Bengaluru: ಬೆಂಗಳೂರಿನ ಪ್ರಮುಖ ಕಾಮಗಾರಿಗಳಿಗೆ ಡೆಡ್‌ಲೈನ್ ನಿಗದಿ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್
ಬೆಂಗಳೂರು: ಬೆಂಗಳೂರಿನ ವಿವಿಧ ಪ್ರಮುಖ ಕಾಮಗಾರಿಗಳಿಗೆ ಬೆಂಗಳೂರು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಡೆಡ್‌ಲೈನ್ ನಿಗದಿ ಮಾಡಿದ್ದಾರೆ. ಅಲ್ಲದೆ ಮುಂದಿನ ಹಣಕಾಸು ವರ್ಷದಿಂದ ರಿಜಿಸ್ಟರ್‌ಗಳನ್ನು ಹಸ್ತಚಾಲಿತ ಪದ್ಧತಿಯ ಬದಲು ಆನ್‌ಲೈನ್ ವ್ಯವಸ್ಥೆಗೆ ಬದಲಾಯಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರಿನ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಂದಿನ ಹಣಕಾಸು ವರ್ಷದಿಂದ ರಿಜಿಸ್ಟರ್‌ಗಳನ್ನು ಹಸ್ತಚಾಲಿತ ಪದ್ಧತಿಯ ಬದಲು ಆನ್‌ಲೈನ್ ವ್ಯವಸ್ಥೆಗೆ ಬದಲಾಯಿಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುರುವಾರ ರಾಜರಾಜೇಶ್ವರಿ ನಗರ ವಲಯ ಕಚೇರಿಗೆ ಭೇಟಿ ನೀಡಿದ ಅವರು, ಜಾಬ್ ಕೋಡ್ ಹಾಗೂ ತಾಂತ್ರಿಕ ಅನುಮೋದನೆಗೆ ಸಂಬಂಧಿಸಿದ ರಿಜಿಸ್ಟರ್ ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ರಿಜಿಸ್ಟರ್‌ಗಳನ್ನು ಇನ್ನೂ ಹಸ್ತಚಾಲಿತವಾಗಿ ನಿರ್ವಹಿಸುತ್ತಿರುವುದನ್ನು ಗಮನಿಸಿ, ಮುಂದಿನ ಹಣಕಾಸು ವರ್ಷದಿಂದ ಅವುಗಳನ್ನು ಆನ್‌ಲೈನ್ ವ್ಯವಸ್ಥೆಗೆ ಬದಲಾಯಿಸುವಂತೆ ಸೂಚಿಸಿದ್ದಾರೆ.'

ಆರ್.ಆರ್. ನಗರ ವಲಯ ಕಚೇರಿಯ ಮೂರನೇ ಮಹಡಿಯಲ್ಲಿ ಹೆಚ್ಚುವರಿ ಕಚೇರಿಗಳನ್ನು ನಿರ್ಮಿಸಲಾಗುತ್ತಿದ್ದು, ಆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ತಿಳಿಸಿದರು. ಜೊತೆಗೆ ಕಚೇರಿ ಆವರಣದಲ್ಲಿ ಸಂಪೂರ್ಣ ಸ್ವಚ್ಛತೆಯನ್ನು ಕಾಪಾಡಿಕೊಂಡು, ಕಚೇರಿ ಸೌಂದರ್ಯವಾಗಿ ಕಾಣುವಂತೆ ನಿರ್ವಹಣೆ ಮಾಡಲು ಸೂಚನೆ ನೀಡಿದರು. ವಲಯ ಕಚೇರಿಯಲ್ಲಿರುವ ಸಭಾಂಗಣವನ್ನು ಪರಿಶೀಲಿಸಿದ ಅವರು, ಸಭಾಂಗಣದ ನವೀಕರಣ ಕಾರ್ಯ ಕೈಗೊಂಡು ಅದನ್ನು ಮೇಲ್ದರ್ಜೆಗೆ ತರುವಂತೆ ಸೂಚಿಸಿದರು. ಕಾರಿಡಾರ್‌ಗಳಲ್ಲಿ ಇಡಲಾಗಿರುವ ಪೆಟ್ಟಿಗೆ(ಬೀರುಗಳನ್ನು)ಗಳನ್ನು ತೆರವುಗೊಳಿಸಲು ಸಹ ಸೂಚನೆ ನೀಡಿದ್ದಾರೆ.
ಶಂಕರ ಮಠ ವೃತ್ತ ಅಭಿವೃದ್ಧಿಗೆ ನಿರ್ದೇಶನ
ಮಹಾಲಕ್ಷ್ಮಿ ಬಡಾವಣೆಯ ಶಂಕರ ಮಠ ರಸ್ತೆಯಲ್ಲಿ ನಡೆದಿರುವ ಡಾಂಬರೀಕರಣ ಕಾಮಗಾರಿಯನ್ನು ಪರಿಶೀಲಿಸಿದರು. ಇದೇ ವೇಳೆ ಶಂಕರ ಮಠ ವೃತ್ತವನ್ನು ವೀಕ್ಷಿಸಿ, ಮೋದಿ ಆಸ್ಪತ್ರೆ ರಸ್ತೆಯಿಂದ ಬಸವೇಶ್ವರ ಮುಖ್ಯ ರಸ್ತೆಯ ಕಡೆಗೆ ಹಾಗೂ ಕುರುಬರಹಳ್ಳಿ ರಸ್ತೆಯಿಂದ ಶಂಕರ ಮಠ ರಸ್ತೆಗೆ ಫ್ರೀ ಲೆಫ್ಟ್ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸುವಂತೆ ಸೂಚಿಸಿದರು. ಈ ಸಂಬಂಧ ಅರ್ಬನ್ ಪ್ಲಾನರ್‌ಗಳ ಮೂಲಕ ವಿನ್ಯಾಸ ರೂಪಿಸಿ, ವೃತ್ತದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಡಾ. ರಾಜ್‌ಕುಮಾರ್ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ
ಬೆಂಗಳೂರಿನ ಡಾ. ರಾಜ್ ಕುಮಾರ್ ರಸ್ತೆಯಲ್ಲಿ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ ನಡೆಸಿದರು. ನವರಂಗ್ ಚಿತ್ರಮಂದಿರದಿಂದ ರಾಜಾಜಿನಗರ 10ನೇ ಕ್ರಾಸ್ ವರೆಗಿನ 700 ಉದ್ದದ ರಸ್ತೆಯ ಪೈಕಿ ಒಂದು ಭಾಗದ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ, ವಾಹನಗಳ ಸಂಚಾರಕ್ಕೆ ಅನುವು ಮಾಡಲಾಗಿದೆ. ಮತ್ತೊಂದು ಭಾಗದ ರಸ್ತೆಯನ್ನು ಮಾರ್ಚ್ 31ರ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಮುಖ್ಯ ಎಂಜಿನಿಯರು ಮಾಹಿತಿ ನೀಡಿದ್ದಾರೆ.
ನವರಂಗ್ ನಿಂದ ಸ್ಟಾರ್ ಬಜಾರ್ ಸಿಗ್ನಲ್ ವರೆಗೆ 1.8 ಕಿ.ಮೀ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಒಂದು ಭಾಗದಲ್ಲಿ ಈಗಾಗಲೇ ಯುಟಿಲಿಟಿ ಕೆಲಸ ಪೂರ್ಣಗೊಂಡಿದ್ದು, ವೈಟ್ ಟಾಪಿಂಗ್ ಕಾಮಗಾರಿ ಇಂದಿನಿಂದ ಪ್ರಾರಂಭವಾಗಲಿದೆ. ಪ್ರಗತಿಯಲ್ಲಿರುವ ಒಂದು ಭಾಗದ ಕಾಮಗಾರಿಯನ್ನು ಜುಲೈ ಅಂತ್ಯದೊಳಗಾಗಿ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ. ವಿವಿಧ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ನಿರ್ದೇಶನ ನೀಡಿದ್ದಾರೆ.
ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ ಅವರು ಮಾತನಾಡಿ, ಕುರುಬರಹಳ್ಳಿ ಮುಖ್ಯ ರಸ್ತೆ ಕಿರಿದಾಗಿರುವುದರಿಂದ ಅದನ್ನು ಅಗಲೀಕರಣ ಮಾಡಿದರೆ ಈ ಭಾಗದಲ್ಲಿನ ಬಹುತೇಕ ಸಂಚಾರ ದಟ್ಟಣೆ ನಿವಾರಣೆಯಾಗಲಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಅಗಲೀಕರಣದ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ.
ಪರಿಶೀಲನೆ ವೇಳೆಯ ಇತರೆ ಪ್ರಮುಖ ಅಂಶಗಳು
1. ನಾಗಪುರ ಪೈಪ್‌ಲೈನ್ ಪಾರ್ಕ್‌ನಲ್ಲಿ ಎಲೆ ಸಂಸ್ಕರಣ ಘಟಕವನ್ನು ಅಳವಡಿಸುವುದು
2. ನಾಗಪುರ ದ್ವಿತೀಯ ಹಂತದ ಸಂಗ್ರಹಣೆ ಹಾಗೂ ಸಾಗಾಣಿಕೆ ಕೇಂದ್ರಕ್ಕೆ ಭೇಟಿ ನೀಡಿ, ಅದನ್ನು ಸುಸಜ್ಜಿತವಾಗಿ ಅಭಿವೃದ್ಧಿಪಡಿಸುವಂತೆ ಸೂಚನೆ
3. ಮಹಾಲಕ್ಷ್ಮಿ ಲೇಔಟ್ ಮುಖ್ಯ ರಸ್ತೆಯ ವೈಟ್‌ಟಾಪಿಂಗ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚನೆ
4. ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಕೂಡಲೆ ಜೆಟ್ ಪ್ಯಾಚರ್ ಯಂತ್ರವನ್ನು ಖರೀದಿಸಲು ಸೂಚನೆ
ಈ ಸಂದರ್ಭದಲ್ಲಿ ಪಶ್ಚಿಮ ನಗರ ಪಾಲಿಕೆ ಅಭಿವೃದ್ಧಿ ಹೆಚ್ಚುವರಿ ಆಯುಕ್ತರಾದ ದಿಗ್ವಿಜಯ್ ಬೋಡ್ಕೆ, ಜಂಟಿ ಆಯುಕ್ತರಾದ ಆರತಿ ಆನಂದ್, ಮುಖ್ಯ ಎಂಜಿನಿಯರರಾದ ಸ್ವಯಂಪ್ರಭಾ, ಡಾ. ರಾಘವೇಂದ್ರ ಪ್ರಸಾದ್ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.












Click it and Unblock the Notifications