Karnataka Weather Alert: ರಾಜ್ಯದಲ್ಲಿ ಬಿಸಿಲಿನ ಶಾಖ ಏರಿಕೆ, 12 ಜಿಲ್ಲೆಗೆ ಉಷ್ಣಅಲೆ, ಮಳೆ ಮುನ್ಸೂಚನೆ
ಬೆಂಗಳೂರು: ಕರ್ನಾಟಕದಲ್ಲಿ ಬಿಸಿಲಿನ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದು, ಜನರು ಸೆಕೆ, ತೀವ್ರ ತಾಪಮಾನದ ಝಳಕ್ಕೆ ಪರದಾಡುತ್ತಿದ್ದಾರೆ. ಒಳನಾಡು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 1.6 ರಿಂದ 3 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಾಗಿದೆ. ಮುಂದಿನ 5 ದಿನ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಲಿವೆ ಎಂಬ ಮುನ್ಸೂಚನೆ ನೀಡಲಾಗಿದೆ. 12ಜಿಲ್ಲೆಗಳಿಗೆ ಉಷ್ಣ ಅಲೆ ಕಂಡು ಬರಲಿದ್ದು 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಿಪರ್ಯಾಸವೆಂದರೆ ಮಲೆನಾಡು ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆ ಆಗಲಿದೆ. ಇಲ್ಲಿ ಗರಿಷ್ಠ ಉಷ್ಣಾಂಶ ಸಾಮಾನ್ಯವಾಗಿರಲಿದೆ. ಇತರ ಜಿಲ್ಲೆಗಳಲ್ಲಿ ಅಧಿಕ ಉರಿಬಿಸಿಲು ಕಂಡು ಬರಲಿದ್ದು, ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗಲಿದೆ.

ಇಂದಿನ ಏಪ್ರಿಲ್ 20ರವರೆಗೆ 5 ದಿನ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಿಗೆ ಅತ್ಯಧಿಕ ಬಿಸಿಲು ಕಂಡು ಬರುವ ಹಿನ್ನೆಲೆಯಲ್ಲಿ 'ಉಷ್ಣ ಅಲೆ' ಹಿನ್ನೆಲೆಯ 'ಯೆಲ್ಲೋ ಅಲರ್ಟ್' ಎಚ್ಚರಿಕೆ ನೀಡಲಾಗಿದೆ.
ಎಲ್ಲೆಲ್ಲಿ ಮಳೆ ನಿರೀಕ್ಷೆ ಆಗಲಿದೆ?
ಏಪ್ರಿಲ್ 18 ರಿಂದ 19 ರವರೆಗೆ ಕರ್ನಾಟಕದ ಒಳನಾಡಿನ ಕೆಲವು ಸ್ಥಳಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇಂದಿನಿಂದ ಏ.19 ರವರೆಗೆ ಕರಾವಳಿ ಕರ್ನಾಟಕದ ಒಂದೆರಡು ಸ್ಥಳಗಳಲ್ಲಿ ಗುಡುಗು ಮಿಂಚು ಸಹಿತ ಮಳೆ ನಿರೀಕ್ಷೆ ಇದೆ. ಇದಕ್ಕೆ ಹವಾಮಾನ ವೈಪರೀತ್ಯ ಕಾರಣವೆಂದು ಐಎಂಡಿ ವಿಜ್ಞಾನಿಗಳು ತಿಳಿಸಿದ್ದಾರೆ. ಈ ಕಾರಣಕ್ಕೆ ದಕ್ಷಿಣ ಒಳನಾಡಿನ ಬೆಂಗಳೂರು, ತುಮಕೂರು, ದಾವಣಗೆರೆವರೆಗೆ ಇತ್ತ ಚಾಮರಾಜನಗರವರೆಗೆ ಬಿಸಿಲು ಸಾಮಾನ್ಯವಾಗಿರಲಿದ್ದು, ಆಗಾಗ ಮಬ್ಬು ವಾತಾವರಣ ಕಂಡು ಬರಬಹುದು ಎನ್ನಲಾಗಿದೆ.
ಹವಾಮಾನ ವೈಪರೀತ್ಯದಲ್ಲಿ ತೀವ್ರತೆ
ಉತ್ತರ ಒಳನಾಡಿನಲ್ಲಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಮೇಲ್ಮಟ್ಟದ ವಾಯು ಚಂಡಮಾರುತದ ಪರಿಚಲನೆ ನಿರ್ಮಾಣವಾಗಿದೆ. ಆಗ್ನೇಯ ಮಧ್ಯ ಪ್ರದೇಶದಿಂದ ವಿದರ್ಭ, ಮರಾಠವಾಡದ ಮೂಲಕ ಕೊಮೊರಿನ್ ಪ್ರದೇಶವರೆಗೆ, ಉತ್ತರ ಒಳನಾಡಿನ ಕರ್ನಾಟಕ ಮತ್ತು ತಮಿಳುನಾಡಿನ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಇನ್ನೊಂದು ಚಂಡಮಾರುತದ ಪರಿಚಲನೆ ಸೃಷ್ಟಿಯಾಗಿದೆ.
ಕರ್ನಾಟಕ ಮತ್ತು ಪಕ್ಕದ ಮಹಾರಾಷ್ಟ್ರದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 3.1 ಮತ್ತು 5.8 ಕಿ.ಮೀ ಎತ್ತರದಲ್ಲಿ ತೀವ್ರ ಸುಳಿಗಾಳಿ ಮುಂದುವರಿದಿದೆ. ಕರಾವಳಿ ಕರ್ನಾಟಕದಿಂದ ಉತ್ತರ ಕೇರಳದವರೆಗೆ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿದ್ದ ಸುಳಿಗಾಳಿ ತೀವ್ರ ಕಡಿಮೆ ಆಗಿದೆ. ಇವುಗಳಲ್ಲಿ ಆಗುತ್ತಿರುವ ಬದಲಾವಣೆ ಕಾರಣದಿಂದ ರಾಜ್ಯ ಮಲೆನಾಡು, ದಕ್ಷಿಣ ಒಳನಾಡಿನ ಕೆಲವೆಡೆ ಮಳೆ ಆಗುವ ಸಂಭವವಿದೆ. ಗರಿಷ್ಠ ತಾಪಮಾನವು ಹಿಡಿತದಲ್ಲಿದೆ.
ಗರಿಷ್ಠ ತಾಪಮಾನದ ಜಿಲ್ಲೆಗಳ ಪಟ್ಟಿ
ಕಲಬುರಗಿ: 42 ಡಿಗ್ರಿ ಸೆಲ್ಸಿಯಸ್
ಕೊಪ್ಪಳ (AWS): 42 ಡಿಗ್ರಿ ಸೆಲ್ಸಿಯಸ್
ವಿಜಯಪುರ (ತಿಡಗುಂದಿ): 41.2 ಡಿಗ್ರಿ ಸೆಲ್ಸಿಯಸ್
ವಿಜಯಪುರ: 40.6 ಡಿಗ್ರಿ ಸೆಲ್ಸಿಯಸ್
ರಾಯಚೂರು: 40 ಡಿಗ್ರಿ ಸೆಲ್ಸಿಯಸ್
ಬೀದರ್: 39.8 ಡಿಗ್ರಿ ಸೆಲ್ಸಿಯಸ್
ಗದಗ: 39.6 ಡಿಗ್ರಿ ಸೆಲ್ಸಿಯಸ್
ಬಳ್ಳಾರಿ: 39 ಡಿಗ್ರಿ ಸೆಲ್ಸಿಯಸ್
ಧಾರವಾಡ: 38 ಡಿಗ್ರಿ ಸೆಲ್ಸಿಯಸ್
ಚಿತ್ರದುರ್ಗ: 37 ಡಿಗ್ರಿ ಸೆಲ್ಸಿಯಸ್
ಹಾವೇರಿ: 37 ಡಿಗ್ರಿ ಸೆಲ್ಸಿಯಸ್
ಬೆಂಗಳೂರು ಎಚ್‌ಎಎಲ್: 36 ಡಿಗ್ರಿ ಸೆಲ್ಸಿಯಸ್
ಬೆಂಗಳೂರು ನಗರ: 35 ಡಿಗ್ರಿ ಸೆಲ್ಸಿಯಸ್
ಬೆಂಗಳೂರು ಹವಾಮಾನ ಎಚ್ಚರಿಕೆ
ಬೆಂಗಳೂರು ನಗರ ಮತ್ತು ನೆರೆಹೊರೆಯ ಪ್ರದೇಶಗಳಲ್ಲಿ ಮುಂದಿನ 48 ಗಂಟೆ ಬಹುತೇಕ ಶುಭ್ರ ಆಕಾಶ ಇರಲಿದೆ. ಇಲ್ಲಿ ಗರಿಷ್ಠ ತಾಪಮಾನವು 37 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23ಡಿಗ್ರಿ ಸೆಲ್ಸಿಯಸ್ ಕಂಡು ಬರುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.












Click it and Unblock the Notifications