Raj Shamani: 2.3 ಕೋಟಿ ಸಬ್‌ಸ್ಕ್ರೈಬರ್ಸ್‌ ಹೊಂದಿರುವ ರಾಜ್ ಶಮಾನಿ ಯಶಸ್ಸಿನ 7 ರಹಸ್ಯಗಳು! ಪ್ರತಿದಿನ ಒಂದು ಕೆಲಸ ಮಾಡಿ

ಭಾರತೀಯ ರಾಜ್‌ ಶಮಾನಿ (Raj Shamani) ಇಂದು ಜಗತ್ತಿನ ಅತೀ ಬೇಡಿಕೆಯ, ಅತೀ ಜನಪ್ರಿಯ ಪಾಡ್‌ಕಾಸ್ಟರ್‌. ಅವರ ಚಾನೆಲ್‌ ಚಂದಾದಾರರ ಸಂಖ್ಯೆ 2.3 ಕೋಟಿಯನ್ನೂ ಮೀರಿ ಮುನ್ನುಗ್ಗುತ್ತಿದೆ. ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರಾನ್‌, ವಿಜಯ್‌ ಮಲ್ಯ ಮೊದಲಾದವರನ್ನೂ ಈತ ಸಂದರ್ಶನ ಮಾಡಿದ್ದಾನೆ. ಯಶಸ್ಸು ಸಾಧಿಸಲು ದಿನಕ್ಕೆ ಎಷ್ಟು ಗಂಟೆ ಕೆಲಸ ಮಾಡಬೇಕು? ದೊಡ್ಡ ಉದ್ಯಮಿಯಾಗಲು ಹಣ ಮುಖ್ಯವೇ ಅಥವಾ ಸಂಪರ್ಕಗಳೇ ಮುಖ್ಯವೇ? ಇಂದಿನ ಯುವ ಪೀಳಿಗೆಯನ್ನು ಹೇಗೆ ಮುನ್ನಡೆಸಬೇಕು? ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಲು ನಮ್ಮ ಮೌಲ್ಯಗಳನ್ನು ಬಿಟ್ಟುಕೊಡಬೇಕೇ? ಇಂತಹ ಹಲವು ಪ್ರಶ್ನೆಗಳಿಗೆ ಇತ್ತೀಚೆಗೆ ನಡೆದ ಉದ್ಯಮಿಗಳ ಸಮಾವೇಶವೊಂದರ ಸಂವಾದದಲ್ಲಿ ಆತ ಉತ್ತರ ನೀಡಿದ್ದಾನೆ.

ತಮ್ಮ career ಅನುಭವ, ಯಶಸ್ಸಿನ ಹಿಂದಿನ ಅಭ್ಯಾಸಗಳು, ತಂಡ ನಿರ್ವಹಣೆ, ಸಾಮಾಜಿಕ ಮಾಧ್ಯಮದ ಶಕ್ತಿ ಮತ್ತು ಹೊಸ ಪೀಳಿಗೆಯ ಕೆಲಸದ ಮನೋಭಾವದ ಬಗ್ಗೆ ಮಾತನಾಡಿದ್ದಾನೆ. ಅದರಲ್ಲಿನ ಕೆಲವು ವಿಚಾರಗಳು ಉದ್ಯಮಿಗಳಿಗೆ ಮಾತ್ರವಲ್ಲ, ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಬಯಸುವ ಪ್ರತಿಯೊಬ್ಬರಿಗೂ ಉಪಯುಕ್ತವಾಗಿವೆ.

7 Success Secrets of Biggest podcaster Raj Shamani Why You Should Focus on One Task Every Day

1. ಪ್ರತಿದಿನ ಒಂದೇ ಒಂದು ಪ್ರಮುಖ ಕೆಲಸದ ಮೇಲೆ ಗಮನ ಕೊಡಿ

ರಾಜ್ ಶಮಾನಿ ಹಂಚಿಕೊಂಡ ಅತ್ಯಂತ ಸರಳವಾದ ಆದರೆ ಪರಿಣಾಮಕಾರಿ ಅಭ್ಯಾಸವೆಂದರೆ ದಿನಕ್ಕೆ ಒಂದೇ ಒಂದು ಅತ್ಯಂತ ಪ್ರಮುಖ ಕೆಲಸವನ್ನು ಆಯ್ಕೆ ಮಾಡಿಕೊಳ್ಳುವುದು.

ಅವರ ಮಾರ್ಗದರ್ಶಕರೊಬ್ಬರು ನೀಡಿದ ಸಲಹೆಯನ್ನು ಅವರು ಇಂದಿಗೂ ಪಾಲಿಸುತ್ತಾರಂತೆ. ಪ್ರತಿದಿನ ಬೆಳಗ್ಗೆ ಅಥವಾ ಹಿಂದಿನ ರಾತ್ರಿ, ಮರುದಿನ ಮಾಡಲೇಬೇಕಾದ ಅತ್ಯಂತ ಮುಖ್ಯವಾದ ಕೆಲಸ ಯಾವುದು ಎಂಬುದನ್ನು ಬರೆದಿಟ್ಟುಕೊಳ್ಳಬೇಕು. ಆ ಕೆಲಸವನ್ನು ಪೂರ್ಣಗೊಳಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು.

ಒಂದು ದಿನದಲ್ಲಿ ಹತ್ತು ಕೆಲಸಗಳನ್ನು ಮಾಡುವುದಕ್ಕಿಂತ, ನಮ್ಮ ಗುರಿಗೆ ನಿಜವಾಗಿಯೂ ಹತ್ತಿರ ಕೊಂಡೊಯ್ಯುವ ಒಂದು ಕೆಲಸವನ್ನು ಪೂರ್ಣಗೊಳಿಸುವುದು ಮುಖ್ಯ ಎನ್ನುವುದು ಅವರ ಅಭಿಪ್ರಾಯ. 365 ದಿನಗಳ ಕಾಲ ಪ್ರತಿದಿನ ಹೀಗೆ ಮಾಡಿದರೆ ದೊಡ್ಡ ಸಾಧನೆ ಮಾಡಲು ಸಾಧ್ಯ ಎಂದು ಅವರು ಹೇಳುತ್ತಾರೆ.

2. ನಿಮ್ಮ ಕನಸುಗಳನ್ನು ಮುಚ್ಚಿಡಬೇಡಿ, ಎಲ್ಲರಿಗೂ ಹೇಳಿ!

ಬಹಳಷ್ಟು ಜನರು ತಮ್ಮ ದೊಡ್ಡ ಕನಸು ಮತ್ತು ಮಹತ್ವಾಕಾಂಕ್ಷೆಗಳನ್ನು ಇತರರ ಮುಂದೆ ಹೇಳಲು ಹಿಂಜರಿಯುತ್ತಾರೆ. ಜನರು ನಗಬಹುದು, ಅಪಹಾಸ್ಯ ಮಾಡಬಹುದು ಅಥವಾ ದೃಷ್ಟಿ ತಾಗಬಹುದು ಎಂಬ ಭಯ ಇರುತ್ತದೆ. ಸಾಧನೆ ಮಾಡಿದ ನಂತರವೇ ತಮ್ಮ ಗುರಿಗಳನ್ನು ಹೇಳಿಕೊಳ್ಳೋಣ ಎಂದುಕೊಳ್ಳುತ್ತಾರೆ.

ಆದರೆ ರಾಜ್ ಶಮಾನಿ ಇದಕ್ಕೆ ವಿರುದ್ಧವಾದ ಅಭಿಪ್ರಾಯ ಹೊಂದಿದ್ದಾರೆ. ನಿಮ್ಮ ಕನಸುಗಳನ್ನು ಜೋರಾಗಿ ಹೇಳಿಕೊಳ್ಳಬೇಕು ಎನ್ನುವುದು ಅವರ ಸಲಹೆ. ಏಕೆಂದರೆ ನಿಮ್ಮ ಗುರಿ ಏನೆಂಬುದು ಇತರರಿಗೆ ತಿಳಿದಾಗ ಮಾತ್ರ ಅದನ್ನು ನನಸು ಮಾಡಲು ಸಹಾಯ ಮಾಡುವ ವ್ಯಕ್ತಿಗಳು ನಿಮ್ಮ ಸಂಪರ್ಕಕ್ಕೆ ಬರಬಹುದು.

ನಿಮ್ಮ ಕನಸನ್ನು ಹೇಳಿಕೊಳ್ಳುವುದರಿಂದ ಅದನ್ನು ಸಾಧಿಸುವ ಹೊಣೆಗಾರಿಕೆಯೂ ನಿಮ್ಮ ಮೇಲೆ ಹೆಚ್ಚುತ್ತದೆ. ಕನಸು ನನಸಾಗದಿದ್ದರೂ ಅದರಲ್ಲಿ ತಪ್ಪಿಲ್ಲ. ಆದರೆ ಅದನ್ನು ಹೇಳಿಕೊಳ್ಳಲು ಹೆದರಬಾರದು ಎಂಬುದು ಅವರ ಮಾತಿನ ಸಾರ.

3. ನೆಟ್‌ವರ್ಕ್ ಎಂದರೆ ಸ್ನೇಹಿತರ ಗುಂಪಲ್ಲ!

ಇಂದಿನ ಉದ್ಯಮ ಜಗತ್ತಿನಲ್ಲಿ 'ನಿಮ್ಮ ನೆಟ್‌ವರ್ಕ್ ನಿಮ್ಮ ಸಂಪತ್ತು' ಎಂಬ ಮಾತು ಜನಪ್ರಿಯವಾಗಿದೆ. ಆದರೆ ನೆಟ್‌ವರ್ಕ್ ಎಂದರೆ ರಾತ್ರಿ ಎರಡು ಗಂಟೆಗೆ ಕರೆ ಮಾಡಿದರೆ ಫೋನ್ ಎತ್ತುವ ಸ್ನೇಹಿತರ ಗುಂಪೇ ಎಂದು ಭಾವಿಸಬಾರದು ಎಂದು ರಾಜ್ ಶಮಾನಿ ವಿವರಿಸಿದ್ದಾರೆ.

ಸ್ನೇಹ ಮತ್ತು ವೃತ್ತಿಪರ ಸಂಪರ್ಕ ಎರಡೂ ಬೇರೆ. ನಿಮ್ಮ ಸ್ನೇಹಿತರೇ ನಿಮ್ಮ ಉದ್ಯಮಕ್ಕೆ ಸಹಾಯ ಮಾಡಬೇಕೆಂದಿಲ್ಲ. ಹಾಗೆಯೇ ನಿಮ್ಮ ವೃತ್ತಿಪರ ಸಂಪರ್ಕದಲ್ಲಿರುವ ಪ್ರತಿಯೊಬ್ಬರೂ ಆಪ್ತ ಸ್ನೇಹಿತರಾಗಿರಬೇಕೆಂದೂ ಇಲ್ಲ. ಉದಾಹರಣೆಗೆ, ಹೊಸ ನಗರದಲ್ಲಿ ವ್ಯವಹಾರ ಆರಂಭಿಸಬೇಕಾದರೆ, passport ಸಮಸ್ಯೆ ಎದುರಾದರೆ ಅಥವಾ ಹೊಸ ಮಾರುಕಟ್ಟೆಯಲ್ಲಿ ಉತ್ಪನ್ನ ಮಾರಾಟ ಮಾಡಬೇಕಾದರೆ ಪರಿಚಯದ ಉದ್ಯಮಿಗಳು ನೆರವಾಗಬಹುದು. ಅದಕ್ಕಾಗಿಯೇ ನೆಟ್‌ವರ್ಕ್ ಮುಖ್ಯ.

ಆನೆ, ಘೇಂಡಾಮೃಗಗಳ ಲದ್ದಿಯಿಂದ ಕಾಗದ ತಯಾರಿಸಿ ಹತ್ತಾರು ಮಂದಿಗೆ ಉದ್ಯೋಗ ನೀಡಿದ ತಂದೆ-ಮಗಳು!
ಆನೆ, ಘೇಂಡಾಮೃಗಗಳ ಲದ್ದಿಯಿಂದ ಕಾಗದ ತಯಾರಿಸಿ ಹತ್ತಾರು ಮಂದಿಗೆ ಉದ್ಯೋಗ ನೀಡಿದ ತಂದೆ-ಮಗಳು!

ಸಂಪರ್ಕಗಳನ್ನು ಬೆಳೆಸಿಕೊಳ್ಳುವುದು ಎಂದರೆ ಪ್ರತಿಯೊಬ್ಬರೊಂದಿಗೆ ಆಪ್ತ ಸಂಬಂಧ ಹೊಂದುವುದಲ್ಲ. ಪರಸ್ಪರ ಸಹಾಯ ಮಾಡಿಕೊಳ್ಳುವ ಮಾನವೀಯ ಸಂಬಂಧಗಳನ್ನು ನಿರ್ಮಿಸಿಕೊಳ್ಳುವುದಾಗಿದೆ ಎನ್ನುವುದು ಅವರ ವಿವರಣೆ.

4. ಎಐ ಯುಗದಲ್ಲಿ ಗೆಲ್ಲಬೇಕಾದರೆ ನಿಮ್ಮದೇ ಆದ ಪ್ರೇಕ್ಷಕರನ್ನು ಸೃಷ್ಟಿಸಿಕೊಳ್ಳಿ

ಕೃತಕ ಬುದ್ಧಿಮತ್ತೆ (AI) ಜಗತ್ತಿನಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತಿದೆ. ಆ್ಯಪ್‌ಗಳನ್ನು ನಿರ್ಮಿಸುವುದು, ತಾಂತ್ರಿಕ ಕೆಲಸಗಳನ್ನು ನಿರ್ವಹಿಸುವುದು, ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸುವುದು ಸೇರಿ ಅನೇಕ ಕೆಲಸಗಳನ್ನು ಎಐ ಸುಲಭವಾಗಿ ಮಾಡಲಿದೆ. ಹೀಗಿರುವಾಗ ಭವಿಷ್ಯದಲ್ಲಿ ಯಾರು ಯಶಸ್ವಿಯಾಗುತ್ತಾರೆ ಎಂಬ ಪ್ರಶ್ನೆಗೆ ರಾಜ್ ಶಮಾನಿ ನೀಡಿರುವ ಉತ್ತರ ಆಸಕ್ತಿದಾಯಕವಾಗಿದೆ.

ಅವರ ಪ್ರಕಾರ, ಎಐ ಯುಗದಲ್ಲಿ ಬಹುತೇಕ ಎಲ್ಲರಿಗೂ ತಂತ್ರಜ್ಞಾನದ ಸಹಾಯದಿಂದ ಕೆಲಸಗಳನ್ನು ಮಾಡುವುದು ಸಾಧ್ಯವಾಗುತ್ತದೆ. ಆದರೆ ಹೆಚ್ಚಿನ ಜನರ ಗಮನ ಸೆಳೆಯುವ ಸಾಮರ್ಥ್ಯ ಹೊಂದಿರುವವರು ಮಾತ್ರ ಇತರರಿಗಿಂತ ಮುಂದೆ ಇರುತ್ತಾರೆ. ಆದ್ದರಿಂದ ಉದ್ಯಮಿಗಳು ತಮ್ಮ ಉತ್ಪನ್ನ ಅಥವಾ ಸೇವೆಯನ್ನು onlineನಲ್ಲಿ ಹೆಚ್ಚು ಜನರಿಗೆ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮದೇ ಆದ ಪ್ರೇಕ್ಷಕರನ್ನು ಬೆಳೆಸಿಕೊಳ್ಳಬೇಕು. ವರ್ಷಗಳಿಂದ ಆಫ್‌ಲೈನ್ ಮೂಲಕವೇ ವ್ಯವಹಾರ ನಡೆಸುತ್ತಿರುವವರು ಕೂಡ ಡಿಜಿಟಲ್ ವೇದಿಕೆಗಳಿಗೆ ಬರಬೇಕು ಎನ್ನುವುದು ಅವರ ಸಲಹೆ.

5. ವೀಕ್ಷಣೆಗಳಿಗಾಗಿ ನಿಮ್ಮ ಮೌಲ್ಯಗಳನ್ನು ಬಿಟ್ಟುಕೊಡಬೇಡಿ

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಬೇಕು ಎಂಬ ಆಸೆಯಿಂದ ಅನೇಕರು ವಿವಾದಾತ್ಮಕ ವಿಷಯಗಳನ್ನು ಮಾತನಾಡುತ್ತಾರೆ. ಟ್ರೆಂಡಿಂಗ್ ವಿಷಯಗಳ ಹಿಂದೆ ಓಡುತ್ತಾರೆ. ಕೆಲವೊಮ್ಮೆ ತಮ್ಮ ವೈಯಕ್ತಿಕ ಮೌಲ್ಯಗಳಿಗೆ ವಿರುದ್ಧವಾದ ಕೆಲಸಗಳನ್ನೂ ಮಾಡುತ್ತಾರೆ. ಇದನ್ನು ರಾಜ್ ಶಮಾನಿ ತಪ್ಪು ಎಂದು ಪರಿಗಣಿಸುತ್ತಾರೆ.

ಅವರು ತಮ್ಮ ಸಂಸ್ಥೆಯಲ್ಲಿ ಪಾಲಿಸುವ ಕೆಲವು ತತ್ವಗಳನ್ನು ಹಂಚಿಕೊಂಡಿದ್ದಾರೆ.
- ವೀಕ್ಷಣೆಗಳಿಗಿಂತ ಮೌಲ್ಯಗಳಿಗೆ ಆದ್ಯತೆ.
- ಟ್ರೆಂಡ್‌ಗಳಿಗಿಂತ ಕಲಿಕೆಗೆ ಆದ್ಯತೆ.
- ಸಂಚಲನ ಸೃಷ್ಟಿಸುವುದಕ್ಕಿಂತ ಅರ್ಥಪೂರ್ಣ ವಿಷಯಗಳಿಗೆ ಆದ್ಯತೆ.
- ತಾತ್ಕಾಲಿಕ ಜನಪ್ರಿಯತೆಗಿಂತ ದೀರ್ಘಕಾಲದ ಗುರಿಗಳಿಗೆ ಆದ್ಯತೆ.
ತಮ್ಮ ಕಚೇರಿಯಲ್ಲಿಯೂ ಈ ತತ್ವಗಳನ್ನು ಬರೆಯಲಾಗಿದೆ ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರಿಯತೆ ಪಡೆಯುವುದು ಮುಖ್ಯವೇ ಹೊರತು, ಅದಕ್ಕಾಗಿ ನಮ್ಮ ಮೂಲಭೂತ ಮೌಲ್ಯಗಳನ್ನು ಬದಲಿಸಿಕೊಳ್ಳುವುದು ಅಗತ್ಯವಿಲ್ಲ ಎನ್ನುವುದು ಅವರ ಸಂದೇಶ.

6. ಉದ್ಯೋಗಿಗಳನ್ನು ನಿಯಂತ್ರಿಸುವುದಕ್ಕಿಂತ ಬೆಳೆಯಲು ಅವಕಾಶ ನೀಡಿ

ತಂಡ ನಿರ್ವಹಣೆಯ ಬಗ್ಗೆ ರಾಜ್ ಶಮಾನಿ ಹೇಳಿದ ಒಂದು ಮಾತು ಗಮನ ಸೆಳೆಯುತ್ತದೆ. "ನಾನು ನನ್ನ ತಂಡವನ್ನು ನಿರ್ವಹಿಸುವುದಿಲ್ಲ. ನನ್ನ ತಂಡವೇ ನನ್ನನ್ನು ನಿರ್ವಹಿಸುತ್ತದೆ" ಎನ್ನುವುದು ಅವರ ಮಾತಿನ ಸಾರ. ಒಬ್ಬ ಉದ್ಯಮಿಯ ಯಶಸ್ಸಿನ ಹಿಂದೆ ಇಡೀ ತಂಡದ ಪರಿಶ್ರಮ ಇರುತ್ತದೆ. ಉದ್ಯೋಗಿಗಳಿಗೆ ಬೆಳೆಯಲು ಅವಕಾಶ, ಕೆಲಸದಲ್ಲಿ ಭದ್ರತೆ ಮತ್ತು ಮಾರ್ಗದರ್ಶನ ಸಿಕ್ಕರೆ ಅವರು ಜವಾಬ್ದಾರಿಯಿಂದ ಕೆಲಸ ಮಾಡುತ್ತಾರೆ.

ತಮ್ಮ ಸಂಸ್ಥೆಯಲ್ಲಿ ಎಲ್ಲರಿಗೂ ಒಂದೇ ರೀತಿಯ ಕೆಲಸದ ಸಮಯದ ನಿಯಮಗಳಿಲ್ಲ ಎಂದು ಅವರು ಹೇಳಿದ್ದಾರೆ. ಕೆಲವರು ವಾರದಲ್ಲಿ ಮೂರು ದಿನ ಕೆಲಸ ಮಾಡುತ್ತಾರೆ. ಕೆಲವರು ನಾಲ್ಕು ಗಂಟೆಗಳಲ್ಲಿ ತಮ್ಮ ಕೆಲಸ ಮುಗಿಸಿ ಮನೆಗೆ ಹೋಗುತ್ತಾರೆ. ಇನ್ನು ಕೆಲವರು 12ರಿಂದ 14 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ.

ಯಾರು ಎಷ್ಟು ಹೊತ್ತು ಕೆಲಸ ಮಾಡುತ್ತಾರೆ ಎನ್ನುವುದಕ್ಕಿಂತ ಅವರಿಗೆ ನೀಡಿರುವ ಕೆಲಸವನ್ನು ಎಷ್ಟು ಚೆನ್ನಾಗಿ ಪೂರ್ಣಗೊಳಿಸುತ್ತಾರೆ ಎಂಬುದಕ್ಕೆ ಅವರು ಆದ್ಯತೆ ನೀಡುತ್ತಾರೆ. ಆದರೆ ಸಂಸ್ಥೆಗೆ ತಲುಪಬೇಕಾದ ಗುರಿ ಮತ್ತು ಪ್ರತಿಯೊಬ್ಬರ ಜವಾಬ್ದಾರಿ ಸ್ಪಷ್ಟವಾಗಿರಬೇಕು. ಸ್ವಾತಂತ್ರ್ಯದ ಜೊತೆಗೆ ಕೆಲಸದ ಫಲಿತಾಂಶಕ್ಕೂ ಮಹತ್ವ ನೀಡಬೇಕು ಎನ್ನುವುದು ಅವರ ನಿರ್ವಹಣಾ ತತ್ವ.

7. ಜನರ ತಪ್ಪುಗಳನ್ನು ಸರಿಪಡಿಸಲು ಮೂರು ಹಂತದ ಅವಕಾಶ ನೀಡಿ

ಉದ್ಯೋಗಿಗಳು ತಪ್ಪು ಮಾಡಿದಾಗ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳುವುದು ಸರಿಯಾದ ವಿಧಾನವಲ್ಲ ಎಂದು ರಾಜ್ ಶಮಾನಿ ವಿವರಿಸಿದ್ದಾರೆ. ತಮ್ಮ ಸಂಸ್ಥೆಯಲ್ಲಿ ಒಂದೇ ರೀತಿಯ ತಪ್ಪು ಪುನರಾವರ್ತನೆಯಾದರೆ ಮೂರು ಹಂತಗಳಲ್ಲಿ ಅದನ್ನು ನಿರ್ವಹಿಸುತ್ತಾರಂತೆ.

ಮೊದಲ ಹಂತದಲ್ಲಿ ಉದ್ಯೋಗಿ ತಪ್ಪು ಮಾಡಿದರೆ ಅದನ್ನು ಕ್ಷಮಿಸಿ, ಮುಂದಿನ ಬಾರಿ ಎಚ್ಚರಿಕೆಯಿಂದ ಇರುವಂತೆ ಹೇಳುತ್ತಾರೆ. ಎರಡನೇ ಹಂತದಲ್ಲಿ ಅದೇ ತಪ್ಪು ಮತ್ತೆ ಸಂಭವಿಸಿದರೆ ಸಮಸ್ಯೆ ಏನಾಗಿದೆ ಎಂದು ಪರಿಶೀಲಿಸಿ, ಉದ್ಯೋಗಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುತ್ತಾರೆ. ಮೂರನೇ ಹಂತದಲ್ಲಿ ಮತ್ತೊಮ್ಮೆ ಅದೇ ತಪ್ಪು ಸಂಭವಿಸಿದರೆ ಎಚ್ಚರಿಕೆ ನೀಡುತ್ತಾರೆ. ಇನ್ನು ಮುಂದೆ ಅದನ್ನು ಸಹಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಾರೆ.

ಬಿಲ್ ಗೇಟ್ಸ್ ಅವರಿಂದ Raj Shamani ಕಲಿತ ಪಾಠವೇನು?

ಸಂದರ್ಶನದಲ್ಲಿ ರಾಜ್ ಶಮಾನಿ ಹಂಚಿಕೊಂಡ ಮತ್ತೊಂದು ಕುತೂಹಲಕಾರಿ ಅನುಭವವೆಂದರೆ ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಭೇಟಿಯಾದ ಸಂದರ್ಭ. ಜಗತ್ತಿನ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್ ಗೇಟ್ಸ್, ತಮ್ಮನ್ನು ಭೇಟಿಯಾದಾಗ ಹೊಸ ತಲೆಮಾರಿನ ಜನರು ಏನು ಮಾಡುತ್ತಿದ್ದಾರೆ, ಕಂಟೆಂಟ್ ಕ್ಷೇತ್ರದಲ್ಲಿ ಯಾವ ಬದಲಾವಣೆಗಳಾಗುತ್ತಿವೆ ಮತ್ತು ತಮ್ಮ ಕೆಲಸಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಕುತೂಹಲದಿಂದ ವಿಚಾರಿಸಿದ್ದರಂತೆ.

ಪೋಷಕರ ₹1 ಕೋಟಿ ಸಾಲ ತೀರಿಸಲು ಗೂಗಲ್ ಸೇರಿದ IIT ಯುವಕ: ಉದ್ಯೋಗ ಬಿಟ್ಟು ಉದ್ಯಮಿಯಾದ IIT ಪದವೀಧರ
ಪೋಷಕರ ₹1 ಕೋಟಿ ಸಾಲ ತೀರಿಸಲು ಗೂಗಲ್ ಸೇರಿದ IIT ಯುವಕ: ಉದ್ಯೋಗ ಬಿಟ್ಟು ಉದ್ಯಮಿಯಾದ IIT ಪದವೀಧರ

ಬಿಲ್ ಗೇಟ್ಸ್ ಅವರಲ್ಲಿದ್ದ ಈ ಕಲಿಯುವ ಆಸಕ್ತಿ ರಾಜ್ ಶಮಾನಿ ಅವರಿಗೆ ಅಚ್ಚರಿ ಮೂಡಿಸಿತ್ತು. ಅವರ ಪ್ರಕಾರ, ಬಿಲ್ ಗೇಟ್ಸ್ ಅವರ ದೊಡ್ಡ ಆತಂಕವೆಂದರೆ ಹಿಂದೆ ತಮ್ಮ ಇಪ್ಪತ್ತರ ವಯಸ್ಸಿನಲ್ಲಿ ಕಲಿಯುತ್ತಿದ್ದ ವೇಗದಲ್ಲಿ ಈಗ ಕಲಿಯಲು ಸಾಧ್ಯವಾಗುತ್ತಿಲ್ಲ ಎಂಬುದು. ಜೀವನದಲ್ಲಿ ಎಷ್ಟೇ ಹಣ, ಅಧಿಕಾರ ಮತ್ತು ಜನಪ್ರಿಯತೆ ಗಳಿಸಿದರೂ ಕಲಿಯುವ ಆಸಕ್ತಿ ಕಡಿಮೆಯಾಗಬಾರದು ಎಂಬ ಮಹತ್ವದ ಪಾಠವನ್ನು ಈ ಘಟನೆ ನೀಡುತ್ತದೆ ಎಂದು ರಾಜ್ ಶಮಾನಿ ಅಭಿಪ್ರಾಯಪಟ್ಟಿದ್ದಾರೆ.

ಜೆನ್ ಝೀ ಯುವಕರನ್ನು ಹೇಗೆ ಮುನ್ನಡೆಸಬೇಕು?

ಇಂದಿನ ಯುವ ಉದ್ಯೋಗಿಗಳನ್ನು ಹಳೆಯ ತಲೆಮಾರಿನ ಕೆಲಸದ ನಿಯಮಗಳ ಮೂಲಕವೇ ನಿರ್ವಹಿಸಲು ಸಾಧ್ಯವಿಲ್ಲ ಎಂದು ರಾಜ್ ಶಮಾನಿ ಹೇಳಿದ್ದಾರೆ. ಹಿಂದಿನ ತಲೆಮಾರಿನವರು ಉದ್ಯೋಗದಲ್ಲಿ ಭದ್ರತೆ, ಸಂಬಳ ಮತ್ತು ಸ್ಥಿರತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದರು. ಆದರೆ ಇಂದಿನ ಜೆನ್ ಝೀ ಯುವಕರಲ್ಲಿ ಕೆಲವರಿಗೆ ಕುಟುಂಬದಿಂದಲೇ ಮೂಲಭೂತ ಸೌಲಭ್ಯಗಳು ದೊರೆತಿರುವುದರಿಂದ ಅವರ ಆದ್ಯತೆಗಳು ವಿಭಿನ್ನವಾಗಿರಬಹುದು ಎಂಬುದು ಅವರ ವಿಶ್ಲೇಷಣೆ.

ಹೀಗಾಗಿ ಯುವ ಉದ್ಯೋಗಿಗಳಿಗೆ ಕೇವಲ ನಿಯಮಗಳು ಮತ್ತು ಕೆಲಸದ ಸಮಯವನ್ನು ವಿವರಿಸುವುದಕ್ಕಿಂತ ದೊಡ್ಡ ಕನಸುಗಳನ್ನು ತೋರಿಸಬೇಕು. ಅವರಿಗೆ ಯಾವ ಕೆಲಸದಲ್ಲಿ ಉತ್ತಮ ಸಾಮರ್ಥ್ಯವಿದೆ ಎಂಬುದನ್ನು ಗುರುತಿಸಿ, ಅದರಲ್ಲಿ ಪರಿಣತಿ ಪಡೆಯಲು ನೆರವಾಗಬೇಕು. ಸಂಸ್ಥೆ ಬೆಳೆದರೆ ಅವರೂ ಬೆಳೆಯುತ್ತಾರೆ ಎಂಬ ವಿಶ್ವಾಸ ಮೂಡಿಸಬೇಕು. ಯುವಕರನ್ನು ನಿಯಂತ್ರಿಸುವುದಕ್ಕಿಂತ ಅವರಿಗೆ ಸರಿಯಾದ ಗುರಿ ಮತ್ತು ಮಾರ್ಗದರ್ಶನ ನೀಡುವುದು ಉತ್ತಮ ಎಂದು ಅವರು ಹೇಳಿದ್ದಾರೆ.

ರಾಜ್ ಶಮಾನಿಯ 'Figuring Out' ಪಾಡ್‌ಕಾಸ್ಟ್ ಆರಂಭವಾಗಿದ್ದು ಹೇಗೆ?

ತಮ್ಮ ಜನಪ್ರಿಯ 'Figuring Out' ಪಾಡ್‌ಕಾಸ್ಟ್ ಬಗ್ಗೆ ಮಾತನಾಡಿದ ರಾಜ್ ಶಮಾನಿ, ಅದು ಕೇವಲ ಒಂದು ಕಾರ್ಯಕ್ರಮವಲ್ಲ, ತಮ್ಮ ಜೀವನದ ಅಭ್ಯಾಸ ಎಂದು ವಿವರಿಸಿದ್ದಾರೆ. ಸಣ್ಣ ನಗರಗಳಿಂದ ಬರುವ, ಕುಟುಂಬಕ್ಕೆ ಉತ್ತಮ ಜೀವನ ನೀಡಬೇಕು ಅಥವಾ ದೊಡ್ಡ ಕನಸುಗಳನ್ನು ನನಸು ಮಾಡಬೇಕು ಎಂದು ಬಯಸುವ ಅನೇಕ ಯುವಕರಿಗೆ ಪ್ರತಿದಿನ ಏನಾದರೂ ಹೊಸದನ್ನು ಕಲಿಯುವ ಅಗತ್ಯವಿರುತ್ತದೆ. ತಾವೂ ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಎಂದು ಅವರು ಹೇಳಿದ್ದಾರೆ.

ದುಡ್ಡೇ ದೊಡ್ಡಪ್ಪ ಎನ್ನುವ ಕಾಲದಲ್ಲಿ ನಿಸ್ವಾರ್ಥ ಸೇವೆ: 4 ದಶಕದಿಂದ ₹10ಗೆ ವೈದ್ಯಕೀಯ ಸೇವೆ! ಇದು ಡಾ.ಎಜಾಜ್ ಅಲಿ ಸ್ಪೂರ್ತಿ ಕಥೆ
ದುಡ್ಡೇ ದೊಡ್ಡಪ್ಪ ಎನ್ನುವ ಕಾಲದಲ್ಲಿ ನಿಸ್ವಾರ್ಥ ಸೇವೆ: 4 ದಶಕದಿಂದ ₹10ಗೆ ವೈದ್ಯಕೀಯ ಸೇವೆ! ಇದು ಡಾ.ಎಜಾಜ್ ಅಲಿ ಸ್ಪೂರ್ತಿ ಕಥೆ

ತಮ್ಮ ಜೀವನವನ್ನು ಉತ್ತಮಗೊಳಿಸಲು ಯಶಸ್ವಿ ವ್ಯಕ್ತಿಗಳಿಂದ ಏನು ಕಲಿಯಬಹುದು ಎಂಬ ಆಲೋಚನೆಯಿಂದ ಈ ಪಾಡ್‌ಕಾಸ್ಟ್ ಆರಂಭವಾಯಿತು. ಹಣಕಾಸು, health, ಸಂಬಂಧಗಳು ಮತ್ತು ದೇಶದ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು ಇದರ ಹಿಂದಿನ ಉದ್ದೇಶವಾಗಿತ್ತು. ಇದೀಗ ತಮ್ಮ ಪಾಡ್‌ಕಾಸ್ಟ್ ಮೂಲಕ ಬೆಳೆಸಿಕೊಂಡಿರುವ ಆನ್‌ಲೈನ್ ಪ್ರೇಕ್ಷಕರನ್ನು ನಿರ್ಮಿಸುವ ಅನುಭವವನ್ನು ಇತರ ಉದ್ಯಮಿಗಳು, ವೈದ್ಯರು ಮತ್ತು ತಜ್ಞರಿಗೂ ತಲುಪಿಸಲು ಪ್ರಯತ್ನಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಕೆಲವೇ ತಿಂಗಳುಗಳಲ್ಲಿ ಕೆಲವರ ಸಾಮಾಜಿಕ ಮಾಧ್ಯಮ ಅನುಯಾಯಿಗಳ ಸಂಖ್ಯೆಯನ್ನು ಶೂನ್ಯದಿಂದ ಲಕ್ಷಾಂತರಕ್ಕೆ ಹೆಚ್ಚಿಸಲು ತಮ್ಮ ತಂಡ ನೆರವಾಗಿದೆ ಎಂಬ ಉದಾಹರಣೆಗಳನ್ನೂ ಅವರು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+