ಕಾರ್ಪೊರೇಟರ್ ಪತಿ ಮೇಲೆ ಸಗಣಿ ಎಸೆತ: ಕಲಾಸಿಪಾಳ್ಯದಲ್ಲಿ ಹೈಡ್ರಾಮಾ!
ಬೆಂಗಳೂರು, ಮೇ 13: ಒಂದುಕಡೆ ಕೊರೊನಾ ವೈರಸ್ ಮಹಾಮಾರಿಯಿಂದಾಗಿ ಮನೆಯಿಂದ ಹೊರಗೆ ಬರದೆ ಜನ ಆತಂಕಕ್ಕೊಂಡಿದ್ದರೆ, ಇನ್ನೊಂದು ಕಡೆ ಹೈಡ್ರಾಮಾ ನಡೆದಿದೆ.
ಲಾಕ್ ಡೌನ್ ಸಡಿಲಗೊಂಡ ಮೇಲೆ ವ್ಯಾಪಾರ ವಹಿವಾಟು ಆರಂಭಗೊಂಡ ಬಳಿಕ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಅಕ್ರಮವಾಗಿ ಅಂಗಡಿಗಳು ತಲೆ ಎತ್ತಿವೆ. ಹಾಗೆ ಬೀದಿಬದಿಯಲ್ಲಿ ಅಕ್ರಮವಾಗಿ ಎದ್ದು ನಿಂತಿದ್ದ ಅಂಗಡಿಗಳನ್ನು ತೆರವುಗೊಳಿಸಲು ಕಲಾಸಿಪಾಳ್ಯ ಕಾರ್ಪೊರೇಟರ್ ಪ್ರತಿಭಾ, ಪತಿ ಧನರಾಜ್ ಮತ್ತು ಬಿಬಿಎಂಪಿ ಸಿಬ್ಬಂದಿಗಳು ಇಂದು ಬೆಳಗ್ಗೆ ಮುಂದಾಗಿದ್ದರು.
ಈ ವೇಳೆ ಸಿಡಿದೆದ್ದ ಸ್ಥಳೀಯರು ಕಾರ್ಪೊರೇಟರ್ ಪ್ರತಿಭಾ ಪತಿ ಧನರಾಜ್ ಮತ್ತು ಪುತ್ರನ ಮೇಲೆ ಸಗಣಿ ಎಸೆದಿದ್ದಾರೆ. ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಕಲಾಸಿಪಾಳ್ಯದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಧನರಾಜ್ ಮೇಲೆ ಸಗಣಿ ಎಸೆತ
ಕಲಾಸಿಪಾಳ್ಯದಲ್ಲಿ ಅಕ್ರಮವಾಗಿ ಅಂಗಡಿಗಳನ್ನ ಹಾಕಿದ್ರು ಎಂಬ ಕಾರಣಕ್ಕೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಕಾರ್ಪೊರೇಟರ್ ಪ್ರತಿಭಾ, ಪತಿ ಧನರಾಜ್ ಇಂದು ತಪಾಸಣೆ ನಡೆಸಿದರು. ಈ ವೇಳೆ ಕಾರ್ಪೊರೇಟರ್ ಪತಿ ಹಾಗೂ ಮಗನ ಮೇಲೆ ಕೆಲವರು ಸಗಣಿ ಎಸೆದಿದ್ದಾರೆ.

ಕಲಾಸಿಪಾಳ್ಯದಲ್ಲಿ ದೊಡ್ಡ ಗಲಾಟೆ
ಸಗಣಿ ಎಸೆದ ಕಾರಣಕ್ಕೆ ಕಾರ್ಪೊರೇಟರ್ ಪ್ರತಿಭಾ ಪ್ರತಿಭಟನೆಗೆ ಮುಂದಾದರು. ಕೆಲ ಸ್ಥಳೀಯರು ಮೊದಲೇ ಸಗಣಿ ಪ್ಯಾಕೇಟ್ ಗಳನ್ನು ರೆಡಿ ಮಾಡಿಟ್ಟುಕೊಂಡಿದ್ದರು ಎಂಬ ಆರೋಪ ಕೂಡ ಕೇಳಿಬಂತು. ಹೀಗಾಗಿ, ಬಿಬಿಎಂಪಿ ಮತ್ತು ಸ್ಥಳೀಯರ ನಡುವೆ ದೊಡ್ಡ ಗಲಾಟೆ ನಡೆಯಿತು.

ಧನರಾಜ್ ಗೆ ಧಿಕ್ಕಾರ
ಕಲಾಸಿಪಾಳ್ಯದ ಫುಟ್ ಪಾತ್, ರಸ್ತೆ ಬದಿ ಹಾಕಿಕೊಂಡಿದ್ದ ಅಂಗಡಿಗಳನ್ನು ತೆರವು ಮಾಡುವಾಗ ಕಾರ್ಪೊರೇಟರ್ ಪ್ರತಿಭಾ ಪತಿ ಧನರಾಜ್ ವಿರುದ್ಧ ಕೆಲ ಸ್ಥಳೀಯರು ಧಿಕ್ಕಾರ ಕೂಗಿದರು. ಅತ್ತ ಸಗಣಿ ಎಸೆದವರ ವಿರುದ್ಧ ಪ್ರತಿಭಾ ಪ್ರತಿಭಟನೆ ಮಾಡಿದರೆ, ಇತ್ತ ಧನರಾಜ್ ವಿರುದ್ಧ ಸ್ಥಳೀಯರು ಪ್ರತಿಭಟಿಸಿದರು. ಬಿಗುವಿನ ವಾತಾವರಣವನ್ನು ತಿಳಿಗೊಳಿಸಲು ಪೊಲೀಸರು ಹರಸಾಹಸ ಪಟ್ಟರು.

ಗಂಭೀರ ಆರೋಪ ಮಾಡಿದ ಸ್ಥಳೀಯರು
''ಕಾರ್ಪೊರೇಟರ್ ಕಡೆಯವರು ಬಂದು ನಮ್ಮಲ್ಲಿ ಹಣ ಕೇಳ್ತಾರೆ. ಹಣ ಕೊಟ್ಟಿಲ್ಲ ಅಂದ್ರೆ ನಮ್ಮ ಮೇಲೆ ದಬ್ಬಾಳಿಕೆ ಮಾಡ್ತಾರೆ. ಅರ್ಥ ಆಗುವ ರೀತಿಯಲ್ಲಿ ಹೇಳಿದ್ರೆ ನಮಗೆ ಅರ್ಥ ಆಗುತ್ತೆ. ಏಕಾಏಕಿ ಬಂದು ಅಂಗಡಿ ಕ್ಲೋಸ್ ಮಾಡೋಕೆ ಹೇಳ್ತಾರೆ. ನಾವು ಹೇಗೆ ಜೀವನ ಮಾಡಬೇಕು'' ಎಂದು ಸ್ಥಳೀಯರು ಕಾರ್ಪೊರೇಟರ್ ಪ್ರತಿಭಾ ಮತ್ತು ಪತಿ ಧನರಾಜ್ ವಿರುದ್ಧ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications