ಮಹಾರಾಷ್ಟ್ರದಲ್ಲಿ ಭೀಕರ ದುರಂತ: ಹನುಮಂತನ ದೇವಸ್ಥಾನದ ಛಾವಣಿ ಕುಸಿದು 7 ಭಕ್ತರು ಸಾವು
ಮಹಾರಾಷ್ಟ್ರ: ಪರ್ಭಣಿ ಜಿಲ್ಲೆಯಲ್ಲಿ ಶನಿವಾರ ಭಾರಿ ದುರಂತ ಸಂಭವಿಸಿದೆ. ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ನಿರ್ಮಾಣ ಹಂತದಲ್ಲಿದ್ದ ಹನುಮಂತನ ದೇವಸ್ಥಾನದ ಛಾವಣಿ ಹಠಾತ್ತನೆ ಕುಸಿದು ಬಿದ್ದ ಪರಿಣಾಮ ಕನಿಷ್ಠ ಏಳು ಜನ ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಭೀಕರ ಅಪಘಾತದಲ್ಲಿ 30 ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಮಾನವತ್ ತಾಲ್ಲೂಕಿನ ಯಶವಾಡಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕಾರ್ಯಕ್ರಮದ ವೇಳೆಯೇ ಅವಾಂತರ
ಸ್ಥಳೀಯ ಮೂಲಗಳ ಪ್ರಕಾರ, ಶನಿವಾರ ಮಧ್ಯಾಹ್ನ ಯಶವಾಡಿಯ ಹನುಮಾನ್ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನವು ಇನ್ನು ಸಂಪೂರ್ಣವಾಗಿ ನಿರ್ಮಾಣವಾಗದಿದ್ದರೂ, ಕಾರ್ಯಕ್ರಮದ ನಿಮಿತ್ತ ನೂರಾರು ಭಕ್ತರು ಅಲ್ಲಿ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಕಟ್ಟಡದ ಮೇಲ್ಛಾವಣಿಯು ಏಕಾಏಕಿ ಕುಸಿದು ಬಿದ್ದಿದ್ದರಿಂದ, ಅದರ ಅಡಿಯಲ್ಲಿ ನೂರಾರು ಜನ ಸಿಲುಕಿಕೊಂಡರು. ಘಟನೆಯಲ್ಲಿ ಗಾಯಗೊಂಡಿರುವ 30ಕ್ಕೂ ಹೆಚ್ಚು ಜನರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮಾನವತ್ ತಹಶೀಲ್ದಾರ್ ಪಾಂಡುರಂಗ ಮೋಚೆವಾಡ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಗಾಯಗೊಂಡವರಲ್ಲಿ ಸುಮಾರು ಆರು ಭಕ್ತರ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ. ದುರಂತ ಸಂಭವಿಸಿದ ತಕ್ಷಣವೇ ಸ್ಥಳೀಯರು ಹಾಗೂ ರಕ್ಷಣಾ ತಂಡಗಳು ಕಾರ್ಯಪ್ರವೃತ್ತರಾಗಿದ್ದಾರೆ. ಮಾಹಿತಿ ಸಿಕ್ಕ ತಕ್ಷಣ ರಕ್ಷಣಾ ಸಿಬ್ಬಂದಿ ಅತ್ಯಂತ ವೇಗವಾಗಿ ಸ್ಥಳಕ್ಕೆ ಧಾವಿಸಿದರು. ಭಕ್ತರು ಮತ್ತು ಅಧಿಕಾರಿಗಳ ಸಂಘಟಿತ ಪ್ರಯತ್ನದಿಂದಾಗಿ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದವರನ್ನು ತ್ವರಿತವಾಗಿ ಹೊರತೆಗೆಯಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪರ್ಭಣಿ ಜಿಲ್ಲಾ ಉಸ್ತುವಾರಿ ಸಚಿವೆ ಮೇಘನಾ ಬೋರ್ಡಿಕರ್ ಅವರು ಈ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಹಾಗೂ ಗಾಯಗೊಂಡ ಸಂತ್ರಸ್ತರಿಗೆ ಸರ್ಕಾರದಿಂದ ಅಗತ್ಯವಿರುವ ಎಲ್ಲ ರೀತಿಯ ವೈದ್ಯಕೀಯ ನೆರವು ಮತ್ತು ಆರ್ಥಿಕ ಸಹಾಯವನ್ನು ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಸ್ಥಳೀಯ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು, ನಿರ್ಮಾಣ ಕಾರ್ಯದಲ್ಲಿನ ನಿರ್ಲಕ್ಷ್ಯದ ಕುರಿತು ತನಿಖೆ ಆರಂಭಿಸಿದ್ದಾರೆ.
ಪಿಲ್ಲರ್ ಸಮಸ್ಯೆಯೇ ಕಾರಣ?
ಸ್ಥಳೀಯ ಶಾಸಕ ರಾಜೇಶ್ ವಿಟೇಕರ್ ಹಾಗೂ ಜಿಲ್ಲಾಡಳಿತವು ಘಟನೆಯ ನಿಖರವಾದ ಕಾರಣ ಹಾಗೂ ಗಾಯಾಳುಗಳ ಸದ್ಯದ ಪರಿಸ್ಥಿತಿಯ ಬಗ್ಗೆ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ದೇವಸ್ಥಾನದ ಟ್ರಸ್ಟ್ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಶಾಸಕ ರಾಜೇಶ್ ವಿಟೇಕರ್ ಅವರು ದುರಂತದ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ. ದೇವಸ್ಥಾನದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿದ್ದ ಪಿಲ್ಲರ್ ಅನ್ನು ಸರಿಯಾದ ಕ್ರಮದಲ್ಲಿ ಭದ್ರಪಡಿಸುವಲ್ಲಿ ಉಂಟಾದ ವಿಳಂಬ ಅಥವಾ ತಾಂತ್ರಿಕ ಲೋಪದೋಷದಿಂದಾಗಿ ಈ ಭೀಕರ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಕಂಬದ ದೋಷದಿಂದಾಗಿ ಇಡೀ ಸಭಾಮಂಟಪದ ಸ್ಲ್ಯಾಬ್ ಏಕಾಏಕಿ ಕುಸಿದು ಬಿದ್ದಿದೆ.
ಈ ದೇವಸ್ಥಾನದ ಭವ್ಯ ನಿರ್ಮಾಣ ಕಾರ್ಯಕ್ಕಾಗಿ ರಾಜಸ್ಥಾನದಿಂದ ವಿಶೇಷ ಕಲ್ಲುಗಳನ್ನು ತರಿಸಲಾಗಿತ್ತು ಹಾಗೂ ಹೊರರಾಜ್ಯದ ಪರಿಣಿತ ಕುಶಲಕರ್ಮಿಗಳು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ದೇವಸ್ಥಾನದ ಬಹುತೇಕ ಕೆಲಸಗಳು ಪೂರ್ಣಗೊಳ್ಳುವ ಹಂತಕ್ಕೆ ತಲುಪಿದ್ದವು ಎನ್ನಲಾಗಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಎಲ್ಲ 27 ಜನರನ್ನು ರಕ್ಷಿಸಲಾಗಿದ್ದರೂ, ದುರಂತದ ತೀವ್ರತೆಗೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಶಾಸಕರು ದೃಢಪಡಿಸಿದ್ದಾರೆ. ಇನ್ನುಳಿದ ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ:
ಅಪಘಾತದಲ್ಲಿ ಗಾಯಗೊಂಡಿರುವ 20 ಭಕ್ತರನ್ನು ಆರ್‌ಪಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತೀವ್ರವಾಗಿ ಗಾಯಗೊಂಡಿರುವ ಮೂವರು ಭಕ್ತರು ಸದ್ಯ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಸ್ಲ್ಯಾಬ್ ಅಡಿಯಲ್ಲಿ ಯಾರೂ ಸಿಲುಕಿಕೊಂಡಿಲ್ಲ, ಎಲ್ಲರನ್ನೂ ಸುರಕ್ಷಿತವಾಗಿ ಹೊರತೆಗೆಯಲಾಗಿದೆ ಎಂದು ವಿಟೇಕರ್ ಸ್ಪಷ್ಟಪಡಿಸಿದ್ದಾರೆ.
ಈ ಹನುಮಾನ್ ದೇವಸ್ಥಾನವು ಪರ್ಭಣಿ ಜಿಲ್ಲೆಯಲ್ಲೇ ಅತ್ಯಂತ ಪ್ರಸಿದ್ಧ ಹಾಗೂ ಪವಿತ್ರವಾದ ಧಾರ್ಮಿಕ ಕ್ಷೇತ್ರ. ಪ್ರತಿ ಶನಿವಾರದಂದು ಇಲ್ಲಿ ವಿಶೇಷ ಪೂಜೆಗಳು ನಡೆಯುವುದರಿಂದ ಕೇವಲ ಸ್ಥಳೀಯರಷ್ಟೇ ಅಲ್ಲದೆ, ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಸುಮಾರು 25,000ದಷ್ಟು ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಿದ್ದರು. ಶನಿವಾರದಂದೇ ಈ ಭೀಕರ ದುರಂತ ಸಂಭವಿಸಿರುವುದು ಭಕ್ತ ವಲಯದಲ್ಲಿ ತೀವ್ರ ಆತಂಕ ಉಂಟುಮಾಡಿದೆ.












Click it and Unblock the Notifications