ಬೆಂಗಳೂರಿನಲ್ಲಿ ಇಂದು ದಿಲ್ಜಿತ್ ದೋಸಾಂಜ್ ಮ್ಯೂಸಿಕ್ ಕಾನ್ಸರ್ಟ್, 15 ಸಾವಿರವರೆಗೂ ಟಿಕೆಟ್ ದರ! ಸಂಜೆ ಈ ರಸ್ತೆಗಳಲ್ಲಿ ಟ್ರಾಫಿಕ
ಬೆಂಗಳೂರು ಮಂದಿಗೆ ಇವತ್ತು ಸಂಗೀತದ ಹಬ್ಬ! ಪಂಜಾಬಿ ಹಾಡುಗಳ ಮೂಲಕವೇ ದೇಶಾದ್ಯಂತ ಅಭಿಮಾನಿಗಳನ್ನು ಹುಚ್ಚೆಬ್ಬಿಸಿರುವ ಖ್ಯಾತ ಗಾಯಕ ದಿಲ್ಜಿತ್ ದೋಸಾಂಜ್ ಇಂದು ಸಿಲಿಕಾನ್ ಸಿಟಿಯಲ್ಲಿ ಅಬ್ಬರಿಸಲಿದ್ದಾರೆ. ದಿಲ್ಜಿತ್ ಅವರ ಲೈವ್ ಕಾನ್ಸರ್ಟ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅದರಲ್ಲೂ ಅವರ ಹಾಡುಗಳಿಗೆ ಹೆಜ್ಜೆ ಹಾಕಲು, ನೆಚ್ಚಿನ ಗಾಯಕನನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಸಜ್ಜಾಗಿದ್ದಾರೆ. ಇಂದು ಸಂಜೆ ಬೆಂಗಳೂರಿನಲ್ಲಿ ಮ್ಯೂಸಿಕ್ ಕ್ರೇಜ್ ಜೊತೆಗೆ ಟ್ರಾಫಿಕ್ ಜಾಮ್ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಎಲ್ಲಿ ನಡೆಯಲಿದೆ ದಿಲ್ಜಿತ್ ಕಾನ್ಸರ್ಟ್?
ದಿಲ್ಜಿತ್ ದೋಸಾಂಜ್ ಅವರ 'ರೂಪೇ ಔರಾ ಇಂಡಿಯಾ ಟೂರ್ 2026' (RuPay AURA India Tour 2026) ಭಾಗವಾಗಿ ಬೆಂಗಳೂರಿನಲ್ಲಿ ಈ ಕಾನ್ಸರ್ಟ್ ನಡೆಯುತ್ತಿದೆ. ಮಾದಾವರದಲ್ಲಿರುವ NICE ಗ್ರೌಂಡ್ಸ್‌ನಲ್ಲಿ ಇಂದು (ನವೆಂಬರ್ 29) ಕಾನ್ಸರ್ಟ್ ಆಯೋಜಿಸಲಾಗಿದೆ. ಬೆಂಗಳೂರು ಇಂಟರ್‌ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ (BIEC) ಸಮೀಪದಲ್ಲೇ ಈ ಸ್ಥಳವಿದೆ. ಬುಕ್‌ಮೈಶೋದಲ್ಲಿ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಕಾರ್ಯಕ್ರಮ ಮಧ್ಯಾಹ್ನ 3 ಗಂಟೆಯಿಂದ ಆರಂಭವಾಗಲಿದ್ದು, ಸುಮಾರು ಏಳು ಗಂಟೆಗಳ ಕಾಲ ನಡೆಯಲಿದೆ. ಟಿಕೆಟ್ ದರ 4,899 ರೂಪಾಯಿಯಿಂದ ಆರಂಭವಾಗುತ್ತಿದೆ. ೧೫ ಸಾವಿರದವರೆಗೂ ದರ ನಿಗದಿಯಾಗಿದೆ. ಐದು ವರ್ಷ ಮೇಲ್ಪಟ್ಟವರಿಗೆ ಪ್ರವೇಶವಿದೆಯಂತೆ.

ದಿಲ್ಜಿತ್ ನೋಡಲು ತುದಿಗಾಲಲ್ಲಿ ನಿಂತಿರುವ ಅಭಿಮಾನಿಗಳು
ದಿಲ್ಜಿತ್ ದೋಸಾಂಜ್ ಎಂದರೆ ಬರೀ ಹಾಡುಗಳಲ್ಲ, ಅದೊಂದು ಎನರ್ಜಿ! ಅವರ ಕಾನ್ಸರ್ಟ್‌ನಲ್ಲಿ ಅಭಿಮಾನಿಗಳು ಸುಮ್ಮನೆ ಕುಳಿತು ಹಾಡು ಕೇಳುವುದಿಲ್ಲ. ಹಾಡಿನ ಲಯಕ್ಕೆ ತಕ್ಕಂತೆ ಕುಣಿಯುತ್ತಾರೆ, ಕಿರುಚುತ್ತಾರೆ, ನೆಚ್ಚಿನ ಸಾಲುಗಳನ್ನು ಒಟ್ಟಿಗೆ ಹಾಡುತ್ತಾರೆ. ಅದರಲ್ಲೂ ಪಂಜಾಬಿ ಭಾಂಗ್ರಾ ಬೀಟ್ಸ್ ಶುರುವಾದರೆ ಸಾಕು, ಇಡೀ ವೇದಿಕೆಯೇ ಕುಣಿಯಲು ಶುರು ಮಾಡುತ್ತದೆ. ದಿಲ್ಜಿತ್ ಅವರ ಹಾಡುಗಳಿಗೆ ಭಾಷೆಯ ಗಡಿ ಇಲ್ಲ. ಪಂಜಾಬಿ ಅರ್ಥವಾಗದವರೂ ಅವರ ಹಾಡುಗಳ ಬೀಟ್‌ಗೆ ಫಿದಾ ಆಗುತ್ತಾರೆ. ಅವರ ಸ್ಟೈಲ್, ಡ್ರೆಸ್ಸಿಂಗ್, ವೇದಿಕೆ ಮೇಲಿನ ನಗು, ಅಭಿಮಾನಿಗಳ ಜೊತೆಗಿನ ಮಾತುಕತೆ ಎಲ್ಲವೂ ಕಾನ್ಸರ್ಟ್‌ಗೆ ವಿಶೇಷ ಮೆರುಗು ನೀಡುತ್ತದೆ.
ವೆಂಬ್ಲಿ ಸ್ಟೇಡಿಯಂನಲ್ಲಿ ಹೌಸ್‌ಫುಲ್ ಶೋ ನೀಡಿದ ದಿಲ್ಜಿತ್
ಇತ್ತೀಚೆಗೆ ಲಂಡನ್‌ನ ವೆಂಬ್ಲಿ ಸ್ಟೇಡಿಯಂನಲ್ಲೂ ದಿಲ್ಜಿತ್ ಅದ್ಧೂರಿ ಪ್ರದರ್ಶನ ನೀಡಿದ್ದರು. ಕೇವಲ ೪೮ ಗಂಟೆಗಳಲ್ಲಿ ಟಿಕೆಟ್ ಸೋಲ್ಡೌಟ್ ಆಗಿತ್ತು. 92 ಸಾವಿರದಷ್ಟು ಜನ ಈ ಕ್ರೇಜಿ ಮ್ಯೂಸಿಕ್ ನೈಟ್‌ನಲ್ಲಿ ಭಾಗಿಯಾಗಿದ್ದರು. ಒಂದೇ ರಾತ್ರಿ ೧೦೦ ಕೋಟಿಗೂ ಅಧಿಕ ಕಲೆಕ್ಷನ್ ಆಗಿತ್ತು.
ರಘು ದೀಕ್ಷಿತ್ ಮ್ಯೂಸಿಕ್‌ನಲ್ಲಿ ರೀಲ್ಸ್
ಪ್ರೈವೆಟ್ ಜೆಟ್‌ನಲ್ಲೇ ಓಡಾಡುವ ಈ ಗಾಯಕ ನಿನ್ನೆಯೇ ಬೆಂಗಳೂರಿಗೆ ಬಂದಿಳಿದಿದ್ದಾರೆ. ಬೆಂಗಳೂರಿಗೆ ಸಂಬಂಧಿಸಿ ರೀಲ್ಸ್ ಪೋಸ್ಟ್ ಮಾಡುತ್ತಿದ್ದಾರೆ. ನಮ್ಮ ರಘು ದೀಕ್ಷಿತ್ ಅವರ ಮ್ಯೂಸಿಕ್ ಅನ್ನು ಹಿನ್ನೆಲೆಯಾಗಿಟ್ಟುಕೊಂಡು ಬೆಂಗಳೂರಿನ dosa, ಇಡ್ಲಿ ಟೇಸ್ಟ್ ಮಾಡಿ ಹಾಡಿ ಹೊಗಳಿದ್ದಾರೆ. ಇದಕ್ಕೆ ಬೆಂಗಳೂರು ಅಭಿಮಾನಿಗಳ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.
ಈ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಾಧ್ಯತೆ!
ದಿಲ್ಜಿತ್ ಕಾನ್ಸರ್ಟ್ ಹಿನ್ನೆಲೆಯಲ್ಲಿ ಇಂದು ಸಂಜೆ 4 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ತುಮಕೂರು-ಬೆಂಗಳೂರು ರಸ್ತೆಯಲ್ಲಿ ವಾಹನ ಸಂಚಾರ ನಿಧಾನವಾಗುವ ಸಾಧ್ಯತೆಯಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ವಿಶೇಷವಾಗಿ ನೆಲಮಂಗಲ ಕಡೆಯಿಂದ ಬೆಂಗಳೂರಿಗೆ ಬರುವವರು ಹಾಗೂ ಬೆಂಗಳೂರಿನಿಂದ ನೆಲಮಂಗಲದತ್ತ ತೆರಳುವವರು ಸಮಸ್ಯೆ ಫೇಸ್ ಮಾಡಬೇಕಾಗಬಹುದು.
ಟ್ರಾಫಿಕ್ ಹೆಚ್ಚಾಗುವ ಸಾಧ್ಯತೆ ಇರುವ ಪ್ರಮುಖ ಜಂಕ್ಷನ್‌ಗಳು ಇಲ್ಲಿವೆ:
ಅಡಕಮಾರನಹಳ್ಳಿ ಅಂಡರ್‌ಪಾಸ್
ಹುಣಸೂರು ಕ್ರಾಸ್
ಟಿಸಿಐ ಅಂಡರ್‌ಪಾಸ್
ಲಕ್ಷ್ಮೀಪುರ ಕ್ರಾಸ್
ಬಿಐಇಸಿ ಅಂಡರ್‌ಪಾಸ್
ಚಿಕ್ಕಬಿದರಕಲ್ಲು ಅಂಡರ್‌ಪಾಸ್
ಕೆನ್ನಮೆಟಲ್ ವಿಡಿಯಾ ಅಪ್‌ರಾಂಪ್
ಪೀಣ್ಯ ಫ್ಲೈಓವರ್
8ನೇ ಮೈಲಿ ಜಂಕ್ಷನ್
ದಾಸರಹಳ್ಳಿ ಜಂಕ್ಷನ್
ಜಾಲಹಳ್ಳಿ ಕ್ರಾಸ್
ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್
ಎಸ್‌ಆರ್‌ಎಸ್ ಜಂಕ್ಷನ್
ಗೊರಗುಂಟೆಪಾಳ್ಯ ಜಂಕ್ಷನ್ ಈ ಮಾರ್ಗಗಳಲ್ಲಿ ಸಂಚರಿಸುವವರು ಪ್ರಯಾಣಕ್ಕೆ ಹೆಚ್ಚುವರಿ ಸಮಯ ಇಟ್ಟುಕೊಳ್ಳುವುದು ಒಳ್ಳೆಯದು. ಸಾಧ್ಯವಾದರೆ ಅನಗತ್ಯ ಪ್ರಯಾಣವನ್ನು ಮುಂದೂಡುವಂತೆ ಹಾಗೂ ಸಂಚಾರ ಪೊಲೀಸರ ಸೂಚನೆ ಪಾಲಿಸುವಂತೆ ಮನವಿ ಮಾಡಲಾಗಿದೆ.
ಮೆಟ್ರೋದಲ್ಲಿ ಹೋಗುವ ಪ್ಲ್ಯಾನ್ ಇದೆಯಾ?
NICE ಗ್ರೌಂಡ್ಸ್‌ಗೆ ಹತ್ತಿರದ ಮೆಟ್ರೋ ನಿಲ್ದಾಣ ಮಾದಾವರ. ಇದು ಹಸಿರು ಮಾರ್ಗದ ಕೊನೆಯ ನಿಲ್ದಾಣ. ಅಲ್ಲಿಂದ music concert ಸ್ಥಳಕ್ಕೆ ತೆರಳಲು ಕ್ಯಾಬ್, ಆಟೋ ಬಳಸಬಹುದು. ಆದರೆ ಮೆಟ್ರೋ ಸಂಚಾರದ ಬಗ್ಗೆ ಯಾವುದೇ ಬದಲಾವಣೆಗಳಿವೆಯೇ ಎಂಬುದನ್ನು ಪ್ರಯಾಣಕ್ಕೂ ಮೊದಲು BMRCL ಅಧಿಕೃತ ಮಾಹಿತಿ ಮೂಲಕ ಖಚಿತಪಡಿಸಿಕೊಳ್ಳುವುದು ಉತ್ತಮ. ಕಾನ್ಸರ್ಟ್ ಮುಗಿದ ಬಳಿಕ ಒಂದೇ ಸಮಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಹೊರಬರುವುದರಿಂದ ಕ್ಯಾಬ್ ಹಾಗೂ ಇತರ ವಾಹನಗಳಿಗೂ ಕಾಯಬೇಕಾಗಬಹುದು. ಹೀಗಾಗಿ ವಾಪಸ್ ಪ್ರಯಾಣದ ಬಗ್ಗೆಯೂ ಮೊದಲೇ ಪ್ಲ್ಯಾನ್ ಮಾಡಿಕೊಳ್ಳಿ.
Diljit Dosanjh ಕಾನ್ಸರ್ಟ್‌ಗಳ ವಿಶೇಷತೆ ಏನು?
ದಿಲ್ಜಿತ್ ದೋಸಾಂಜ್ ಅವರ ಕಾನ್ಸರ್ಟ್‌ಗಳ ವಿಶೇಷತೆ ಎಂದರೆ ಹಾಡು, ಡ್ಯಾನ್ಸ್, ಲೈಟಿಂಗ್ ಮತ್ತು ಅದ್ಧೂರಿ ವೇದಿಕೆ ವಿನ್ಯಾಸದ ಅದ್ಭುತ ಕಾಂಬಿನೇಶನ್. ಅವರ 'ಔರಾ' ಟೂರ್‌ನಲ್ಲಿ ದೊಡ್ಡ ಮಟ್ಟದ ಲೈವ್ ಮ್ಯೂಸಿಕ್, ಆಕರ್ಷಕ ದೃಶ್ಯಗಳು, ಭರ್ಜರಿ ಲೈಟಿಂಗ್ ಮತ್ತು ಎನರ್ಜಿಟಿಕ್ ಪರ್ಫಾರ್ಮೆನ್ಸ್‌ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಒಂದು ಕಡೆ ಪಂಜಾಬಿ ಜಾನಪದ ಸಂಗೀತದ ಸೊಗಡಿದ್ದರೆ, ಇನ್ನೊಂದು ಕಡೆ ಆಧುನಿಕ ಪಾಪ್ ಮತ್ತು ಹಿಪ್‌ಹಾಪ್ ಶೈಲಿಯ ಹಾಡುಗಳೂ ಇರುತ್ತವೆ. ಹೀಗಾಗಿ ಬೇರೆ ಬೇರೆ ವಯಸ್ಸಿನ ಅಭಿಮಾನಿಗಳನ್ನೂ ಸೆಳೆಯುವ ಶಕ್ತಿ ಅವರ ಪ್ರದರ್ಶನಕ್ಕಿದೆ.
ದಿಲ್ಜಿತ್ ಅವರ 'ಲವರ್', 'ಗೋಟೆ', 'ನೈನಾ', 'ಕಿನ್ನಿ ಕಿನ್ನಿ' ಸೇರಿದಂತೆ ಜನಪ್ರಿಯ ಹಾಡುಗಳು ಕಾನ್ಸರ್ಟ್‌ನಲ್ಲಿ ಕೇಳಿಬಂದರೆ ಅಭಿಮಾನಿಗಳ ಸಂಭ್ರಮ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.
ಬೆದರಿಕೆ ಇಮೇಲ್ ಹಿನ್ನೆಲೆ ಬಿಗಿ ಭದ್ರತೆ
ಇನ್ನೊಂದೆಡೆ, ಕಾನ್ಸರ್ಟ್‌ಗೂ ಮುನ್ನ NICE ಗ್ರೌಂಡ್ಸ್ ಮತ್ತು ಮಾದಾವರ ಮೆಟ್ರೋ ನಿಲ್ದಾಣದಲ್ಲಿ ಸ್ಫೋಟದ ಬೆದರಿಕೆ ಇರುವ ಇಮೇಲ್ ಬಂದಿರುವುದು ಆತಂಕಕ್ಕೆ ಕಾರಣವಾಗಿತ್ತು. ಈ ಸಂಬಂಧ bengaluru ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಬೆದರಿಕೆ ಸಂದೇಶದ ಸತ್ಯಾಸತ್ಯತೆ ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ. ಕಾರ್ಯಕ್ರಮದ ಭದ್ರತೆಗಾಗಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ ಎಂದು ವರದಿಯಾಗಿದೆ.




Click it and Unblock the Notifications
