ತುಮಕೂರಲ್ಲಿ ಗ್ರೀನ್ ಹೈಡ್ರೋಜನ್, ಡೇಟಾ ಬ್ಯಾಂಕ್ ಯೋಜನೆ: 35000 ಉದ್ಯೋಗ ಸೃಷ್ಟಿ ಗುರಿ, ಪರಮೇಶ್ವರ್ ಮಹತ್ವದ ಮಾಹಿತಿ!
ತುಮಕೂರು: ಜಿಲ್ಲೆಯ ಯುವಕರಿಗೆ ಉದ್ಯೋಗಾವಕಾಶಗಳ ಕಲ್ಪಿಸುವ ಉದ್ದೇಶದಿಂದ ತುಮಕೂರಿಗೆ ಇನ್ನಷ್ಟು ಕೈಗಾರಿಕೆಗಳನ್ನು ತರಲು ಸಂಕಲ್ಪ ಮಾಡಿದ್ದೇನೆ. ಈಗಾಗಲೇ ಹಲವು ಕೈಗಾರಿಕೆಗಳು ಜಿಲ್ಲೆಗೆ ಬರಲು ಮುಂದಾಗಿವೆ. ಗ್ರೀನ್ ಹೈಡ್ರೋಜನ್ ಮತ್ತು ಡೇಟಾ ಬ್ಯಾಂಕ್ ಕ್ಷೇತ್ರದಲ್ಲಿ ಸುಮಾರು 35 ಸಾವಿರ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಯೋಜನೆ ಇದೆ ಎಂದು ತುಮಕೂರು ಜಿಲ್ಲೆ ಕೈಗಾರಿಕಾ ಯೋಜನೆಗಳು, ಅಭಿವೃದ್ಧಿ ಕುರಿತು ಡಿಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ತುಮಕೂರು ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಗರದ ಅಮಾನಿಕೆರೆ ಆವರಣದಲ್ಲಿರುವ ಗಾಜಿನಮನೆಯಲ್ಲಿ ನಡೆದ ರಾಜ್ಯಮಟ್ಟದ ಯುವಜನೋತ್ಸವ 2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತುಮಕೂರು ಜಿಲ್ಲೆಯಲ್ಲಿ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಉಪಕರಣಗಳು, ಮದ್ದುಗುಂಡುಗಳು ಮತ್ತು ಕ್ಷಿಪಣಿಗಳ ತಯಾರಿಕೆಗೂ ಕೈಗಾರಿಕೆಗಳನ್ನು ಸ್ಥಾಪಿಸುವ ಕುರಿತು ಇತ್ತೀಚೆಗೆ ಮುಖ್ಯಮಂತ್ರಿ ಹಾಗೂ ಕಂಪನಿಯ ಪ್ರತಿನಿಧಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಮಾಹಿತಿ ಕೊಟ್ಟರು.
ತುಮಕೂರಿಗೆ ಮೆಟ್ರೋ ರೈಲು, ವಿದೇಶಿ ಬಂಡವಾಳ..
ತುಮಕೂರಿಗೆ ಮೆಟ್ರೋ ರೈಲು ತರಬೇಕೆಂಬ ಪ್ರಯತ್ನ ಹಲವು ವರ್ಷಗಳಿಂದ ನಡೆಯುತ್ತಿದೆ. ಈಗಾಗಲೇ ಇದರ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದೆ. ಇತ್ತೀಚೆಗೆ ವಿದೇಶಿ ಹೂಡಿಕೆದಾರರು ತುಮಕೂರಿಗೆ ಬಂದು ಬಂಡವಾಳ ಹೂಡಲು ಆಸಕ್ತಿ ತೋರಿದ್ದಾರೆ. ಈ ಪ್ರಸ್ತಾವನೆಗೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಹೇಳಿದರು.
ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿಗೆ ಆದ್ಯತೆ
ಭಾರತದಲ್ಲಿ ಪ್ರತಿವರ್ಷ ಸುಮಾರು 1.20 ಕೋಟಿ ಪದವೀಧರರು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಂದ ಹೊರ ಬರುತ್ತಿದ್ದಾರೆ. ಇವರಲ್ಲಿ ಸುಮಾರು 24 ಲಕ್ಷ ಮಂದಿ ಬಿ.ಎ., 12 ಲಕ್ಷ ಮಂದಿ ಬಿ.ಎಸ್ಸಿ., 12 ಲಕ್ಷ ಮಂದಿ ಬಿ.ಕಾಂ. ಹಾಗೂ ಸುಮಾರು 10 ಲಕ್ಷ ಮಂದಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೋರ್ಸ್‌ಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಆದರೆ ಇವರಲ್ಲಿ ಕೇವಲ ಶೇ.40ರಷ್ಟು ಮಂದಿಗೆ ಮಾತ್ರ ಉದ್ಯೋಗ ದೊರೆಯುತ್ತಿದ್ದು, ಉಳಿದ ಶೇ.60ರಷ್ಟು ಮಂದಿ ಉದ್ಯೋಗ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ವಿವರಿಸಿದರು.
ತುಮಕೂರು: ಯುವಜನೋತ್ಸವ
ಯುವಜನೋತ್ಸವದಂತಹ ಕಾರ್ಯಕ್ರಮಗಳು ಯುವಕರಿಗೆ ನಾಡಿನ ಇತಿಹಾಸ, ಸಾಹಿತ್ಯ, ಕ್ರೀಡೆ, ಸಂಸ್ಕೃತಿ ಮತ್ತು ಪರಂಪರೆಯ ಅರಿವು ಮೂಡಿಸುವುದರ ಜೊತೆಗೆ ಅವರಲ್ಲಿ ರಾಷ್ಟ್ರೀಯ ಮನೋಭಾವನೆ, ನಾಯಕತ್ವದ ಗುಣ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸಲು ಸಹಕಾರಿಯಾಗುತ್ತವೆ. ಯುವಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಯುವಜನತೆಯಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಡಿಜಿಟಲ್ ಸಾಕ್ಷರತೆ, ಮಾದಕ ವಸ್ತುಗಳ ದುರುಪಯೋಗದ ಕುರಿತು ಅರಿವು ಮತ್ತು ನಾಯಕತ್ವದ ಗುಣ ಬೆಳೆಸುವುದು ಅಗತ್ಯವಾಗಿದೆ. ನಾಯಕತ್ವದ ಗುಣ ಹೊಂದಿರುವ ಯುವಕರಿಗೆ ಅವಕಾಶ ಕಲ್ಪಿಸಬೇಕು. ಸಮಾಜದ ಜವಾಬ್ದಾರಿ ಹೊತ್ತುಕೊಳ್ಳುವ ಸಾಮಾಜಿಕ ನಾಯಕತ್ವವನ್ನೂ ಬೆಳೆಸಬೇಕು ಎಂದರು.
ಯುವಕರು ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಅವಕಾಶಗಳನ್ನು ಕಲ್ಪಿಸುವುದು, ಸಮಾಜದ ಜವಾಬ್ದಾರಿಯನ್ನು ಹೊತ್ತುಕೊಳ್ಳುವಂತೆ ಮಾಡುವುದು ಮತ್ತು ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವುದು ಅತ್ಯಂತ ಪ್ರಮುಖವಾಗಿದೆ ಎಂದರು.
1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ದೇಶದ ಸಾಕ್ಷರತಾ ಪ್ರಮಾಣ ಕೇವಲ ಶೇ.12ರಷ್ಟಿತ್ತು. ಇಂದು ಇಷ್ಟು ದೊಡ್ಡ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಶೇ.80ರಷ್ಟು ಜನರು ಅಕ್ಷರಸ್ಥರಾಗಿದ್ದಾರೆ. ಇದು ಸಾಮಾನ್ಯ ಸಾಧನೆಯಲ್ಲ. ರಾಜಕೀಯದಲ್ಲಿ ಟೀಕೆ-ಟಿಪ್ಪಣಿಗಳು ಸಹಜ. ಆದರೆ ಅಭಿವೃದ್ಧಿಯ ದೃಷ್ಟಿಯಿಂದ ಭಾರತ ವೇಗವಾಗಿ ಮುನ್ನಡೆಯುತ್ತಿದೆ ಎಂಬುದನ್ನು ಯುವಕರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಇತ್ತೀಚೆಗೆ ಸಿದ್ಧಾರ್ಥ ಸಂಸ್ಥೆಯಲ್ಲಿ ಇಸ್ರೋ ಅಧ್ಯಕ್ಷರು ಮಾತನಾಡುವ ಸಂದರ್ಭದಲ್ಲಿ ಚಂದ್ರಯಾನದ ಯಶಸ್ಸಿನ ಕುರಿತು ವಿವರಿಸಿದ್ದರು. ಚಂದ್ರಯಾನ ಚಂದ್ರನ ಮೇಲೆ ಇಳಿಯಲು ನಡೆದ ತಯಾರಿ ಮತ್ತು ಅದರಲ್ಲಿ ತೊಡಗಿಸಿಕೊಂಡಿದ್ದ ವಿಜ್ಞಾನಿಗಳ ಶ್ರಮವನ್ನು ಅವರು ವಿವರಿಸಿದ್ದರು. ಚಂದ್ರಯಾನಕ್ಕೆ ಅಗತ್ಯವಿರುವ ಎಂಜಿನ್‌ನ ಭಾಗಗಳನ್ನು ತುಮಕೂರಿನಲ್ಲಿಯೂ ತಯಾರಿಸಲಾಗಿದ್ದು, ಇಲ್ಲಿ ತಯಾರಾದ ಭಾಗಗಳು ಚಂದ್ರಯಾನದಲ್ಲಿ ಬಳಕೆಯಾಗಿವೆ. ತುಮಕೂರಿನಲ್ಲಿಯೇ ತಯಾರಾದ ಭಾಗ ಚಂದ್ರನ ಮೇಲೆ ಇಳಿದಿದೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಭಾರತಕ್ಕೆ ಇಂತಹ ಸಾಮರ್ಥ್ಯವಿದೆ ಎಂಬುದನ್ನು ಯುವಕರು ಸ್ಮರಿಸಬೇಕು ಎಂದರು.
ಯುವಕರನ್ನು ಒಗ್ಗೂಡಿಸಲು ಭಾರತ್ ಜೋಡೋ ಸಂಘಗಳು
ರಾಹುಲ್ ಗಾಂಧಿ ಅವರು ದೇಶವನ್ನು ಒಗ್ಗೂಡಿಸುವ ಉದ್ದೇಶದಿಂದ ಸುಮಾರು 3,600 ಕಿಲೋಮೀಟರ್ ಪಾದಯಾತ್ರೆ ನಡೆಸಿ ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದರು. ರಾಜ್ಯದಲ್ಲಿಯೂ ಯುವಕರನ್ನು ಒಗ್ಗೂಡಿಸುವ ಉದ್ದೇಶದಿಂದ ಭಾರತ್ ಜೋಡೋ ಸಂಘಗಳನ್ನು ಸ್ಥಾಪಿಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ವಿವಿಧ ಭಾಷೆ, ಜಾತಿ ಮತ್ತು ಸಮುದಾಯಗಳಿಗೆ ಸೇರಿದ ಯುವಕರನ್ನು ಒಂದೆಡೆ ಸೇರಿಸಿ ಅವರಲ್ಲಿ ಒಗ್ಗಟ್ಟು ಬೆಳೆಸಬೇಕು ಎಂಬ ಉದ್ದೇಶದಿಂದ ಈ ಸಂಘಗಳನ್ನು ರಚಿಸಲಾಗಿದೆ. ಇದಕ್ಕಾಗಿ ₹1,000 ಕೋಟಿ ಮೀಸಲಿಡಲಾಗಿದ್ದು, ಈಗಾಗಲೇ ಸುಮಾರು 10 ಲಕ್ಷ ಸದಸ್ಯತ್ವ ನೋಂದಣಿಯಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಯುವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ಪ್ರತಿ ಸಂಘಕ್ಕೆ ವರ್ಷಕ್ಕೆ ₹10 ಲಕ್ಷ ಅನುದಾನ ನೀಡಲಾಗುತ್ತದೆ. ಈ ಹಣವನ್ನು ಸಾಹಿತ್ಯ, ಸಂಸ್ಕೃತಿ, ನಾಟಕ, ಬೀದಿ ನಾಟಕ, ಕ್ರೀಡೆ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು. ಯುವಕರಲ್ಲಿ ಸಾಮಾಜಿಕ ಜವಾಬ್ದಾರಿ, ಸಾಂಸ್ಕೃತಿಕ ಅರಿವು ಮತ್ತು ರಾಷ್ಟ್ರೀಯ ಮನೋಭಾವನೆ ಬೆಳೆಸುವುದು ಈ ಸಂಘಗಳ ಉದ್ದೇಶವಾಗಿದೆ.
ಯುವಜನೋತ್ಸವದಲ್ಲಿ ಭಾಗವಹಿಸುವ ಯುವಕರಿಗೆ ಶುಭಾಶಯ: ತುಮಕೂರು ಆತಿಥ್ಯಕ್ಕೆ ಹೆಸರಾಗಿರುವ ಜಿಲ್ಲೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಯುವಕರನ್ನು ಜಿಲ್ಲಾಡಳಿತ ಉತ್ತಮವಾಗಿ ನೋಡಿಕೊಳ್ಳಲಿದೆ. ಯುವಕರ ಯೋಗಕ್ಷೇಮ ನಮಗೆ ಬಹಳ ಮುಖ್ಯ. ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಇಲ್ಲಿಂದ ಹೊಸ ಅನುಭವ, ಜ್ಞಾನ ಮತ್ತು ಕಲಿಕೆಯನ್ನು ಪಡೆದುಕೊಂಡು ಹೋಗಬೇಕು ಎಂದು ಹೇಳಿದರು.
ರಾಷ್ಟ್ರೀಯ ಏಕತೆ ನಮ್ಮೆಲ್ಲರ ಜವಾಬ್ದಾರಿ
ರಾಷ್ಟ್ರೀಯ ಏಕತೆ ಮತ್ತು ರಾಷ್ಟ್ರೀಯ ಮನೋಭಾವನೆ ಇಂದಿನ ಸಂದರ್ಭದಲ್ಲಿ ಅತ್ಯಂತ ಮುಖ್ಯವಾಗಿವೆ. ದೇಶವನ್ನು ಮತ್ತು ಸಮಾಜವನ್ನು ಒಡೆಯುವ ಶಕ್ತಿಗಳು ಯಾವಾಗಲೂ ಇರುತ್ತವೆ. ಅಂತಹ ಶಕ್ತಿಗಳನ್ನು ಮೆಟ್ಟಿ ನಿಂತು ಭಾರತೀಯತೆ ಮತ್ತು ರಾಷ್ಟ್ರೀಯತೆಯನ್ನು ಉಳಿಸಿ ಬೆಳೆಸುವುದು ಯುವಜನತೆಯ ಜವಾಬ್ದಾರಿಯಾಗಿದೆ ಎಂದು ಹೇಳಿದರು.





Click it and Unblock the Notifications
