ಎಂಎಲ್ಎ ಕಟ್ಟೆಯ ಮೇಲೆ ಕುಂತವರಿಗೆ ಗೆಲುವು

ಶಿರಹಟ್ಟಿ ಮತ್ತು ರೋಣ ಕ್ಷೇತ್ರಗಳ ಮಧ್ಯೆ ಇರುವ ಹೇಮರೆಡ್ಡಿ ಸರ್ಕಲ್ ಎಂಎಲ್ಎ ಕಟ್ಟೆ ಎಂದೇ ಪ್ರಸಿದ್ದಿ ಪಡೆದಿದೆ. ಇಲ್ಲಿ ನೋಡಲು ಅಂತಹ ಆಕರ್ಷಣೆಯಿಲ್ಲ, ಇರುವುದು ಕೇವಲ ಒಂದು ಕಲ್ಲುಬೆಂಚು ಮತ್ತು ಹುಣಸೇ ಮರ. ಆದರೆ, ಈ ಕಟ್ಟೆ ಹತ್ತಿಳಿದ ಅಭ್ಯರ್ಥಿ ಇದುವರೆಗೂ ಚುನಾವಣೆ ಸೋತಿಲ್ಲ ಎಂಬುದು ವಿಶೇಷ.
ಗ್ರಾಮ ಪಂಚಾಯಿತಿಯಿಂದ ಲೋಕಸಭೆ ಚುನಾವಣೆಗೆ ವರೆಗೆ ಸ್ಪರ್ಧಿಸಿದ ಹುರಿಯಾಳುಗಳು ಈ ಕಟ್ಟೆಯ ಮೇಲೆ ಕೆಲಕಾಲ ಕೂತು ಗೆಲುವು ಪಡೆದಿದ್ದಾರೆ. ಕೆಲವು ಅಭ್ಯರ್ಥಿಗಳು ಚುನಾವಣಾ ಸಭೆ, ಪ್ರಚಾರ, ಜನರೊಂದಿಗಿನ ಮಾತುಕತೆಗೆ ಈ ಕಟ್ಟೆಯನ್ನು ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ.
ಈ ಹಾದಿಯಲ್ಲಿ ಸಾಗುವ ವಿವಿಧ ಪಕ್ಷದ ಅಭ್ಯರ್ಥಿಗಳು ಇಲ್ಲಿ ಕ್ಷಣಕಾಲ ಕೂರದೇ ಪ್ರಯಾಣ ಮುಂದುವರೆಸಿದ ಉದಾಹರಣೆಗಳೇ ಇಲ್ಲವೆನ್ನಬಹುದು. ಇಲ್ಲೊಮ್ಮೆ ಕುಳಿತು ನಂತರ ವಿಧಾನಸಭೆ ಮಟ್ಟಿಲೇರಿದ ಅನೇಕ ನಾಯಕರ ಉದಾಹರಣೆಗಳಿವೆ. ಆದ್ದರಿಂದಲೇ ಇದು ಎಂಎಲ್ಎ ಕಟ್ಟೆ ಎಂದೇ ಪ್ರಸಿದ್ದವಾಗಿದೆ.
ಎಂಎಲ್ಎ ಕಟ್ಟೆ ಆಗಿದ್ದು ಯಾವಾಗ : ಸಾಮಾನ್ಯ ಹುಣಸೇಮರ ಮತ್ತು ಕಲ್ಲು ಬೆಂಚಿನ ಕಟ್ಟೆ ಎಂಎಲ್ಎ ಕಟ್ಟೆ ಆಗಿದ್ದು ಒಂದು ಕುತೂಹಲ ಭರಿತ ಕಥೆ. 1994ರಲ್ಲಿ ಎಸ್.ಎಸ್.ಪಾಟೀಲ್ ಜನತಾದಳ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು.
ಪ್ರಚಾರದ ನಡುವೆ ಈ ಕಟ್ಟೆಯ ಮೇಲೆ ಕುಳಿತು ಜನರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಕೆಲವು ಸಲ ಕಟ್ಟೆಯ ಮೇಲಿಂದಲೇ ಪ್ರಚಾರ ಮಾಡಿದ್ದರು. ನಂತರ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದರು. ಕೇವಲ ಒಮ್ಮೆಯಲ್ಲ ಮೂರು ಬಾರಿ ಅವರು ವಿಧಾನಸಭೆ ಚುನಾವಣೆಯನ್ನು ಗೆದ್ದು ಬಂದರು.
ಪಾಟೀಲರು ಮೊದಲ ಚುನಾವಣೆ ಗೆದ್ದ ನಂತರ ಇದು ಎಂಎಲ್ಎ ಕಟ್ಟೆ ಎಂದು ಪ್ರಸಿದ್ಧಿ ಪಡೆಯಿತು. ನಂತರ ಚುನಾವಣೆಯಲ್ಲಿಯೂ ಪಾಟೀಲರು ಪ್ರಚಾರ ಕಾರ್ಯಕ್ಕೆ ಕಟ್ಟೆಯನ್ನು ಸಂಪೂರ್ಣವಾಗಿ ಬಳಸಿಕೊಂಡು ವಿಧಾನಸಭೆ ಪ್ರವೇಶಿಸಿದರು.
ಪಾಟೀಲರ ನಂತರ ವೈ.ಎನ್.ಗೌಡರು, ವಿರೂಪಾಕ್ಷ ಗೌಡ, ರವೀಂದ್ರ ಉಪ್ಪಿನ ಬೆಟಗೇರಿ ಮುಂತಾವರು ವಿವಿಧ ಚುನಾವಣೆಯಲ್ಲಿ ಈ ಕಟ್ಟೆಯ ಮೂಲಕ ಪ್ರಚಾರ ಮಾಡಿ ಗೆಲುವಿನ ಸಿಹಿ ಉಂಡಿದ್ದಾರೆ. ಆದ್ದರಿಂದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಎಂಎಲ್ಎ ಕಟ್ಟೆಯ ಹುಣಸೇಮರ ಅದೃಷ್ಟ ತರುವ ಸ್ಥಳ.
ಈಗಲೂ ಈ ಸಂಪ್ರದಾಯ ಮುಂದುವರೆದುಕೊಂಡು ಬಂದಿದ್ದು, ಇಂದಿಗೂ ಚುನಾವಣಾ ಅಭ್ಯರ್ಥಿಗಳು ಈ ಕಟ್ಟೆಯನ್ನು ತಮ್ಮ ಅಡ್ಡವಾಗಿ ಪರಿರ್ತಿಸಿಕೊಂಡಿದ್ದಾರೆ. ಅದರಲ್ಲೂ ಶಿರಹಟ್ಟಿ ಮತ್ತು ರೋಣ ಕ್ಷೇತ್ರದ ಅಭ್ಯರ್ಥಿಗಳಿಗೆ ಇದು ಹಾಟ್ ಸ್ಟಾಟ್ ಸ್ಥಳ.(ಗದಗ ಜಿಲ್ಲಾ ವಿಧಾನಸಭೆ ಕ್ಷೇತ್ರಗಳ ಪರಿಚಯ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ











Click it and Unblock the Notifications