150 ವರ್ಷಗಳ ಬಳಿಕ ಮಧುರೈನ ತಿರುಪ್ಪರಂಕುಂದ್ರಂ ದೀಪತೂಣ್ ಮೇಲೆ ಬೆಳಗಿದ ಕಾರ್ತಿಕ ದೀಪ: ಜ್ಯೋತಿ ಕಂಡು ಭಕ್ತರು ಭಾವುಕ
ಮಧುರೈ: ದೀರ್ಘಕಾಲದ ಕಾನೂನು ಹೋರಾಟ ಹಾಗೂ ವಿವಾದಕ್ಕೆ ಕಾರಣವಾಗಿದ್ದ ತಮಿಳುನಾಡಿನ ಮಧುರೈನಲ್ಲಿರುವ ತಿರುಪ್ಪರಂಕುಂದ್ರಂ ಬೆಟ್ಟದ ದೀಪತೂಣ್ ಕಲ್ಲಿನ ಕಂಬದ ಮೇಲೆ ಶನಿವಾರ (ನವೆಂಬರ್ 28) ಸಂಜೆ ಭಕ್ತಿಭಾವದಿಂದ ಕಾರ್ತಿಕ ದೀಪ ಬೆಳಗಲಾಯಿತು.
ಸುಮಾರು 150 ವರ್ಷಗಳ ಬಳಿಕ ಬೆಟ್ಟದ ತುದಿಯ ಈ ಕಲ್ಲಿನ ಕಂಬದ ಮೇಲೆ ದೀಪ ಬೆಳಗಿರುವುದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಸಂಜೆ 5:02ಕ್ಕೆ ಸರಿಯಾಗಿ ದೀಪದ ಜ್ಯೋತಿ ಪ್ರಜ್ವಲಿಸುತ್ತಿದ್ದಂತೆಯೇ ಬೆಟ್ಟದ ತಪ್ಪಲಿನಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಭಾವುಕರಾದರು.
{image-karthigai-deepam1-48001795915559.jpg kannada.oneindia.com
'ಮುರುಗನುಕ್ಕು ಅರೋಹರ' ಜಯಘೋಷ: ಭಕ್ತರ ಕಣ್ಣೀರು ಮತ್ತು ಭಕ್ತಿಯ ಪರಾಕಾಷ್ಠೆ
ಬೆಟ್ಟದ ಮೇಲೆ ಕಾರ್ತಿಕ ದೀಪದ ಜ್ಯೋತಿ ಕಾಣಿಸಿಕೊಳ್ಳುತ್ತಿದ್ದಂತೆಯೇ ದೇವಸ್ಥಾನದ ಸುತ್ತಮುತ್ತ ಹಾಗೂ ಬೆಟ್ಟದ ಕೆಳಭಾಗದಲ್ಲಿ ಸೇರಿದ್ದ ಭಕ್ತರು ಭಾವುಕರಾದರು. ಅನೇಕ ಭಕ್ತರು ಕೈಮುಗಿದು ಪ್ರಾರ್ಥಿಸಿದರೆ, ಇನ್ನೂ ಹಲವರ ಕಣ್ಣುಗಳಲ್ಲಿ ಆನಂದಭಾಷ್ಪ ಹರಿಯಿತು. "ಮುರುಗನುಕ್ಕು ಅರೋಹರ", "ವೆಟ್ರಿವೇಲ್ ಮುರುಗನುಕ್ಕು ಅರೋಹರ" ಹಾಗೂ "ವೆಟ್ರಿವೇಲ್, ವೀರವೇಲ್" ಎಂಬ ಜಯಘೋಷಗಳು ಸುತ್ತಮುತ್ತ ಮೊಳಗಿದವು. ಸುಮಾರು 30 ಕೆ.ಜಿ ತುಪ್ಪ, 50 ಮೀಟರ್ ಹತ್ತಿಯ ಬತ್ತಿ ಹಾಗೂ 5 ಕೆ.ಜಿ ಕರ್ಪೂರವನ್ನ ಬಳಸಿ ಈ ಮಹಾದೀಪವನ್ನ ಬೆಳಗಿಸಲಾಯಿತು.
ಸಿಆರ್‌ಪಿಎಫ್ ಭದ್ರತೆ ಮತ್ತು ನಿವೃತ್ತ ನ್ಯಾಯಮೂರ್ತಿಗಳ ಉಸ್ತುವಾರಿ
ಈ ಧಾರ್ಮಿಕ ಕಾರ್ಯಕ್ರಮವು ಸುಪ್ರೀಂ ಕೋರ್ಟ್ ನೇಮಿಸಿದ ರಿಸೀವರ್‌ಗಳಾದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ಎಸ್. ವೈದ್ಯನಾಥನ್ ಮತ್ತು ಜಸ್ಟಿಸ್ ವಿ. ಪಾರ್ಥಿಬನ್ ಅವರ ನೇರ ಉಸ್ತುವಾರಿಯಲ್ಲಿ ನಡೆಯಿತು.
ಆರತಿ ನೆರವೇರಿಸಿದ ಬಳಿಕ ಕಂಬದ ಮೇಲಿನ ಬೃಹತ್ ಕೊಪ್ಪರಿಗೆಯಲ್ಲಿ ದೀಪ ಹಚ್ಚಲಾಯಿತು. ಇಡೀ ಬೆಟ್ಟದ ಮೇಲೆ ಶಸ್ತ್ರಸಜ್ಜಿತ ಸಿಆರ್‌ಪಿಎಫ್ ಭದ್ರತೆ ನಿಯೋಜಿಸಲಾಗಿದ್ದು, ಕೇವಲ 50 ಮಂದಿ ಭಕ್ತರಿಗೆ ಮಾತ್ರ ಬೆಟ್ಟ ಹತ್ತಲು ಅವಕಾಶ ನೀಡಲಾಗಿತ್ತು.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಏನು? ತಮಿಳುನಾಡು ಸರ್ಕಾರಕ್ಕೆ ಚಾಟಿ
ಕಳೆದ ನವೆಂಬರ್ 20ರಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿ, ನವೆಂಬರ್ 24ರಂದು ಒಂದು ಬಾರಿಯ ಕ್ರಮವಾಗಿ ದೀಪತೂಣ್‌ನಲ್ಲಿ ಕಾರ್ತಿಕ ದೀಪ ಬೆಳಗಲು ಅನುಮತಿ ನೀಡಿತ್ತು. ಆದರೆ, ನವೆಂಬರ್ 24ರಂದು ದೇವಸ್ಥಾನದ ಆಡಳಿತ ಮಂಡಳಿಯು ಕೇವಲ ಸಾಂಪ್ರದಾಯಿಕ ಉಚ್ಚಿಪಿಳ್ಳೈಯಾರ್ ಮಂಟಪದಲ್ಲಿ ಮಾತ್ರ ದೀಪ ಬೆಳಗಿ, ದೀಪತೂಣ್‌ನಲ್ಲಿ ದೀಪ ಹಚ್ಚಿರಲಿಲ್ಲ.
ಇದನ್ನ ನ್ಯಾಯಾಲಯದ ಆದೇಶವನ್ನಾ ಉದ್ದೇಶಪೂರ್ವಕ ಮತ್ತು ಬಹಿರಂಗ ಉಲ್ಲಂಘನೆ ಎಂದು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಶುಕ್ರವಾರ (ನವೆಂಬರ್ 27) ತಮಿಳುನಾಡು ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಸೇರಿದಂತೆ 15 ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿತ್ತು.
ಅಲ್ಲದೆ, ಅರುಳ್ಮಿಗು ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಟ್ರಸ್ಟ್ ಮಂಡಳಿಯನ್ನ ಅಮಾನತುಗೊಳಿಸಿ, ರಾಜ್ಯ ಪೊಲೀಸರ ವೈಫಲ್ಯವನ್ನ ಉಲ್ಲೇಖಿಸಿ ಬೆಟ್ಟದ ಭದ್ರತೆಯನ್ನ ಸಿಆರ್‌ಪಿಎಫ್‌ಗೆ ಹಸ್ತಾಂತರಿಸಿತ್ತು. ಸುಪ್ರೀಂ ಕೋರ್ಟ್‌ನ ಈ ಕಠಿಣ ನಿರ್ದೇಶನದಂತೆ ಶನಿವಾರ ದೀಪತೂಣ್‌ನಲ್ಲಿ ದೀಪ ಬೆಳಗುವ ಮೂಲಕ ದೀರ್ಘಕಾಲದ ವಿವಾದಕ್ಕೆ ಮಹತ್ವದ ತಿರುವು ಸಿಕ್ಕಿದೆ.




Click it and Unblock the Notifications
