ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಡಿಕೆಶಿ
ಬೆಂಗಳೂರು, ಏಪ್ರಿಲ್ 24: ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಬೆದರಿಕೆ ಹಾಕಿದ ಮತ್ತು ಆಮಿಷವೊಡ್ಡಿದ ಆರೋಪದ ಮೇಲೆ ತಮ್ಮ ವಿರುದ್ಧ ನಗರದ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿರುವ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಲು 2024ರ ಏ.19ರಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಹೊರಡಿಸಿದ ಆದೇಶ ಮತ್ತು ಅದನ್ನು ಆಧರಿಸಿ ಆರ್‌ಎಂಸಿ ಯಾರ್ಡ್ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿದ್ದಾರೆ.

ಈ ಅರ್ಜಿ ಇನ್ನೂ ವಿಚಾರಣೆಗೆ ಬರಬೇಕಿದೆ. ಅರ್ಜಿಯಲ್ಲಿ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮತ್ತು ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಸಂಚಾರಿ ವಿಚಕ್ಷಣಾ ತಂಡದ ಮುಖ್ಯಸ್ಥ ಬಿ. ಕೆ. ದಿನೇಶ್ ಕುಮಾರ್ ಅವರನ್ನು ಪ್ರತಿವಾದಿ ಮಾಡಲಾಗಿದೆ.
ಡಿಕೆಶಿ ವಾದವೇನು?: ಕಾವೇರಿ ನೀರು ಸರಬರಾಜು ಮತ್ತು ಸಿಎ ನಿವೇಶನ ಮಂಜೂರಾತಿಗೆ ಅಪಾರ್ಟ್‌ಮೆಂಟ್ ನಿವಾಸಿಗಳು ಕೇಳಿದ ಪ್ರಶ್ನೆಗೆ ತಾನು ಉತ್ತರಿಸಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದರೆ, ಅವರು ನಿಮ್ಮ ಬೇಡಿಕೆ ಪರಿಗಣಿಸುತ್ತಾರೆ. ನಿಮ್ಮ ಬೇಡಿಕೆ ಈಡೇರಿಕೆಗೆ ಸಂಸದರ ನಿಧಿಯಿಂದ ಅನುದಾನ ಕೊಡಿಸಿ, ಕೆಲಸ ಕಾರ್ಯಗಳು ಮಾಡಿಕೊಡುತ್ತಾರೆ ಎಂದಷ್ಟೇ ಹೇಳಿದ್ದೇನೆ. ಅದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲ ಎಂದು ಆಕ್ಷೇಪಿಸಿದ್ದಾರೆ.
ಅಲ್ಲದೆ, ಅಪಾರ್ಟ್‌ಮೆಂಟ್ ನಿವಾಸಿಗಳಿಗೆ/ ಮಾಲೀಕರಿಗೆ ತಾನು ಬೆದರಿಕೆ ಹಾಕಿಲ್ಲ ಹಾಗೂ ಆಮಿಷವೊಡ್ಡಿಲ್ಲ. ಸಹಾಯಕ ಚುನಾವಣಾಧಿಕಾರಿ ನೋಟಿಸ್ ನೀಡಿ ವಿವರಣೆ ಕೇಳಿದ್ದರು. ತಾನು ವಿವರಣೆ ನೀಡುವ ಮುನ್ನವೇ ದೂರು ಸಲ್ಲಿಕೆಯಾಗಿ, ಎಫ್‌ಐಆರ್ ದಾಖಲಿಸಲಾಗಿದೆ. ಆದ್ದರಿಂದ ಎಫ್‌ಐಆರ್ ಹಾಗೂ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದಾರೆ.
ಏನಿದು ಪ್ರಕರಣ?: ರಾಜರಾಜೇಶ್ವರಿ ನಗರದ ಅಪಾರ್ಟ್‌ಮೆಂಟ್ ನಿವಾಸಿಗಳೊಂದಿಗೆ ಚುನಾವಣಾ ಪ್ರಚಾರ ಸಭೆ ನಡೆಸಿದ್ದ ಡಿ. ಕೆ. ಶಿವಕುಮಾರ್, ನಾನು ಬಿಸಿನೆಸ್ ಡೀಲ್‌ಗೆ ಬಂದಿದ್ದೇನೆ. ಅಪಾರ್ಟ್‌ಮೆಂಟ್‌ಗೆ ಸಿಎ ನಿವೇಶನ ನೀಡಬೇಕು ಹಾಗೂ ಕಾವೇರಿ ನೀರು ಒದಗಿಸಬೇಕು ಎಂದು ನಿವಾಸಿಗಳು ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ (ಡಿ. ಕೆ. ಸುರೇಶ್‌ಗೆ ) ಮತ ನೀಡಿದರೆ ನಿಮ್ಮ ಬೇಡಿಕೆಯನ್ನು ಎರಡು ಮೂರು ತಿಂಗಳಲ್ಲಿ ಈಡೇರಿಸುತ್ತೇನೆ. ಇಲ್ಲವಾದರೆ ನನ್ನನ್ನು ಏನೂ ಕೇಳಬೇಡಿ ಎಂದು ಹೇಳಿಕೆ ನೀಡಿದ್ದರು.
ಆ ಕುರಿತ ವಿಡಿಯೋ ಸಹ ಬಹಿರಂಗವಾಗಿತ್ತು. ಅದರ ಬೆನ್ನೆಲ್ಲೇ ದಿನೇಶ್ ಕುಮಾರ್ ಅವರು ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಏ.19ರಂದು ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಆರ್‌ಎಂಸಿ ಯಾರ್ಡ್ ಠಾಣಾ ಪೊಲೀಸರು, ಮತದಾರರಿಗೆ ಬೆದರಿಕೆ ಹಾಕಿದ ಮತ್ತು ಆಮಿಷವೊಡ್ಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.












Click it and Unblock the Notifications