ಎಲ್ಲೆಲ್ಲೂ ಜಾಗತಿಕ ವಿದ್ಯುತ್ ಕೊರತೆಯ ಮಾತು ಏಕೆ?
ಪ್ರತಿಯೊಬ್ಬರ ಬಾಯಲ್ಲೂ ಈಗ ಜಾಗತಿಕ ವಿದ್ಯುತ್ ಕೊರತೆಯದ್ದೇ ಮಾತು. ಹಾಗಾದರೆ ವಿದ್ಯುತ್ ಕೊರತೆ ಉದ್ಭವವಾಗಿದ್ದು ಎಲ್ಲಿ? ಕಾರಣಗಳೇನು ಎಂಬುದನ್ನು ನೋಡೋಣ.
ಯುರೋಪ್‌ನಿಂದ ಏಷ್ಯಾಗೆ ವಿದ್ಯುತ್ ಸರಬರಾಜು ಕಡಿಮೆಯಗುತ್ತಿದೆ. ಇದು ವಿಶ್ವದ ಉತ್ಪಾದಕರ ಪೂರೈಕೆಯ ನಿರ್ಬಂಧಗಳಿಂದ ಉಂಟಾಗಿದೆ ಎಂದೇ ಹೇಳಬಹುದು. ಯುರೋಪ್ನಾದ್ಯಂತ ಕೂಡ ಇಂಧನ ಬಿಕ್ಕಟ್ಟು ತೀವ್ರವಾಗಿ ಕಾಡುತ್ತಿದೆ, ನಿಧಾನ ಗತಿಯ ನೈಸರ್ಗಿಕ ಅನಿಲ ಪೂರೈಕೆ ಮತ್ತು ಹೆಚ್ಚುತ್ತಿರುವ ಬೆಲೆಗಳು ಇದಕ್ಕೆ ಕಾರಣವಾಗಿದೆ.
ಇತ್ತೀಚಿನ ತಿಂಗಳಲ್ಲಿ ವಿಂಡ್ ಟರ್ಬೈನ್ಗಳಿಂದ ವಿದ್ಯುತ್ ಉತ್ಪಾದನೆ ಕಡಿಮೆ ಆಗಿರುವುದರಿಂದ ವಿದ್ಯುತ್ ಪೂರೈಕೆ ಮೇಲೆ ಪರಿಣಾಮ ಆಗಿದೆ. ಈ ಕಾರಣಕ್ಕೆ ಫಾಸಿಲ್ ಫ್ಯುಯೆಲ್ ಮೇಲಿನ ಅವಲಂಬನೆ ಹೆಚ್ಚಾಗಿದೆ. ಬೇಸಿಗೆಯಲ್ಲಿ ವಿದ್ಯುತ್ ಬಳಕೆ ಹೆಚ್ಚಾದಂತೆ, ನೈಸರ್ಗಿಕ ಅನಿಲ ದಾಸ್ತಾನಿನ ಪ್ರಮಾಣ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಚಳಿಗಾಲ ಆರಂಭವಾದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ಯುರೋಪ್ನ ತೀವ್ರ ಚಳಿಗಾಲದಲ್ಲಿ ಮನೆಗಳಲ್ಲಿ ಬೆಚ್ಚಗಿರುವ ಉದ್ದೇಶಕ್ಕೆ ನೈಸರ್ಗಿಕ ಅನಿಲದ ಬೇಡಿಕೆ ಹೆಚ್ಚಾಗುತ್ತದೆ.

ಅಲ್ಲಿ ವಿದ್ಯುತ್ ಕಾರ್ಖಾನೆಗಳನ್ನು ಮುಚ್ಚಲು ಹಾಗೂ ವಿದ್ಯುತ್ ಬಿಲ್‌ಗಳನ್ನು ಹೆಚ್ಚಿಸಲು ಮುಂದಾಗಿದೆ. ಕೊರತೆಗೆ ಒಂದೇ ಒಂದು ಕಾರಣವಿಲ್ಲದಿದ್ದರೂ, ಗ್ರಾಹಕರ ಬೇಡಿಕೆ, ತಾಂತ್ರಿಕ ಸಮಸ್ಯೆಗಳು ಹಾಗೂ ಹೂಡಿಕೆ ಕೊರತೆ ಎಲ್ಲವೂ ಪಾತ್ರವಹಿಸುತ್ತವೆ.
ನೈಸರ್ಗಿಕ ಅನಿಲ ಹಾಗೂ ಕಲ್ಲಿದ್ದಿಲಿನ ಬೆಲೆ ಹಲವು ವರ್ಷಗಳಿಂದ ಗರಿಷ್ಠ ಮಟ್ಟಕ್ಕೆ ಏರಿದೆ. ಚೀನಾವು ಇಷ್ಟೇ ವಿದ್ಯುತ್ ಬಳಕೆ ಮಾಡಬೇಕು ಎಂದು ನಿಯಮ ಮಾಡಿದೆ. ಕೈಗಾರಿಕೆ ಹಬ್ ಎನಿಸಿಕೊಂಡಿರುವ ಗ್ವಾಂಡಾಂಗ್ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿ ಕಡಿಮೆ ವಿದ್ಯುತ್ ಬಳಸುವಂತೆ ಕೈಗಾರಿಕೆಗಳಿಗೆ ಸೂಚಿಸಲಾಗಿದೆ.
ಇದರಿಂದಾಗಿ ಕೈಗಾರಿಕೆಗಳು ಉತ್ಪಾದನೆ ಕಡಿಮೆ ಮಾಡುವಂತಾಗಿದೆ ಮತ್ತು ಕೆಲವು ಕೈಗಾರಿಕೆಗಳು ಅನಿವಾರ್ಯ ಎಂಬಂತೆ ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ನಿಲ್ಲಿಸುವಂತಾಗಿದೆ.
ಏರ್ ಕಂಡೀಷನರ್, ಎಲಿವೇಟರ್ಗಳನ್ನು ಬಳಸದಂತೆ ನಿರ್ಬಂಧ ಹೇರಿರುವುದು ಹಲವು ನಗರಗಳಲ್ಲಿ ಒತ್ತಡದ ಪರಿಸ್ಥಿತಿ ಸೃಷ್ಟಿ ಆಗುವಂತೆ ಮಾಡಿದೆ. ಕಲ್ಲಿದ್ದಲು ಬೆಲೆ ಏರಿಕೆ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಹಾಗೂ ಏರುತ್ತಿರುವ ದರದ ಕಾರಣಕ್ಕೆ ಹಲವು ಕೈಗಾರಿಕೆಗಳು ಉತ್ಪಾದನೆ ಕಡಿಮೆ ಮಾಡಿವೆ ಅಥವಾ ನಿರ್ವಹಣೆಯ ಕಾರಣಕ್ಕೆ ಮುಚ್ಚಿದ್ದು, ಆ ಮೂಲಕ ನಷ್ಟವನ್ನು ಕಡಿಮೆ ಮಾಡಿಕೊಳ್ಳಲು ಯತ್ನಿಸುತ್ತಿವೆ.
ಇದರ ಜತೆಗೆ ರಾಜಕೀಯ ಗುದ್ದಾಟದಿಂದ ಆಸ್ಟ್ರೇಲಿಯಾದಿಂದ ಕಲ್ಲಿದ್ದಲು ಖರೀದಿ ಮಾಡುವುದಕ್ಕೆ ಚೀನಾ ನಿರ್ಬಂಧ ಹೇರಿರುವುದರಿಂದ ಇಂಧನ ಉತ್ಪಾದನೆ ಕಡಿಮೆ ಆಗಲು ಅದು ಸಹ ಕಾರಣ ಆಗಿದೆ. ಇಂಡೋನೇಷ್ಯಾ ಮತ್ತು ಕೊಲಂಬಿಯಾದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಕಲ್ಲಿದ್ದಲು ಗಣಿಗಾರಿಕೆ ಉತ್ಪಾದನೆ ಮೇಲೆ ಪರಿಣಾಮ ಬೀರಿ, ಜಾಗತಿಕ ತಲ್ಲಣಕ್ಕೆ ಕಾರಣ ಆಗಿದೆ.
ಉಳಿದೆಡೆಗಳಲ್ಲಿ ಕೊರೊನಾ ಬಿಕ್ಕಟ್ಟಿನಿಂದ ಕಾರ್ಮಿಕರ ಕೊರತೆ ಎದುರಾಗಿ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಪೂರೈಕೆಗಿಂತ ಬೇಡಿಕೆ ಹೆಚ್ಚಾಗಿರುವುದರಿಂದ ಮುಂಬರುವ ಚಳಿಗಾಲಕ್ಕೆ ಬೆಲೆ ಸ್ಥಿರವಾಗಿರುವ ಸಾಧ್ಯತೆಯನ್ನು ಸೂಚಿಸುತ್ತಿದೆ. ಇತರೆ ತೈಲಬೆಲೆಯಲ್ಲಿನ ಏರಿಕೆಯಿಂದ ಚೀನಾ, ಯುರೋಪ್ ಮಾತ್ರವಲ್ಲ, ಜಗತ್ತಿನಾದ್ಯಂತ ಬಿಕ್ಕಟ್ಟಿಗೆ ಕಾರಣವಾಗಿದೆ.
ಕಳೆದ ಕೆಲವು ವಾರಗಳಲ್ಲಿ ಪೆಟ್ರೋಲಿಯಂ, ಕಲ್ಲಿದ್ದಲು ದರಗಳಲ್ಲಿ ಭಾರೀ ಏರಿಕೆ ಆಗಿವೆ. ಬ್ರೆಂಟ್ ಕಚ್ಚಾ ತೈಲ ಸೋಮವಾರದಂದು ಬ್ಯಾರೆಲ್ಗೆ 80 ಯುಎಸ್ಡಿ ದಾಟಿದೆ. ಜತೆಗೆ ಕಲ್ಲಿದ್ದಲು ಬೆಲೆ 13 ವರ್ಷಗಳಲ್ಲೇ ಗರಿಷ್ಠ ಮಟ್ಟದಲ್ಲಿದೆ. ಚೀನಾ, ಯುರೋಪ್ ಮತ್ತು ಇತರ ಕಡೆಗಳಲ್ಲಿ ಇಂಧನದ ಬೇಡಿಕೆ ಹಾಗೂ ಮೇಲಿಂದ ಮೇಲೆ ಲಾಕ್ಡೌನ್ಗಳು ಮತ್ತು ದೀರ್ಘಾವಧಿಯ ನಿರ್ಬಂಧಗಳನ್ನು ಮುಗಿಸಿ, ಮತ್ತೆ ಆರಂಭ ಆಗಿರುವ ಜನ ಸಂಚಾರದಿಂದ ಬೇಡಿಕೆ ಕುದುರಿಕೊಂಡು, ತೈಲ ಬೆಲೆ ಏರಿಕೆ ಆಗಿದೆ.
2060ರ ಹೊತ್ತಿಗೆ ಕಾರ್ಬನ್ ನ್ಯೂಟ್ರಲ್ ಆಗುವುದಾಗಿ ಚೀನಾ ಸಂಕಲ್ಪ ಮಾಡಿದೆ. 2030ಕ್ಕೂ ಮುನ್ನ ಕಾರ್ಬನ್ ಹೊರಸೂಸುವಿಕೆ ಚೀನಾದಲ್ಲಿ ಗರಿಷ್ಠ ಮಟ್ಟ ತಲುಪಬಹುದು ಎಂದು ನಿರೀಕ್ಷಿಸಲಾಗಿದೆ.
ಈ ಕಾರ್ಬನ್ ಹೊರಸೂಸುವಿಕೆ ಕಡಿಮೆ ಮಾಡಬೇಕು ಎಂದಾದಲ್ಲಿ ಕಲ್ಲಿದ್ದಲು ಬಳಕೆ ಇಳಿಕೆ ಮಾಡಬೇಕು. ಇತರ ಫಾಸಿಲ್ ಫ್ಯುಯೆಲ್ಗಳ ಬಳಕೆಯನ್ನೂ ಕಡಿಮೆ ಮಾಡಬೇಕು. ನೈಸರ್ಗಿಕ ಅನಿಲ ಮತ್ತು ನವೀಕರಿಸಬಹುದಾದ ಇಂಧನದ ಬಳಕೆ ಹೆಚ್ಚಿಸಬೇಕಾಗಿದೆ.
2022ರ ಫೆಬ್ರವರಿಯಲ್ಲಿ ನಡೆಯಲಿರುವ ಒಲಿಂಪಿಕ್ಸ್ಗೂ ಮುಂಚೆ ಬೀಜಿಂಗ್ನಲ್ಲಿ ಮಾಲಿನ್ಯ ತಗ್ಗಿಸಬೇಕು ಎಂಬ ಗುರಿಯನ್ನು ಹಾಕಿಕೊಂಡಿದೆ. ನೈಸರ್ಗಿಕ ಅನಿಲದ ಕೊರತೆಯೊಂದು ಮಾತ್ರ ಈ ಸಮಸ್ಯೆ ಸೃಷ್ಟಿಸಿದೆಯಾ ಅಂತ ನೋಡಿದರೆ, ಹಾಗೇನಿಲ್ಲ. ವಿದ್ಯುತ್ ಉತ್ಪಾದನೆ ಮಾಡುವ ಇತರ ಮೂಲಗಳು ಸಹ ಕಡಿಮೆ ಆಗಿವೆ.
ಚೀನಾದ ದಕ್ಷಿಣ ಭಾಗದಲ್ಲಿ ಜಲವಿದ್ಯುತ್ ಘಟಕಗಳಲ್ಲಿನ ಉತ್ಪಾದನೆ ಕಡಿಮೆ ಆಗಿದೆ. ಇನ್ನು ಯುರೋಪ್ನಲ್ಲಿ ವಿಂಡ್ ಟರ್ಬೈನ್ನಿಂದ ವಿದ್ಯುತ್ ಉತ್ಪಾದನೆ ಸಮರ್ಪಕ ಪ್ರಮಾಣದಲ್ಲಿ ಆಗದಿರುವುದು ಸಹ ವಿದ್ಯುತ್ ಬಿಕ್ಕಟ್ಟು ಸೃಷ್ಟಿಸಿದೆ. ಸಾಮಾನ್ಯ ಬೇಸಿಗೆಗಿಂತ ಹೆಚ್ಚಿನ ಶಾಖವು ದಕ್ಷಿಣ ಚೀನಾದ ಯುನ್ನಾನ್ ಪ್ರಾಂತ್ಯದ ಜಲಾಶಗಳನ್ನು ಬರಿದು ಮಾಡಿದೆ. ಇದರಿಂದ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ.
ಯುರೋಪ್ನಲ್ಲಿ ಹವಾಮಾನ ತಂಪಾಗಿರುವುದರಿಂದ ವಿಂಡ್ ಟರ್ಬೈನ್ನಿಂದ ಉತ್ಪಾದನೆ ಆಗುತ್ತಿಲ್ಲ. ಚೀನಾದ ಉತ್ತರ ಭಾಗದಲ್ಲಿ ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾದನೆಯಲ್ಲಿ ಕಡಿಮೆ ಆಗಿರುವುದು ವಿದ್ಯುತ್ ಕೊರತೆಗೆ ಬಲವಾದ ಕಾರಣವಾಗಿದೆ.
ಜಾಗತಿಕ ಮಟ್ಟದಲ್ಲಿ ಕಲ್ಲಿದ್ದಲು ಬೆಲೆ ಏರಿಕೆ ಆಗಿರುವುದರಿಂದ ಭಾರತದ ದೇಶೀ ಪೂರೈಕೆದಾರ ಕಂಪೆನಿಯಾದ ಕೋಲ್ ಇಂಡಿಯಾದಂಥದ್ದಕ್ಕೆ ವರದಂತೆ ಆಗಿದೆ. ಪ್ರಮುಖ ವಿದೇಶೀ ಮಾರುಕಟ್ಟೆಯಲ್ಲಿನ ಪೂರೈಕೆ ಕೊರತೆ ಹೆಚ್ಚಾಗುತ್ತಿದ್ದಂತೆ ಮತ್ತು ಬೆಲೆ ಹೆಚ್ಚಳ ಆಗುತ್ತಿರುವಂತೆಯೇ ಭಾರತದಲ್ಲಿನ ದೇಶೀಯ ಕಲ್ಲಿದ್ದಲಿಗೆ ಬೇಡಿಕೆ ಕುದುರಿದೆ.
ಕೋಲ್ ಇಂಡಿಯಾ ಮತ್ತು ಇತರ ಉತ್ಪಾದಕರು ಉತ್ಪಾದನೆಯನ್ನು ಹೆಚ್ಚು ಮಾಡಿದ್ದಾರೆ. ಆದರೆ ಈಗಲೂ ಪೂರೈಕೆ ಬಿಗುವಾಗಿದೆ. ಭಾರತದ ಶೇ 70ರಷ್ಟು ವಿದ್ಯುತ್ ಉತ್ಪಾದನೆ ಆಗುವುದು ಕಲ್ಲಿದ್ದಲಿನನಿಂದ. ನೈಸರ್ಗಿಕ ಅನಿಲದ ಪಾಲ ಇದರಲ್ಲಿ ಶೇ 5ರಷ್ಟು ಮಾತ್ರ. ಆದ್ದರಿಂದ ನೈಸರ್ಗಿಕ ಅನಿಲದ ಬೆಲೆ ಏರಿಕೆ ಭಾರತದಲ್ಲಿ ವಿದ್ಯುತ್ ಉತ್ಪಾದನೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.
ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ವಿದ್ಯುತ್ ಕೊರತೆ ಕಾಣಿಸಿಕೊಂಡಿತ್ತು. ಆಗ ವಿದ್ಯುತ್ ಘಟಕಗಳಲ್ಲಿ ಕಲ್ಲಿದ್ದಲು ದಾಸ್ತಾನು ಬಹಳ ಕುಸಿದಿತ್ತು. ಮತ್ತು ಬೇಡಿಕೆ ಶೇ 11ರಷ್ಟು ಹೆಚ್ಚಾಗಿತ್ತು.
ಆದರೆ ವಿದ್ಯುತ್ಗೆ ಹೊರತಾದ ಬಳಕೆಯಿಂದ ಅದನ್ನು ಬೇರೆ ಮಾರ್ಗಕ್ಕೆ ತಿರುಗಿಸಿದ ಮೇಲೆ ಸಮಸ್ಯೆ ಸರಿ ಮಾಡಲಾಯಿತು. ವಿದ್ಯುತ್ ಬೇಡಿಕೆ ಅದರ ಮುಂದಿನ ತಿಂಗಳು ದಾಖಲೆಯ ಎತ್ತರಕ್ಕೆ ಏರಿದೆ.












Click it and Unblock the Notifications