IPL Salary: ರೋಹಿತ್ ಶರ್ಮಾ vs ವಿರಾಟ್ ಕೊಹ್ಲಿ; 19 ವರ್ಷದಲ್ಲಿ ಹೆಚ್ಚು ಸಂಭಾವನೆ ಪಡೆದವರು ಯಾರು?
ಒಬ್ಬರು ತಮ್ಮ ನಾಯಕತ್ವದಲ್ಲಿ 5 ಟ್ರೋಫಿಗಳನ್ನು ಗೆದ್ದುಕೊಟ್ಟರೆ, ಮತ್ತೊಬ್ಬರು ರನ್‌ಗಳ ಸುರಿಮಳೆಯೊಂದಿಗೆ ಸಂಭಾವನೆಯ ಶಿಖರ ಏರಿದರು. ಕಳೆದ 19 ಐಪಿಎಲ್ ಋತುಗಳ ಲೆಕ್ಕಾಚಾರದಲ್ಲಿ ವಿರಾಟ್ ಕೊಹ್ಲಿ ಅವರು ರೋಹಿತ್ ಶರ್ಮಾ ಅವರಿಗಿಂತ ಅಲ್ಪ ಅಂತರದಲ್ಲಿ ಹೆಚ್ಚು ಸಂಭಾವನೆ ಪಡೆದ ಸಾಧನೆ ಮಾಡಿದ್ದಾರೆ. 2008ರಿಂದ 2026ರವರೆಗೆ ಬದಲಾದ ಹರಾಜು ನಿಯಮಗಳು, ರಿಟೆನ್ಷನ್ ದಾಖಲೆಗಳು ಮತ್ತು ನಾಯಕತ್ವದ ಪರ್ವಗಳು ಈ ಇಬ್ಬರು ದಿಗ್ಗಜರ ವೇತನದ ಕಥೆಯನ್ನು ರೋಚಕವಾಗಿಸಿವೆ.
ಈವರೆಗಿನ ಐಪಿಎಲ್ ಆವೃತ್ತಿಗಳ ಸುದೀರ್ಘ ಪಯಣದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ಸಂಭಾವನೆಯ ಪೈಪೋಟಿ ಇದ್ದು, ಕೇವಲ ₹2.01 ಕೋಟಿಯ ಅಂತರದಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಲಕ್ಷ ರೂಪಾಯಿಯಿಂದ ಆರಂಭವಾದ ಪಯಣ ಕೋಟಿಗಳ ದಾಖಲೆಗೆ ತಲುಪಿದ ಐಪಿಎಲ್ ಇತಿಹಾಸದ ಇಬ್ಬರು ದಿಗ್ಗಜರ ಮೌಲ್ಯವನ್ನು ಅನಾವರಣಗೊಳಿಸುತ್ತದೆ.

ವಿರಾಟ್ ಕೊಹ್ಲಿ Vs ರೋಹಿತ್ ಶರ್ಮಾ..
2008ರಿಂದ 2026ರವರೆಗಿನ ಕಳೆದ 19 ಐಪಿಎಲ್ ಋತುಗಳ ಒಟ್ಟು ಸಂಭಾವನೆ ಲೆಕ್ಕಾಚಾರದಲ್ಲಿ ವಿರಾಟ್ ಕೊಹ್ಲಿ ಅವರು ರೋಹಿತ್ ಶರ್ಮಾ ಅವರಿಗಿಂತ ಕೇವಲ ₹2.01 ಕೋಟಿ ಮಾತ್ರ ಹೆಚ್ಚಿನ ಮೊತ್ತ ಗಳಿಸಿದ್ದಾರೆ. ಇಬ್ಬರೂ ಆಟಗಾರರು ತಮ್ಮ ತಮ್ಮ ತಂಡಗಳ ಅವಿಭಾಜ್ಯ ಅಂಗವಾಗಿ ಬೆಳೆದು, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವೇತನ ಪಡೆದ ತಾರೆಗಳಾಗಿ ಗುರುತಿಸಿಕೊಂಡಿದ್ದಾರೆ.
ಆರಂಭಿಕ ದಿನಗಳು: 2008ರ ಭಿನ್ನ ಶುಭಾರಂಭ
ಐಪಿಎಲ್ ಮೊದಲ ಆವೃತ್ತಿಯಲ್ಲಿ ಇಬ್ಬರ ಆರಂಭ ಭಿನ್ನವಾಗಿತ್ತು. 2007ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ರೋಹಿತ್ ಶರ್ಮಾ ಅವರನ್ನು 2008ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡ ಸುಮಾರು ₹3.01 ಕೋಟಿಗೆ (750,000 ಅಮೆರಿಕನ್ ಡಾಲರ್) ಖರೀದಿಸಿತು. ಇನ್ನೂ ಮಲೇಷ್ಯಾದಲ್ಲಿ ನಡೆದ ಅಂಡರ್-19 ವಿಶ್ವಕಪ್ ಗೆದ್ದು ಬಂದಿದ್ದ ವಿರಾಟ್ ಕೊಹ್ಲಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸುಮಾರು ₹20.1 ಲಕ್ಷಕ್ಕೆ ಬರಮಾಡಿಕೊಂಡಿತು. ಮೊದಲ ಮೂರು ಆವೃತ್ತಿಗಳಲ್ಲಿ ರೋಹಿತ್ ಡೆಕ್ಕನ್ ಚಾರ್ಜರ್ಸ್ ಪರ ಆಡಿದರೆ, ಕೊಹ್ಲಿ ಆರ್‌ಸಿಬಿಯಲ್ಲೇ ನೆಲೆಯೂರಿದರು.
ಸಂಭಾವನೆಯ ದಿಕ್ಕನ್ನೇ ಬದಲಿಸಿದ 2011ರ ಹರಾಜು
2011ರ ಮೆಗಾ ಹರಾಜು ಇಬ್ಬರ ಸಂಭಾವನೆಯ ದಿಕ್ಕನ್ನೇ ಬದಲಿಸಿತು. ಮುಂಬೈ ಇಂಡಿಯನ್ಸ್ ತಂಡವು ರೋಹಿತ್ ಶರ್ಮಾ ಅವರನ್ನು ಸುಮಾರು ₹9.06 ಕೋಟಿಗೆ (2 ಮಿಲಿಯನ್ ಡಾಲರ್) ತನ್ನ ತೆಕ್ಕೆಗೆ ಹಾಕಿಕೊಂಡಿತು. ಅದೇ ವೇಳೆ ಆರ್‌ಸಿಬಿ ವಿರಾಟ್ ಕೊಹ್ಲಿ ಅವರನ್ನು ₹8.16 ಕೋಟಿಗೆ ಉಳಿಸಿಕೊಂಡಿತು. 2012 ಮತ್ತು 2013ರಲ್ಲಿ ಇಬ್ಬರ ವೇತನವೂ ಏರಿಕೆ ಕಂಡಿತು.
2013ರಲ್ಲಿ ಇಬ್ಬರೂ ಕ್ರಮವಾಗಿ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ತಂಡಗಳ ನಾಯಕತ್ವ ವಹಿಸಿಕೊಂಡರು. 2014ರ ಮೆಗಾ ಹರಾಜಿನಲ್ಲಿ ಇಬ್ಬರೂ ಸಮಾನವಾಗಿ ವಾರ್ಷಿಕ ₹12.5 ಕೋಟಿ ಸಂಭಾವನೆ ಪಡೆದರು (2017ರವರೆಗೆ ಇದೇ ಮೊತ್ತ ಮುಂದುವರಿಯಿತು).
2018ರಿಂದ 2024ರವರೆಗಿನ ಬದಲಾವಣೆಗಳು..
2018ರ ಆವೃತ್ತಿಗೆ ಮುನ್ನ ಆರ್‌ಸಿಬಿ ಗರಿಷ್ಠ ಮಿತಿಯನ್ನೂ ಮೀರಿ ವಿರಾಟ್ ಕೊಹ್ಲಿ ಅವರಿಗೆ ಪ್ರತಿ ಋತುವಿಗೆ ₹17 ಕೋಟಿ ನೀಡಲು ನಿರ್ಧರಿಸಿತು. ಅದೇ ಸಮಯದಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ನಲ್ಲಿ ₹15 ಕೋಟಿ ಸಂಭಾವನೆ ಪಡೆದರು. ರೋಹಿತ್ ನಾಯಕತ್ವದಲ್ಲೇ ಮುಂಬೈ ತಂಡ 2019 ಮತ್ತು 2020ರಲ್ಲಿ ಪ್ರಶಸ್ತಿ ಗೆದ್ದಿತು.
2022ರಲ್ಲಿ ವಿರಾಟ್ ಕೊಹ್ಲಿ ಅವರು ಸ್ವಯಂಪ್ರೇರಿತವಾಗಿ ತಮ್ಮ ವೇತನವನ್ನು ₹2 ಕೋಟಿ ಕಡಿಮೆ ಮಾಡಿಕೊಂಡು ₹15 ಕೋಟಿ ರೂಪಾಯಿಗೆ ಒಪ್ಪಿಕೊಂಡರು. ಮತ್ತೊಂದೆಡೆ ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್‌ನ ಪ್ರಮುಖ ಆಟಗಾರನಾಗಿ ₹16 ಕೋಟಿ ಸಂಭಾವನೆ ಪಡೆದರು (2024ರವರೆಗೆ ಇದೇ ಮೊತ್ತ ಇತ್ತು).
2025-2026ರಲ್ಲಿ ದಾಖಲೆಯ ಏರಿಕೆ..
2025ರಲ್ಲಿ ಆರ್‌ಸಿಬಿ ಕೊಹ್ಲಿ ಅವರ ಸಂಭಾವನೆಯನ್ನು ₹6 ಕೋಟಿ ಹೆಚ್ಚಿಸಿ ₹21 ಕೋಟಿಗೆ ಏರಿಸಿತು. ಇದು ಐಪಿಎಲ್ ಇತಿಹಾಸದಲ್ಲಿ ಭಾರತೀಯ ಆಟಗಾರನೊಬ್ಬ ಪಡೆದ ಅತ್ಯಧಿಕ ರಿಟೆನ್ಷನ್ ಮೊತ್ತ. ಮುಂಬೈ ಇಂಡಿಯನ್ಸ್ ಜಸ್ಪ್ರೀತ್ ಬುಮ್ರಾ ಅವರಿಗೆ ಆದ್ಯತೆ ನೀಡಿ, ರೋಹಿತ್ ಅವರನ್ನು ₹16.3 ಕೋಟಿ ರೂಪಾಯಿಗೆ ಉಳಿಸಿಕೊಂಡಿತು. 2026ರಲ್ಲೂ ಇಬ್ಬರ ಸಂಭಾವನೆ ಇದೇ ಮಟ್ಟದಲ್ಲಿ ಮುಂದುವರಿಯಿತು.
19 ಋತುಗಳ ಸಂಭಾವನೆ ಹೋಲಿಕೆ
* ವಿರಾಟ್ ಕೊಹ್ಲಿ ಒಟ್ಟು ಸಂಭಾವನೆ ₹232.15 ಕೋಟಿ.. (2008ರಲ್ಲಿ ₹20.1 ಲಕ್ಷದಿಂದ ಆರಂಭವಾಗಿ 2026ರಲ್ಲಿ ₹21 ಕೋಟಿವರೆಗೆ ತಲುಪಿದೆ).
* ರೋಹಿತ್ ಶರ್ಮಾ (ಒಟ್ಟು): ₹230.14 ಕೋಟಿ (2008ರಲ್ಲಿ ₹3.01 ಕೋಟಿಯಿಂದ ಆರಂಭವಾಗಿ 2026ರಲ್ಲಿ ₹16.3 ಕೋಟಿವರೆಗೆ ತಲುಪಿದೆ). ಈ ಮೂಲಕ ವಿರಾಟ್ ಕೊಹ್ಲಿ ಅವರು ರೋಹಿತ್ ಶರ್ಮಾ ಅವರಿಗಿಂತ ₹2.01 ಕೋಟಿ ಹೆಚ್ಚು ಸಂಭಾವನೆ ಪಡೆದಿದ್ದಾರೆ.
ಮೈದಾನದಲ್ಲೂ ಇಬ್ಬರ ಸಾಧನೆ ಗಮನಾರ್ಹವಾಗಿದ್ದು, ರೋಹಿತ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಐದು ಪ್ರಶಸ್ತಿಗಳನ್ನು (2013, 2015, 2017, 2019, 2020) ಎತ್ತಿ ಹಿಡಿದರೆ, ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಒಟ್ಟು ರನ್‌ಗಳ ವಿಚಾರದಲ್ಲಿ ವಿರಾಟ್ ಕೊಹ್ಲಿ ಅವರೇ ಮುಂಚೂಣಿಯಲ್ಲಿದ್ದಾರೆ.


Click it and Unblock the Notifications
