ವೈಭವ್ ಸೂರ್ಯವಂಶಿ ಕಾಲಿಗೆ ನಮಸ್ಕರಿಸಲು ಯತ್ನಿಸಿದ ಪುಟ್ಟ ಅಭಿಮಾನಿ; 'ವಂಡರ್ ಕಿಡ್' ಸರಳ ನಡೆಗೆ ನೆಟ್ಟಿಗರು ಫಿದಾ
Vaibhav Sooryavanshi Fan: ಟೀಮ್ ಇಂಡಿಯಾ ಕ್ರಿಕೆಟ್‌ನ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದ್ದಾರೆ. ಇದೀಗ ಪುಟ್ಟ ಬಾಲ ಅಭಿಮಾನಿಯೊಬ್ಬ ತಮ್ಮ ಪಾದ ಮುಟ್ಟಿ ನಮಸ್ಕರಿಸಲು ಬಂದಾಗ ವೈಭವ್ ತೋರಿದ ಸರಳತೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಐಪಿಎಲ್ 2027 ಹರಾಜು ಪ್ರಕ್ರಿಯೆಯ ಹೊಸ್ತಿಲಲ್ಲೇ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಸರಳ ಮತ್ತು ಹೃದಯಸ್ಪರ್ಶಿ ಪ್ರತಿಕ್ರಿಯೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಬಾಲ ಅಭಿಮಾನಿಯೊಬ್ಬ ವೈಭವ್ ಅವರ ಪಾದ ಮುಟ್ಟಲು ಮುಂದಾದಾಗ, ಆಟಗಾರ ತೋರಿದ ಪ್ರತಿಕ್ರಿಯೆ ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಡಿಯೋದಲ್ಲಿ ಏನಿದೆ?
ಹೊಸದಾಗಿ ವೈರಲ್ ಆಗಿರುವ ವಿಡಿಯೋದಲ್ಲಿ ಹದಿಹರೆಯದ 15 ವರ್ಷದ ವೈಭವ್ ಸೂರ್ಯವಂಶಿ ಪುಟ್ಟ ಅಭಿಮಾನಿಯೊಬ್ಬನ ಜೊತೆ ನಿಂತು ಫೋಟೋಗೆ ಪೋಸ್ ನೀಡುತ್ತಿರುವುದು ಕಂಡುಬರುತ್ತದೆ. ಫೋಟೋ ಕ್ಲಿಕ್ ಆದ ಬೆನ್ನಲ್ಲೇ, ಆ ಬಾಲಕ ದಿಢೀರ್ ಬಾಗಿ ಗೌರವದ ಸಂಕೇತವಾಗಿ ವೈಭವ್ ಅವರ ಕಾಲುಗಳನ್ನು ಮುಟ್ಟಲು ಯತ್ನಿಸುತ್ತಾನೆ. ತಾನೂ ಇನ್ನೂ ಬಾಲಕನಾಗಿದ್ದು, ಈ ರೀತಿಯ ಅನಿರೀಕ್ಷಿತ ನಡೆಯಿಂದ ವೈಭವ್ ಕ್ಷಣಕಾಲ ದಂಗಾಗುವಂತಾಗುತ್ತದೆ. ಅವರ ಈ ಸಹಜ ಮತ್ತು ಮುಗ್ಧ ಪ್ರತಿಕ್ರಿಯೆ ಈ ಸನ್ನಿವೇಶವನ್ನು ಇನ್ನಷ್ಟು ವಿಶೇಷವಾಗಿಸಿದೆ.
ವೈಭವ್‌ಗೆ ಹೆಚ್ಚುತ್ತಿರುವ ಅಭಿಮಾನಿಗಳ ಬಳಗ
ರಾಜಸ್ಥಾನ್ ರಾಯಲ್ಸ್ ತಂಡದ ಈ ಯುವ ಆಟಗಾರನ ಸುತ್ತಲಿನ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಭಾರತ 'ಎ' ತಂಡದ ಪರ ನೀಡಿದ ಭರ್ಜರಿ ಪ್ರದರ್ಶನಗಳು ಐಪಿಎಲ್ 2027 ಹರಾಜಿಗೆ ಮುನ್ನ ಅವರನ್ನು ದೊಡ್ಡ ಮಟ್ಟದ ಚರ್ಚೆಯ ವಿಷಯವನ್ನಾಗಿ ಮಾಡಿವೆ. 2026ರ ನವೆಂಬರ್ 24ರಂದು ದೋಹಾದಲ್ಲಿ ನಡೆದ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಪಂದ್ಯದಲ್ಲಿ ಯುಎಇ ವಿರುದ್ಧ ಕೇವಲ 53 ಎಸೆತಗಳಲ್ಲಿ 204 ರನ್ ಚಚ್ಚಿದ ಅವರ ಸ್ಫೋಟಕ ಇನ್ನಿಂಗ್ಸ್ ಎಲ್ಲರ ಗಮನ ಸೆಳೆದಿತ್ತು. ಈ ಅಮೋಘ ಆಟದ ಬಳಿಕ ಯುವ ಕ್ರಿಕೆಟ್ ಅಭಿಮಾನಿಗಳಲ್ಲಿ ವೈಭವ್ ಮೇಲಿನ ಪ್ರೀತಿ ಮತ್ತು ಕುತೂಹಲ ಮತ್ತಷ್ಟು ಹೆಚ್ಚಿದೆ.
ವೈಭವ್ ಸರಳ ನಡೆಗೆ ಭಾರಿ ಮೆಚ್ಚುಗೆ
ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆಗಳ ಮೂಲಕ ಗಮನ ಸೆಳೆಯುತ್ತಿರುವ ವೈಭವ್ ಸೂರ್ಯವಂಶಿ, ಈಗಾಗಲೇ ಅನೇಕ ಪುಟ್ಟ ಕ್ರಿಕೆಟ್ ಆಸಕ್ತರಿಗೆ ಸ್ಫೂರ್ತಿಯಾಗಿದ್ದಾರೆ. ಅಭಿಮಾನಿಯ ದಿಢೀರ್ ನಡೆಗೆ ವೈಭವ್ ನೀಡಿದ ಪ್ರತಿಕ್ರಿಯೆಯನ್ನು ಕಂಡು ನೆಟ್ಟಿಗರು ಸಂಭ್ರಮಿಸುತ್ತಿದ್ದು, ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುವ ಮೂಲಕ ಯುವ ಆಟಗಾರನ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಮೈದಾನದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ತಂಡದ ಬೌಲರ್‌ಗಳನ್ನು ಕಂಗೆಡಿಸುವ ವೈಭವ್ ಸೂರ್ಯವಂಶಿ, ಮೈದಾನದ ಹೊರಗೆ ಅಭಿಮಾನಿಗಳೊಂದಿಗಿನ ತಮ್ಮ ಸಹಜ ನಡೆಗಳಿಂದಲೂ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.
A 12-Year-Old Boy Was Seen Taking Blessings From 15-Year-Old Vaibhav Sooryavanshi 🤩 https://t.co/x3JES7omI1
— Khan (@Khanmohammed12) November 28, 2026
ವೈಭವ್ ಸೂರ್ಯವಂಶಿ ಆಟಕ್ಕೆ ಅಲಸ್ಟೇರ್ ಕುಕ್ ಫಿದಾ
ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ನಿರ್ಭೀತ ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಅಲಸ್ಟೇರ್ ಕುಕ್ ಮನಸೋತಿದ್ದಾರೆ. ವೈಭವ್ ಅವರ ಆಟದ ವೇಗ, ನಿಖರತೆ ಮತ್ತು ದಾಖಲೆ ಮುರಿಯುವ ಹಸಿವನ್ನು ಶ್ಲಾಘಿಸಿರುವ ಕುಕ್, ಇಂತಹ ಪ್ರತಿಭೆಯನ್ನು ಹಿಂದೆಂದೂ ಕಂಡಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೈಭವ್ ಅವರ ಬ್ಯಾಟಿಂಗ್ ಸಾಮರ್ಥ್ಯದ ಕುರಿತು ಮಾತನಾಡಿರುವ ಕುಕ್, ಆಟಗಾರನ ವಯಸ್ಸನ್ನು ಗಣನೆಗೆ ತೆಗೆದುಕೊಳ್ಳದಿದ್ದರೂ ಅವರ ಹೊಡೆಯುವ ಶಾಟ್‌ಗಳಲ್ಲಿ ನಿಖರತೆ, ಸ್ಥಿರತೆ ಮತ್ತು ಬಲ ಅಚ್ಚರಿ ಹುಟ್ಟಿಸುವಂತಿದೆ ಎಂದು ಹೇಳಿದ್ದಾರೆ.
ಬ್ಯಾಟಿಂಗ್‌ನಲ್ಲಿರುವ ವೇಗ ಮತ್ತು ಶಾಟ್‌ಗಳ ವೈವಿಧ್ಯಮಯವೇ ಕುಕ್ ಅವರನ್ನು ಹೆಚ್ಚು ಆಕರ್ಷಿಸಿದೆ. ಹೆಚ್ಚಿನ ಬ್ಯಾಟರ್‌ಗಳು ತಮಗೆ ಒಗ್ಗುವ ನಿರ್ದಿಷ್ಟ ದಿಕ್ಕಿಗೆ ಚೆಂಡನ್ನು ತಳ್ಳಲು ಅಥವಾ ಬಾರಿಸಲು ಕಾಯುತ್ತಾರೆ. ಆದರೆ ವೈಭವ್ ಅವರು ಮೈದಾನದ ಯಾವುದೇ ದಿಕ್ಕಿಗೂ ಚೆಂಡನ್ನು ಸಿಕ್ಸರ್‌ಗೆ ಅಟ್ಟುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಕುಕ್ ಹೊಗಳಿದ್ದಾರೆ.


Click it and Unblock the Notifications
