ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿಗಳಿಗೆ ಜಾಮೀನು ನೀಡಲೇಬಾರದು ಎಂಬ ನಿಯಮ ಇಲ್ಲ ಎಂದ ಹೈಕೋರ್ಟ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆದಿದೆ. ಈ ವೇಳೆ ಹೈಕೋರ್ಟ್ ಮಹತ್ವದ ಕಾನೂನು ಅಂಶವೊಂದನ್ನು ಉಲ್ಲೇಖಿಸಿದೆ. "ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಮಾತ್ರಕ್ಕೆ ಆರೋಪಿಗಳಿಗೆ ಜಾಮೀನು ನೀಡಬಾರದು ಎಂಬ ನಿಯಮವೇನೂ ಇಲ್ಲ" ಎಂದು ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ವಿಶೇಷವಾಗಿ, ಜಾಮೀನು ಪಡೆಯುವುದು ವ್ಯಕ್ತಿಯ ಮೂಲಭೂತ ಹಕ್ಕಿಗೆ ಸಂಬಂಧಿಸಿದ ವಿಷಯವಾಗಿದ್ದು, ಪ್ರತಿಯೊಂದು ಕೊಲೆ ಪ್ರಕರಣವನ್ನು ಒಂದೇ ದೃಷ್ಟಿಕೋನದಿಂದ ನೋಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಮಾಧ್ಯಮಗಳಲ್ಲಿ ಈ ಪ್ರಕರಣದ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದ್ದರೂ, ನ್ಯಾಯಾಲಯವು ಯಾವುದೇ ಪ್ರಭಾವಕ್ಕೆ ಒಳಗಾಗದೆ ಸ್ವತಂತ್ರವಾಗಿ ವಿವೇಚನಾಧಿಕಾರ ಬಳಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಪೀಠವು ಈ ಸಂದರ್ಭದಲ್ಲಿ ತಿಳಿಸಿದೆ.

ಜಾಮೀನು ತೀರ್ಮಾನ ಕೋರ್ಟ್‌ಗೆ ಸೇರಿದ್ದು
"ಜಾಮೀನು ರದ್ದು ಎನ್ನುವುದು ವ್ಯಕ್ತಿಯ ಸ್ವಾತಂತ್ರ್ಯದ ವಿಷಯ. ಕೇವಲ ಕೊಲೆ ಆರೋಪಿ ಎಂಬ ಕಾರಣಕ್ಕೆ ಜಾಮೀನು ನಿರಾಕರಿಸಲಾಗದು" ಎಂದಿದ್ದಾರೆ. ಅಲ್ಲದೆ, "ಯಾರೋ ಒಬ್ಬರನ್ನು ಗುರಿಯಾಗಿಸಿಕೊಂಡು ಜಾಮೀನು ರದ್ದುಪಡಿಸುವುದು ಸರಿಯಲ್ಲ. ಈ ಪ್ರಕರಣದ ಜಾಮೀನು ಆದೇಶವನ್ನು ಎತ್ತಿ ಹಿಡಿಯುತ್ತೇವೆ ಎಂದಲ್ಲ, ಆದರೆ ಜಾಮೀನು ನೀಡುವ ಅಧಿಕಾರ ನ್ಯಾಯಾಲಯದ ವಿವೇಚನೆಗೆ ಸೇರಿದ್ದು" ಎಂದೂ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೆಳಹಂತದ ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ನಾಲ್ವರು ಆರೋಪಿಗಳ ಭವಿಷ್ಯ ಈಗ ಹೈಕೋರ್ಟ್‌ನಲ್ಲಿ ತೂಗುಯ್ಯಾಲೆಯಲ್ಲಿದೆ. 2024ರ ಡಿಸೆಂಬರ್‌ನಲ್ಲಿ ಸಿಟಿ ಸಿವಿಲ್ ನ್ಯಾಯಾಲಯ ನೀಡಿದ್ದ ಜಾಮೀನು ಆದೇಶವನ್ನು ಪ್ರಶ್ನಿಸಿ ಪ್ರಾಸಿಕ್ಯೂಷನ್ ಮೇಲ್ಮನವಿ ಸಲ್ಲಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಜಾಮೀನು ಸುಪ್ರೀಂಕೋರ್ಟ್‌ನಲ್ಲಿ ರದ್ದಾಗಿರುವ ಬೆನ್ನಲ್ಲೇ, ಇದೀಗ ಇತರ ನಾಲ್ವರು ಆರೋಪಿಗಳಾದ ಪವನ್, ಧನರಾಜ್, ನಂದೀಶ್ ಮತ್ತು ವಿನಯ್ ಅವರ ಜಾಮೀನು ರದ್ದು ಮಾಡುವಂತೆ ಸರ್ಕಾರ ಕಾನೂನು ಸಮರ ತೀವ್ರಗೊಳಿಸಿದೆ.
ದರ್ಶನ್, ಪವಿತ್ರಾಗೌಡ ಮತ್ತೆ ಜೈಲು ಸೇರಿದ್ದಾರೆ
ಈಗಾಗಲೇ ಇದೇ ಪ್ರಕರಣದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಎಂಟು ಪ್ರಮುಖ ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿರುವುದನ್ನು ನ್ಯಾಯಪೀಠದ ಗಮನಕ್ಕೆ ತರಲಾಯಿತು. ಸುಪ್ರೀಂಕೋರ್ಟ್ ಈಗಾಗಲೇ ಪ್ರಕರಣದ ಗಂಭೀರತೆಯನ್ನು ಎತ್ತಿ ಹಿಡಿದು ಪ್ರಮುಖ ಆರೋಪಿಗಳನ್ನು ಮತ್ತೆ ಜೈಲಿಗೆ ಕಳುಹಿಸಿದೆ. ಅದೇ ನಿಯಮ ಈ ನಾಲ್ವರಿಗೂ ಅನ್ವಯವಾಗಬೇಕು. ವೈಜ್ಞಾನಿಕ ಸಾಕ್ಷ್ಯಗಳು ಇವರ ವಿರುದ್ಧ ಬಲವಾಗಿರುವ ಸಂದರ್ಭದಲ್ಲಿ ಇವರಿಗೆ ರಿಯಾಯಿತಿ ನೀಡುವುದು ತನಿಖೆಯ ಮೇಲೆ ಪರಿಣಾಮ ಬೀರಬಹುದು ಎಂದು ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿದರು.

"ಎಫ್‌ಎಸ್‌ಎಲ್ ಮತ್ತು ಡಿಎನ್ಎ ವರದಿಗಳು ಈ ಆರೋಪಿಗಳ ಕೃತ್ಯವನ್ನು ಸಾಬೀತುಪಡಿಸಿವೆ. ಪ್ರಭಾವಿ ಆರೋಪಿಗಳು ಹೊರಬಂದರೆ ಸಾಕ್ಷ್ಯ ನಾಶಪಡಿಸುವ ಆತಂಕವಿದೆ. ರೋಪಿಗಳು ಹೊರಗಿದ್ದರೆ ಪ್ರಭಾವ ಬಳಸಿ ಪ್ರಕರಣದ ದಿಕ್ಕು ತಪ್ಪಿಸಬಹುದು. ಸುಪ್ರೀಂಕೋರ್ಟ್ ಈಗಾಗಲೇ ಪ್ರಕರಣದ ಗಂಭೀರತೆಯನ್ನು ಎತ್ತಿ ಹಿಡಿದಿದೆ" ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಈ ಕುರಿತು ಆಕ್ಷೇಪಣೆ ಸಲ್ಲಿಸಲು ಆರೋಪಿಗಳ ಪರ ವಕೀಲರಿಗೆ ಸೂಚಿಸಿದ ಹೈಕೋರ್ಟ್, ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿದೆ.












Click it and Unblock the Notifications