತು ಲಿಂಗಾಯತರಿಗೆ ಹಂಚಿರುವ ತೀರ್ಮಾನಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು ಮುಂದಿನ ಆದೇಶದ ವರೆಗೆ ಪರಿಷ್ಕೃತ ಮೀಸಲಾತಿಯನ್ನು ಜಾರಿಗೊಳಿಸಬಾರದೆಂದು ಆದೇಶ ನೀಡಿದೆ. ಇಂತಹದ್ದೊಂದು ಪ್ರಮುಖ ಮಾಹಿತಿ ಕೂಡಾ ಪ್ರಧಾನಮಂತ್ರಿಯವರ ಗಮನದಲ್ಲಿ ಇಲ್ಲದೆ ಇರುವುದು ವಿಷಾದನೀಯ ಎಂದಿದ್ದಾರೆ.
ಕರ್ನಾಟಕದಲ್ಲಿ ಮುಸ್ಲಿಂ ಮೀಸಲಾತಿಯನ್ನು ಜಾರಿಗೊಳಿಸಿದ್ದೇ ನಾನು ಎಂದು ಕೊಚ್ಚಿಕೊಳ್ಳುತ್ತಿದ್ದ ದೇವೇಗೌಡರು ಈಗಲೂ ತಮ್ಮ ನಿಲುವಿಗೆ ಬದ್ಧರಾಗಿದ್ದಾರಾ? ಇಲ್ಲವೇ ನರೇಂದ್ರ ಮೋದಿಯವರಿಗೆ ಶರಣಾಗಿ ತಮ್ಮ ಹಿಂದಿನ ನಿಲುವನ್ನು ಬದಲಾಯಿಸಿಕೊಳ್ಳುತ್ತರಾ? ಎಂದು ದೇವೆಗೌಡರನ್ನು ಕೂಡ ಪ್ರಶ್ನಿಸಿದ್ದಾರೆ.












Click it and Unblock the Notifications