ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ರದ್ದು ಕೋರಿದ್ದ ಅರ್ಜಿ ವಜಾ

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು. ನವೆಂಬರ್ 20: ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (ಕೆಎಫ್‌ಸಿಸಿ) 2022-2023ರ ಸಾಲಿನ ಚುನಾವಣೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಚುನಾವಣೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಭಾ.ಮಾ. ಹರೀಶ್ ಹಾಗೂ ಪದಾಧಿಕಾರಿಗಳ ಆಯ್ಕೆ ಕಾನೂನು ಬಾಹಿರ ಎಂದು ಘೋಷಿಸುವಂತೆ ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿಲ್ಲ.

ಇದರಿಂದಾಗಿ ಭಾ.ಮಾ. ಹರೀಶ್ ಅವರು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಮುಂದುವರಿಯುವುದು ಅಬಾಧಿತವಾಗಿದೆ.

ಚುನಾವಣೆಯನ್ನು ರದ್ದುಗೊಳಿಸುವಂತೆ ಕೋರಿ ಚಲನಚಿತ್ರ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ಬಿ.ಕೆ.ಜಯಸಿಂಹ ಮುಸರಿ ಮತ್ತು ಕೆ.ಎಂ.ವೀರೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

Ba Ma Harish

ನ್ಯಾಯಾಲಯ 'ಚುನಾವಣೆಯ ಬಗ್ಗೆ ಅರ್ಜಿದಾರರ ಅಹವಾಲು ಏನೇ ಇದ್ದರೂ ಅದನ್ನು ಸಿವಿಲ್ ಕೋರ್ಟ್ ಮುಂದೆ ಕೊಂಡೊಯ್ದು ಪರಿಹಾರ ಪಡೆಯಬಹುದುದೆಂದು ಆದೇಶಿಸಿದೆ.

ಅಲ್ಲದೆ, 'ಚುನಾವಣೆ ನಡೆಸುವುದು ಅಥವಾ ಚುನಾಯಿತ ಅಭ್ಯರ್ಥಿಗಳ ಘೋಷಣೆ ಮಾಡುವುದು ಅಥವಾ ಹೊಸ ಚುನಾವಣೆ ನಡೆಸುವ ನಿರ್ದೇಶನ ನೀಡಲು ಸಿವಿಲ್ ನ್ಯಾಯಾಲಯ ಸಮರ್ಥವಾಗಿದೆ. ಹಾಗಾಗಿ ಅರ್ಜಿದಾರರು ಈ ಸಂಬಂಧ ಸಕ್ಷಮ ಪ್ರಾಧಿಕಾರವಾದ ಸಿವಿಲ್ ಕೋರ್ಟ್‌ನಲ್ಲಿಯೇ ಸೂಕ್ತ ಪರಿಹಾರ ಪಡೆಯಬಹುದು ಎಂದು ಆದೇಶ ನೀಡಿ ಅರ್ಜಿಯನ್ನು ವಜಾಗೊಳಿಸಿದೆ.

'ಅರ್ಜಿದಾರು ಈ ಪ್ರಕರಣದಲ್ಲಿ ನ್ಯಾಯ ಪಡೆಯಲು ಚುನಾವಣಾ ಅರ್ಜಿಯನ್ನು ಸಲ್ಲಿಸಬೇಕಿತ್ತೇ ಹೊರತು ಅರ್ಜಿಯನ್ನಲ್ಲ' ಎಂದು ಅರ್ಜಿದಾರರ ಪರ ವಕೀಲರು ಆಕ್ಷೇಪಣೆ ಎತ್ತಿದ್ದರು.

ಪ್ರಕರಣದಲ್ಲಿ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಸಹಕಾರ ಸಂಘಗಳ ಡೆಪ್ಯೂಟಿ ರಿಜಿಸ್ಟ್ರಾರ್, ಚುನಾವಣಾಧಿಕಾರಿ ಥಾಮಸ್ ಡಿಸೋಜಾ, ಕೆಎಫ್‌ಸಿಸಿ ವ್ಯವಸ್ಥಾಪಕ, ಮಂಡಳಿಯ ಅಧ್ಯಕ್ಷ ಬಾ.ಮ.ಹರೀಶ್, ಉಪಾಧ್ಯಕ್ಷ ಜೈಜಗದೀಶ್ ಸೇರಿದಂತೆ ಒಟ್ಟು 12 ಜನರನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿತ್ತು.

Film chamber election controversy: HC dismissed the petition and directed to approach civil court

ಕೆಎಫ್‌ಸಿಸಿಯ 2022-23ನೇ ಸಾಲಿನ 64ನೇ ವರ್ಷದ ವಾರ್ಷಿಕ ಚುನಾವಣೆ 2022ರ ಮೇ 28ರಂದು ಜರುಗಿತ್ತು. ಅಧ್ಯಕ್ಷರಾಗಿ ನಿರ್ಮಾಪಕ ಬಾ.ಮಾ. ಹರೀಶ್ ಬಣ ಗೆಲುವು ಸಾಧಿಸಿತ್ತು. ಪರಾಜಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸಾ.ರಾ.ಗೋವಿಂದು, 'ಈ ಚುನಾವಣೆ ಅನುಚಿತವಾಗಿದ್ದು ಕಾನೂನು ಬಾಹಿರವಾಗಿದೆ. ಚುನಾವಣೆಯಲ್ಲಿ ಚುನಾವಣಾಧಿಕಾರಿ ವಂಚಿಸಿದ್ದಾರೆ' ಎಂದು ಆರೋಪಿಸಿ ಜಿಲ್ಲಾ ಸಹಕಾರ ಸಂಘಗಳ ಡೆಪ್ಯೂಟಿ ರಿಜಿಸ್ಟ್ರಾರ್ ಅವರಿಗೆ ದೂರು ನೀಡಿದ್ದರು. ಡೆಪ್ಯೂಟಿ ರಿಜಿಸ್ಟ್ರಾರ್ ಈ ದೂರನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಗೋವಿಂದು ಹೈಕೋರ್ಟ್ ಮೆಟ್ಟಿಲೇರಿದ್ದರು.

ಅಕ್ರಮಗಳ ಆರೋಪ: ಕಳೆದ ಮೇ 28ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆಗೆ ನಡೆದಿದೆ. ವಾಣಿಜ್ಯ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಾ.ಮಾ.ಹರೀಶ್ 781 ಮತಗಳನ್ನು ಪಡೆದ ಅಧ್ಯಕ್ಷ ರಾಗಿ ಆಯ್ಕೆಯಾಗಿದ್ದರು, ಅಭ್ಯರ್ಥಿ ಸಾ.ರಾ.ಗೋವಿಂದು 371 ಮತಗಳನ್ನು ಗಳಿಸಿದ್ದರು. ಇಡೀ ಚುನಾವಣೆಯನ್ನು ಕಾನೂನುಬಾಹಿರವಾಗಿ ನಡೆಸಲಾಗಿದೆ. ಜೊತೆಗೆ ಅಕ್ರಮಗಳನ್ನು ಎಸಗಲಾಗಿದೆ, ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ದೂರಿದರು.

ಅಲ್ಲದೆ, ಮತದಾರರ ಪಟ್ಟಿಯನ್ನು ಸರಿಯಾಗಿ ಪ್ರಕಟಿಸಿಲ್ಲ, ಮತದಾನಕ್ಕೆ ಬಂದವರ ಬಳಿ ನಿಯಮದಂತೆ ಸಹಿ ಹಾಕಿಸಿಕೊಳ್ಳಬೇಕು, ಅದರಲ್ಲೂಅಕ್ರಮ ಎಸಗಲಾಗಿದೆ. ಮತದಾನಕ್ಕೆ ಬಂದವರ ಗುರುತಿನ ಚೀಟಿಗಳನ್ನೇ ಪರಿಶೀಲಿಸಿಲ್ಲ. ಇಡೀ ಚುನಾವಣಾ ಪ್ರಕ್ರಿಯೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೈಲಾಗೆ ವಿರುದ್ಧವಾಗಿ ನಡೆಸಲಾಗಿದೆ ಎಂದು ಹೇಳಿದರು.

ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯ ಆಗಸ್ಟ್ ತಿಂಗಳಿನಲ್ಲಿ, ಅರ್ಜಿ ಇತ್ಯರ್ಥವಾಗುವವರೆಗೆ ಕೆಎಫ್‌ಸಿಸಿ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಮಧ್ಯಂತರ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

English summary
Film chamber election controversy: Karnataka High Court dismissed the petition and directed to approach civil court
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X