ಜೆಡಿಎಸ್ ಅಭ್ಯರ್ಥಿಯನ್ನೇ ಸೋಲಿಸಲು ಮುಂದಾದ್ರಾ ದೇವೇಗೌಡರ ಸೊಸೆ?
Recommended Video

ದೇವೇಗೌಡರ ಮನೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಗುಟ್ಟಿನ ವಿಷಯವೇನಲ್ಲ. ಪ್ರಜ್ವಲ್ ರೇವಣ್ಣ ಅವರ ಟಿಕೆಟ್ ವಿಷಯಕ್ಕೆ ಇತ್ತೀಚೆಗೆ ತಾನೆ ರಂಪ ರಾಮಾಯಣ ಆಗಿ ಕೊನೆಗೆ ಹಾಗೂ ಹೀಗೂ ಮನಸ್ತಾಪ ಶಮನ ಮಾಡಲಾಯಿತು. ಆದರೆ ಅದು ಇನ್ನೂ ಆರಿದಂತಿಲ್ಲ.
ಹೊಸ ಸುದ್ದಿಯೆಂದರೆ, ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಜೆಡಿಎಸ್ ಅಭ್ಯರ್ಥಿಯನ್ನೇ ಸೋಲಿಸಲು ತಂತ್ರ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಕೆ.ಆರ್.ನಗರ ಜೆಡಿಎಸ್ ಅಭ್ಯರ್ಥಿ ಸಾ.ರಾ.ಮಹೇಶ್ ಅವರನ್ನು ಸೋಲಿಸಲು ಭವಾನಿ ರೇವಣ್ಣ ಜೆಡಿಎಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ ಎನ್ನಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ವಿಡಿಯೋದಲ್ಲಿ ಭವಾನಿ ರೇವಣ್ಣ ಅವರು ಸಾಲಿಗ್ರಾಮದವರು ಎನ್ನಲಾದ ಜೆಡಿಎಸ್ ಕಾರ್ಯಕರ್ತರ ಬಳಿ ಮಾತನಾಡುತ್ತಿದ್ದು, ಯಾರ ಹೆಸರನ್ನೂ ಉಲ್ಲೇಖಿಸದೆ 'ಆ ತಂದೆ ಮಕ್ಕಳ ಆರ್ಭಟ ಹೆಚ್ಚಾಯಿತು, ಅವರು ಅಭ್ಯರ್ಥಿಗಳೆಂದು ಘೋಷಿಸಿದಾಗಲೇ ಹೀಗೆ, ಇನ್ನು ಗೆದ್ದುಬಿಟ್ಟರೆ ಎಷ್ಟು ಜನರನ್ನ ತುಳಿತಾರೋ ಏನೊ, ಅವರಿಗೆ ಬುದ್ಧಿ ಕಲಿಸಿ' ಎಂದು ಕಾರ್ಯಕರ್ತರಿಗೆ ಹೇಳುತ್ತಿದ್ದಾರೆ.
ಭವಾನಿ ರೇವಣ್ಣ ಮಾತಿಗೆ ತಲೆ ಆಡಿಸುತ್ತಿರುವ ಕಾರ್ಯಕರ್ತರು, 'ನೀವು ಕರಿ ನಾಯಿಯನ್ನು ಗೆಲ್ಲಿಸು ಎಂದರೂ ಗೆಲ್ಲಿಸುತ್ತೇವೆ' ಎಂದಿದ್ದಾರೆ.
ಈ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾ.ರಾ.ಮಹೇಶ್, 'ಭವಾನಿ ರೇವಣ್ಣ ಅವರು ನನ್ನ ಬಗ್ಗೆ ಮಾತನಾಡಿಲ್ಲವೆಂದೇ ನಂಬಿದ್ದೇನೆ, ನನಗೂ ರೇವಣ್ಣ ಕುಟುಂಬಕ್ಕೂ ಯಾವುದೇ ಮನಸ್ಥಾಪ ಇಲ್ಲ, ಈ ಬಗ್ಗೆ ವರಿಷ್ಠರ ಜತೆ ಚರ್ಚೆ ಮಾಡುತ್ತೇನೆ' ಎಂದಿದ್ದಾರೆ.












Click it and Unblock the Notifications