ಬೆಂಗಳೂರು ಏರ್‌ಪೋರ್ಟ್‌ಗೆ ಸತತ 4ನೇ ಬಾರಿಯೂ ವಿಶ್ವದ 'ಅತ್ಯುತ್ತಮ ಏರ್‌ಪೋರ್ಟ್'ಪ್ರಶಸ್ತಿ
ಬೆಂಗಳೂರು: ವಾರ್ಷಿಕ 43.8 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸಿರುವ ಹಾಗೂ 03ನೇ ಟರ್ಮಿನಲ್ ಸ್ಥಾಪನೆಗೆ ಸಜ್ಜಾಗಿರುವ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಜಾಗತಿಕವಾಗಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ದೇಶದ ಜನನಿಬಿಡ ಏರ್‌ಪೋರ್ಟ್‌ಗಳಲ್ಲಿ ಒಂದಾಗಿದ್ದು, ಸತತ ನಾಲ್ಕನೇ ಬಾರಿಗೆ ಕೆಐಎ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
2025ನೇ ಸಾಲಿನ ಎಸಿಐ ಎಎಸ್‌ಕ್ಯೂ ಪ್ರಶಸ್ತಿಗಳ ಜಾಗತಿಕ ಮಟ್ಟದ ಅತ್ಯುತ್ತಮ ಆಗಮನ ಏರ್‌ಪೋರ್ಟ್ 'ಬೆಸ್ಟ್ ಏರ್‌ಪೋರ್ಟ್' ಪ್ರಶಸ್ತಿ ಪಡೆದುಕೊಂಡಿದೆ. ಬೆಂಗಳೂರು ಏರ್‌ಪೋರ್ಟ್‌ನ ಈ ಸಾಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಜಾಗತಿಕ ಗೌರವ ಸಿಕ್ಕಿದ್ದು, ಇದ್ದು ಕರ್ನಾಟಕ ಹೆಮ್ಮೆ ಎಂದು ಕೈಗಾರಿಕೆ ಹಾಗೂ ಮೂಲ ಸೌಕರ್ಯಾಭಿವೃದ್ಧಿ ಸಚಿವ ಎಂಬಿ ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.

ಎಕ್ಸ್ ಪೋಸ್ಟ್ ಮಾಡಿರುವ ಸಚಿವರು ''ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಏರ್ ಪೋರ್ಟ್ಸ್ ಕೌನ್ಸಿಲ್ ಇಂಟರ್ ನ್ಯಾಷನಲ್ (ACI) ನೀಡುವ 'Best Airport on Arrivals' ಪ್ರಶಸ್ತಿಗೆ ಸತತ ನಾಲ್ಕನೇ ವರ್ಷವೂ ಪಾತ್ರವಾಗಿದೆ'' ಎಂದು ಹೇಳಿದರು.
ಬೆಂಗಳೂರು ಏರ್‌ಪೋರ್ಟ್‌ನ ಈ ನಿರಂತರ ಸಾಧನೆ ಬೆಂಗಳೂರಿನ ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಉನ್ನತ ಸೇವಾ ಮಾನದಂಡಗಳ ಪ್ರತಿಬಿಂಬವಾಗಿದೆ. ಈಗಾಗಲೇ ಭಾರತದಲ್ಲಿ 'ಏರೋಸ್ಪೇಸ್ ಮತ್ತು ಡಿಫೆನ್ಸ್ ರಾಜಧಾನಿ' ಎಂದು ಗುರುತಿಸಿಕೊಂಡಿರುವ ಕರ್ನಾಟಕ, ವಿಮಾನಯಾನ ಕ್ಷೇತ್ರದಲ್ಲಿಯೂ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸುತ್ತಿದೆ. ವೇಗವಾಗಿ ಬೆಳೆಯುತ್ತಿರುವ ಅತ್ಯಾಧುನಿಕ ಮೂಲ ಸೌಕರ್ಯಗಳೊಂದಿಗೆ, ಬೆಂಗಳೂರಿನ ವಿಮಾನಯಾನ ಪರಿಸರ ವ್ಯವಸ್ಥೆಯು ಮುಂದಿನ ದಿನಗಳಲ್ಲಿ ಜಾಗತಿಕ ಭೂಪಟದಲ್ಲಿ ಇನ್ನಷ್ಟು ಎತ್ತರಕ್ಕೆ ಏರಲಿರುವುದು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏರ್‌ಪೋರ್ಟ್‌ನಲ್ಲಿ ಅತ್ಯುತ್ತಮ ಟರ್ಮಿನಲ್
ಉದ್ಯಾನ ನಗರಿ ಬೆಂಗಳೂರಿನ ಪರಂಪರೆ ಸಾರುವಂತೆ ಹಸಿರು ಗೋಡೆಗಳಿರುವ ಭವ್ಯ ಮತ್ತು ಬೃಹತ್ ಟರ್ಮಿನಲ್ ಬೆಂಗಳೂರು ಏರ್‌ಪೋರ್ಟ್‌ನಲ್ಲಿದೆ. ಇದು ವಾರ್ಷಿಕ 25-50 ಮಿಲಿಯನ್ ಪ್ರಯಾಣಿರನ್ನು ನಿರ್ವಹಿಸುವ ಶಕ್ತಿ ಹೊಂದಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡುವಂತೆ ವಿಶೇಷ ವಿನ್ಯಾಸದಲ್ಲಿ ಸ್ಥಾಪಿಸಲಾಗಿದೆ. ಫೈಸ್ಟಾರ್ ಸ್ಕೈಟ್ರ್ಯಾಕ್ಸ್ ರೇಟಿಂಗ್ ಪಡೆದ ಅದ್ಭುತ ಟರ್ಮಿನಲ್ ಇದಾಗಿದೆ. ಬರೋಬ್ಬರಿ 2.55 ಲಕ್ಷ ಚದರ ಕಿಲೋ ಮೀಟರ್ ವಿಶಾಲವಾಗಿದೆ. ಪ್ರಯಾಣಿಕಸ್ನೇಹಿ ವಾತಾವರಣ ಇಲ್ಲಿದೆ. ಟರ್ಮಿನಲ್ ಸೌಂದರ್ಯ, ಪ್ರಯಾಣ ಸೇವೆ, ವಿಶೇಷತೆಗಳು, ಕಾರ್ಗೋಸೇವೆ ವಲಯದ ಸಾಧನೆಗೆ ಈ ಹಿಂದೆ ಕೆಐಎ ಹಲವು ಪ್ರಶಸ್ತಿಗಳನ್ನು ಪಡೆದಿದೆ.
ಮೂರನೇ ಟರ್ಮಿನಲ್ ನಿರ್ಮಾಣ ಯಾವಾಗ?
ಭವಿಷ್ಯದ ದೃಷ್ಟಿಯಿಂದ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಮೂರನೇ ಟರ್ಮಿನಲ್ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಹೆಚ್ಚುತ್ತಿರುವ ಪ್ರಯಾಣಿಕ ದಟ್ಟಣೆಗೆ ಅನುಗುಣವಾಗಿ ಸೇವಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಚಿಂತನೆ ನಡೆಸಿದೆ. 2030ರ ವೇಳೆಗೆ ಕಾಮಗಾರಿ ಆರಂಭವಾಗಿ 2044ರ ಹೊತ್ತಿಗೆ ಪೂರ್ಣಗೊಳ್ಳಲಿದೆ. ಆಗ 144 ಮಿಲಿಯನ್ ಪ್ರಯಾಣಿಕರ ಸಂಚಾರ ನಡೆಸಬಹುದೆಂದು ಅಂದಾಜಿಸಲಾಗಿದೆ. ಸದ್ಯ ಎಲ್ಲವು ಯೋಜನೆಯ ಆರಂಭಿಕ ಹಂತದಲ್ಲಿದ್ದು, ಟೆಂಡರ್, ವಿನ್ಯಾಸ, ಕಾಮಗಾರಿ ಆರಂಭದ ಇನ್ನಷ್ಟು ಮಾಹಿತಿ ದೊರೆಯಬೇಕಿದೆ.












Click it and Unblock the Notifications