ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ
ಬೆಂಗಳೂರು: ಹಿಂದಿನಿಂದಲೂ ಕೇವಲ ರಾಜಧಾನಿ ಬೆಂಗಳೂರು ಭಾಗದಲ್ಲಿ ಮಾತ್ರವೇ ಹೆಚ್ಚು ಕೈಗಾರಿಕೆಗಳು ಬರುತ್ತಿವೆ. ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮಾನತೆ ಇದೆ ಎಂಬ ದೂರುಗಳು, ಬೇಸರ ವ್ಯಕ್ತವಾಗಿತ್ತು. ಬೆಂಗಳೂರು ಬೇರೆ ಬೇರೆ ಭಾಗಗಳಲ್ಲೂ ಕೈಗಾರಿಕಾ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಿದೆ. ಈ ನಿಟ್ಟಿನಿಲ್ಲಿ ಮಹತ್ವದ ಬೆಳವಣಿಗೆ ಆಗಿದ್ದು, ಒಟ್ಟು 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ ಆಗಲಿದ್ದು, ಕೋಟಿ ಕೋಟಿ ಹಣ ಹರಿದು ಬಂದಿದೆ. ಸಾಕಷ್ಟು ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.
ಕೈಗಾರಿಕಾ ಬೆಳವಣಿಗೆಗೆ ಇನ್ನಷ್ಟು ವೇಗ ನೀಡಲು ಮತ್ತು ಹೊಸದಾಗಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ರಾಜ್ಯ ಉನ್ನತ ಮಟ್ಟದ ಅನುಮೋದನೆ ನೀಡಿಕೆ ಸಮಿತಿಯ 67ನೆ ಸಭೆ ನಡೆಯಿತು. ಇದರಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ ಒಟ್ಟು ಬರೋಬ್ಬರಿ 18,430.44 ಕೋಟಿ ರೂಪಾಯಿ ಮೊತ್ತದ ಬಂಡವಾಳ ಹೂಡಿಕೆಗೆ ಒಪ್ಪಿಗೆ ನೀಡಲಾಗಿದೆ.

ಸೋಮವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ 11 ಹೊಸ ಹಾಗೂ 6 ಹೆಚ್ಚುವರಿ ಬಂಡವಾಳ ಹೂಡಿಕೆಯ ಯೋಜನೆಗಳಿಗೆ ಸಮ್ಮತಿ ನೀಡಲಾಗಿದೆ. ಇದರಿಂದ ರಾಜ್ಯದಲ್ಲಿ ಹೊಸದಾಗಿ, 15,000ಕ್ಕೂ ಅಧಿಕ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
17 ಯೋಜನೆಗಳಿಗೆ ಹೂಡಿಕೆ, ಅನುಮೋದನೆ
ಹೊಸ ಹಾಗೂ ವಿಸ್ತರಣೆಯ 11 ಯೋಜನೆಗಳ ರೂ. 14,906.90 ಕೋಟಿ ಮತ್ತು ಹೆಚ್ಚುವರಿ ಬಂಡವಾಳ ಹೂಡಿಕೆಯ 6 ಯೋಜನೆಗಳ ರೂ. 3523.54 ಕೋಟಿ ಮೊತ್ತದ ಹೂಡಿಕೆಗಳಿಗೆ ಅನುಮೋದನೆ ನೀಡಲಾಗಿದೆ. ಒಟ್ಟು 17 ಯೋಜನೆಗಳಲ್ಲಿ ವಾಹನ, ವೈಮಾಂತರಿಕ್ಷ, ಔಷಧಿ , ಜವಳಿ, ಉಕ್ಕು ಸೆಮಿಕಂಡಕ್ಟರ್ ಮತ್ತು ಸಕ್ಕರೆ ತಯಾರಿಕೆ ವಲಯಗಳು ಸೇರಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಯಾವೆಲ್ಲ ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ
ಮೇಲಿನ 17 ಕೈಗಾರಿಕಾ ಸಂಬಂಧ ಅಭಿವೃದ್ಧಿ ಯೋಜನೆಗಳು ಉತ್ತರ ಕರ್ನಾಟಕದ ಬಾಗಲಕೋಟೆ, ಬೀದರ್, ಬೆಳಗಾವಿ, ಬಳ್ಳಾರಿ ಹಾಗೂ ಕೋಲಾರ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ತುಮಕೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಕಾರ್ಯಗತಗೊಳ್ಳಲಿವೆ. ಈ ಭಾಗದಲ್ಲಿ ಉದ್ಯೋಗ ಸೃಷ್ಟಿ ಸಹ ಆಗಲಿದೆ ಎಂದು ಅವರು ವಿವರಿಸಿದರು.
ಜಿಲ್ಲಾವಾರು ಪ್ರಮುಖ ಯೋಜನೆಗಳು, ಹೂಡಿಕೆ
ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಯಗತಗೊಳ್ಳಲಿರುವ ಜೆಎಸ್‌ಡಬ್ಲ್ಯು ವಿಜಯನಗರ ಮೆಟ್ಯಾಲಿಕ್ಸ್ ಲಿಮಿಟೆಡ್‌ನ ರೂ. 4,600 ಕೋಟಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಎನರ್ಜಿ ಟ್ರಾನ್ಸಿಷನ್ -ನ 1600 ಕೋಟಿ ರೂ. ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ವೋಲ್ವೊ ಗ್ರೂಪ್ ಇಂಡಿಯಾದ ರೂ. 1,500 ಕೋಟಿ ಹೂಡಿಕೆಯ ಹೊಸ ಯೋಜನೆಗಳು ಪ್ರಮುಖವಾಗಿವೆ.
ಹೆಚ್ಚುವರಿ ಬಂಡವಾಳ ಹೂಡಿಕೆಯ ಪ್ರಸ್ತಾವಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ವಿಪ್ರೊ ಗ್ಲೋಬಲ್ ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಮಟೀರಿಯಲ್ಸ್ ಪ್ರೈವೇಟ್ ಲಿಮಿಟೆಡ್‌ನ ರೂ. 1,397 ಕೋಟಿ ಮತ್ತು ಎಂಎಸ್‌ಪಿಎಲ್ ಕಂಪನಿ ರೂ. 884.25 ಕೋಟಿ ಹೂಡಿಕೆಗಳು ಪ್ರಮುಖವಾಗಿವೆ.












Click it and Unblock the Notifications