Mallikarjun Kharge: ರಾಜಕೀಯ ನಿವೃತ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಮಲ್ಲಿಕಾರ್ಜುನ್ ಖರ್ಗೆ
ಕಲಬುರ್ಗಿ, ಏಪ್ರಿಲ್ 25: ನಾನು ರಾಜಕೀಯದಿಂದ ಎಂದಿಗೂ ನಿವೃತ್ತರಾಗುವುದಿಲ್ಲ ಎಂದು ಘೋಷಿಸಿದ ಖರ್ಗೆ ನಾನು ಚುನಾವಣೆಗೆ ನಿಲ್ಲುತ್ತೇನೋ ಬಿಡುತ್ತೇನೋ ಆ ಮಾತು ಬೇರೆ. ಆದರೆ ತುಳಿತಕ್ಕೆ ಒಳಗಾದ ಸಮಾಜದ ಪರವಾದ ಹೋರಾಟ ಮಾಡಲು ನಾನು ರಾಜಕೀಯದಲ್ಲಿ ಇರುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮಹತ್ವ ಹೇಳಿಕೆಯನ್ನ ನೀಡಿದ್ದಾರೆ.
ಈ ಕುರಿತು ಕಲಬುರ್ಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರ ಪರ ಮತಯಾಚನೆ ಸಂದರ್ಭದಲ್ಲಿ ಮಾತನಾಡಿ ಅವರು, ಆರ್ ಎಸ್ ಎಸ್ ಸಿದ್ದಾಂತಗಳನ್ನು ಸೋಲಿಸಲು ನಾನು ಹೋರಾಡುತ್ತಲೇ ಇರುತ್ತೇನೆ. ಕಳೆದ ಸಲದ ಸೋಲಿನ ವಿಚಾರ ಬಿಡಿ. ನಾವು ಮಾಡಿದ ಕೆಲಸಕ್ಕೆ ನೀವು ಆಶೀರ್ವಾದ ಮಾಡಿ ರಾಧಾಕೃಷ್ಣ ಅವರಿಗೆ ಗೆಲ್ಲಿಸಬೇಕು. ನೀವು ಹಾಗೆ ಮಾಡದಿದ್ದರೆ ನಿಮ್ಮ ಹೃದಯದಲ್ಲಿ ನಾನು ಇಲ್ಲ ಎಂದು ತಿಳಿದುಕೊಳ್ಳುತ್ತೇನೆ ಎಂದು ಭಾವುಕರಾದರು.

ಈ ವೇಳೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಜನವಿರೋಧಿ, ರೈತವಿರೋಧಿ ಹಾಗೂ ಬಡವರ ವಿರೋಧಿ ಧೋರಣೆ ಅನುಸರಿಸುತ್ತಿದೆ. ಮೋದಿ ಉದ್ರಿ ಭಾಷಣದಿಂದ ಯಾರ ಹೊಟ್ಟೆ ತುಂಬಲ್ಲ. ಸಿದ್ದರಾಮಯ್ಯ ಗ್ಯಾರಂಟಿಯಿಂದ ಜನರ ಕಷ್ಟ ನೀಗುತ್ತದೆ. ಮತ್ತೆ ಜನ ಪರವಾದ ಆಡಳಿತ ಬರಬೇಕೆಂದರೆ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದರು.
ಮೋದಿ ಸರ್ಕಾರ ಹಾಗೂ ಉಮೇಶ್ ಜಾಧವ ಅವರ ಕೊಡುಗೆ ಶೂನ್ಯ ಎಂದ ಸಚಿವರು ಜಿಲ್ಲೆಯಲ್ಲಿ ಇಎಸ್ ಐ, ಜಯದೇವ, ಕಿದ್ವಾಯಿ ಆಸ್ಪತ್ರೆಗಳು ಹಾಗೂ ಟ್ರಾಮಾ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಇಂತಹ ಯಾವುದಾದರೂ ಒಂದು ಯೋಜನೆಯನ್ನು ಬಿಜೆಪಿ ಬಾರಿಗೆ ತಂದಿದ್ದರೆ ಹೇಳಲಿ ಎಂದು ಸವಾಲಾಕಿದರು. ಎಮ್ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ ಮಾಲೀಕಯ್ಯ ಗುತ್ತೇದಾರ ಹಾಗೂ ಎಂ ವೈ ಪಾಟೀಲ್ ಒಂದೇ ತಾಯಿ ಮಕ್ಕಳಿದಂತೆ ಇಬ್ಬರು ಎದುರಾಳಿಗಳಾಗಿದ್ದರೂ ಈಗ ಒಂದಾಗಿ ಜೋಡೆತ್ತುಗಳಂತೆ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಎಂ ವೈ ಪಾಟೀಲ್ ಮಾತನಾಡಿ ಕಳೆದ ಚುನಾವಣೆಯಲ್ಲಿ ಅಫಜಲ್ ಪುರ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ 37,000 ಮತ ಹಿನ್ನೆಡೆಯಾಗಿದ್ದುದು ನಾನು ತಲೆ ಎತ್ತಿ ತಿರುಗದಂತೆ ಆಗಿದೆ. ನಾನು ಬೀದಿಗೆ ಬಂದಾಗ ನನ್ನ ಕೈಹಿಡಿದು ಪಕ್ಷಕ್ಕೆ ಸೇರಿಸಿಕೊಂಡು ಟಿಕೇಟ್ ಕೊಟ್ಟು ಗೆಲ್ಲಿಸಿದ ಖರ್ಗೆ ಅವರಿಗೆ ನಾನು ಲೀಡ್ ಕೊಡಲಾಗಲಿಲ್ಲ ಎನ್ನುವ ನೋವು ಕಾಡುತ್ತಿದೆ. ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ನಾನು ನಿಲ್ಲುವುದಿಲ್ಲ ಎಂದು ಹೇಳಿದ್ದೆ. ಆದರೂ ಕೂಡಾ ನಾಯಕರು ನನಗೆ ಒತ್ತಾಯ ಮಾಡಿ ನಿಲ್ಲಿಸಿ ಗೆಲ್ಲಿಸಿದ್ದಾರೆ. ಇದು ನನ್ನ ಕೊನೆ ಚುನಾವಣೆ ಮುಂದೆ ನಿಲ್ಲುವುದಿಲ್ಲ. ನಾನು ಖರ್ಗೆ ಅವರ ಋಣ ತೀರಿಸಬೇಕಿದೆ. ಈ ಸಲದ ಲೋಕಸಭೆ ಚುನಾವಣೆಯಲ್ಲಿ ರಾಧಾಕೃಷ್ಣ ಅವರನ್ನ ಗೆಲ್ಲಿಸಬೇಕಿದೆ. ಹಾಗಾಗಿ ನೀವೆಲ್ಲ ನನ್ನ ಕೈಹಿಡಿಯಿರಿ ಎಂದು ಮನವಿ ಮಾಡಿದರು.
ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿಗೆ ನೀವೆಲ್ಲ 40 ಸಾವಿರ ಮತದ ಲೀಡ್ ಕೊಟ್ಟರೆ ಮಾತ್ರ ನನಗೆ ಹಾಗೂ ಎಂ ವೈ ಪಾಟೀಲ ಅವರಿಗೆ ನೆಮ್ಮದಿ ಸಿಗಲಿದೆ. ಯಾವುದೋ ಒಂದು ಕಾರಣಾಂತರಗಳಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿ 37,000 ಮತಗಳ ಗಳ ಲೀಡ್ ಬಿಜೆಪಿಗೆ ಬಂದಿದ್ದವು. ಅವು ಈ ಸಲ ಪಲ್ಟಿಯಾಗಬೇಕು ಎಂದರು.
ಬಿಜೆಪಿ ಪಕ್ಷ ನಮ್ಮ ಕುಟುಂಬ ಒಡೆದ ಕಾರಣ ನಾನಿನ್ನೂ ರಾಜಕೀಯದಲ್ಲಿ ಜೀವಂತವಾಗಿರುತ್ತೇನೆ. ಜಾಧವ್ ನನ್ನು ಬಿಜೆಪಿಗೆ ತಂದು ತಪ್ಪು ಮಾಡಿದೆ. ಆ ಮನುಷ್ಯ ಎಂತವನು ಎಂದು ನಿಮಗೆ ಗೊತ್ತಿದೆ. ಒಂದು ದಿನ ಕ್ಷೇತ್ರಕ್ಕೆ ಕಾಲಿಡಲಿಲ್ಲ. ಅವನನ್ನು ಸೋಲಿಸಿ ರಾಧಾಕೃಷ್ಣ ಅವರನ್ನ ಗೆಲ್ಲಿಸಿ ಎಂದು ಮನವಿ ಮಾಡಿದರು. ಮಾಜಿ ಸಚಿವ ಬಾಬುರಾವ ಚಿಂಚನಸೂರು ಮಾತನಾಡಿ ಮಾಲೀಕಯ್ಯ ಹಾಗೂ ನಾನು ಜೋಡೆತ್ತುಗಳಿದ್ದಂತೆ. ನಾವಿಬ್ಬರೂ ಈಗ ಕಾಂಗ್ರೆಸ್ ನಲ್ಲಿದ್ದೇವೆ. ಕಲಬುರಗಿ ಹಾಗೂ ಬೀದರ್ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.












Click it and Unblock the Notifications