ನಗರದ 8000ಟನ್‌ ಇ-ತ್ಯಾಜ್ಯಕ್ಕೆ ಸಿಕ್ಕಬಹುದೇ ಮೋಕ್ಷ?

ನಗರದ 8000ಟನ್‌ ಇ-ತ್ಯಾಜ್ಯಕ್ಕೆ ಸಿಕ್ಕಬಹುದೇ ಮೋಕ್ಷ?
ಇ-ತ್ಯಾಜ್ಯ ನಿರ್ವಹಣೆಗಾಗಿ ವೇಸ್ಟ್‌ ಎಲೆಕ್ಟ್ರಾನಿಕ್‌ ಅಂಡ್‌ ಎಲೆಕ್ಟ್ರಿಕಲ್‌ ಎಕ್ವಿಪ್‌ಮೆಂಟ್‌ ಸಂಸ್ಥೆ ಏನೇನು ಕಾರ್ಯಕ್ರಮ ರೂಪಿಸಿದೆ?

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು : ಕಲುಷಿತ ವಾತಾವರಣಕ್ಕೆ ಜಲಮಾಲಿನ್ಯ, ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯಗಳಷ್ಟೇ ಕಾರಣವಲ್ಲ. ಇ-ತ್ಯಾಜ್ಯ ಎನ್ನುವ ಸದ್ದಿಲ್ಲದ ವಿಷ ಪರಿಸರವನ್ನು ಹದಗೆಡಿಸುತ್ತಿದೆ.

ನಿರುಪಯುಕ್ತ ವಿದ್ಯುನ್ಮಾನ ಮತ್ತು ವಿದ್ಯುತ್‌ ಉಪಕರಣಗಳ ತ್ಯಾಜ್ಯ, ಪ್ರಸ್ತುತ ತಲೆನೋವಾಗಿ ಪರಿಣಮಿಸಿದೆ. ಆ ತಲೆನೋವನ್ನು ತುಸು ಕಡಿಮೆ ಮಾಡುವ ಪ್ರಯತ್ನಕ್ಕೆ ಬೆಂಗಳೂರು ನಗರದಲ್ಲಿ ಚಾಲನೆ ಸಿಕ್ಕಿದೆ.

ಇ-ತ್ಯಾಜ್ಯದ ನಿರ್ವಹಣೆಗೆ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಸಂಸ್ಥೆಯಾಂದು ನಗರದಲ್ಲಿ ತಲೆ ಎತ್ತಿದೆ. ವೇಸ್ಟ್‌ ಎಲೆಕ್ಟ್ರಾನಿಕ್‌ ಅಂಡ್‌ ಎಲೆಕ್ಟ್ರಿಕಲ್‌ ಎಕ್ವಿಪ್‌ಮೆಂಟ್‌(ಡಬ್ಲ್ಯುಇಇಇ) ಎಂಬ ಹೆಸರಿನ ಈ ನೋಡೆಲ್‌ ಸಂಸ್ಥೆ ನಿರುಪಯುಕ್ತ ವಸ್ತುಗಳನ್ನು ಪುನರ್‌ ಬಳಸುವ ಬಗೆಗೆ ಮಾಹಿತಿ ನೀಡುತ್ತಿದೆ.

ಈ ವಿನೂತನ ಸಂಸ್ಥೆಯ ಕಾರ್ಯ ವಿಧಾನವನ್ನು ಅರಿಯುವ ಸಲುವಾಗಿ ದಟ್ಸ್‌ಕನ್ನಡ, ಸಂಬಂಧಿಸಿದವರನ್ನು ಮಾತನಾಡಿಸಿತು. ಕರ್ನಾಟಕ ಸರ್ಕಾರ ಮತ್ತು ಐಟಿ ಕಂಪನಿಗಳ ನಡುವೆ ಸಂಸ್ಥೆ ಸೇತುವೆಯಂತೆ ಕಾರ್ಯನಿರ್ವಹಿಸಲಿದೆ ಎನ್ನುವುದು ಯೋಜನೆಯ ತಂತ್ರಜ್ಞರಲ್ಲಿ ಒಬ್ಬರಾದ ಚೇತನ ಅವರ ಅಭಿಮತ.

ಇ-ತ್ಯಾಜ್ಯಗಳ ನಾಶಕ್ಕೆ ಸ್ವಾಭಾವಿಕ ವಿಧಾನಗಳು ಸೂಕ್ತ. ಕೆಲವು ಎಲೆಕ್ಟ್ರಾನಿಕ್‌ ವಸ್ತುಗಳು ಬಂಗಾರದ ಅಂಶವನ್ನು ಒಳಗೊಂಡಿರುತ್ತವೆ. ಹೀಗಾಗಿ ಅವುಗಳನ್ನು ಉರಿಸಿದರೆ, ವಿಷಾನಿಲ ವಾತಾವರಣ ಸೇರುತ್ತದೆ. ಇ-ತ್ಯಾಜ್ಯದ ವಿಷಾನಿಲ ಕ್ಯಾನ್ಸರ್‌ನಂತಹ ಅನೇಕ ಮಾರಕ ರೋಗಗಳಿಗೆ ಆಹ್ವಾನ ನೀಡುತ್ತದೆ. ವೈಜ್ಞಾನಿಕವಾಗಿ ನಿರುಪಯೋಗಿ ವಸ್ತುಗಳಿಗೆ ಮೋಕ್ಷ ನೀಡುವುದು, ಅಥವಾ ಪುನರ್‌ಬಳಕೆಗೆ ವ್ಯವಸ್ಥೆ ಕಲ್ಪಿಸುವುದು ಸಂಸ್ಥೆಯ ಧ್ಯೇಯ. ತನ್ನ ಸದಸ್ಯ ಕಂಪನಿಗಳಿಗೆ ಸಂಸ್ಥೆ ಅಗತ್ಯ ಮಾಹಿತಿ , ಅವಶ್ಯಕವೆನ್ನಿಸಿದರೆ ತಂತ್ರಜ್ಞರನ್ನೂ ಒದಗಿಸಲಿದೆ ಎನ್ನುತ್ತಾರೆ ಚೇತನ.

ಈಗಾಗಲೇ ನಗರದ ಎಂಟು ಸಂಸ್ಥೆಗಳು ಡಬ್ಲ್ಯುಇಇಇ ಜೊತೆ ಕೈಸೇರಿಸಿದ್ದು, ಫಿಲಿಪ್ಸ್‌, ಎಮ್‌ಎಜಿಟಿ, ನಾಸ್‌ಕಾಂ ಮತ್ತು ಐಟಿಪಿಎಲ್‌ ಕಂಪನಿಗಳು ಯೋಜನೆ ಬಗ್ಗೆ ಆಸಕ್ತಿಯನ್ನು ಪ್ರದರ್ಶಿಸಿವೆಯಂತೆ.

ಬೆಂಗಳೂರಿನಲ್ಲಿ ಪ್ರತಿವರ್ಷ 8000ಟನ್‌ ಇ-ತ್ಯಾಜ್ಯ ಸಂಗ್ರಹವಾಗುತ್ತದೆ ಎನ್ನುವುದು ಒಂದು ಅಂದಾಜು. ಈ ಬಗ್ಗೆ ಖಚಿತ ಮಾಹಿತಿಗಾಗಿ ಡಬ್ಲ್ಯುಇಇಇ ಸರ್ವೆ ಕಾರ್ಯವನ್ನು ನಡೆಸುತ್ತಿದೆ. ಮುಂದಿನ ಮೂರು ತಿಂಗಳೊಳಗೆ ಸಮರ್ಪಕ ಮಾಹಿತಿ ಲಭ್ಯವಾಗಲಿದೆ.

ಇ-ಮಾಲಿನ್ಯದ ಅರಿವು ಮೂಡಿದ್ದು ಹೀಗೆ :

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಮ್ಯಾಕ್ಸ್‌ಮ್ಯುಲರ್‌ ಭವನಗಳು ಜಂಟಿಯಾಗಿ ಇ-ವೇಸ್ಟ್‌ ಕುರಿತು ಈ ಹಿಂದೆಯೇ ಆಂದೋಲನ ಆರಂಭಿಸಿವೆ.

ವಿದ್ಯುನ್ಮಾನ ಮತ್ತು ವಿದ್ಯುತ್‌ ಉಪಕರಣಗಳ ತ್ಯಾಜ್ಯ(ಡಬ್ಲ್ಯೂಇಇಇ) ನಿರ್ವಹಣೆ ಕುರಿತು 2004ರ ಆಗಸ್ಟ್‌ 16ರಿಂದ 18ರವರೆಗೆ ಆಂದೋಲನ ಮತ್ತು ಮೊದಲ ಸಮಾವೇಶವನ್ನು ನಗರದಲ್ಲಿ ಏರ್ಪಡಿಸಲಾಗಿತ್ತು.

ಬೆಂಗಳೂರಿನಲ್ಲಿರುವ ಕಾರ್ಪೊರೇಟ್‌ ಕಚೇರಿಗಳು ಮತ್ತು ಮನೆಗಳಿಂದ ಸೃಷ್ಟಿಯಾಗುತ್ತಿರುವ ವಿಷಪೂರಿತ ಇ-ತ್ಯಾಜ್ಯ ಕುರಿತು ಮಾಹಿತಿ ಮತ್ತು ಆದರ ಸಮರ್ಪಕ ನಿರ್ವಹಣೆ, ಇನ್ನಿತರ ವಿಷಯಗಳನ್ನು ಅಂದಿನ ಸಮಾವೇಶದಲ್ಲಿ ಚರ್ಚಿಸಲಾಗಿತ್ತು. ಮುಂದೆ 2005ರ ಮೇ11 ಮತ್ತು 12ರಂದು ಮತ್ತೊಂದು ಸಮಾವೇಶ ನಡೆಯಿತು. ಇದರ ಫಲಶ್ರುತಿಯಾಗಿ ಈ ಡಬ್ಲ್ಯುಇಇಇ ಎಂಬ ನೋಡೆಲ್‌ ಸಂಸ್ಥೆ ಜೀವ ಪಡೆದಿದೆ.

ಹೆಚ್ಚಿನ ವಿವರಗಳಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 25325774

ಮುಖಪುಟ / ಐಟಿ - ಬಿಟಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+