ವೈಭವ್ ಸೂರ್ಯವಂಶಿ ಟೆಸ್ಟ್ ಕ್ರಿಕೆಟ್‌ಗೆ ಬಂದ್ರೆ ಅದರ ಕಥೆನೇ ಬೇರೆ: ಇಂಗ್ಲೆಂಡ್ ಮಾಜಿ ಸ್ಟಾರ್ ಕ್ರಿಕೆಟರ್ ಹೀಗ್ ಹೇಳಿದ್ಯಾಕೆ?
Vaibhav Sooryavanshi: ಟೀಮ್ ಇಂಡಿಯಾ ಕ್ರಿಕೆಟ್‌ನ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಲಿದ್ದಾರೆ. ಇದೀಗ ಈ ಎಡಗೈ ಬ್ಯಾಟರ್ ಬಗ್ಗೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಅಲಸ್ಟೇರ್ ಕುಕ್ ಮಹತ್ವದ ಹೇಳಿಕೆ ನೀಡಿದ್ದಾರೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಅಸಾಧಾರಣ ಪ್ರತಿಭೆಗೆ ಮನಸೋತಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಅಲಸ್ಟೇರ್ ಕುಕ್, ವೈಭವ್ ಅವರು ವೈಟ್-ಬಾಲ್ ಕ್ರಿಕೆಟ್‌ನಂತೆ ಟೆಸ್ಟ್ ಕ್ರಿಕೆಟ್‌ನಲ್ಲೂ ದೊಡ್ಡ ಮಟ್ಟದ ಪ್ರಭಾವ ಬೀರಬೇಕೆಂದು ಆಶಿಸಿದ್ದಾರೆ. ಪಿಟಿಐ ಜೊತೆ ಮಾತನಾಡಿದ ಕುಕ್, ತಮ್ಮ ಜೀವಮಾನದಲ್ಲಿ ಇಂತಹ ಕೌಶಲ ಹೊಂದಿರುವ ಆಟಗಾರನನ್ನು ಕಂಡಿಲ್ಲ ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಕುಕ್ ಮೆಚ್ಚುಗೆ
ಕೇವಲ 15ನೇ ವಯಸ್ಸಿನಲ್ಲೇ ಐಪಿಎಲ್, ಲಿಸ್ಟ್-ಎ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ವೈಭವ್ ಸೂರ್ಯವಂಶಿ, ಇತ್ತೀಚೆಗೆ ಲಿಸ್ಟ್-ಎ ಕ್ರಿಕೆಟ್‌ನಲ್ಲಿ 52 ಎಸೆತಗಳಲ್ಲಿ ದ್ವಿಶತಕ ಸಿಡಿಸಿ 28 ಸಿಕ್ಸರ್‌ಗಳ ಮೂಲಕ ಗಮನ ಸೆಳೆದಿದ್ದರು. ಬ್ಯಾಟರ್‌ಗಳು ಸಾಮಾನ್ಯವಾಗಿ ತಮಗೆ ಇಷ್ಟವಾದ ನಿರ್ದಿಷ್ಟ ಜಾಗಕ್ಕೆ ಚೆಂಡು ಬರುವುದನ್ನು ಕಾಯುತ್ತಾರೆ. ಆದರೆ ವೈಭವ್ ಅವರು ಚೆಂಡಿನ ಲೈನ್ ಮತ್ತು ವೇಗಕ್ಕೆ ತಕ್ಕಂತೆ ತಕ್ಷಣ ಹೊಂದಿಕೊಂಡು ನಿರಂತರವಾಗಿ ಸಿಕ್ಸರ್ ಸಿಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಐಪಿಎಲ್‌ನಂತಹ ಅತಿದೊಡ್ಡ ಲೀಗ್‌ನಲ್ಲಿ ಅವರು ಮಾಡಿರುವ ಸಾಧನೆ ನಂಬಲಾಗದಷ್ಟು ಅದ್ಭುತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಟೆಸ್ಟ್ ಕ್ರಿಕೆಟ್‌ಗೆ ವೈಭವ್ ಸೂರ್ಯವಂಶಿಯಂತಹ ಆಟಗಾರನ ಆಗತ್ಯವಿದೆ'
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ವೈಭವ್ ತೋರುತ್ತಿರುವ ಆಕ್ರಮಣಕಾರಿ ಆಟವನ್ನು ಟೆಸ್ಟ್ ಸ್ವರೂಪದಲ್ಲೂ ನೋಡಲು ಕುಕ್ ಉತ್ಸುಕರಾಗಿದ್ದಾರೆ. ಪ್ರತಿಯೊಂದು ಪೀಳಿಗೆಗೂ ಸ್ಫೂರ್ತಿ ನೀಡುವ ಹಾಗೂ ಮಕ್ಕಳು ಅನುಸರಿಸುವಂತಹ ಆಟಗಾರನ ಅಗತ್ಯ ಕ್ರಿಕೆಟ್‌ಗಿದೆ ಎಂದಿರುವ ಅವರು, ವೈಭವ್ ಟೆಸ್ಟ್ ಕ್ರಿಕೆಟ್‌ನಲ್ಲೂ ಪ್ರಯತ್ನಿಸಬೇಕು. ಎಲ್ಲಾ ಬಾರಿಯೂ ಯಶಸ್ಸು ಸಿಗದಿದ್ದರೂ ಪರವಾಗಿಲ್ಲ, ಧೈರ್ಯವಾಗಿ ಆಡುವ ಆಟಗಾರರು ರೆಡ್-ಬಾಲ್ ಕ್ರಿಕೆಟ್‌ಗೆ ಅಗತ್ಯವಿದ್ದಾರೆ,' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಸ್ವರೂಪಗಳಲ್ಲೂ ಭಾರತವೇ ನಂಬರ್-1 ಎಂದ ಕುಕ್
'ಆಧುನಿಕ ಕ್ರಿಕೆಟ್‌ನಲ್ಲಿ ಎಲ್ಲಾ ಸ್ವರೂಪಗಳಲ್ಲೂ ಸಮಾನವಾಗಿ ಯಶಸ್ಸು ಕಾಣುವುದು ಸುಲಭವಲ್ಲ. ಏಕೆಂದರೆ ಟಿ20 ಕ್ರಿಕೆಟ್‌ಗೆ ಬೇಕಾದ ಕೌಶಲಗಳಿಗೂ ಟೆಸ್ಟ್ ಕ್ರಿಕೆಟ್‌ಗೆ ಬೇಕಾದ ಕೌಶಲಗಳಿಗೂ ದೊಡ್ಡ ಅಂತರವಿದೆ. ಆದರೂ, ಟೆಸ್ಟ್ ಸವಾಲನ್ನು ಸ್ವೀಕರಿಸಿ ಯಶಸ್ವಿಯಾದರೆ ವೈಭವ್ ಸ್ಮರಣೀಯ ಸಾಧನೆ ಮಾಡಬಹುದು,' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. 'ಇದೇ ಸಂದರ್ಭದಲ್ಲಿ ಭಾರತದಲ್ಲಿರುವ ಅಪಾರ ಪ್ರತಿಭೆ ಮತ್ತು ಆಟಗಾರರ ಸಂಖ್ಯೆಯ ಬಲದಿಂದಾಗಿ, ಪ್ರಸ್ತುತ ಎಲ್ಲಾ ಸ್ವರೂಪಗಳಲ್ಲೂ ಭಾರತವೇ ನಂಬರ್-1 ತಂಡ,' ಎಂದು ಕುಕ್ ಶ್ಲಾಘಿಸಿದ್ದಾರೆ.
ಒಟ್ಟಿನಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ವೇಗದ ಬ್ಯಾಟಿಂಗ್ ಮತ್ತು ನಿರ್ಭೀತ ಆಟವು ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. ಮುಂದಿನ ದಿನಗಳಲ್ಲಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲೂ ತಮ್ಮ ಛಾಪು ಮೂಡಿಸಲಿ ಎಂಬುದು ಅಲಸ್ಟೇರ್ ಕುಕ್ ಅವರ ಹಾರೈಕೆಯಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ಸದ್ಯ ಬಾಲಕ ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಮಿಂಚುತ್ತಿದ್ದು, ಇವರ ಆಟಕ್ಕೆ ದಿಗ್ಗಜರಿಂದ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ. ಹಾಗೆಯೇ ಇದೀಗ ಕುಕು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ಭಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.


Click it and Unblock the Notifications
