ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಾಥ ಮಗುವನ್ನು ಲಾಲಿಸಿದ ಚನ್ನಪಟ್ಟಣದ ಜನತೆ

|
Google Oneindia Kannada News

Orphaned child rescued in Channapattana
ಚನ್ನಪಟ್ಟಣ, ಅ. 20 : ತಮಗೆ ಬೇಡವಾಗಿದ್ದ ಮಗುವನ್ನು ಹೆತ್ತಕೂಡಲೇ ತಾಯಿ ಮಮಕಾರ ಕೂಡ ತೋರದೆ ತಿಪ್ಪೆಗುಂಡಿಯಲ್ಲಿ ಎಸೆದೋ, ದೇವಸ್ಥಾನದ ಮೆಟ್ಟಿಲ ಮೇಲೆ ಇಟ್ಟೋ ಕಣ್ಮರೆಯಾಗುವ ಮಹಾತಾಯಿಯರು ಅನೇಕರು ಸಿಗುತ್ತಾರೆ. ಆದರೆ, ಥೇಟ್ ಸಿನೆಮಾ ರೀತಿಯಲ್ಲಿ ಈರೀತಿ ಅನಾಥವಾದ ಮಗುವನ್ನು ಪ್ರಕೃತಿಯೇ ಕಾಪಾಡಿದ, ದಾರಿಹೋಕರೊಬ್ಬರು ರಕ್ಷಿಸಿ, ಚನ್ನಪಟ್ಟಣದ ಜನತೆಯೇ ಲಾಲಿಸಿದ ಹೃದ್ಯ ಘಟನೆ ಚನ್ನಪಟ್ಟಣದಲ್ಲಿ ಜರುಗಿದೆ.

ಪೋಷಕರಿಗೆ ಬೇಡವಾಗಿ ನೀರುಪಾಲಾಗಬೇಕಾಗಿದ್ದ ಆಗತಾನೆ ಹುಟ್ಟಿದ ಮಗುವೊಂದು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದೆ. ಯೌವನಾವಸ್ಥೆಯಲ್ಲಿ ದುಡುಕಿದ ಕಾರಣಕ್ಕೆ ಹಡೆದ ಮಗುವನ್ನ ಸಮಾಜಕ್ಕೆ ತೋರಿಸಲಾಗದೆ ಹೆದರಿ ಅಪರಿಚಿತರು ರಾಮನಗರ ಜಿಲ್ಲೆ ಚನ್ನಪಟ್ಟಣದ ಶೆಟ್ಟಹಳ್ಳಿಕೆರೆಗೆ ಎಸೆದು ಹೋಗಿದ್ದರು. ಆದರೆ ಕೆರೆಯಲ್ಲಿರುವ ಜೊಳ್ಳಿನ ಮೇಲೆ ಬಿದ್ದು ರಾತ್ರಿಯಿಡೀ ಕಳೆದಿದ್ದ ನವಜಾತ ಶಿಶುವಿನ ಚೀರಾಟ ಕಂಡ ದಾರಿಹೋಕರೊಬ್ಬರು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ದಯೆ ಕರುಣೆಯಿಲ್ಲದೇ ಕರುಳಬಳ್ಳಿಯನ್ನ ಎಸೆದುಹೋಗಿದ್ದ ಮಹಾತಾಯಿ ಯಾರೆಂದು ಗೊತ್ತಾಗಿಲ್ಲ. ಆದರೆ ಪೋಷಕರ ನಿರ್ಲಕ್ಷ್ಯಕ್ಕೊಳಗಾದರೂ ಪ್ರಕೃತಿ ಮಗುವನ್ನ ರಕ್ಷಿಸಿದೆ.

ಚನ್ನಪಟ್ಟಣದ ಶೆಟ್ಟಹಳ್ಳಿಕರೆಯ ದಡದಲ್ಲಿ ಸೂರ್ಯೋದಯ ಸಮಯದಲ್ಲೇ ಮಗುವೊಂದರ ಚೀರಾಟದ ಶಬ್ಧ ಕೇಳಿಸಿದೆ. ಕಂದಮ್ಮನ ಚೀರಾಟ ಕೇಳಿಸಿಕೊಂಡ ದಾರಿಯಲ್ಲಿ ಹೋಗುತ್ತಿದ್ದವರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಕೆರೆಯ ದಡದಲ್ಲಿ ಮಗು ಸಿಕ್ಕಿದೆಯೆಂದು ತಿಳಿದಾಕ್ಷಣ ಆಸ್ಪತ್ರೆಯ ವೈದ್ಯರುಗಳು ಕೂಡ ಹೆಚ್ಚಿನ ಗಮನ ಹರಿಸಿ ತಕ್ಷಣವೇ ಕಂದಮ್ಮನಿಗೆ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಆಸ್ಪತ್ರೆಯ ದಾದಿಗಳೇ ಮಗುವಿಗೆ ಸಿರಿಂಜ್ ಮೂಲಕ ಹಾಲುಣಿಸಿ ತಾಯಮಮತೆ ತೋರಿದ್ದಾರೆ. ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಅಪ್ಪ ಅಮ್ಮನಿಂದ ದೂರವಾದ ಕಂದಮ್ಮನಿಗೆ ಹೊಸಬಟ್ಟೆ, ಹಾಲಿನ ಬಾಟಲ್ ನೀಡಿ ಹೃದಯವಂತಿಕೆ ಮೆರೆದಿದ್ದಾರೆ.

Orphaned child rescued in Channapattana
ಅಪ್ಪ ಅಮ್ಮನ ಪ್ರೀತಿಯಿಂದ ದೂರವಾದ ಈ ಕಂದಮ್ಮನನ್ನ ಮನೆಮಗನನ್ನಾಗಿ ಮಾಡಿಕೊಳ್ಳಲು ನಾಮುಂದು ತಾಮುಂದು ಎಂದು ಹಲವಾರು ಮಂದಿ ಮುಂದೆ ಬಂದಿದ್ದಾರೆ. ಮಗುವನ್ನ ಪಡೆದುಕೊಳ್ಳಲು ಮುಂದಾಗಿರುವ ವಿಚಾರವನ್ನ ತಿಳಿದ ವೈದ್ಯರು ಮತ್ತು ಶಿಶು ಕಲ್ಯಾಣ ಇಲಾಖೆ ಮೊದಲಿಗೆ ಬೆಂಗಳೂರಿನ ಬಾಲಮಂದಿರಕ್ಕೆ ಸ್ಥಳಾಂತರಿಸಲಾಗಿದೆ. ದತ್ತು ನಿಯಮದ ಪ್ರಕಾರ ಮಗುವನ್ನ ದತ್ತು ತೆಗೆದುಕೊಳ್ಳಲು ಯಾರಾದರು ಮುಂದೆ ಬಂದರೆ ಮಗುವನ್ನ ಸಾಕಲು ಅರ್ಹತೆ ಹೊಂದಿದ್ದಾರೆಯೇ ಎಂದು ತಿಳಿದು ಪರಿಶೀಲನೆ ನಡೆಸಿ ನಂತರ ಕಾನೂನು ಪ್ರಕಾರ ದತ್ತು ನೀಡಲಾಗುವುದೆಂದು ಶಿಶು ಕಲ್ಯಾಣಾಧಿಕಾರಿ ಸಿದ್ದೇಗೌಡ ತಿಳಿಸಿದ್ದಾರೆ.

ಪುರಾಣ ಇತಿಹಾಸಗಳಲ್ಲಿನ ಕಥೆಯಂತೆ ಮೋಹದ ಮೊದಲ ಹಂತವೇ ಪಾಪವೆಂದು ಹೇಳುತ್ತಾರೆ. ಆದರೆ ವಯಸ್ಸಿನಾಕರ್ಷಣೆಗೊಳಗಾಗಿ ರಕ್ತವನ್ನು ಹಂಚಿಕೊಂಡು ಜನಿಸಿದ ಹೆತ್ತಜೀವವನ್ನೇ ಅನಾಥನನ್ನಾಗಿ ಮಾಡಿರುವುದು ಮಾತ್ರ ದುಃಖಕರವಾದ ಘಟನೆಯಾಗಿದೆ. ದೇವರುಗಳಿಗೆ ಹರಕೆ ಹೊತ್ತು ಕಾಡಿಬೇಡಿದರೂ ಕೆಲವರಿಗೆ ಸಂತಾನ ಭಾಗ್ಯ ದೊರೆತಿರುವುದಿಲ್ಲ, ಕೆಲವರಿಗೆ ದೇವರು ಕರುಣಿಸಿದರೂ ಮಗು ಬೇಕಿರುವುದಿಲ್ಲ. ಎಂಥ ವಿಪರ್ಯಾಸ!

ಪ್ರಾಣಿ ಪಕ್ಷಿಗಳು ಕೂಡ ತಮ್ಮ ಮರಿಗಳನ್ನ ರಕ್ಷಿಸಿ ಪೋಷಿಸುತ್ತವೆ. ಆದರೆ ಮಾನವರು ದಿನೇ ದಿನೇ ಮಾನವೀಯತೆಯನ್ನ ಮರೆಯುತ್ತಾ ನವರಾಗುತ್ತಿರುವುದರಿಂದಲೇ ನಿಷ್ಪಾಪಿ ಕಂದಮ್ಮಗಳು ದಿನೇದಿನೇ ಬೀದಿಪಾಲಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಲೇ ಇವೆ. ಒಟ್ಟಾರೆ ಗಂಡು ಮಗು ಎಂದಾಕ್ಷಣ ಮನೆಮಗನನ್ನಾಗಿ ಮಾಡಿಕೊಳ್ಳಲು ನಾಮುಂದು ತಾಮುಂದು ಎನ್ನುತ್ತಿರುವ ಮಂದಿ ಹೆಣ್ಣುಮಗುವಾಗಿದ್ದರೆ ಮುಂದೆ ಬರುತ್ತಿದ್ದರೇ ಎಂಬ ಪ್ರಶ್ನೆ ಕಾಡುತ್ತಿದೆ.

ಗ್ಯಾಲರಿ : ಯಾರಾದರೂ ಈ ಮಗುವನ್ನು ದತ್ತು ಪಡೆಯುವಿರಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X