ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿವೇಶನಗುಳುಂ ಮಾಡಿದ ಕ್ಯಾತಮಾರನಹಳ್ಳಿ

By Staff
|
Google Oneindia Kannada News

Siddaramaiah
ಬೆಂಗಳೂರು, ಜು. 9 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೋಮುಗಲಭೆಯಂತಹ ಘಟನೆಗಳು ನಡೆದಿರುವುದು ತಮಗೆ ತೀವ್ರ ನೋವು ತಂದಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಷಾಧಿಸಿದರು. (ಗುರುವಾರ ಬೆಳಗ್ಗೆ ಯಡಿಯೂರಪ್ಪ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಸಂಜೆ ವೇಳೆಗೆ ಮತ್ತೆ ಮೈಸೂರು ಬೆಂಕಿಚಂಡಾಗಿ ಹೊತ್ತಿ ಉರಿಯತೊಡಗಿದೆ).

ಅಧಿವೇಶನಕ್ಕೂ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂತಹ ಘಟನೆಗಳು ನಡೆಯದಂತೆ ಅಗತ್ಯ ಕ್ರಮಕೈಗೊಳ್ಳುವುದಾಗಿ ಹೇಳಿದರು. ಅವರೊಂದಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಕೂಡಾ ಧ್ವನಿಗೂಡಿಸಿದ್ದರು. ಸೆಫ್ಟೆಂಬರ್ 19 ರಂದು ಆರಂಭವಾಗಲಿರುವ ದಸರಾ ಉತ್ಸವಕ್ಕೆ ಮೈಸೂರಿನಲ್ಲಿ ವಿಶೇಷ ಭದ್ರತೆ ಒದಗಿಸಲಾಗುವುದು. ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೋಮು ಸೌಹಾರ್ದತೆ ಕದಡಲು ವ್ಯವಸ್ಥಿತ ಸಂಚು ರೂಪಿಸುವ ಶಕ್ತಿಗಳ ವಿರುದ್ದ ಪೊಲೀಸರು ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಇದೇ ಸಂದರ್ಭದಲ್ಲಿ ಸೂಚಿಸಿದರು. ಕಳೆದ ಬಾರಿಗಿಂತ ಈ ಬಾರಿ ಇನ್ನಷ್ಟು ಅದ್ಧೂರಿಯಾಗಿ ನಾಡಹಬ್ಬವನ್ನು ಆಚರಿಸಲಾಗುವುದು. ಕಳೆದ ಸಲ ದಸರಾ ಹಬ್ಬಕ್ಕೆ 10 ಕೋಟಿ ರುಪಾಯಿ ನೀಡಲಾಗಿತ್ತು. ಈ ಪೈಕಿ 1.25 ಕೋಟಿ ರುಪಾಯಿ ಉಳಿದಿದೆ. ಮೈಸೂರಿನ ಸಮಗ್ರ ಅಭಿವೃದ್ಧಿಗೆ 100 ಕೋಟಿ ರುಪಾಯಿಗಳನ್ನು ಘೋಷಿಸಲಾಗಿದ್ದು, ಶೀಘ್ರದಲ್ಲಿ ಈ ಹಣವನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.

ಅಧಿವೇಶನದಲ್ಲಿ ಆವರಿಸಿದ ಕ್ಯಾತಮಾರನಹಳ್ಳಿ

ಕಳೆದ ಗುರುವಾರ ಮೈಸೂರಿನಲ್ಲಿ ನಡೆದ ಕೋಮುಗಲಭೆ ಪ್ರಕರಣ ಮೊದಲ ದಿನದ ಅಧಿವೇಶನದಲ್ಲಿ ಪ್ರತಿಧ್ವನಿಸಿ ತೀವ್ರ ಗದ್ದಲ ಕೋಲಾಹಲಕ್ಕೆ ಕಾರಣವಾಯಿತು. ವಿಧಾನಸಭೆಯಲ್ಲಿ ಇಂದು ಅಧಿವೇಶನದ ಕಲಾಪಗಳು ಆರಂಭವಾಗುತ್ತಿದ್ದಂತೆಯೇ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ನಿರ್ಣಯ ಕೈಗೊಂಡ ಬಳಿಕ ಕಾರ್ಯಸೂಚಿಯಂತೆ ಪ್ರಶ್ನೋತ್ತರ ಕಲಾಪವನ್ನು ಆರಂಭಿಸಬೇಕಿತ್ತು.

ಆದರೆ, ಗಂಭೀರ ವಿಷಯವಾಗಿದ್ದರಿಂದ ಪ್ರಶ್ನೋತ್ತರ ಮೊದಲೇ ಮೈಸೂರು ಘಟನೆಯ ಬಗ್ಗೆ ನಿಯಮ 60ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಬೇಕೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೋರಿಕೆ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ನಡುವೆ ಪರಸ್ಪರ ಮಾತಿನ ಚಕಮಕಿ, ಕೋಲಾಹಲಕ್ಕೆ ಕಾರಣವಾಯಿತು.

ಸಂತಾಪ ಸೂಚಕ ನಿರ್ಣಯ ಮುಗಿಯುತ್ತಿದ್ದಂತೆಯೇ ಎದ್ದು ನಿಂತ ಸಿದ್ದರಾಮಯ್ಯ ಮೈಸೂರಿನ ಕೋಮು ಗಲಭೆ ವಿಷಯದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಸ್ಪೀಕರ್ ಜಗದೀಶ್ ಶೆಟ್ಟರ್ ಅವರನ್ನು ಕೋರಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಟಿ ಬಿ ಜಯಚಂದ್ರ, ಮೈಸೂರಿನಲ್ಲಿ ಜನರು ಭಯಬೀತರಾಗಿದ್ದಾರೆ. ಕರ್ನಾಟಕ ಶಾಂತಿ ಸೌಹಾರ್ದತೆಗೆ ಹೆಸರಾಗಿದೆ. ಆದರೆ, ಮೈಸೂರಿನ ಘಟನೆ ಕಪ್ಪು ಚುಕ್ಕೆಯಾಗಿದೆ ಎಂದು ಕಟುಕಿದರು. ಆದ್ದರಿಂದ ಮೈಸೂರು ಘಟನೆಯನ್ನು ನಿಯಮ 60ರ ಅಡಿಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.

ಆಗ ಎದ್ದು ನಿಂತ ಸಚಿವ ಸುರೇಶಕುಮಾರ್, ಮೈಸೂರು ಘಟನೆ ಬಗ್ಗೆ ಚರ್ಚಿಸಲು ಅಭ್ಯಂತರವಿಲ್ಲ. ಆದರೆ, ಕಾನೂನು ಸುವ್ಯವಸ್ಥೆ ವಿಷಯವನ್ನು ನಿಯಮ 60ರ ಅಡಿಯಲ್ಲಿ ಚರ್ಚಿಸಲು ಅವಕಾಶವಿಲ್ಲ. ಹಾಗಾಗಿ ನಿಯಮ 69ರಲ್ಲಿ ಚರ್ಚಿಸೋಣ ಎಂದರು. ಇದಕ್ಕೆ ಒಪ್ಪದ ಸಿದ್ದರಾಮಯ್ಯ ಘಟನೆ ಗಂಭೀರವಾಗಿದೆ. ಅನೇಕ ಅಮಾಯಕರನ್ನು ಬಂಧಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಸಚಿವರು ವಿಫಲರಾಗಿದ್ದಾರೆ ಎಂದು ಟೀಕಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X