ನೇಹಾ ಹತ್ಯೆ: ಸಾವಿನ ಮನೆಯಲ್ಲಿ ರಾಜಕಾರಣ ಸರಿಯಲ್ಲ, 90 ದಿನದಲ್ಲಿ ನ್ಯಾಯ ಸಿಗಲಿದೆ: ಸುರ್ಜೇವಾಲ
ಹುಬ್ಬಳ್ಳಿ, ಏಪ್ರಿಲ್ 24: ಹುಬ್ಬಳ್ಳಿಯಲ್ಲಿ ಹತ್ಯೆಗೀಡಾದ ನೇಹಾ ಕೇವಲ ನಿರಂಜನ್ ಹಿರೇಮಠ ಪುತ್ರಿ ಅಲ್ಲ. ಅವಳು ಇಡೀ ಕರ್ನಾಟಕದ ಮಗಳು. ನಿರಂಜನ್ ನಮ್ಮ ಕುಟುಂಬದ ಸದಸ್ಯರಿದ್ದಂತೆ. ನೀವು ಈ ಮನೆ ಹೊರತುಪಡಿಸಿ ರಾಜಕಾರಣ ಮಾಡಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲ ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿ ಕಾರಿದರು.
ಬುಧವಾರ ಹುಬ್ಬಳ್ಳಿಯ ನಿರಂಜನ್ ಹಿರೇಮಠ ನಿವಾಸಕ್ಕೆ ಭೇಟಿ ಕೊಟ್ಟು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಹತ್ಯೆ ಘಟನೆ ಬಗ್ಗೆ ನಮಗೂ ಅತ್ಯಂತ ದುಃಖವಿದೆ. ಸಾವಿನ ಮನೆಯಲ್ಲಿ ಚುನಾವಣಾ ರಾಜಕಾರಣ ಸರಿಯಲ್ಲ ಎಂದರು.

ತ್ವರಿತ ಗತಿಯಲ್ಲಿ ನ್ಯಾಯದಾನ
ಕಾಂಗ್ರೆಸ್ ಸೇರಿದಂತೆ ನಾವೆಲ್ಲರು ಅವರ ಜೊತೆಗೆ ಇರುತ್ತೇವೆ. ಪರಿಪೂರ್ಣ ನ್ಯಾಯ ಕೊಡಿಸುವುದು ನಮ್ಮ ಸರ್ಕಾರದ ಕರ್ತವ್ಯ. ನಾವು ಈಗಾಗಲೇ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಿದ್ದೇವೆ. ತ್ವರಿತಗತಿಯಲ್ಲಿ ನ್ಯಾಯದಾನ ಆಗಬೇಕು. ಮುಂದಿನ 90 ದಿನಗಳಲ್ಲಿ ನೇಹಾ ಸಾವಿಗೆ ನ್ಯಾಯ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹತ್ಯೆ ಪ್ರಕರಣ ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕು. ಗಲ್ಲಿಗೇರಿಸುವುದಕ್ಕಿಂತ ದೊಡ್ಡ ಶಿಕ್ಷೆ ಇಲ್ಲ. ನೇಹಾ ಸಾವಿಗೆ ಸೂಕ್ತ ನ್ಯಾಯಾಲಯ ಸಿಗಬೇಕು. ಈ ದೃಷ್ಟಿಯಲ್ಲಿ ಸ್ಥಾಪಿಸಲಾದ ವಿಶೇಷ ಕೋರ್ಟ್ ನಿಂದ ಖಚಿತವಾಗಿ ತ್ವರಿತಗಿತಯಲ್ಲಿ ನ್ಯಾಯ ಸಿಗಲಿದೆ ಎಂದರು.

ಈ ರೀತಿಯ ರಾಜಕಾರಣ ಬೇಡ
ಇದೇ ವಿಷಯ ಇಟ್ಟುಕೊಂಡು ನಮ್ಮ ಮಗಳು ಸಾವನ್ನಪ್ಪಿರುವಾಗ ರಾಜಕಾರಣ ಮಾಡಬೇಡಿ. ಚುನಾವಣೆ ವೇಳೆ ಇಂತಹ ರಾಜಕಾರಣ ಬೇಡ ಎಂದು ಅವರು ಮನವಿ ಮಾಡಿದರು.
ಬಿಜೆಪಿಯಿಂದ ಸಿಬಿಐ ತನಿಖೆಗೆ ಆಗ್ರಹಿಸಿದ ವಿಚಾರ, ಸಿಐಡಿ ಮೇಲೆ ನಮಗೆ ನಂಬಿಕೆ ಇದೆ. ರಾಜ್ಯದ ಪೊಲೀಸರ ಮೇಲೆ ವಿಶ್ವಾಸವಿದೆ. ನೇಹಾ ಸಾವಿಗೆ ಮುಂದಿನ ಮೂರು ತಿಂಗಳಲ್ಲಿ (90 ದಿನ) ನ್ಯಾಯ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಟಿ ಹರ್ಷಿಕಾ ಪೂಣಚ್ಚ ನೇಹಾ ನಿವಾಸಕ್ಕೆ ಭೇಟಿ
ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ ಭೇಟಿಯಾದ ದಿನವೇ, ನಟಿ ಹರ್ಷಿಕಾ ಪೂಣಚ್ಚಾ ಅವರು ಸಹ ಹುಬ್ಬಳ್ಳಿಯ ಬಿಡನಾಳದಲ್ಲಿರುವ ನೇಹಾ ನಿವಾಸಕ್ಕೆ ಭೇಟಿಯಾದರೂ. ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿದರು.
ಮಗಳನ್ನು ಕರೆತರಲು ಹೋದ ತಾಯಿ ಶವದ ಜೊತೆ ಬರ್ತಾಳೆ ಅಂದ್ರೆ ತುಂಬಾ ನೋವಿನ ಸಂಗತಿ. ಕಾರಣಗಳನ್ನು ಹುಡುಕೋ ಕೆಲಸ ನಡೆದಿದೆ. ಏನೇ ಕಾರಣ ಇರಲಿ, ಒಂದು ಜೀವ ಕೊಲ್ಲಲು ಅವನು ಯಾರು? ಎಂದು ನಟಿ ಹರ್ಷಿ ಪ್ರಶ್ನಿಸಿದರು.
ಒಬ್ಬರು ಸಾಯಿಸುವ ಪ್ರವೃತ್ತಿ ಎಲ್ಲಿಂದ ಬಂತು. ನಿರಂಜನ್ ಅವರಿಗೆ ಆದ ದ್ರೋಹ ಸಹಿಸಲು ಆಗುತ್ತಿಲ್ಲ. ಹೆಣ್ಣು ಮಕ್ಕಳಿಗೆ ದೌರ್ಜನ್ಯ ನಡೆದಾಗ ಮಹಿಳೆಯನ್ನು ರಕ್ಷಿಸೋ ಕೆಲಸ ಆಗಬೇಕು. ನೇಹಾ ಆತ್ಮಕ್ಕೆ ಶಾಂತಿ ಸಿಗಬೇಕು. ಯಾರಿಗೂ ರೀತಿ ಆಗಬಾರದು. ಕೊಲ್ಲುವ ಕೆಟ್ಟ ಹುಳುಗಳ ನಿಮ್ಮ ಸುತ್ತಮುತ್ತ ಇದ್ದರೆ ನೀವೆ ನಾಶ ಮಾಡಿ ಎಂದರು.












Click it and Unblock the Notifications