ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು
ಬೇಸಿಗೆಯ ಬಿಸಿಲು ನೆತ್ತಿ ಸುಡುತ್ತಿದೆ, ಮನೆಯಿಂದ ಹೊರಗೆ ಕಾಲಿಡುವುದೇ ಬೇಡ ಎನ್ನು ವಷ್ಟರ ಮಟ್ಟಿಗೆ ಬಿಸಿಲು ಕಾಡುತ್ತಿದೆ. ಏಪ್ರಿಲ್ ತಿಂಗಳಲ್ಲಿಯೇ ಬಿಸಿಲು ಸಹಿಸಲಾಗುತ್ತಿಲ್ಲ.ಇನ್ನು ಮೇ ತಿಂಗಳ ಬಿಸಿಲು ಯಾವ ಮಟ್ಟಕ್ಕಿರಬಹುದು ಎನ್ನುವ ಆತಂಕ ಕಾಡುತ್ತಿದೆ. ಮತ್ತೊಂದೆಡೆ, ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು, ಅನೇಕ ಜನರು ತಣ್ಣನೆಯ ತಾಣಗಳಿಗೆ ಪ್ರವಾಸ ಬೆಳೆಸುತ್ತಾರೆ.ಈ ಋತುವಿನಲ್ಲಿ ಉತ್ತರ, ದಕ್ಷಿಣ ಮತ್ತು ಪೂರ್ವ ಭಾರತದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ಹಲವಾರು ಗಿರಿಧಾಮಗಳಿವೆ. ಈ ತಾಣಗಳು ಶಾಂತ ಪರಿಸರ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಜನಪ್ರಿಯವಾಗಿವೆ. ಪ್ರತಿ ವರ್ಷವೂ ಸಾವಿರಾರು ಮಂದಿ ಪ್ರವಾಸಿಗರು ಈ ಪ್ರದೇಶಗಳಿಗೆ ಭೇಟಿ ನೀಡುತ್ತಿರುತ್ತಾರೆ.
ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಭಾರತದ 10 ಅತ್ಯುತ್ತಮ ಸ್ಥಳಗಳು:
1. ಮನಾಲಿ:
ಮನಾಲಿ ಭಾರತದ ಅತ್ಯಂತ ಜನಪ್ರಿಯ ಬೇಸಿಗೆ ತಾಣಗಳಲ್ಲಿ ಒಂದು.ಇಲ್ಲಿನ ಶಾಂತ ಮತ್ತು ತಂಪು ವಾತಾವರಣ ಮೈ ಮನಕ್ಕೆ ಮುದ ನೀಡುತ್ತದೆ.ಇಲ್ಲಿ ಮೇ ತಿಂಗಳಲ್ಲಿ, ಹವಾಮಾನವು ತಂಪಾಗಿರುತ್ತದೆ ಮತ್ತು ಆಹ್ಲಾದಕರವಾಗಿರುತ್ತದೆ. ಇಲ್ಲಿನ ಪರ್ವತಗಳು, ಹಸಿರು ಕಣಿವೆಗಳು ಸುತ್ತ ಹರಿಯುತ್ತಿರುವ ನದಿ ಕಣ್ಣಿಗೆ ಮುದ ನೀಡುತ್ತದೆ. ಇಲ್ಲಿ ಭೇಟಿ ನೀಡುವ ಪ್ರವಾಸಿಗರು ಪ್ಯಾರಾಗ್ಲೈಡಿಂಗ್, ರಿವರ್ ರಾಫ್ಟಿಂಗ್ ಮತ್ತು ಟ್ರೆಕ್ಕಿಂಗ್ ಮಜಾವನ್ನು ಕುಡಾ ಅನುಭವಿಸಬಹುದು.
ಭೇಟಿ ನೀಡಬೇಕಾದ ಸ್ಥಳಗಳು: ಸೋಲಾಂಗ್ ಕಣಿವೆ, ರೋಹ್ಟಾಂಗ್ ಪಾಸ್, ಹಡಿಂಬಾ ದೇವಾಲಯ

2. ಮಹಾಬಲೇಶ್ವರ:
ಮಹಾಬಲೇಶ್ವರವು ಮಹಾರಾಷ್ಟ್ರದ ಸುಂದರ ಗಿರಿಧಾಮ.ಈ ಗಿರಿಧಾಮ ತಣ್ಣನೆಯ ಹವಾಮಾನ, ಸ್ಟ್ರಾಬೆರಿ ತೋಟ ಮತ್ತು ವೀಕ್ಷಣಾ ತಾಣಗಳಿಗೆ ಹೆಸರುವಾಸಿಯಾಗಿದೆ. ಮೇ ತಿಂಗಳ ಬಿಸಿಲ ಝಳದಿಂದ ಮುಕ್ತಿ ಪಡೆಯಲು ಇದು ಹೇಳಿ ಮಾಡಿಸಿದ ತಾಣ. ಮಂಜಿನ ಬೆಟ್ಟಗಳು, ದಟ್ಟವಾದ ಕಾಡುಗಳು ಮತ್ತು ತೆರೆದ ಕಣಿವೆಗಳು ಈ ಪರಿಸರವನ್ನು ಶಾಂತ ಮತ್ತು ಉಲ್ಲಾಸಕರವಾಗಿಸುತ್ತದೆ.ಇಲ್ಲಿಗೆ ಭೇಟಿ ನೀಡಿದರೆ ಸೂರ್ಯೋದಯ ಮತ್ತು ಸೂರ್ಯಾಸ್ತದ ಆನಂದವನ್ನೂ ಸವಿಯಬಹುದು.
ಭೇಟಿ ನೀಡಬೇಕಾದ ಸ್ಥಳಗಳು: ಆರ್ಥರ್ಸ್ ಸೀಟ್, ಮ್ಯಾಪ್ರೊ ಗಾರ್ಡನ್, ವೆನ್ನಾ ಲೇಕ್
3. ಡಾರ್ಜಿಲಿಂಗ್:
ಡಾರ್ಜಿಲಿಂಗ್ ಚಹಾ ತೋಟಗಳು ಮತ್ತು ಹಿಮಾಲಯನ್ ವ್ಯೂಗೆ ಹೆಸರುವಾಸಿಯಾದ ಆಕರ್ಷಕ ಗಿರಿಧಾಮವಾಗಿದೆ. ಇಲ್ಲಿ ಮೇ ತಿಂಗಳ ಹವಾಮಾನ ಕೂಡಾ ತಂಪಾಗಿರುವುದರ ಜೊತೆಗೆ ಆರಾಮದಾಯಕವಾಗಿರುತ್ತದೆ.ಇಲ್ಲಿರುವ ಬ್ರಿಟಿಷರ ಕಾಲದ ಕಟ್ಟಡಗಳು, ಟಾಯ್ ಟ್ರೈನ್ ರೈಡ್ ಹೊಸ ಅನುಭವ ನೀಡುತ್ತವೆ.ಇನ್ನು ಕಾಂಚನಜುಂಗಾದ ಮೇಲೆ ಸೂರ್ಯೋದಯವನ್ನು ನೋಡುವುದೆಂದರೆ ಅದೊಂದು ವಿಶೇಷ ಅನುಭವವೇ ಸರಿ.
4. ಊಟಿ:
ಊಟಿ ಅಂದರೆ "ಗಿರಿಧಾಮಗಳ ರಾಣಿ". ಇಲ್ಲಿನ ತಂಪು ಗಾಳಿ ಮತ್ತು ಸುತ್ತಲಿನ ಹಸಿರು ಪರಿಸರ ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿನ ಇನ್ನೊಂದು ವಿಶೇಷವೆಂದರೆ ಮೇ ತಿಂಗಳಲ್ಲಿ ಅರಳುವ ಹೂವು. ಇಲ್ಲಿ ಎತ್ತ ನೋಡಿದರೂ ಈ ಹೂವುಗಳು ನಮ್ಮ ಮನಸ್ಸಿಗೆ ಮುದ ನೀಡುತ್ತದೆ.ಇಲ್ಲಿನ ಶಾಂತ ಸರೋವರಗಳು ಮತ್ತು ರಮಣೀಯ ಸ್ಥಳಗಳು ಬೇಸಿಗೆ ರಜೆ ಕಳೆಯಲು ಸೂಕ್ತವಾಗಿದೆ.
ಭೇತಿ ನೀಡಬೇಕಾದ ಸ್ಥಳಗಳು: ಊಟಿ ಲೇಕ್, ಸಸ್ಯೋದ್ಯಾನ, ದೊಡ್ಡಬೆಟ್ಟ ಶಿಖರ
5. ಮುನ್ನಾರ್:
ಇದು ಕೇರಳದಲ್ಲಿರುವ ಶಾಂತ ಗಿರಿಧಾಮ. ಈ ಗಿರಿಧಾಮ ಚಹಾ ತೋಟಗಳು ಮತ್ತು ಮಂಜಿನ ಬೆಟ್ಟಗಳಿಂದ ಆವೃತವಾಗಿದೆ. ಮೇ ತಿಂಗಳಲ್ಲಿ ಈ ಸ್ಥಳಕ್ಕೆ ಭೇಟಿ ನೀಡುವ ಆನಂದವೇ ಬೇರೆ. ಇಲ್ಲಿ ಬೀಸುವ ತಂಪು ಮತ್ತು ಶುದ್ದ ಗಾಳಿ, ರಮಣೀಯ ನೋಟ, ಶಾಂತ ವಾತಾವರಣವು ನಗರ ಜೀವನ ಮತ್ತು ಬಿಸಿಲ ಧಗೆಯಿಂದ ಬೇಸತ್ತ ಮೈ ಮನಕ್ಕೆ ಆಹ್ಲಾದಕರ ಅನುಭೂತಿ ನೀಡುತ್ತದೆ.
ಭೇಟಿ ನೀಡಬೇಕಾದ ಸ್ಥಳಗಳು: ಎರವಿಕುಲಂ ರಾಷ್ಟ್ರೀಯ ಉದ್ಯಾನವನ, ಚಹಾ ಎಸ್ಟೇಟ್‌ಗಳು, ಮಟ್ಟುಪೆಟ್ಟಿ ಅಣೆಕಟ್ಟು
6. ನೈನಿತಾಲ್:
ಸುತ್ತಲೂ ಹಸಿರು ಬೆಟ್ಟಗಳಿಂದ ಆವೃತವಾಗಿರುವ ಆಕರ್ಷಕ ಸರೋವರ ಪಟ್ಟಣ ನೈನಿತಾಲ್. ಇಲ್ಲಿನ ಶಾಂತ ವಾತಾವರಣ ಮತ್ತು ಕಣ್ಮನ ತಣಿಸುವ ಸೌಂದರ್ಯ ವರ್ಷದಿಂದ ವರ್ಷಕ್ಕೆ ಪ್ರಯಾಣಿಕರನ್ನು ತನ್ನತ್ತ ಆಕರ್ಷಿಸುತ್ತದೆ. ಇಲ್ಲಿ ನೈನಿ ಸರೋವರದಲ್ಲಿ ಮಾಡುವ ದೋಣಿ ವಿಹಾರದ ಆನಂದವೇ ಬೇರೆ.
ಭೇಟಿ ನೀಡಲು ಉತ್ತಮ ಸ್ಥಳಗಳು: ನೈನಿ ಸರೋವರ, ಸ್ನೋ ವ್ಯೂವ್ ಪಾಯಿಂಟ್, ನೈನಾ ದೇವಿ ದೇವಾಲಯ
7. ಲೇಹ್-ಲಡಾಖ್:
ಮೇ ತಿಂಗಳಲ್ಲಿ ಇಲ್ಲಿನ ಹಿಮ ಕರಗಿ ರಸ್ತೆಗಳು ತೆರೆದುಕೊಳ್ಳುತ್ತವೆ.ಇಲ್ಲಿನ ಪರಿಸರ ಭೂ ಸೌಂದರ್ಯ, ನೀಲಿ ಆಕಾಶ ಮತ್ತು ಶ್ರೀಮಂತ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಇದು ಸಾಹಸ ಪ್ರಿಯರ ನೆಚ್ಚಿನ ತಾಣ ಅಂದರೆ ತಪ್ಪಲ್ಲ. ಇಲ್ಲಿನ ತಂಪು ಹವಾಮಾನ ಮತ್ತು ವಿಹಂಗಮ ನೋಟಗಳನ್ನು ಒಮ್ಮೆ ಕಣ್ತುಂಬಿದರೆ ಜೀವನ ಪರ್ಯಂತ ಅಚ್ಚಳಿಯದ ನೆನಪಾಗಿ ಉಳಿಯುವುದು.
ಭೇಟಿ ನೀಡಲು ಉತ್ತಮ ಸ್ಥಳಗಳು: ಪ್ಯಾಂಗಾಂಗ್ ಸರೋವರ, ನುಬ್ರಾ ಕಣಿವೆ, ಮ್ಯಾಗ್ನೆಟಿಕ್ ಹಿಲ್
8. ಶಿಲ್ಲಾಂಗ್:
"ಪೂರ್ವದ ಸ್ಕಾಟ್ಲೆಂಡ್" ಎಂದು ಕರೆಯಲ್ಪಡುವ ಶಿಲ್ಲಾಂಗ್, ಆಹ್ಲಾದಕರ ಹವಾಮಾನ, ಬೆಟ್ಟಗುಡ್ಡಗಳು ಮತ್ತು ಜಲಪಾತಗಳಿಗೆ ಹೆಸರುವಾಸಿಯಾಗಿದೆ.ಇಲ್ಲಿನ ಹಸಿರು, ಸ್ಥಳೀಯ ಸಂಸ್ಕೃತಿ ವಿಶೇಷ ಅನುಭವವನ್ನು ನೀಡುತ್ತದೆ. ಈ ಪಟ್ಟಣವು ಸ್ವಚ್ಛತೆ ಮತ್ತು ಶಾಂತ ವಾತಾವರಣಕ್ಕೂ ಹೆಸರುವಾಸಿಯಾಗಿದೆ.
ಭೇಟಿ ನೀಡಬೇಕಾದ ಸ್ಥಳಗಳು: ಉಮಿಯಮ್ ಸರೋವರ, ಎಲಿಫೆಂಟ್ ಜಲಪಾತ, ಶಿಲ್ಲಾಂಗ್ ಶಿಖರ
9. ಮೌಂಟ್ ಅಬು:
ಮೌಂಟ್ ಅಬು ರಾಜಸ್ಥಾನದ ಏಕೈಕ ಗಿರಿಧಾಮವಾಗಿದೆ. ಮೇ ತಿಂಗಳಲ್ಲಿನ ಆಹ್ಲಾದಕರ ಹವಾಮಾನವು ಪ್ರಯಾಣಿಕರನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಇಲ್ಲಿನ ರಮಣೀಯ ನೋಟಗಳು, ಸರೋವರಗಳು ಮತ್ತು ಐತಿಹಾಸಿಕ ದೇವಾಲಯಗಳು ಇದನ್ನು ಸಮತೋಲಿತ ತಾಣವನ್ನಾಗಿ ಮಾಡುತ್ತವೆ.
ಭೇಟಿ ನೀಡಬೇಕಾದ ಸ್ಥಳಗಳು: ನಕ್ಕಿ ಸರೋವರ, ದಿಲ್ವಾರಾ ದೇವಾಲಯಗಳು, ಸೂರ್ಯಾಸ್ತದ ಸ್ಥಳ
10. ತವಾಂಗ್:
ಅರುಣಾಚಲ ಪ್ರದೇಶದ ತವಾಂಗ್ ಅಷ್ಟೊಂದು ಜನಪ್ರಿಯವಾಗಿಲ್ಲ. ಆದರೆ ಮೇ ತಿಂಗಳಿನಲ್ಲಿಯೂ ಇಲ್ಲಿನ ತಾಪಮಾನ ಕೆಳಮಟ್ಟದಲ್ಲಿರುತ್ತದೆ. ಹಿಮದಿಂದ ಆವೃತವಾದ ಶಿಖರಗಳು ಮತ್ತು ಶಾಂತಿಯುತ ಮಠಗಳು ವಿಶೇಷ ಸಾಂಸ್ಕೃತಿಕ ಅನುಭವವನ್ನು ಒದಗಿಸುತ್ತದೆ. ಏಕಾಂತತೆಯನ್ನು ಬಯಸುವ ಪ್ರಯಾಣಿಕರಿಗೆ ಶಾಂತ ವಾತಾವರಣವು ಸೂಕ್ತವಾಗಿದೆ.
ಭೇಟಿ ನೀಡಬೇಕಾದ ಸ್ಥಳಗಳು: ತವಾಂಗ್ ಮಠ, ಸೆಲಾ ಪಾಸ್, ಮಾಧುರಿ ಸರೋವರ
ಈ ತಾಣಗಳು ತಂಪಾದ ಹವಾಮಾನ, ರಮಣೀಯ ನೋಟಗಳು ಮತ್ತು ಸ್ಮರಣೀಯ ಅನುಭವಗಳನ್ನು ನೀಡುತ್ತವೆ. ಮಕ್ಕಳ ರಜಾ ದಿನ ಕಳೆಯುವುದಕ್ಕಾಗಲಿ, ಬಿಸಿಲ ಬೇಗೆಯಿಂದ ಮುಕ್ತಿ ಪಡೆಯುವುದಕ್ಕಾಗಲಿ ಅಥವಾ ಮೈ ಮನಸ್ಸಿನ ದಣಿವು ನೀಗುವುದಕ್ಕಾಗಲಿ ಒಮ್ಮೆ ಈ ತಾಣಗಳಿಗೆ ಭೇಟಿ ನೀಡಬಹುದು.
(ಬರಹ : ರಂಜಿತಾ ಆರ್.ಕೆ)












Click it and Unblock the Notifications