“ಪಿಯುಸಿ ನಂತರ ಓದು ನಿಲ್ಲಿಸಿ”: ಭಾರತೀಯ ಶಿಕ್ಷಣ ವ್ಯವಸ್ಥೆ ವಿರುದ್ಧ ಸಿಡಿದೆದ್ದ ಸೌರಭ್ ಮುಖರ್ಜಿಯಾ

ಭಾರತೀಯ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸ್ಥಾಪಕ ಸೌರಭ್ ಮುಖರ್ಜಿಯಾ ಅವರು ಅಚ್ಚರಿಯ ಹಾಗೂ ಗಂಭೀರವಾದ ಹೇಳಿಕೆಯೊಂದನ್ನು ನೀಡಿದ್ದಾರೆ. ನಮ್ಮ ದೇಶದಲ್ಲಿ ಪದವಿ ಮುಂತಾದ ಉನ್ನತ ಶಿಕ್ಷಣವನ್ನು ಮುಂದುವರಿಸುವ ಬದಲು, ಪಿಯುಸಿ ಅಥವಾ 12ನೇ ತರಗತಿ ಮುಗಿದ ತಕ್ಷಣವೇ ವೃತ್ತಿ ಕೌಶಲ್ಯಗಳನ್ನು ಕಲಿತು ಉದ್ಯೋಗಕ್ಕೆ ಸೇರುವುದು ಆರ್ಥಿಕವಾಗಿ ಹೆಚ್ಚು ಲಾಭದಾಯಕ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಇರುವ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ಸ್ವತಂತ್ರ ಆಲೋಚನಾ ಶಕ್ತಿ ಮತ್ತು ವಿಶ್ಲೇಷಣಾ ಸಾಮರ್ಥ್ಯವನ್ನು ಬೆಳೆಸುತ್ತಿಲ್ಲ, ಬದಲಾಗಿ ಕೇವಲ 'ಬಾಯಿಪಾಠ' ಮಾಡುವ ಪದ್ಧತಿಗೆ ಮಾತ್ರ ಸೀಮಿತವಾಗಿದೆ ಎಂದು ಅವರು ತೀವ್ರವಾಗಿ ಟೀಕಿಸಿದ್ದಾರೆ. ಇದು ಯುವಜನತೆಯ ಭವಿಷ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.

Stop Studying

ಪದವೀಧರರಿಗಿಂತ ಕೌಶಲ್ಯವುಳ್ಳವರಿಗೇ ಹೆಚ್ಚು ಡಿಮ್ಯಾಂಡ್

ಇತ್ತೀಚೆಗೆ ಜನಪ್ರಿಯ ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡಿದ ಸೌರಭ್ ಮುಖರ್ಜಿಯಾ , ಭಾರತದ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಪ್ರಾಯೋಗಿಕ ಹಾಗೂ ಭವಿಷ್ಯದಲ್ಲಿ ಉಪಯೋಗವಾಗುವ ಬೋಧನೆಯ ತೀವ್ರ ಕೊರತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸುವ ಉದ್ದೇಶದಿಂದ ಪುಸ್ತಕದಲ್ಲಿರುವುದನ್ನು ಓದಿ, ನೆನಪಿಟ್ಟುಕೊಂಡು ಬರೆಯಲು ಮಾತ್ರ ಆದ್ಯತೆ ನೀಡುತ್ತಿದ್ದಾರೆ. ಈ ಕಾರಣದಿಂದಾಗಿ ಇಂದು ಉದ್ಯೋಗ ಮಾರುಕಟ್ಟೆಯಲ್ಲಿ ದೊಡ್ಡ ಬಿಕ್ಕಟ್ಟು ಸೃಷ್ಟಿಯಾಗಿದೆ.

ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಪದವಿ ಮುಗಿಸಿದ ಪ್ರತಿ 100 ಜನರಲ್ಲಿ ಕೇವಲ ಮೂವರಿಗೆ ಮಾತ್ರ ತಕ್ಷಣವೇ ಉದ್ಯೋಗ ಲಭಿಸುತ್ತಿದೆ ಎಂಬ ಆಘಾತಕಾರಿ ಸತ್ಯವನ್ನು ಅವರು ಉಲ್ಲೇಖಿಸಿದ್ದಾರೆ. ನಿಜ ಹೇಳಬೇಕೆಂದರೆ, ಓದಿಕೊಳ್ಳದವರಿಗಿಂತ ಪದವಿ ಪಡೆದವರೇ ಇಂದು ಅತಿ ಹೆಚ್ಚು ನಿರುದ್ಯೋಗಿಗಳಾಗಿ ಉಳಿಯುತ್ತಿದ್ದಾರೆ. ನಮ್ಮ ಶಿಕ್ಷಣ ಸಂಸ್ಥೆಗಳು ಕಾರ್ಪೊರೇಟ್ ಜಗತ್ತಿಗೆ ಬೇಕಾದ ಪ್ರತಿಭೆಗಳನ್ನು ರೂಪಿಸುವಲ್ಲಿ ವಿಫಲವಾಗುತ್ತಿವೆ.

ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ರಂಗದಲ್ಲಿ ಭಾರತದ ಹಿನ್ನಡೆ

ಪ್ರಸ್ತುತ ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ವಿಶೇಷವಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಎಲೆಕ್ಟ್ರಿಕ್ ವಾಹನಗಳು (EV), ಬಯೋಟೆಕ್ನಾಲಜಿ ಮತ್ತು ಕ್ಲೀನ್ ಟೆಕ್ನಾಲಜಿಯಂತಹ ಆಧುನಿಕ ರಂಗಗಳು ಭಾರಿ ವಿಸ್ತರಣೆಗೊಳ್ಳುತ್ತಿವೆ. ಆದರೆ, ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಪ್ರಾಯೋಗಿಕತೆಯ ಕೊರತೆಯಿಂದಾಗಿ, ಈ ನೂತನ ತಾಂತ್ರಿಕ ವಲಯಗಳಲ್ಲಿ ಭಾರತವು ಸಾಕಷ್ಟು ಹಿಂದುಳಿದಿದೆ ಎಂದು ಮುಖರ್ಜಿಯಾ ಆತಂಕ ವ್ಯಕ್ತಪಡಿಸಿದ್ದಾರೆ.

ಆಧುನಿಕ ಕೈಗಾರಿಕೆಗಳಿಗೆ ಅತ್ಯಗತ್ಯವಾಗಿರುವ ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಶಾಲೆ ಹಾಗೂ ಕಾಲೇಜು ಮಟ್ಟದಿಂದಲೇ ವಿದ್ಯಾರ್ಥಿಗಳಿಗೆ ಕಲಿಸದಿರುವುದು ಯುವಜನತೆ ಉದ್ಯೋಗದಿಂದ ವಂಚಿತರಾಗಲು ಪ್ರಮುಖ ಕಾರಣವಾಗಿದೆ. ಜಗತ್ತು ತಂತ್ರಜ್ಞಾನದತ್ತ ಮುಖ ಮಾಡಿದ್ದರೆ, ನಾವು ಇನ್ನೂ ಹಳೆಯ ಪಠ್ಯಕ್ರಮಗಳಲ್ಲೇ ಬಂಧಿಯಾಗಿದ್ದೇವೆ ಎಂದಿದ್ದಾರೆ.

ಪದವಿಗಿಂತ ಕೌಶಲ್ಯಕ್ಕೆ ಕಾರ್ಪೊರೇಟ್ ವಲಯದ ಮನ್ನಣೆ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಾರ್ಪೊರೇಟ್ ಕಂಪನಿಗಳ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಬದಲಾಗಿದೆ. ಕಂಪನಿಗಳು ಈಗ ಕೇವಲ ಅಭ್ಯರ್ಥಿಗಳ ಬಳಿ ಇರುವ 'ಪದವಿ ಪ್ರಮಾಣಪತ್ರಗಳನ್ನು' ನೋಡಿ ಕೆಲಸ ನೀಡುತ್ತಿಲ್ಲ. ಬದಲಿಗೆ, ಅವರಲ್ಲಿರುವ ನಿಜವಾದ ಕೌಶಲ್ಯ ಮತ್ತು ಕೆಲಸ ಮಾಡುವ ಸಾಮರ್ಥ್ಯಕ್ಕೆ ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿವೆ. ಈ ಬಗ್ಗೆ ತಮ್ಮ 'ಬ್ರೇಕ್‌ ಪಾಯಿಂಟ್' ಪುಸ್ತಕದ ಸಂಶೋಧನೆಯನ್ನು ಉದಾಹರಣೆಯಾಗಿ ನೀಡಿದ ಅವರು, 12ನೇ ತರಗತಿ ಮುಗಿಸಿ ನೇರವಾಗಿ ಕೆಲಸಕ್ಕೆ ಸೇರಿದ ಅನೇಕ ಯುವಕರು, ಉನ್ನತ ಪದವೀಧರರಿಗಿಂತ ಹೆಚ್ಚು ಹಣ ಸಂಪಾದಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಉದಾಹರಣೆಗೆ, ಮುಂಬೈನಂತಹ ಮಹಾನಗರಗಳಲ್ಲಿ ಟ್ರ್ಯಾಕ್ಟರ್, ಜೆಸಿಬಿ ಓಡಿಸುವ ಆಪರೇಟರ್‌ಗಳು ಅಥವಾ ನೈಪುಣ್ಯತೆ ಹೊಂದಿರುವ ನಿರ್ಮಾಣ ಕಾರ್ಮಿಕರು ಸಾಮಾನ್ಯ ಕಾರ್ಪೊರೇಟ್ ಕಚೇರಿಗಳಲ್ಲಿ ಕೆಲಸ ಮಾಡುವ ಪದವೀಧರರಿಗಿಂತ ದುಪ್ಪಟ್ಟು ಆದಾಯ ಗಳಿಸುತ್ತಿದ್ದಾರೆ. ಕೌಶಲ್ಯವುಳ್ಳ ಕಾರ್ಮಿಕರ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವು ಈ ವ್ಯತ್ಯಾಸಕ್ಕೆ ಕಾರಣವಾಗಿದೆ.

ಸೌರಭ್ ಮುಖರ್ಜಿಯಾ ಅವರು ಮಾಡಿರುವ ಈ ವಿಮರ್ಶೆಯು ಪ್ರಸ್ತುತ ದೇಶದ ಶಿಕ್ಷಣ ಕ್ಷೇತ್ರದಲ್ಲಿ ತುರ್ತಾಗಿ ಆಗಬೇಕಿರುವ ಬದಲಾವಣೆಗಳ ಅವಶ್ಯಕತೆಯನ್ನು ಎತ್ತಿತೋರಿಸುತ್ತಿದೆ. ಯುವಜನತೆ ಕೇವಲ ಡಿಗ್ರಿ ಸರ್ಟಿಫಿಕೇಟ್‌ಗಳಿಗಾಗಿ ಪರದಾಡುವುದನ್ನು ಬಿಟ್ಟು, ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಆಧುನಿಕ ತಾಂತ್ರಿಕ ಕೌಶಲ್ಯಗಳನ್ನು ರೂಢಿಸಿಕೊಳ್ಳುವತ್ತ ಗಮನ ಹರಿಸಬೇಕು. ಶೈಕ್ಷಣಿಕ ಸಂಸ್ಥೆಗಳು ಕೂಡ ಉದ್ಯೋಗಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿದಾಗ ಮಾತ್ರ ಭವಿಷ್ಯದಲ್ಲಿ ಯುವ ಪೀಳಿಗೆಗೆ ಉತ್ತಮ ಉದ್ಯೋಗಾವಕಾಶಗಳು ದೊರಕಲು ಸಾಧ್ಯ .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+