Raghu Dixit Marriage: 50ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಸಿಂಗರ್ ರಘು ದೀಕ್ಷಿತ್
ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ (Raghu Dixit) ಎರಡನೇ ಮದುವೆ ಸರಳವಾಗಿ ನೆರವೇರಿದೆ. ಕನ್ನಡದ ಖ್ಯಾತ ಗಾಯಕಿ ಹಾಗೂ ಗ್ರ್ಯಾಮಿ-ನಾಮನಿರ್ದೇಶಿತ ಗಾಯಕಿ ವಾರಿಜಶ್ರೀ ವೇಣುಗೋಪಾಲ್ (Varijashree Venugopal) ಅವರೊಂದಿಗೆ ರಘು ದೀಕ್ಷಿತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆ ನಡೆದಿದೆ. ವಾರಿಜಶ್ರೀ ಅವರು ಖ್ಯಾತ ಗಾಯಕಿ ಹಾಗೂ ಕೊಳಲು ವಾದಕಿಯಾಗಿದ್ದು, ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ.
ರಘು ದೀಕ್ಷಿತ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, ಈ ಹಿಂದೆ ಕೊರಿಯೋಗ್ರಾಫರ್ ಹಾಗೂ ಡ್ಯಾನ್ಸರ್ ಮಯೂರಿ ಉಪಾಧ್ಯ ಅವರನ್ನು ವಿವಾಹವಾಗಿದ್ದರು. ಆದರೆ 2019ರಲ್ಲಿ ಇಬ್ಬರೂ ಪರಸ್ಪರ ಡಿವೋರ್ಸ್ ಪಡೆದಿದ್ದರು. ಇದಾದ ಆರು ವರ್ಷಗಳ ಬಳಿಕ ರಘು ದೀಕ್ಷಿತ್ ಎರಡನೇ ಮದುವೆಯಾಗಲು ನಿರ್ಧರಿಸಿ, ವಾರಿಜಶ್ರೀ ಅವರೊಂದಿಗೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. 34 ವಯಸ್ಸಿನ ವಾರಿಜಶ್ರೀ ಅವರನ್ನು 50 ವರ್ಷದ ರಘು ದೀಕ್ಷಿತ್ ವಿವಾಹವಾಗಿದ್ದಾರೆ.

ವಾರಿಜಶ್ರೀ ಅಥವಾ ರಘು ದೀಕ್ಷಿತ್ ಬಹಿರಂಗವಾಗಿ ತಮ್ಮ ಮದುವೆ ವಿಚಾರವನ್ನು ರಿವೀಲ್ ಮಾಡಲಿಲ್ಲ. ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಅಪ್‌ಡೇಟ್ ನೀಡಲಿಲ್ಲ. ಕೆಲವರನ್ನಷ್ಟೇ ಮದುವೆಗೆ ಆಹ್ವಾನಿಸಿದ್ದು, ಈ ಪೈಕಿ ಕೆಲವರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶಾಸ್ತ್ರೋಕ್ತವಾಗಿ ರಘು ದೀಕ್ಷಿತ್ ಅವರ ಮದುವೆ ನೆರವೇರಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗಿವೆ. ನವದಂಪತಿಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.
ರಘು ದೀಕ್ಷಿತ್ ಹಾಗೂ ವಾರಿಜಶ್ರೀ ಇಬ್ಬರೂ ಹಲವು ವರ್ಷಗಳಿಂದ ಸ್ನೇಹಿತರು. ಅಲ್ಲದೆ ಹಲವು ವೇದಿಕೆಗಳಲ್ಲಿ ಒಟ್ಟಿಗೆ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಸಾಕಷ್ಟು ಆಲ್ಬಂಗಳಲ್ಲಿ ಒಟ್ಟಿಗೆ ಕೆಲಸ ಸಹ ಮಾಡಿದ್ದಾರೆ. ನನ್ನ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಇದೆಲ್ಲವೂ ಆಕಸ್ಮಿಕ. ನನ್ನ ಜೀವನದ ಉಳಿದ ಭಾಗವನ್ನ ಏಕಾಂಕಿಯಾಗಿ ಕಳೆಯಬೇಕು ಎಂದುಕೊಂಡಿದ್ದೆ. ಆದರೆ ನಮ್ಮ ಸ್ನೇಹ ಸಹಜವಾಗಿ ಪ್ರೀತಿಗೆ ಮೂಡಿತು. ವಾರಿಜಶ್ರೀ ಅವರ ಪೋಷಕರ ಆಶೀರ್ವಾದದೊಂದಿಗೆ ನಮ್ಮ ಜೀವನದ ಈ ಹೊಸ ಅಧ್ಯಾಯವನ್ನ ಒಟ್ಟಿಗೆ ಶುರು ಮಾಡಲಿದ್ದೇವೆ ಎಂದು ರಘು ದೀಕ್ಷಿತ್ ಮಾಧ್ಯಮವೊಂದಕ್ಕೆ ಹೇಳಿದ್ದರು.
ರಘು ದೀಕ್ಷಿತ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಬಹುಭಾಷೆಗಳಲ್ಲಿ ತಮ್ಮ ಗಾಯನದ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ರಘು ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿತ್ತು. ಬಳಿಕ ಮೊದಲ ಪತ್ನಿ ಜೊತೆಗೆ ಡಿವೋರ್ಸ್ ಪಡೆದಿದ್ದರು. ಮೊದಲ ಪತ್ನಿ ಮಯೂರಿ ಅವರೊಂದಿಗೆ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಎರಡನೇ ಮದುವೆಯಾಗಿದ್ದಾರೆ.












Click it and Unblock the Notifications