Rahul Gandhi: ಅಣ್ಣ ಕ್ಷೇತ್ರ ಮರುವಿಂಗಡಣೆ ಮಸೂದೆ ವಿರೋಧಿ ಪ್ಲೀಸ್ ಎಂದ ರಾಹುಲ್‌ಗೆ ಸ್ಟಾಲಿನ್ ತಿರುಗೇಟು!
ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ವಿಚಾರವು ದೇಶದಲ್ಲಿ ಹಲವು ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗಿದೆ. ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷ ಅಧಿಕಾರಕ್ಕೆ ಬರುವುದಕ್ಕೂ ಮೊದಲು / ಕಾಂಗ್ರೆಸ್ ಪಕ್ಷವು ಟಿವಿಕೆಗೆ ಬೆಂಬಲ ಸೂಚಿಸುವ ವರೆಗೂ ಕಾಂಗ್ರೆಸ್ ಹಾಗೂ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ (ಡಿಎಂಕೆ) ಎರಡೂ ಪಕ್ಷಗಳು ಸಹೋದರರಂತೆ ಇದ್ದರು. ಒಂದು ಕಾಲದಲ್ಲಿ ಕಾಂಗ್ರೆಸ್ ನಾಯಕ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರನ್ನು ಅಣ್ಣ ಎಂದು ಕರೆಯುತ್ತಿದ್ದರು.
ಇಬ್ಬರೂ ಸಹೋದರರಂತೆ ಜೊತೆಯಾಗಿದ್ದರು. ಆದರೆ, ಯಾವಾಗ ತಮಿಳುನಾಡಿನಲ್ಲಿ ಅಧಿಕಾರ ಹಸ್ತಾಂತರವಾಯಿತೋ ಆಗಲಿಂದ ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಮೈತ್ರಿಗೆ ತಿಲಾಂಜಲಿ ಆಗಿದೆ. ಒಂದುಕಾಲದ ಅಣ್ಣ ಈಗ ಸೀಮೆಸುಣ್ಣ ಎನ್ನುವಂತೆ ಇಬ್ಬರ ನಡುವೆ ಸಂಬಂಧ ಹಳಸಿದೆ. ಆದರೆ, ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿಚಾರದಲ್ಲಿ ಡಿಎಂಕೆ ನಿಲುವು ಕಾಂಗ್ರೆಸ್ ಪಕ್ಷಕ್ಕೆ ಬಿಸಿ ತುಪ್ಪವಾಗಿ ಬದಲಾಗಿದೆ.

ಇದೀಗ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ರಾಹುಲ್ ಗಾಂಧಿ ಹಾಗೂ ಎಂ.ಕೆ ಸ್ಟಾಲಿನ್ ಅವರ ಟ್ವೀಟ್‌ಗಳು ಗಮನ ಸೆಳೆದಿವೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರು, ಇಂಡಿಯಾ ಮೈತ್ರಿಕೂಟದ ಹಿರಿಯ ನಾಯಕರು ಮತ್ತು ನಾನು ಚೆನ್ನೈಗೆ ತಿರು ಎಂ.ಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಲು ಹೋಗುತ್ತಿದ್ದೇವೆ.
ಈ ಸಂದರ್ಭದಲ್ಲಿ ಅವರನ್ನು ಮತ್ತು DMK ಪಕ್ಷದವರನ್ನು ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಸಾಂವಿಧಾನಿಕ ತಿದ್ದುಪಡಿ ಮಸೂದೆಗಳನ್ನು ವಿರೋಧಿಸುವಂತೆ ವಿನಂತಿಸುತ್ತೇವೆ. 850 ಸ್ಥಾನಗಳಿಗೆ ವಿಸ್ತರಣೆಯು ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಕೊನೆಗೊಳಿಸುತ್ತದೆ. ಇದು ಭಾರತದ ಸಂಪೂರ್ಣ ಚುನಾವಣಾ ನಕ್ಷೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮರುರೂಪಿಸಲು ಬಿಜೆಪಿ-ಆರ್‌ಎಸ್‌ಎಸ್‌ಗೆ ಅಪರಿಮಿತ ಅವಕಾಶವನ್ನು ನೀಡುತ್ತದೆ.
ಸಹೋದರ ಸ್ಟಾಲಿನ್ ಯಾವಾಗಲೂ ತಮಿಳು ವಿರೋಧಿ ಶಕ್ತಿಗಳ ವಿರುದ್ಧ ಬಂಡೆಯಂತೆ ನಿಂತಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಯಲ್ಲಿ, ತಮಿಳುನಾಡಿನ ಹಿತಾಸಕ್ತಿಯಲ್ಲಿ ಮತ್ತು ಸಂವಿಧಾನವನ್ನು ರಕ್ಷಿಸಲು, ನಾವು ಈ ಮಸೂದೆಯನ್ನು ಒಟ್ಟಾಗಿ ಸೋಲಿಸಬೇಕು ಎಂದಿದ್ದಾರೆ. ಇನ್ನು ರಾಹುಲ್ ಗಾಂಧಿ ಅವರ ಟ್ವೀಟ್‌ಗೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ರಾಜ್ಯಾಧ್ಯಕ್ಷ ಎಂ.ಕೆ ಸ್ಟಾಲಿನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
Rahul Gandhi: ರಾಹುಲ್ ಗಾಂಧಿ ಟ್ವೀಟ್‌ಗೆ ಎಂ.ಕೆ ಸ್ಟಾಲಿನ್ ಪ್ರತಿಕ್ರಿಯೆ ಹೇಗಿದೆ ?
ಇನ್ನು ರಾಹುಲ್ ಗಾಂಧಿ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಎಂ.ಕೆ ಸ್ಟಾಲಿನ್ ಅವರು, ಸಂವಿಧಾನ ಮತ್ತು ರಾಜ್ಯಗಳ ಹಕ್ಕುಗಳನ್ನು ರಕ್ಷಿಸುವಲ್ಲಿ ಡಿಎಂಕೆಯ ಐತಿಹಾಸಿಕ ಪಾತ್ರವನ್ನು ಗುರುತಿಸಿದ್ದಕ್ಕಾಗಿ ಸಹೋದರ ರಾಹುಲ್ ಗಾಂಧಿ ಅವರಿಗೆ ನನ್ನ ಪ್ರಾಮಾಣಿಕ ಧನ್ಯವಾದಗಳು. ತಮಿಳುನಾಡು ಮತ್ತು ನಮ್ಮ ತಮಿಳು ಜನರ ಹಿತಾಸಕ್ತಿಗಳನ್ನು ಪ್ರಮುಖವಾಗಿಟ್ಟುಕೊಂಡು ನಾವು ಯಾವಾಗಲೂ ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಂಡಿದ್ದೇವೆ.
ನಾವು ಈ ಹಾದಿಯಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಇತಿಹಾಸ ನಮ್ಮನ್ನು ದ್ರೋಹಿಗಳಾದ ಎಟ್ಟಪ್ಪನಂತೆ ಅಲ್ಲ, ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಕಟ್ಟಬೊಮ್ಮನಂತೆ ನೆನಪಿಸಿಕೊಳ್ಳುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಎಂ.ಕೆ ಸ್ಟಾಲಿನ್ ಅವರು ಹೇಳಿದ್ದಾರೆ.





Click it and Unblock the Notifications
