ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮಕೃಷ್ಣ-ವಿವೇಕಾನಂದರ ನಿವೇದಿತಾ, ತನ್ನದೆಲ್ಲವನ್ನೂ ಭಾರತದ ಏಳಿಗೆಗಾಗಿ ಸಮರ್ಪಿಸಿದ ಮಹಾತಾಯಿ

By ಸಿಂಚನ.ಎಂ.ಕೆ
|
Google Oneindia Kannada News

"ನಾನು ಸತ್ಯವಾಗಿ ಹೇಳುತ್ತಿದ್ದೇನೆ, ನಿನಗೆ ಇಲ್ಲಿ ಉಜ್ವಲ ಭವಿಷ್ಯ ದೊರೆಯುವುದು ಎಂಬುದನ್ನು ನಾನು ಅರಿತು ಕೊಂಡಿದ್ದೇನೆ. ನಮಗೆ ಈಗ ಬೇಕಾಗಿರುವುದು ಮನುಷ್ಯರಲ್ಲ, ಆದರೆ ಸ್ತ್ರೀ; ನಿಜವಾದ ಸಿಂಹಿಣಿ, ಯಾರು ಈ ಭಾರತದ ಅದರಲ್ಲೂ ವಿಶೇಷವಾಗಿ ಭಾರತದ ಸ್ತ್ರೀಯರ ಉದ್ಧಾರಕ್ಕಾಗಿ ಕಾರ್ಯ ಮಾಡಬಲ್ಲರೊ ಅಂತಹವರು", ಸ್ವಾಮಿ ವಿವೇಕಾನಂದರು ಮಾರ್ಗರೇಟ್ ಎಲಿಜಬೆತ್ ನೋಬೆಲ್ ಗೆ ಬರೆದ ಪತ್ರ.

ಈ ಪತ್ರದಿಂದ ಶುರುವಾಗುವುದು ಮಾರ್ಗರೇಟ್ ಎಲಿಜಬೆತ್ ನೋಬೆಲ್ ಎಂಬ ಐರಿಷ್ ಹೆಣ್ಣು ಮಗಳು ಭಾರತೀಯತನವನ್ನು ತನ್ನ ಉಸಿರನ್ನಾಗಿಸಿಕೊಂಡು, ಭಾರತಕ್ಕಾಗಿ ಪರಿಪೂರ್ಣ ರೀತಿಯಲ್ಲಿ ನಿವೇದನೆಯಾಗಿ 'ಸೋದರಿ ನಿವೇದಿತಾ' ಎಂಬ ಭಾರತೀಯ ಹೆಣ್ಣು ಮಗಳಾದ ಪರಿವರ್ತನೆಯ ಮಹಾಗಾಥೆ.

ಬರಹ ಅಭಿಯಾನದ ಮೂಲಕ ಸೋದರಿ ನಿವೇದಿತಾ ಜಯಂತಿ ಆಚರಣೆಬರಹ ಅಭಿಯಾನದ ಮೂಲಕ ಸೋದರಿ ನಿವೇದಿತಾ ಜಯಂತಿ ಆಚರಣೆ

ಈ ಮಹಾಯಜ್ಞದ ಕಾರ್ಯಕ್ಕೆ ಚಾಲನೆ ನೀಡಿದ ಪವಿತ್ರದಿನವೇ 'ದೀಕ್ಷಾದಿವಸ್'( 1898 ಮಾರ್ಚ್ 25 ), ಅಂದೇ ವಿವೇಕಾನಂದರು ಮಾರ್ಗರೇಟ್ ನೋಬೆಲ್ ಗೆ 'ನಿವೇದಿತಾ' ಎಂಬ ಹೊಸ ಹೆಸರು ನೀಡಿ ಭಾರತದ ಸೇವೆಗೆಂದು ಅವರನ್ನು ಶ್ರೇಷ್ಠ ಪುಷ್ಪವಾಗಿ ಸಮರ್ಪಿಸಿದರು.

 Nivedita, Who Dedicated All His Life To The Prosperity Of India

"ಪ್ರಪಂಚದ ಇಡೀ ಇತಿಹಾಸವು ಭಾರತೀಯ ಬುದ್ಧಿಶಕ್ತಿ ಯಾವುದಕ್ಕೂ ಎರಡನೆಯದಲ್ಲ ಎಂಬುದನ್ನು ತೋರ್ಪಡಿಸುತ್ತದೆ. ಇತರರ ಶಕ್ತಿಯನ್ನು ಮೀರಿಸುವ ಕಾರ್ಯಕ್ಷಮತೆಯಿಂದ ಹಾಗೂ ಪ್ರಪಂಚದ ಬೌದ್ಧಿಕ ಪ್ರಗತಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಳ್ಳುವುದರಿಂದ ಇದನ್ನು ಸಾಬೀತುಪಡಿಸಬೇಕು.

ಇದನ್ನು ಮಾಡಲು ನಮಗೆ ಅಸಾಧ್ಯವಾಗುವಂತಹ ಯಾವುದೇ ಅಂತರ್ಗತ ದೌರ್ಬಲ್ಯವಿದೆಯೇ? ಭಾಸ್ಕರಾಚಾರ್ಯ ಮತ್ತು ಶಂಕರಾಚಾರ್ಯರಂತಹ ದೇಶವಾಸಿಗಳು ನ್ಯೂಟನ್ ಮತ್ತು ಡಾರ್ವಿನ್ ಗಳಿಗಿಂತ ಕೆಳಮಟ್ಟದಲ್ಲಿದ್ದಾರೆಯೆ? ನಾವು ಇದನ್ನು ನಂಬುವುದಿಲ್ಲ.

ನಮ್ಮ ಆಲೋಚನಾ ಶಕ್ತಿಯಿಂದ, ನಮ್ಮನ್ನು ಎದುರಿಸುವ ವಿರೋಧದ ಕಬ್ಬಿಣದ ಗೋಡೆಗಳನ್ನು ಒಡೆದು ಮತ್ತು ಪ್ರಪಂಚದ ಬೌದ್ಧಿಕ ಸಾರ್ವಭೌಮತ್ವವನ್ನು ವಶಪಡಿಸಿಕೊಂಡು ಅದನ್ನು ನಾವು ಆನಂದಿಸಬೇಕು"- ಕರ್ಮಯೋಗಿನ್ ನಲ್ಲಿ ಸೋದರಿ ನಿವೇದಿತಾ. ಈ ರೀತಿಯ ನಿವೇದಿತಾರ ಅನೇಕಾನೇಕ ವಿಚಾರಗಳು ಇಂದಿಗೂ ಕೂಡ ಪ್ರಸ್ತುತವೆನಿಸುತ್ತದೆ.

21ನೇ ಶತಮಾನದಲ್ಲಿ ಅತಿಯಾಗಿ ಕಾಡುತ್ತಿರುವ ಬೌದ್ಧಿಕತೆಯ ಆಕ್ರಮಣದ ಸಮಸ್ಯೆಗೆ ಅಂದೇ 19ನೇ ಶತಮಾನದಲ್ಲಿಯೇ ಉತ್ತರವನ್ನು ಬರೆದಿದ್ದಾರೆ. ಆದರೆ ಅವರು ಹೀಗೆ ಬೌದ್ಧಿಕ ಕ್ಷೇತ್ರದಲ್ಲಿ ಭರತ ಭೂಮಿಯು ಸಾರ್ವಭೌಮತ್ವವನ್ನು ಸಾಧಿಸಬಹುದೆಂದು ನಿರೂಪಿಸಿದದ್ದು ಇಂದಿನ ಅಭಿವೃದ್ಧಿ ಪಥದ ಸಕ್ಷಮ ಭಾರತದ ಸಂದರ್ಭದಲ್ಲಲ್ಲ ಎಂಬುದನ್ನು ಅರ್ಥೈಸಿಕೊಳ್ಳಬೇಕು.

ಬ್ರಿಟಿಷರ ಕ್ರೌರ್ಯ ಆಡಳಿತ ವೈಖರಿಯ ಪೆಟ್ಟನ್ನು ತಿನ್ನುತ್ತಾ, ತಮ್ಮ ಸೌಜನ್ಯತೆಗೆ ವ್ಯತಿರಿಕ್ತವಾದ ಅಧರ್ಮ ಕ್ರಿಯೆಯ ಹಾದಿಯಲ್ಲಿ ಸಾಗುತ್ತಿದ್ದ ಇಂಗ್ಲೀಷರನ್ನು ಎದುರಿಸುತ್ತಾ, ರಾಷ್ಟ್ರದ ಸಂಸ್ಕೃತಿ- ಪರಂಪರೆಯ ಆತ್ಮವಿಸ್ಮೃತಿಯ ದಾರಿಯಲ್ಲಿ ಬಲವಂತವಾಗಿ ಸಾಗಲು ದೂಡಿದ್ದಂತಹ ಪರಿಸ್ಥಿತಿಯಲ್ಲಿ ಎಂಬುದು ನಿವೇದಿತಾರ ಆತ್ಮಶಕ್ತಿಗೆ ಹಿಡಿದ ಕೈಗನ್ನಡಿ. ಭಾರತ ರಾಷ್ಟ್ರದ ಬಗ್ಗೆ ಮಿಥ್ಯ ಆರೋಪಗಳನ್ನು ಮಾಡುತ್ತಾ, ಭಾರತದ ವಿರುದ್ಧವಾಗಿ ಕಾರ್ಯ ಮಾಡುತ್ತಿದ್ದ ಹಲವಾರು ಭಾರತ ವಿರೋಧಿಗಳು ಹಾಗೂ ಭಾರದ ಒಳಗಿನ ವಿರೋಧಿಗಳಿಗೆ ನಿವೇದಿತಾರ ಪ್ರಖರ ಭಾಷಣಗಳು ಹಾಗೂ ಪ್ರಖರ ಸಾಹಿತ್ಯಗಳು ಸರಿಯಾದ ಪೆಟ್ಟನ್ನೇ ಕೊಟ್ಟವು.

ನಿವೇದಿತಾ ಅವರು ಅಗಾಧವಾಗಿ ಸ್ವಾತಂತ್ರ್ಯ ಹೋರಾಟಗಾರರ ಜೊತೆ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು ಹಾಗೂ ಅವರ ಪತ್ರಿಕೆಗಳಿಗೆ ಖಡಕ್ ರಾಷ್ಟೀಯವಾದದ ಲೇಖನಗಳನ್ನು ಬರೆಯುತ್ತಿದ್ದರು.

ಬ್ರಿಟಿಷರು ಅವರ ಚಟುವಟಿಕೆಗಳ ಮೇಲೆ ಕಣ್ಣಿಡಲು ಗೂಢಾಚಾರರನ್ನು ನೇಮಿಸಿದ್ದರು ಹಾಗೆ ನಿವೇದಿತಾ ಅವರು ಕೂಡ ವಿದೇಶದಿಂದ ಮರಳಿ ಬರುವಾಗ ಮಾರುವೇಷದಲ್ಲಿ ಬಂದು ಬಂಧನದಿಂದ ತಪ್ಪಿಸಿಕೊಂಡು, ಅವರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದರು ಎಂಬುದು ಅವರ ಹೋರಾಟದ ತೀವ್ರತೆಗೆ ಸಾಕ್ಷಿ.

ಐರ್ಲೆಂಡ್ ನಲ್ಲಿದ್ದಾಗಲೆ ಕೇವಲ 18ನೆ ವರ್ಷದಲ್ಲೆ ಶಿಕ್ಷಕಿ ವೃತ್ತಿಯನ್ನು ಗಳಿಸಿ, ಕಾರ್ಯ ಆರಂಭಿಸಿದ್ದರು. ಕೆಲವೇ ವರ್ಷಗಳಲ್ಲಿ ಸ್ವತಃ ಅವರೇ ಒಂದು ಹೊಸ ಶಾಲೆಯನ್ನು ಪ್ರಾರಂಭಿಸಿ, ವಿನೂತನ ಕಲಿಕಾ ವಿಧಾನಗಳನ್ನು ಪ್ರಯೋಗಿಸಿ ಯಶಸ್ವಿಯಾದರು.

ಇಂತಹ ದಿಟ್ಟನಡೆಯೇ ಸ್ವಾಮಿ ವಿವೇಕಾನಂದರು ಇವರನ್ನು ಭಾರತೀಯ ಸ್ತ್ರೀಯರ ಶಿಕ್ಷಣವೆಂಬ ಮಹಾನ್ ಕಾರ್ಯಕ್ಕೆ ಆಯ್ಕೆ ಮಾಡಲು ಪ್ರಮುಖ ಕಾರಣವಾಯಿತೆನ್ನಬಹುದು.

ಭಾರತದ ಮಹಿಳೆಯರು ಬಹುತೇಕ ಸಂಖ್ಯೆಯಲ್ಲಿ ಸಾಕ್ಷರತೆಯನ್ನೇ ಹೊಂದಿಲ್ಲದ ಆ ಕಾಲದಲ್ಲೂ ಅವರನ್ನು ಅಜ್ಞಾನಿಗಳು ಎಂದು ಕರೆಯಲು ಖಡಾಖಂಡಿತವಾಗಿ ನಿರಾಕರಿಸಿದ್ದರು ನಿವೇದಿತಾ. ಅವರು ಅಜ್ಞಾನಿಗಳೇ ಆಗಿದ್ದರೆ, ಈ ನೆಲದ ಸಂಸ್ಕೃತಿಯ ಮಹಾನ್ ಗ್ರಂಥಗಳಾದ ರಾಮಾಯಣ, ಮಹಾಭಾರತ ಹಾಗೂ ಪುರಾಣಗಳನ್ನು ಹೇಗೆ ಅಷ್ಟು ಸುಲಲಿತವಾಗಿ ತಮ್ಮ ಮುಂದಿನ ಪೀಳಿಗೆಗೆ ಭೋದಿಸುತ್ತಾ ಬಂದಿದ್ದಾರೆ? ಯೂರೋಪಿಯನ್ ಕಾದಂಬರಿಗಳ ಸಾಹಿತ್ಯವನ್ನು ಬಲ್ಲವರು ಜ್ಞಾನಿಗಳು ಎಂದಾದರೆ, ಅಕ್ಷರ ಬಾರದಿದ್ದರೂ ಅಗಾಧ ಸಾಹಿತ್ಯ ರಾಶಿಯನ್ನು ಅರಿತಿರುವ ಭಾರತೀಯ ಮಹಿಳೆಯರೂ ಕೂಡ ಜ್ಞಾನಿಗಳೇ ಆಗಿದ್ದಾರೆ.

ಭಾರತೀಯ ಜೀವನವನ್ನು ತಿಳಿದಿರುವವರಿಗೆ ಮನೆಯಿಂದಲೇ ಹೇಗೆ ಮಹಿಳೆಯರಿಗೆ ಘನತೆ, ಸೌಮ್ಯತೆ, ಸ್ವಚ್ಛತೆ, ಧಾರ್ಮಿಕತೆಗಳ ಸಂಸ್ಕೃತಿಯ ಶಿಕ್ಷಣವನ್ನು ನೀಡುತ್ತಾರೆ ಎಂಬುದು ಅರಿವಿಗೆ ಬಂದಿರುತ್ತದೆ.

ಅವರಿಗೆಲ್ಲಾ ತಮ್ಮ ಹೆಸರಿನ ಸಹಿ ಹಾಕಲು ಸಾಧ್ಯವಾಗದಿದ್ದರೂ, ನಿಜವಾದ ಅರ್ಥದಲ್ಲಿ ಅನಂತವಾಗಿ ಉತ್ತಮ ಶಿಕ್ಷಣವನ್ನು ಹೊಂದಿರಬಹುದು ಎಂದು ಸತ್ಯಾಂಶವನ್ನು ನುಡಿದಿದ್ದರು. ಇಂದಿಗೂ ಕೂಡ ನಮ್ಮ ದೇಶದ ಮೇಲೆ ಸ್ತ್ರೀಯರ ಸಮಾನತೆ, ಸ್ತ್ರೀಯರ ಹಕ್ಕು ಎಂಬೆಲ್ಲಾ ಪ್ರಶ್ನಾರೋಪಗಳನ್ನು ಸೃಷ್ಟಿಸಿ ಹೋರಾಟ ಮಾಡುತ್ತಾರೆ.

ಪಾಶ್ಚಿಮಾತ್ಯ ದೇಶಗಳ ಪ್ರಭಾವಕ್ಕೊಳಗಾಗಿರುವ ಈ ಹೋರಾಟಗಾರರು ನಮ್ಮ ದೇಶಕ್ಕಿಂತ ಅನ್ಯದೇಶಗಳಲ್ಲೇ ಸ್ತ್ರೀ ಶೋಷಣೆ ಹೆಚ್ಚಿದದ್ದು ಹಾಗೂ ಹೆಚ್ಚಾಗಿರುವುದು ಎಂಬ ಕಟು ಸತ್ಯವನ್ನು ಮಾತ್ರ ಉಚ್ಚರಿಸುವುದಿಲ್ಲ.

ಅಂತಹವರು ಭಾರತೀಯ ಸಂಸ್ಕೃತಿಯ ವಿಷಯದಲ್ಲಿ ಅಜ್ಞಾನಿಗಳು ಎಂದೇ ಹೇಳಬೇಕು. ಏಕೆಂದರೆ, ಅಂತಹ ಸ್ತ್ರೀ ಸಮಾನತೆಯ ಅರ್ಥವಿಹೀನ ಪ್ರಶ್ನೆಗಳಿಗೆ ನಮ್ಮ ಸಂಸ್ಕೃತಿಯಲ್ಲಿ ಅವಕಾಶವೇ ಇಲ್ಲ. ಸ್ತ್ರೀಯರನ್ನು ಮಾತೃ ಸ್ವರೂಪದಲ್ಲಿ ಗೌರವಿಸುವ ಶ್ರೇಷ್ಠ ನಾಡು ಇದು.

ಮಾತೆಯ ಸ್ಥಾನವೇ ಸರ್ವೋಚ್ಛವಾದುದೆಂದು ನಮ್ಮ ಶಾಸ್ತ್ರಗಳು ಭೋದಿಸಿವೆ. ಹಾಗೆಂದ ಮೇಲೆ ಈ ಪ್ರಶ್ನೆಗಳಿಗೆ ಯಾವ ಅರ್ಥವಿದೆ? ತಮ್ಮ ಶಾಲೆಯ ವಿದ್ಯಾರ್ಥಿನಿಯರಿಗೆ ಇತಿಹಾಸ, ಭೂಗೋಳ, ವಿಜ್ಞಾನ, ಚಿತ್ರಕಲೆ ವಿಷಯಗಳ ಜೊತೆಗೆ ನಮ್ಮ ಸಂಸ್ಕೃತಿ- ಪರಂಪರೆಯ ವಿಷಯಗಳು ಹಾಗೂ ಉದ್ಯೋಗ ಕೌಶಲದ ಬಗೆಗಿನ ವಿಷಯಗಳನ್ನು ಬೋಧಿಸಲಾಗುತ್ತಿತ್ತು.

'ವಂದೇ ಮಾತರಂ' ಗೀತೆಯನ್ನು ಬ್ರಿಟಿಷ್ ಸರ್ಕಾರ ನಿಷೇಧಗೊಳಿಸಿದ್ದಂತಹ ಕಾಲದಲ್ಲೂ, ಇದರಿಂದ ಬಹುತೇಕ ಶಾಲೆಗಳಲ್ಲಿ ಈ ಗೀತೆ ಪ್ರಾರ್ಥನೆಯ ಸಾಲಿನಲ್ಲಿ ಸ್ಥಗಿತಗೊಂಡಿದ್ದಂತಹ ಕಾಲದಲ್ಲೂ ನಿವೇದಿತಾರ ಶಾಲೆಯ ಪ್ರಾರ್ಥನೆಯಲ್ಲಿ ಈ ಗೀತೆ ಕಡ್ಡಾಯವಾಗಿತ್ತು ಎಂದರೆ ಅವರ ದೇಶಭಕ್ತಿ ಯಾವ ಸ್ತರದಲ್ಲಿತ್ತು ಎಂಬುದನ್ನು ಕಲ್ಪಿಸಿಕೊಳ್ಳಿ.

ನಿವೇದಿತಾ ಅವರು ತಮ್ಮ ವಿದ್ಯಾರ್ಥಿನಿಯರ ಬಗೆಗೆ ಅತೀವ ಕಾಳಜಿ ವಹಿಸುತ್ತಿದದ್ದು ಅವರ ಜೀವನದ ನೈಜ ಘಟನೆಗಳ ಸಾಕ್ಷ್ಯದಲ್ಲೇ ದಾಖಲಾಗಿದೆ. ಅವರು ತಮ್ಮ ವಿದ್ಯಾರ್ಥಿನಿಯರನ್ನು ಎಷ್ಟು ಪ್ರೀತಿಸುತ್ತಿದ್ದರೆಂದರೆ, ಅವರನ್ನು ತಮ್ಮ ಪುಟ್ಟ ಪುಟ್ಟ ದೇವತೆಗಳೆಂದೇ ಸಂಭೋದಿಸುತ್ತಿದ್ದರು.

ಅವರು ಸ್ತ್ರೀ ಶಿಕ್ಷಣದ ಪರಮೋದರ್ಶದ ಬಗ್ಗೆ ವ್ಯಾಖ್ಯಾನಿಸಿದ್ದು ಹೇಗೆ ಗೊತ್ತೆ? ಎಂದು ಒಬ್ಬ ಸ್ತ್ರೀ ಸತಿ, ಸೀತೆ, ಸಾವಿತ್ರಿಯಂತಹ ಪಾವಿತ್ರ್ಯತಾ ಮೂರ್ತಿಗಳ ಆದರ್ಶವನ್ನು ಅರ್ಥೈಸಿಕೊಂಡು ಆ ಹರಿತದ ಮಾರ್ಗದಲ್ಲೆ ಮುನ್ನಡೆಯಲು ಆರಂಭಿಸುವರೊ ಅಂದು ಅವರ ಶಿಕ್ಷಣ ಪೂರ್ಣವಾಗುವುದೆಂದು.

ಯಾವುದೋ ದೇಶದಲ್ಲಿ ಹುಟ್ಟಿ ಬೆಳೆದರೂ ತಮ್ಮ ಶ್ರೀ ಗುರುದೇವನ ತಾಯ್ನಾಡಿನ ಸೇವೆಗೆಂದು ಭಾರತಕ್ಕೆ ಆಗಮಿಸಿದ, ಸ್ತ್ರೀ ಶಿಕ್ಷಣದ ಪ್ರಾಮುಖ್ಯತೆಯನ್ನು ಅರ್ಥೈಸಿದ, ಸ್ವಾತಂತ್ರ್ಯ ಸಂಗ್ರಾಮದ ಜ್ವಾಲೆಯನ್ನು ಎತ್ತಿಹಿಡಿದ, ವಿಜ್ಞಾನ-ಚಿತ್ರಕಲೆ-ಸಾಹಿತ್ಯದಂತಹ ಕ್ಷೇತ್ರಗಳಲ್ಲಿ ಭಾರತೀಯತೆಯನ್ನು ಪುನರುತ್ಥಾನಗೊಳಿಸಿದ, ಕ್ಷಾಮ-ಪ್ರವಾಹದಂತಹ ಸಂಕಷ್ಟ ಪರಿಸ್ಥಿತಿಗಳಲ್ಲಿ ನಿಸ್ವಾರ್ಥ ಸೇವೆಯ ಪರಾಕಾಷ್ಠೆಯನ್ನು ಮೆರೆದ ನಮ್ಮ ಭಾರತದ ಹೆಮ್ಮೆಯ ಪುತ್ರಿ ನಿವೇದಿತಾರಿಗೆ ನಾವು ಅವರಿಗೆ ಯೋಗ್ಯವಾದ ರೀತಿಯಲ್ಲಿ ದೊರೆಯಬೇಕಾದ ಸಮರ್ಪಕ ಸ್ಥಾನಮಾನವನ್ನು ನೀಡಿಲ್ಲವೆಂಬುದು ಅತ್ಯಂತ ದುಃಖಕರ ಸಂಗತಿ.

Recommended Video

ಕೊರೊನಾ ಕಂಟ್ರೋಲ್ ಗೆ ರಾಜ್ಯ ಸರ್ಕಾರದಿಂದ ಹೊಸ ಗೈಡ್ ಲೈನ್ಸ್..! ನಿಯಮ ಉಲ್ಲಂಘಿಸಿದ್ರೆ ದಂಡ | Oneindia Kannada

ಇಂದಿನಿಂದಾದರೂ ಅವರ ಮಹೋನ್ನತ ಬದುಕಿನ ಬಗೆಗೆ ತಿಳಿದುಕೊಳ್ಳಲು ಆರಂಭಿಸಿ ಮತ್ತಷ್ಟು ಮಗದಷ್ಟು ಶ್ರೇಷ್ಠ ಸ್ಥಾನವನ್ನು ನಮ್ಮ ಹೃದಯಗಳಲ್ಲಿ, ಸಮಾಜದಲ್ಲಿ ನೀಡೋಣ.

English summary
Ramakrishna-Vivekananda's Nivedita, Who Dedicated all his life to the prosperity of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X